More

    ಹೆಚ್ಚಿನ ಸ್ವೀಪ್ ಚಟುವಟಿಕೆ ಕೈಗೊಳ್ಳಿ: ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಸೂಚನೆ

    ಮಂಡ್ಯ: ಜಿಲ್ಲೆಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ರಲ್ಲಿ ಶೇ.72 ಮತದಾನವಾಗಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಮತದಾನವಾಗಿರುವ ಬೂತ್‌ಗಳಲ್ಲಿ ಹೆಚ್ಚಿನ ಸ್ವೀಪ್ ಚಟುವಟಿಕೆ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಸೂಚನೆ ನೀಡಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸ್ವೀಪ್ ಚಟುವಟಿಕೆ ಕುರಿತು ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಆದ್ಯತೆ ನೀಡಬೇಕು. ಮತದಾರರ ಅಂತಿಮ ಪಟ್ಟಿ ಪ್ರಕಟವಾಗಿದ್ದು, ಹೆಸರು ಇದೆಯೇ, ಇಲ್ಲವೇ ಎನ್ನುವುದನ್ನು ಎಲ್ಲರೂ ಖಚಿತಪಡಿಸಿಕೊಳ್ಳಬೇಕು. ಮತದಾನ ಮಾಡುವ ಸ್ಥಳದ ವಿವರ ದೊರೆಯಬೇಕು. ಇದಕ್ಕಾಗಿ ಸುಲಭವಾಗಿ ಸಾರ್ವಜನಿಕರು ತಮ್ಮ ಬೂತ್ ವ್ಯಾಪ್ತಿಯಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬುದರ ಮಾಹಿತಿ ನೀಡಿ ಎಂದರು.
    ಎಲ್ಲ ಇಲಾಖೆಯವರೂ ತಮ್ಮ ವ್ಯಾಪ್ತಿಯಲ್ಲಿ ಯಾವ ರೀತಿ ಸ್ವೀಪ್ ಚಟುವಟಿಕೆಗಳನ್ನು ನಡೆಸಬಹುದು ಎಂಬುದರ ಬಗ್ಗೆ ಯೋಜನೆ ಸಿದ್ಧಪಡಿಸಿ ಸಲ್ಲಿಸಿ. ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ಪರಿಕಲ್ಪನೆ ಆಧರಿಸಿದ ಮತಗಟ್ಟೆ ಸ್ಥಾಪಿಸಬೇಕು. ದೈಹಿಕ ನ್ಯೂನತೆಯುಳ್ಳವರು, ಮಹಿಳೆಯರು ಹಾಗೂ ಜನರನ್ನು ಆಕರ್ಷಿಸಲು ವಿನೂತನ ಮತಗಟ್ಟೆ ಸ್ಥಾಪನೆಗೆ ಈಗಿನಿಂದಲೇ ಕಾರ್ಯಕ್ರಮ ರೂಪಿಸಬೇಕು. ಕಾಲೇಜು ವಿದ್ಯಾರ್ಥಿಗಳು, ಯುವ ಮತದಾರರು, ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರು ಸೇರಿದಂತೆ ವಿವಿಧ ಗುಂಪುಗಳಲ್ಲಿ ಮತದಾನದ ಅರಿವು ಮೂಡಿಸಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ನಗರ ಪ್ರದೇಶದ ಬೂತ್‌ಗಳಲ್ಲಿ ಕಡಿಮೆ ಮತದಾನವಾಗಿದೆ. ಇಲ್ಲಿ ವಿಶ್ಲೇಷಣೆ ನಡೆಸಿ ಮತದಾನ ಹೆಚ್ಚಿಸಲು ಪ್ರಚಾರ ಪಲಕಗಳು, ಜಾಥಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದರು.
    ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಪೌರಾಯುಕ್ತ ಮಂಜುನಾಥ್, ತಾಲೂಕು ಪಂಚಾಯಿತಿ ಇಒ ವೇಣುಗೋಪಾಲ್, ರಾಮಲಿಂಗಯ್ಯ, ರೋಹಿತ್, ಎಸ್.ಎಚ್.ನಿರ್ಮಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts