More

    ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿ ಪುರಾತತ್ವ ಸ್ಮಾರಕಕ್ಕೆ ಬೆಂಕಿ ಹಚ್ಚಿದ ಸೋಮಾರಿ ನೌಕರರು!

    ಹಳೇಬೀಡು: ಸ್ಮಾರಕದ ಸುತ್ತ ಬೆಳೆದಿದ್ದ ಅನುಪಯುಕ್ತ ಕಳೆ ತೆಗೆದು ಸ್ವಚ್ಛಗೊಳಿಸುವ ಕೆಲಸವನ್ನು ಸುಲಭ ಮಾಡಿಕೊಳ್ಳುವ ಸಲುವಾಗಿ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಅತ್ಯಮೂಲ್ಯ ವಿಗ್ರಹಗಳು ಸುಟ್ಟು ಮಸಿ ಹಿಡಿದು ಮೂಲ ರೂಪ ಕಳೆದುಕೊಂಡಿರುವ ಪ್ರಕರಣ ಶನಿವಾರ ಇಲ್ಲಿನ ಹೊಯ್ಸಳೇಶ್ವರ ದೇಗುಲದ ಆವರಣದಲ್ಲಿ ಜರುಗಿದೆ.

    ಭಾರತೀಯ ಪುರಾತತ್ವ ವಿಭಾಗದಿಂದ ನಿಯೋಜಿರಾಗಿದ್ದ   ಕಾರ್ಮಿಕರು ಈ ಅಚಾತುರ್ಯ ಎಸಗಿದ್ದು ಸಿಬ್ಬಂದಿ ಹಾಗೂ ಅಧಿಕಾರಿಗಳು ಸೂಚನೆ ನೀಡಿದ ಬಳಿಕವೆ ಬೆಂಕಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.  ಬಿಸಿಲಿಗೆ ಒಣಗಿದ್ದ ಗಿಡ-ಬಳ್ಳಿಗಳು ಧಗಧಗನೆ ಹೊತ್ತಿಕೊಂಡು ಉರಿದಿದ್ದು ಕೆರೆ ದಂಡೆಯಲ್ಲಿದ್ದ ಹುಚ್ಚೇಶ್ವರ(ಬ್ರಹ್ಮೇಶ್ವರ) ಸ್ಮಾರಕದ ಬಹುಭಾಗ ಬೆಂಕಿಯ ಜ್ವಾಲೆಗೆ ಸಿಲುಕಿ ಕರಕಲಾಗಿದೆ. ಘಟನೆಯ ತರುವಾಯ ಸಿಬ್ಬಂದಿ ಹಾಗೂ ಕಾರ್ಮಿಕರು ನೀರು ಹಾಕಿ ಬೆಂಕಿಯನ್ನು ಆರಿಸಿದರೂ ವಿಗ್ರಹಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸಲು ಆಗಿಲ್ಲ. ಭಾನುವಾರ ಸ್ಥಳಕ್ಕೆ ಭೇಟಿ ನೀಡಲು ತೆರಳಿದ್ದ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

    ಜೈನ ಬಸದಿ ಹಿಂಭಾಗದಲ್ಲಿ ಪುರಾತತ್ವ ವಿಭಾಗದಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು ಉನ್ನತ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಹೀಗಿದ್ದರೂ ಅಚಾತುರ್ಯ ನಡೆಯಲು ಇಲಾಖೆಯ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಹವ್ಯಾಸಿ ಸಂಶೋಧಕ ಎಚ್.ಜಿ. ಶಶಿಧರ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದು ಭಾನುವಾರ ಮಧ್ಯಾಹ್ನ ಅಧಿಕಾರಿಗಳು ಆಗಮಿಸುವ ನಿರೀಕ್ಷೆಯಿದೆ.  ಇತ್ತೀಚೆಗೆ ಜಿಲ್ಲೆಯ ದೊಡ್ಡಗದ್ದವಳ್ಳಿ ದೇಗುಲದ ಕಾಳಿಯ ವಿಗ್ರಹಕ್ಕೆ ಹಾನಿಯಾಗಿದ್ದನ್ನು ಸ್ಮರಿಸಬಹುದಾಗಿದ್ದು, ಸ್ಮಾರಕಗಳನ್ನು ಕಾಪಾಡಬೇಕಾದ ಇಲಾಖೆಯೆ  ಹೊಣೆಗೇಡಿತನ ತೋರುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೇಲ್ಮಟ್ಟದ ಅಧಿಕಾರಿಗಳ ಗಮನಕ್ಕೆ ತಾರದೆ ಎಸಗಿರುವ ಕೃತ್ಯಕ್ಕೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲು ಚಿಂತಿಸಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts