More

    ವಿದ್ಯುತ್ ಶುಲ್ಕ ಹೆಚ್ಚು ವಸೂಲಿ ಆರೋಪ

    ಬೆಳಗಾವಿ: ಹೆಸ್ಕಾಂ ಸಿಬ್ಬಂದಿ ಅನಗತ್ಯವಾಗಿ ದುಪ್ಪಟ್ಟು ವಿದ್ಯುತ್ ಶುಲ್ಕ ವಸೂಲಿಗೆ ಮುಂದಾಗಿದ್ದು, ಪ್ರತಿ ತಿಂಗಳು ನಿಯಮಿತವಾಗಿ ಬರುವ ಶುಲ್ಕಕಿಂತ ಹೆಚ್ಚಿನ ಹಣ ಕಟ್ಟುವಂತೆ ಬಿಲ್ ನೀಡಿದ್ದಾರೆ. ಕೂಡಲೇ ಹೆಚ್ಚುವರಿಯಾಗಿ ನೀಡಿದ ಶುಲ್ಕ ಇಳಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ಬೆಳಗಾವಿ ಹೆಸ್ಕಾಂ ಸೂಪರಿಂಟೆಂಡೆಂಟ್ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.

    ರಾಜ್ಯ ಸರ್ಕಾರ ಮತ್ತು ಹೆಸ್ಕಾಂ ಆಡಳಿತ ಮಂಡಳಿ ವಿರುದ್ಧ ಕರವೇ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ಎರಡು ತಿಂಗಳ ವಿದ್ಯುತ್ ಶುಲ್ಕ ನೀಡಿದ್ದಲ್ಲದೆ, ಮನಬಂದಂತೆ ಹಣ ಹೆಚ್ಚಳ ಮಾಡಿ ಬಿಲ್ ನೀಡಿವೆ. 3 ತಿಂಗಳ ರಿಯಾಯಿತಿ, ಶುಲ್ಕ ಹೊರೆ ಇಳಿಕೆ, ಸಹಾಯ ಧನ ನೀಡುವುದಾಗಿ ಸರ್ಕಾರ ಹೇಳಿದ್ದರೂ ಯಾರೊಬ್ಬರಿಗೂ ಲಾಭ ಮುಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಲಾಕ್‌ಡೌನ್‌ನಿಂದ ಜನರು ಸಂಕಷ್ಟದಲ್ಲಿದ್ದಾರೆ. ಹೆಸ್ಕಾಂನವರು ಹೆಚ್ಚಿಸಿರುವ ಶುಲ್ಕ ಕೂಡಲೇ ಕೈಬಿಡಬೇಕು. ರಾಜ್ಯ ಸರ್ಕಾರ ನುಡಿದಂತೆ ನಡೆಯಬೇಕು. 3 ತಿಂಗಳ ರಿಯಾಯತಿ ನೀಡಬೇಕು. ಹಣ ಇಲ್ಲದ ಸ್ಥಿತಿಯಲ್ಲಿ ದುಬಾರಿ ಶುಲ್ಕ ಭರಿಸಲು ಜನರಿಗೆ ಸಾಧ್ಯವಿಲ್ಲ. ಗ್ರಾಹಕರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಕರವೇ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿದ ಹೆಸ್ಕಾಂ ಸೂಪರಿಂಟೆಂಡೆಂಟ್ ಗಿರಿಧರ ಕುಲಕರ್ಣಿ ಮಾತನಾಡಿ, ಬೇಸಿಗೆಯಲ್ಲಿ ವಿದ್ಯುತ್ ಶುಲ್ಕ ಹೆಚ್ಚಿಗೆ ಬರುವುದು ಸಾಮಾನ್ಯ. ಹೆಚ್ಚಿನ ದರ ಆಕರಿಸಿಲ್ಲ. ಈ ಕುರಿತು ಏನೇ ದೂರುಗಳಿದ್ದರೂ ಪರಿಶೀಲಿಸಲು ಸಿದ್ಧ. ಕಚೇರಿಗೆ ಬಂದು ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ವಾಜಿದ್ ಹಿರೇಕೋಡಿ, ಸೋಮು ರೈನಾಪುರ, ಅಕ್ಬರ್ ಖಡೇಕರ, ಪ್ರಕಾಶ ಚಿಪ್ಪಲಕಟ್ಟಿ, ರೇಷ್ಮಾ ಕಿತ್ತೂರು, ಅನ್ನಪೂರ್ಣಾ, ಪ್ರಭು ಕಾಕತೀಕರ, ಸುಧೀರ ಸಂಭಾಜಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts