More

    ಒಂಟಿಸಲಗ ದಾಳಿಗೆ ಸಿಲುಕಿ ಗಾಯಗೊಂಡಿದ್ದ ವೃದ್ಧ ಚಿಕಿತ್ಸೆ ಫಲಿಸದೆ ಸಾವು

    ತುಮಕೂರು: ಒಂಟಿಸಲಗದ ದಾಳಿಗೆ ಸಿಲುಕಿ ತೀವ್ರ ಗಾಯಗೊಂಡಿದ್ದ ವೆಂಕಟಾಚಲಮೂರ್ತಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ತಡರಾತ್ರಿ ನಿಧನರಾದರು.
    ಹಿರೇಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಳಿಹಳ್ಳಿಯಲ್ಲಿ ಸೋಮವಾರ ಬೆಳಗ್ಗೆ 8ಗಂಟೆ ಸಮಯದಲ್ಲಿ ಒಂಟಿಸಲಗ ದಾಳಿಗೆ ತುತ್ತಾಗಿದ್ದ ವೆಂಕಟಾಚಲಮೂರ್ತಿ ಅವರ ಎಡಗಾಲು, ಎದೆಭಾಗದ ಮೂಳೆಗಳು ಮುರಿದಿದ್ದು ತೀವ್ರ ರಕ್ತಸ್ರಾವವಾಗಿತ್ತು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವೆಂಕಟಾಚಲಮೂರ್ತಿ ಸೋಮವಾರ ರಾತ್ರಿ 11.30ರಲ್ಲಿ ಕೊನೆಯುಸಿರೆಳದಿದ್ದಾರೆ.

    7.5 ಲಕ್ಷ ರೂ., ಪರಿಹಾರ: ಆನೆದಾಳಿಗೆ ಸಿಲುಕಿ ಸಾವನ್ನಪ್ಪಿದ ವೆಂಕಟಾಚಲಮೂರ್ತಿ ಅವರ ಕುಟುಂಬಕ್ಕೆ 7.5 ಲಕ್ಷ ರೂ., ಪರಿಹಾರವನ್ನು ಅರಣ್ಯ ಇಲಾಖೆ ಪ್ರಕಟಿಸಿದೆ. ಜತೆಗೆ 5 ವರ್ಷ ಪ್ರತೀ ತಿಂಗಳು 2 ಸಾವಿರ ರೂ. ಪಿಂಚಣಿಯನ್ನು ಸರ್ಕಾರದ ವತಿಯಿಂದ ಮೃತರ ಕುಟುಂಬಕ್ಕೆ ನೀಡಲಾಗುವುದು.

    1 ಲಕ್ಷ ರೂ., ವೈಯಕ್ತಿಕ ಪರಿಹಾರ: ಮೃತರ ಅಂತಿಮ ದರ್ಶನ ಪಡೆದ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಮೃತ ವೆಂಕಟಾಚಲಮೂರ್ತಿ ಕುಟುಂಬಕ್ಕೆ ಸರ್ಕಾರದ ಪರಿಹಾರ 7.5 ಲಕ್ಷ ರೂ., ಮೊತ್ತದ ಜತೆಗೆ ವೈಯಕ್ತಿಕವಾಗಿ 1 ಲಕ್ಷ ರೂ., ಪರಿಹಾರ ನೀಡಿದರು. ಅಲ್ಲದೆ, ವೈದ್ಯಕೀಯ ವೆಚ್ಚವನ್ನು ಸರ್ಕಾರದಿಂದ ಭರಿಸುವ ಭರವಸೆ ನೀಡಿದರು.

    ಚಿರತೆ ದಾಳಿಯಿಂದ ನಲುಗಿದ್ದ ಗ್ರಾಮಾಂತರ ಕ್ಷೇತ್ರದಲ್ಲಿ ಈಗ ಕಾಡಾನೆ ಹಾವಳಿ ಆರಂಭವಾಗಿದೆ. ಇತ್ತೀಚೆಗೆ ಹೊಸದುರ್ಗದಿಂದ ಬಂದಿದ್ದ ಒಂಟಿಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಾಮನಗರಕ್ಕೆ ಓಡಿಸಿದ್ದರು. ಆದರೆ, ಈ ಕಾಡಾನೆ ಜಿಲ್ಲೆಗೆ ಬಂದಿರುವ ಮಾಹಿತಿ ಅರಣ್ಯಾಧಿಕಾರಿಗಳಿಗೆ ಇರಲಿಲ್ಲವೇ? ವನಪಾಲಕರು ಏನು ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚುತ್ತಿರುವ ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಬೇಕು ಎಂದು ತಾಕೀತು ಮಾಡಿದರು. ಆರ್‌ಎಫ್‌ಒ ಎಲ್.ಎನ್.ನಟರಾಜ್, ಹಾಲನೂರು ಅನಂತಕುಮಾರ್, ಕೋಳಿಹಳ್ಳಿ ಬಸಪ್ಪ, ಗ್ರಾಪಂ ಸದಸ್ಯ ನಾರಾಯಣ್, ಮುಖಂಡ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

    ವ್ಯಕ್ತಿ ಮೇಲೆ ಚಿರತೆ ದಾಳಿ!: ತುಮಕೂರು ತಾಲೂಕು ಹೊಳಕಲ್ ಗ್ರಾಮದಲ್ಲಿ ಮನೋಹರ್ ಅಲಿಯಾರ್ ರಂಗಸ್ವಾಮಯ್ಯ(60) ಎಂಬುವವರ ಮೇಲೆ ಚಿರತೆ ಮಂಗಳವಾರ ಸಂಜೆ ದಾಳಿ ಮಾಡಿದೆ. ಊರಿನ ಹೊರಭಾಗದಲ್ಲಿ ಬಹಿರ್ದೆಸೆಗೆ ಕುಳಿತಿದ್ದ ರಂಗಸ್ವಾಮಿ ಅಲಿಯಾಸ್ ಮನೋಹರ್ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದ್ದು, ಅದೃಷ್ಟವಶಾತ್ ಹಿಂದಕ್ಕೆ ತಿರುಗಿ ನೋಡಿದ್ದರಿಂದ ತಪ್ಪಿಸಿಕೊಂಡು ಓಡಿದ್ದಾರೆ. ಕತ್ತಲೆಯಲ್ಲಿ ಮನೋಹರ್ ಮೇಲೆ ದಾಳಿ ನಡೆಸಿರುವ ಚಿರತೆಯ ಉಗುರು ಬೆನ್ನಿನ ಭಾಗದಲ್ಲಿ ಪರಚಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಮನೋಹರ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಚಿರತೆ ಸೆರೆಗೆ ಬಲೆ ಬೀಸಿದ್ದಾರೆ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಮಕೂರು ತಾಲೂಕಿನಲ್ಲಿ ಚಿರತೆ ಸೆರೆಹಿಡಿಯುವ ಕಾರ್ಯಾಚರಣೆ ಮಂಗಳವಾರವೂ ಮುಂದುವರಿಯಿತು. ನರಭಕ್ಷಕ ಚಿರತೆ ಹಿಡಿಯಲು ಪಳಗಿದ 4 ಆನೆಗಳು ಹೆಬ್ಬೂರು ಸುತ್ತಮತ್ತಲ ಪ್ರದೇಶದಲ್ಲಿ ನಿರಂತರವಾಗಿ ಸುತ್ತಾಟ ನಡೆಸುತ್ತಿದ್ದು ಚಿರತೆಗಳು ಎಲ್ಲಿಯೂ ಕಾಣಸಿಗುತ್ತಿಲ್ಲ. ನರಭಕ್ಷಕ ಚಿರತೆಯನ್ನು ಗುರುತಿಸಿ ಕೊಲ್ಲಲು ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ತಜ್ಞರೊಂದಿಗೆ ತೀವ್ರ ಶೋಧ ಮುಂದುವರಿಸಿದ್ದಾರೆ.

    ಬೇಸಿಗೆ ಹಿನ್ನೆಲೆಯಲ್ಲಿ ನೀರು, ಆಹಾರ ಅರಸಿ ಕಾಡು ಪ್ರಾಣಿಗಳು ನಾಡಿನ ಕಡೆ ಮುಖ ಮಾಡುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರ ವಹಿಸಬೇಕು. ಕಾಡಾನೆಗಳು ಮತ್ತೆ ಮತ್ತೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಆನೆ ಕಾರಿಡಾರ್ ಅನ್ನು ಗುರುತಿಸಿ ನಿಗಾವಹಿಸಬೇಕು. ಆನೆ ಕಾರಿಡಾರ್ ಒತ್ತುವರಿ ತೆರವುಗೊಳಿಸಬೇಕು.
    ಡಿ.ಸಿ.ಗೌರಿಶಂಕರ್ ಗ್ರಾಮಾಂತರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts