More

    ಶಕ್ತಿ ವೃದ್ಧಿಸಿಕೊಂಡ ಎನ್‌ಡಿಎ, ಕೇರಳದಲ್ಲಿ ಮತ್ತೆ ಎಡರಂಗ ಅಲೆ

    ಕಾಸರಗೋಡು: ಕೇರಳದ ಗ್ರಾಮ ಪಂಚಾಯಿತಿ, ಬ್ಲಾಕ್, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ನಗರಸಭೆ ಚುನಾವಣೆಗಳ ಫಲಿತಾಂಶ ಬುಧವಾರ ಘೋಷಣೆಯಾಗಿದೆ. ಎಡರಂಗ ಜಿಲ್ಲೆಯಲ್ಲಿ ಶಕ್ತಿ ಹೆಚ್ಚಿಸಿಕೊಂಡಿರುವುದು ಫಲಿತಾಂಶದ ಮುಖ್ಯ ಅಂಶ. ರಾಜ್ಯದಲ್ಲಿ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಭಾರಿ ಆರೋಪ ಕೇಳಿಬಂದಿದ್ದರೂ, ಮಂಜೇಶ್ವರ ಶಾಸಕ, ಮುಸ್ಲಿಂ ಲೀಗ್ ಮುಖಂಡ ಎಂ.ಸಿ.ಕಮರುದ್ದೀನ್ ಮೇಲಿನ ಠೇವಣಿ ಹಣ ವಂಚನಾ ಪ್ರಕರಣ ಎಡರಂಗಕ್ಕೆ ಜಿಲ್ಲೆಯಲ್ಲಿ ಲಾಭ ತಂದುಕೊಟ್ಟಿದೆ. ಮುಸ್ಲಿಂ ಲೀಗ್‌ನ ಹಲವರು ಶಾಸಕನ ಜುವೆಲ್ಲರಿಯಲ್ಲಿ ಠೇವಣಿ ಹೂಡಿದ್ದು, ಆ ಹಣ ಲಭಿಸದ ಕಾರಣ ಮುನಿಸಿಕೊಂಡು ಎಡರಂಗದತ್ತ ವಾಲಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಎಡರಂಗ ಹೆಚ್ಚಿನ ಒಲವು ತೋರಿಸಿ ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರವನ್ನೂ ಯಶಸ್ವಿಯಾಗಿ ಮಾಡಿದೆ.

    ಕಳೆದ ಬಾರಿ 16 ಪಂಚಾಯಿತಿಗಳಲ್ಲಿ ಅಧಿಕಾರದಲ್ಲಿದ್ದ ಎಡರಂಗ ಈ ಬಾರಿ ಅಷ್ಟೇ ಪಂಚಾಯಿತಿಗಳಲ್ಲಿ ಅಧಿಕಾರ ಉಳಿಸಿಕೊಂಡಿದ್ದಲ್ಲದೆ ಗೆದ್ದ ಸೀಟುಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಉಳಿಸಿಕೊಳ್ಳುವ ಐಕ್ಯರಂಗದ ಕನಸೂ ನನಸಾಗಲಿಲ್ಲ. ಇನ್ನೊಂದೆಡೆ ಐಕ್ಯರಂಗಕ್ಕೆ ಬಂಡಾಯದ ಹಾವಳಿಯೂ ಇತ್ತು. ಇದರಿಂದ ಜಿಪಂನಲ್ಲಿ ಒಂದು ಸ್ಥಾನ ಕೈತಪ್ಪಿದೆ. ಬದಿಯಡ್ಕ ಗ್ರಾಪಂ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಬಿಜೆಪಿ ಸೇರ್ಪಡೆಗೊಂಡಿದ್ದೂ ಕಾಂಗ್ರೆಸ್‌ಗೆ ನಷ್ಟ ಉಂಟು ಮಾಡಿದೆ. ಇಲ್ಲಿ ಬಿಜೆಪಿಗೆ ಲಾಭವಾಗಿದ್ದು, ಸ್ಥಾನ ವೃದ್ಧಿಸಿಕೊಂಡಿದೆ.

    ನೀಲೇಶ್ವರ ಮತ್ತು ಕಾಞಂಗಾಡು ನಗರಸಭೆ ಆಡಳಿತ ಎಡರಂಗ ಉಳಿಸಿಕೊಂಡಿದ್ದರೆ, ಕಾಸರಗೋಡು ನಗರಸಭೆಯಲ್ಲಿ ಮತ್ತೆ ಐಕ್ಯರಂಗ ಅಧಿಕಾರಕ್ಕೇರಿದೆ. ನಗರಸಭೆಯ 38 ವಾರ್ಡ್‌ಗಳಲ್ಲಿ 21ರಲ್ಲಿ ಐಕ್ಯರಂಗ, 14ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ, ತಲಾ ಒಂದರಲ್ಲಿ ಸಿಪಿಎಂ, ಎಡರಂಗ ಸ್ವತಂತ್ರ ಹಾಗೂ ಮುಸ್ಲಿಂ ಲೀಗ್ ಬಂಡಾಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಸರಗೋಡು ಮತ್ತು ಮಂಜೇಶ್ವರ ಬ್ಲಾಕ್‌ನ ಬಹುತೇಕ ಪಂಚಾಯಿತಿಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

    ಪತಿಗೆ ಸೋಲು, ಪತ್ನಿ ಗೆಲುವು: ಎಣ್ಮಕಜೆ ಪಂಚಾಯಿತಿಯಲ್ಲಿ ಐಕ್ಯರಂಗದಿಂದ ಸ್ಪರ್ಧಿಸಿದ್ದ ದಂಪತಿಯಲ್ಲಿ ಪತಿಗೆ ಸೋಲಾಗಿದ್ದು, ಪತ್ನಿ ಗೆಲುವು ಸಾಧಿಸಿದ್ದಾರೆ. ಇಲ್ಲಿ ಒಂದನೇ ವಾರ್ಡ್‌ನ ಸಾಯದಲ್ಲಿ ಪತಿ ಬಿಜೆಪಿ ವಿರುದ್ಧ ಸೋತಿದ್ದು, ಪತ್ನಿ ಎರಡನೇ ವಾರ್ಡ್ ಚವರ್ಕಾಡಿನಿಂದ ಗೆದ್ದಿದ್ದಾರೆ. ಒಟ್ಟು 17 ಸ್ಥಾನಗಳಲ್ಲಿ ಐಕ್ಯರಂಗ 8, ಬಿಜೆಪಿ 5, ಸಿಪಿಎಂ ನೇತೃತ್ವದ ಎಡರಂಗ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬದಿಯಡ್ಕ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ ಸಾಯಿರಾಮ್ ಗೋಪಾಲಕೃಷ್ಣ ಭಟ್ ಅವರ ಪುತ್ರ 14ನೇ ಪಟ್ಟಾಜೆ ವಾರ್ಡಿನಿಂದ ಗೆಲುವು ಸಾಧಿಸಿದ್ದಾರೆ.

    ಉದುಮದಲ್ಲಿ ಖಾತೆ ತೆರೆದ ಬಿಜೆಪಿ
    ಮುಳ್ಳೇರಿಯ: ಪೆರಿಯದಲ್ಲಿ ಎಲ್‌ಡಿಎಫ್‌ಗೆ ಹಿನ್ನೆಡೆಯಾಗಿದ್ದು, ಕಲ್ಯೋಟ್ ವಾರ್ಡ್ ಅನ್ನು ಯುಡಿಎಫ್ ವಶಪಡಿಸಿಕೊಂಡಿದೆ. ಅಭ್ಯರ್ಥಿ ಆರ್.ರತೀಶ್ 354 ಮತಗಳೊಂದಿಗೆ ಜಯ ಗಳಿಸಿದ್ದಾರೆ. ಉದುಮ ಗ್ರಾಪಂನಲ್ಲಿ ಬಿಜೆಪಿ ಖಾತೆ ತೆರೆದಿದೆ. ಕರಾವಳಿ ವಾರ್ಡ್‌ಗಳಾದ ಬೇಕಲ್ ಮತ್ತು ಕೊಟ್ಟಿಕುಳವನ್ನು ಕಾಂಗ್ರೆಸ್‌ನಿಂದ ಬಿಜೆಪಿ ವಶಪಡಿಸಿಕೊಂಡಿದೆ. ಕೋಟಿಕುಳಂ ವಾರ್ಡ್‌ನಲ್ಲಿ ಬಿಜೆಪಿ ಒಂದು ಮತದಿಂದ ಜಯ ಗಳಿಸಿದೆ. ಬೇಕಲದಲ್ಲಿ 233 ಮತದಿಂದ ಬಿಜೆಪಿ ಜಯ ಗಳಿಸಿತು. ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಅವರ ಹುಟ್ಟೂರು ಕೋಟ್ಟಿಕುಳಂ ಆಗಿರುವುದರಿಂದ ಬಿಜೆಪಿಗೆ ಇಲ್ಲಿ ಗೆಲುವು ಸಾಧಿಸಲೇಬೇಕಿತ್ತು. ಕುಂಬಳೆ ಗ್ರಾಪಂನ ಒಂದನೇ ವಾರ್ಡ್ ಕುಂಬೋಲ್‌ನಲ್ಲಿ ಎಸ್‌ಡಿಪಿಐ ಅಭ್ಯರ್ಥಿ 80 ಮತಗಳೊಂದಿಗೆ ಜಯ ಗಳಿಸಿದರು.

    ಪಾಲಕ್ಕಾಡ್ ನಗರಸಭೆ ಬಿಜೆಪಿ ತೆಕ್ಕೆಗೆ
    ಪಾಲಕ್ಕಾಡ್ ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. 49 ಸ್ಥಾನಗಳಲ್ಲಿ 28ರಲ್ಲಿ ಬಿಜೆಪಿ, 14ರಲ್ಲಿ ಐಕ್ಯರಂಗ, 6ರಲ್ಲಿ ಎಡರಂಗ ಹಾಗೂ ಒಂದು ಸ್ಥಾನದಲ್ಲಿ ವೆಲ್‌ಫೇರ್ ಪಾರ್ಟಿ ಗೆಲುವು ಸಾಧಿಸಿದೆ. ಕಳೆದ ಬಾರಿ ಬಿಜೆಪಿಗೆ 24 ಸೀಟುಗಳು ಲಭ್ಯವಾಗಿತ್ತು. ಕಣ್ಣೂರು ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿ ಬಿಜೆಪಿ ಖಾತೆ ತೆರೆದಿದ್ದು, ಪಳ್ಳಿಕುನ್ನು ಡಿವಿಶನ್‌ನಲ್ಲಿ ಗೆಲುವು ಸಾಧಿಸಿದೆ. ಬೆಳ್ಳೂರಿನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಇಲ್ಲಿನ 13 ವಾರ್ಡುಗಳ ಪೈಕಿ ಬಿಜೆಪಿ 9 ಹಾಗೂ ಎಡರಂಗ 4ರಲ್ಲಿ ಗೆಲುವು ಸಾಧಿಸಿದೆ. ಕಾಸರಗೋಡು ಜಿಲ್ಲೆಯ ಆರು ಬ್ಲಾಕ್ ಪಂಚಾಯಿತಿಗಳಲ್ಲಿ ನೀಲೇಶ್ವರ, ಪರಪ್ಪ, ಕಾರಡ್ಕ ಹಾಗೂ ಕಾಞಂಗಾಡಿನಲ್ಲಿ ಎಡರಂಗ, ಕಾಸರಗೋಡಿನಲ್ಲಿ ಐಕ್ಯರಂಗ ಹಾಗೂ ಮಂಜೇಶ್ವರದಲ್ಲಿ ಅತಂತ್ರ ಸ್ಥಿತಿಯಿದೆ. ಬೇಡಡ್ಕ ಗ್ರಾಪನ ಎಲ್ಲ 17 ಸ್ಥಾನಗಳನ್ನೂ ಎಡರಂಗ ಗೆದ್ದುಕೊಂಡಿದೆ.

    ಜಿಪಂನಲ್ಲೂ ಎಡರಂಗಕ್ಕೆ ಗೆಲುವು: ಕಾಸರಗೋಡು ಜಿಪಂನ 17 ಸ್ಥಾನಗಳಲ್ಲಿ ಎಡರಂಗ ಎಂಟು ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅತಿ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ. ಏಳು ಸ್ಥಾನಗಳಲ್ಲಿ ಎಡರಂಗ ಹಾಗೂ ಚೆರ್ಕಳ ಡಿವಿಶನ್‌ನಲ್ಲಿ ಎಡರಂಗ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶಾನವಾಸ್ ಪಾದೂರು ಗೆಲುವು ಸಾಧಿಸುವ ಮೂಲಕ ಸ್ಥಾನಗಳ ಸಂಖ್ಯೆ ಎಂಟಕ್ಕೇರಿದೆ. ಏಳು ಸ್ಥಾನಗಳಲ್ಲಿ ಐಕ್ಯರಂಗ ಹಾಗೂ ಎರಡು ಸ್ಥಾನಗಳಲ್ಲಿ ಎನ್‌ಡಿಎ ಗೆಲುವು ಸಾಧಿಸಿದೆ. ಕಳೆದ ಬಾರಿ ಗೆಲುವು ಸಾಧಿಸಿದ್ದ ಎಡನೀರು ಹಾಗೂ ಪುತ್ತಿಗೆ ಸೀಟುಗಳನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಉಳಿಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts