More

    ಗಜ ಗಣತಿಯಲ್ಲಿ ಕರ್ನಾಟಕವೇ ಅಗ್ರಜ

    | ಹರೀಶ್ ಬೇಲೂರು ಬೆಂಗಳೂರು

    ಅರಣ್ಯದೊಳಗಿನ ಕೃಷಿಕನೆಂದೇ ಕರೆಯಲ್ಪಡುವ ‘ಗಜರಾಜ’ನ ದಿನ (ವಿಶ್ವ ಆನೆ ದಿನ)ವನ್ನು ಆಗಸ್ಟ್ 12ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ದೇಶದಲ್ಲಿ ಆನೆ ಸಂತತಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ವರ್ಷ ಯಾವ ರಾಜ್ಯ ‘ಆನೆಗಳ ರಾಜ್ಯ’ ಎಂಬ ಹಿರಿಮೆಗೆ ಪಾತ್ರವಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ. ಪ್ರಸ್ತುತ ಕರ್ನಾಟಕದಲ್ಲಿ ದೇಶದಲ್ಲೇ ಅತಿ ಹೆಚ್ಚು ಆನೆಗಳಿವೆ. 2017ರಲ್ಲಿ ನಡೆದ ಆನೆ ಗಣತಿ ಪ್ರಕಾರ ರಾಜ್ಯದಲ್ಲಿ 6,049 ಆನೆಗಳಿದ್ದು, ಈ ಮೂಲಕ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಅಸ್ಸಾಂ 5,719 ಗಜ ಗಣತಿಯಲ್ಲಿ ಕರ್ನಾಟಕವೇ ಅಗ್ರಜಆನೆಗಳನ್ನು ಹೊಂದಿ ಎರಡನೇ ಸ್ಥಾನದಲ್ಲಿದ್ದರೆ, ಕೇರಳ 3,054 ಆನೆಗಳನ್ನು ಹೊಂದುವ ಮೂಲಕ 3ನೇ ಸ್ಥಾನದಲ್ಲಿದೆ. ಆದರೆ ಈ ವರ್ಷ ದೇಶದ 23 ರಾಜ್ಯಗಳಲ್ಲಿ ಆನೆಗಳ ಸಂತತಿ ಹೆಚ್ಚಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

    3 ವರ್ಷಕ್ಕೊಮ್ಮೆ ಆನೆ ಗಣತಿ : 2017ರ ಜನಗಣತಿಯಂತೆ ದೇಶದಲ್ಲಿ ಒಟ್ಟಾರೆ 27 ಸಾವಿರ ಆನೆಗಳಿದ್ದು, ಇದರಲ್ಲಿ ಶೇಕಡ 25 ಆನೆಗಳು ರಾಜ್ಯದಲ್ಲಿ ಇರುವುದು ವಿಶೇಷ. ಆದರೆ ಇತ್ತೀಚೆಗೆ ಆನೆಗಳ ಸಾವಿನ ಸಂಖ್ಯೆಯೂ ಹೆಚ್ಚಾಗಿದ್ದು, ಅವುಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಕಳವಳದ ಸಂಗತಿ. ಕರ್ನಾಟಕದಲ್ಲಿ 2007ರ ಗಣತಿ ಪ್ರಕಾರ 4,535 ಮತ್ತು 2010ರಲ್ಲಿ 5,780 ಆನೆಗಳಿದ್ದವು. 2012ರ ವೇಳೆಗೆ ಈ ಸಂಖ್ಯೆ 6,572ಕ್ಕೆ ತಲುಪಿತು. ಆದರೆ, 2017ರ ವೇಳೆಗೆ 6,049ಕ್ಕೆ ಇಳಿದಿದೆ. ಆದರೂ ರಾಜ್ಯ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

    ಆನೆ ಗಣತಿ ಹೇಗೆ?: ದಟ್ಟ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಗಣತಿ ನಡೆಸುವುದು ಕಷ್ಟಕರ. ಗಣತಿ ಆರಂಭಿಸುವ ಮುನ್ನ ಅಧಿಕಾರಿಗಳಿಗೆ, ಸಂಬಂಧಿತ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಗಣತಿಯಲ್ಲಿ ಹಲವು ವಿಧಾನ ಅನುಸರಿಸಲಾಗುತ್ತದೆ. ಆನೆಲದ್ದಿ ಮಾದರಿ ಸಂಗ್ರಹ ಮತ್ತು ನೇರವಾಗಿ ಆನೆಗಳ ಎಣಿಕೆ ಮಾಡಲಾಗುತ್ತದೆ. ಅರಣ್ಯ ಪ್ರದೇಶದ ಮತ್ತು ವಿಭಾಗೀಯ ಮಟ್ಟದಲ್ಲಿ 3 ಅಥವಾ 4 ಮಂದಿ ಗಣತಿದಾರರು ನಿಗದಿತ ಬ್ಲಾಕ್​ನಲ್ಲಿ ಸಂಚರಿಸಿ ನೇರವಾಗಿ ಕಾಣುವ ಸಂಖ್ಯೆಯನ್ನು ದಾಖಲಿಸುವುದು, ಗುಂಪಿನಲ್ಲಿ ಕಾಣುವ ಆನೆಗಳ ಛಾಯಾಚಿತ್ರ ತೆಗೆದು ಎಣಿಸಿ ದಾಖಲು ಮಾಡಲಾಗುತ್ತದೆ. ಅಲ್ಲದೆ, ಸೀಳುದಾರಿಯಲ್ಲಿ ಲದ್ದಿಗಳ ಎಣಿಕೆ ಮಾಡಲಾಗುತ್ತದೆ. ಲದ್ದಿ ಸಾಂದ್ರತೆ, ದೈನಂದಿನ ಮಲವಿಸರ್ಜನೆ ಪ್ರಮಾಣ ಹಾಗೂ ಮಲ ಕೊಳೆಯುವ ಪ್ರಮಾಣಗಳಿಂದ ಆನೆಗಳ ಸಂಖ್ಯೆ ಲೆಕ್ಕ ಹಾಕಲಾಗುತ್ತದೆ.

    ಯೋಜನೆಗಳು

    # 1991-92ರಲ್ಲಿ ಆನೆಗಳ ಸಂರಕ್ಷಣೆ, ಅಭಿವೃದ್ಧಿ ಸಂಬಂಧ ಯೋಜನೆ ಜಾರಿ

    # ರಾಜ್ಯದಲ್ಲಿ ಆನೆ ರಕ್ಷಿತ ಪ್ರದೇಶ ಸ್ಥಾಪನೆ

    # ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ, ರಾಮನಗರ, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 8056.81 ಚ.ಕಿ.ಮೀ. ಪ್ರದೇಶ ಮೈಸೂರು ಆನೆ ರಕ್ಷಿತ, 6724.87 ಚ.ಕಿ.ಮೀ ಪ್ರದೇಶ ದಾಂಡೇಲಿ ಆನೆ ರಕ್ಷಿತ ಪ್ರದೇಶವಾಗಿ ಘೊಷಣೆ.

    ಕಾಡಿನ ಜೀವಿಗಳ ಅನ್ನದಾತನಾಗಿರುವ ಆನೆಗಳನ್ನು ಕಾಪಾಡುವುದು ಅಗತ್ಯ. ನಾಗರಹೊಳೆಯಲ್ಲಿ ಆನೆಗಳ ಸುರಕ್ಷತೆಗಾಗಿ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸಂಘರ್ಷದ ಸಮಯದಲ್ಲೂ ಇಲಾಖೆಯೊಂದಿಗೆ ಜನ ಸಹಕರಿಸುವುದು ಅಗತ್ಯ.

    | ಮಹೇಶ್​ಕುಮಾರ್ ಉಪ ಅರಣ್ಯ ಸಂರಕ್ಷಣಾಧಿಕಾರಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಹುಣಸೂರು

    ಗಜರಾಜನಿಗೆ ನಾಗರಹೊಳೆ ಪ್ರಶಸ್ತ

    | ಶಿವು ಹುಣಸೂರು

    ‘ನಾಗರಹೊಳೆ ರಾಷ್ಟ್ರೀಯ ಉದ್ಯಾನ’ ಆನೆಗಳ ವಾಸಕ್ಕೆ ರಾಜ್ಯದಲ್ಲೇ ಪ್ರಶಸ್ತ ಸ್ಥಳವೆಂದು ಗುರುತಿಸಲ್ಪಟ್ಟಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನ 843 ಚದರ ಕಿ.ಮೀ. ಪ್ರದೇಶವನ್ನು ಹೊಂದಿದ್ದು, ಇಲ್ಲಿ 1800 ಆನೆಗಳು ಕಂಡುಬಂದಿವೆ. ಆನೆಗಳ ಪಾಲಿಗೆ ನಾಗರಹೊಳೆ ವಿಶಿಷ್ಟ ಕಾಡಾಗಿದೆ. ತಮಿಳುನಾಡಿನ ಮಧುಮಲೈನಿಂದ ಆರಂಭಿಸಿ ಸತ್ಯಮಂಗಲ, ಬಿಆರ್ ಹಿಲ್ಸ್, ಬಂಡೀಪುರ, ನಾಗರಹೊಳೆ ಮೂಲಕ ಕೊಡಗಿನ ಬ್ರಹ್ಮಗಿರಿ ತನಕವೂ ವಿಶಾಲವಾಗಿ ವಿಸ್ತರಿಸಿಕೊಂಡಿರುವ ಎಲಿಫೆಂಟ್ ಕಾರಿಡಾರ್ ಇದಕ್ಕೆ ಮೂಲ ಕಾರಣ. ಅಲ್ಲದೆ ನಾಗರಹೊಳೆಯಲ್ಲಿ ಆನೆ ಸಂಕುಲಕ್ಕೆ ಅಗತ್ಯವಾದ ಎಲ್ಲ ಅನುಕೂಲಗಳು ದೊರಕುತ್ತಿರುವುದು ಮತ್ತೊಂದು ಕಾರಣ ಎನ್ನಬಹುದು. ಒಂದೇ ದಿಕ್ಕಿನಲ್ಲಿ ಸರಾಗವಾಗಿ ಮತ್ತು ಸುಲಭವಾಗಿ ಆನೆಗಳು ವಲಸೆ ಹೋಗಲು ಇಲ್ಲಿ ಹೆಚ್ಚಿನ ಅವಕಾಶವಿದೆ.

    ಆನೆ-ಮಾನವ ಸಂಘರ್ಷ

    ಇವೆಲ್ಲದರ ನಡುವೆ ಆನೆ ಕಾರಿಡಾರ್ ಅನ್ನು ಮನುಷ್ಯ ಅತಿಕ್ರಮಣ ಮಾಡಿಕೊಂಡಿದ್ದಾನೆ. ಇದರಿಂದಾಗಿ ಆಗಾಗ್ಗೆ ಆನೆ-ಮಾನವ ಸಂಘರ್ಷ ನಡೆಯುತ್ತಿರುತ್ತದೆ. ಇದನ್ನು ನಿಯಂತ್ರಿಸಲು ಸರ್ಕಾರ 4-5 ವರ್ಷಗಳಿಂದ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಅರಣ್ಯ ಪ್ರದೇಶದಲ್ಲಿ ಉಂಟಾಗುವ ಕಾಡ್ಗಿಚ್ಚು ತಡೆಯಲು ಬೆಂಕಿ ಅಧ್ಯಯನ ವಿಶ್ಲೇಷಣೆ ಮತ್ತು ಉಸ್ತುವಾರಿ ಕೋಶ ರಚನೆಯಾಗಿದೆ. ಸದರಿ ಕೋಶದಿಂದ ಉಪ, ಸಹಾಯಕ, ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳಿಗೆ ಬೆಂಕಿ ನಿರ್ವಹಣೆಗಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅರಿವು ಮೂಡಿಸುವ ತರಬೇತಿ ಆಯೋಜನೆ, ಕಾಡಾನೆಗಳ ಹಾವಳಿ ನಿಯಂತ್ರಿಸಲು ಆನೆ ತಡೆ ಕಂದಕ, ಸೋಲಾರ್ ತಂತಿ ಬೇಲಿ, ಕಲ್ಲುತಡೆಗೋಡೆ ನಿರ್ವಣ, ಬ್ಯಾರಿಕೇಡ್ ನಿರ್ವಣಕ್ಕಾಗಿ ರೈಲು ಹಳಿಗಳ ಖರೀದಿ, ನಿರ್ಮಾಣ ಮತ್ತು ನಿರ್ವಹಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೊಸದಾಗಿ ಘೊಷಿಸಿರುವ ವನ್ಯಧಾಮ ಮತ್ತು ಮೀಸಲು ಸಂರಕ್ಷಿತ ಪ್ರದೇಶ ಅಭಿವೃದ್ಧಿ, ನಿಸರ್ಗ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಲವು ಕ್ರಮಗಳ ಜಾರಿ ಮಾಡಲಾಗಿದೆ ಎನ್ನುತ್ತದೆ ಅರಣ್ಯ ಇಲಾಖೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts