ಕರಾವಳಿಯಲ್ಲಿ ಪಕ್ಷದ ಸಂಘಟನೆಗೆ ಒತ್ತು: ಸಚಿವ ಮಧು ಬಂಗಾರಪ್ಪ

madhu bangarappa meeting
Published on

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ಗೆ ಜನ ಅಧಿಕಾರ ನೀಡಿದ್ದು, ಕರಾವಳಿ ಭಾಗದಲ್ಲೂ ಪಕ್ಷಕ್ಕೆ ಶಕ್ತಿ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಇದಕ್ಕಾಗಿ ಸಮಯ ನೀಡಲು ಸಿದ್ಧನಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಜಿಲ್ಲಾ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು. ಜನರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ವಿಶ್ವಾಸ ಬಂದಿದೆ. ನಮ್ಮನ್ನು ಅಧಿಕಾರಕ್ಕೆ ತಂದಂತಹ ಕಾರ್ಯಕರ್ತರನ್ನು ಯಾವತ್ತೂ ಮರೆಯಬಾರದು. ಕಾಂಗ್ರೆಸ್ ಆಡಳಿತವನ್ನು ಕಂಡ ಪ್ರತಿಪಕ್ಷ ಬಿಜೆಪಿಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಆಗಿದ್ದಾರೆ. ಕಾರ್ಯಕರ್ತರು ಯಾವುದೇ ವಿಚಾರದಲ್ಲೂ ಧೃತಿಗೆಡಬೇಕಿಲ್ಲ. ನಿಮ್ಮೊಂದಿಗೆ ಖಂಡಿತಾ ನಾವಿದ್ದೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮಾದರಿಯಲ್ಲೇ ಪುತ್ರ ಮಧು ಬಂಗಾರಪ್ಪ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ ಸಚಿವರ ಬಗ್ಗೆ ರಾಜ್ಯದ ಜನತೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮತ್ತಷ್ಟು ಒಳ್ಳೆಯ ಯೋಜನೆಗಳು ಅನುಷ್ಠಾನಕ್ಕೆ ಬರಲಿ ಎಂದರು.

ಅಕ್ರಮ ಅಂಗಡಿ, ಮಳಿಗೆ ತೆರವು

ಶಿಕ್ಷಣ ಇಲಾಖೆಯಲ್ಲಿ ಮತ್ತಷ್ಟು ಬದಲಾವಣೆಯಾಗಲಿದ್ದು, ಹಿಂದಿನ ಹೊಲಸು ವ್ಯವಸ್ಥೆಯನ್ನು ತೊಳೆದು ಬಿಡುತ್ತೇನೆ. ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಾಮಾಜಿಕ ನ್ಯಾಯದಡಿ ತೃಪ್ತಿ ತರುವ ಕೆಲಸ ಮಾಡುತ್ತೇನೆ. ಸರ್ಕಾರಿ ಶಾಲಾ-ಕಾಲೇಜು ಕ್ಯಾಂಪಸ್‌ಗಳಿಗೆ ತಾಗಿಕೊಂಡಿರುವ ಅಕ್ರಮ ಅಂಗಡಿ, ಮಳಿಗೆಗಳನ್ನು ತೆರವು ಮಾಡಲು ಸೂಚಿಸುತ್ತೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಮಾಜಿ ಶಾಸಕ ಜೆ.ಆರ್. ಲೋಬೊ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ವಿಶ್ವಾಸ್‌ದಾಸ್, ಮುಡಾ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ದ.ಕ. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ, ಕಾಂಗ್ರೆಸ್ ಮುಖಂಡರಾದ ಕಣಚೂರು ಮೋನು, ಮನುರಾಜ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ್ ಮತ್ತಿತರರು ಉಪಸ್ಥಿತರಿದ್ದರು.

ಹದಿನೆಂಟು ವರ್ಷ ತುಂಬಿದ ವಿದ್ಯಾರ್ಥಿಗಳನ್ನು ಕಾಲೇಜಿನಿಂದಲೇ ಮತದಾರರ ಪಟ್ಟಿಗೆ ಸೇರ್ಪಡೆ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯಲಿದೆ.- ಮಧು ಬಂಗಾರಪ್ಪ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net