More

    ಮತದಾನ ಮುಗಿದರೂ ಟೆನ್ಶನ್: ಅಭ್ಯರ್ಥಿಗಳ ಎದೆಯಲ್ಲಿ ಢವಢವ

    ಮಂಡ್ಯ: ಕೆಲವೊಂದು ಸಣ್ಣಪುಟ್ಟ ಗೊಂದಲ ಹೊರತುಪಡಿಸಿ ವಿಧಾನಸಭಾ ಚುನಾವಣೆಯ ಮತದಾನ ಶಾಂತಿಯುತವಾಗಿ ಮುಗಿದಿದೆ. ಆದರೆ ಲಿತಾಂಶದ ಬಗ್ಗೆ ಚರ್ಚೆಗಳು ಜೋರಾಗಿಯೇ ನಡೆಯುತ್ತಿದೆ. ಅಭ್ಯರ್ಥಿಗಳಿಗೆ ರಿಸಲ್ಟ್‌ನ ಟೆನ್ಶನ್ ಕಾಡುತ್ತಿದ್ದರೆ, ಬೆಂಬಲಿಗರು ಬೆಟ್ಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
    ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿರುವುದರಿಂದ ಯಾರಿಗೆ ಲಾಭ, ನಷ್ಟ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ಮಾತ್ರವಲ್ಲದೆ ಸೋಲು ಗೆಲುವಿನ ಮಾತು, ಯಾರಿಗೆ ಯಾವ ಭಾಗದಲ್ಲಿ ಅನುಕೂಲ, ಯಾರಿಗೆ ಒಳೇಟಿನ ಭೀತಿ ಎದುರಾಗಿದೆ ಎನ್ನುವುದರ ಬಗ್ಗೆಯೂ ತೀವ್ರ ಚರ್ಚೆ ನಡೆಯುತ್ತಿದ್ದು, ಲಿತಾಂಶಕ್ಕಾಗಿ ಇನ್ನು ಒಂದು ದಿನ ಕಾಯಬೇಕಿದೆ.
    ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇರುವುದರಿಂದ ಪಕ್ಷ ಅಧಿಕಾರಕ್ಕೆ ಬರಲಿದೆ. ಅದರಂತೆ ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಮತ್ತೊಮ್ಮೆ ಸಚಿವ ಸ್ಥಾನ ಅಲಂಕರಿಸುತ್ತಾರೆನ್ನುವ ಸದ್ದು ಜೋರಾಗಿದೆ. ಹಾಗೆಂದ ಮಾತ್ರಕ್ಕೆ ಜೆಡಿಎಸ್ ಪಾಳಯ ಒಪ್ಪಿಕೊಳ್ಳುತ್ತಿಲ್ಲ. ಏನೇ ಆದರೂ ಈ ಬಾರಿಯೂ ನಮ್ಮದೇ ಗೆಲುವು ಎನ್ನುತ್ತಿದ್ದಾರೆ. ಜತೆಗೆ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ರಚನೆ ಬಗ್ಗೆಯೂ ವ್ಯಾಪಕ ಚರ್ಚೆ ನಡೆಯುತ್ತಿದೆ. ಯಾವುದೇ ಪಕ್ಷ ಹೆಚ್ಚಿನ ಸ್ಥಾನ ಗಳಿಸಿದರೂ ಜೆಡಿಎಸ್‌ನ ಬೆಂಬಲ ಬೇಕು. ಒಂದು ವೇಳೆ ಮೈತ್ರಿ ಸರ್ಕಾರ ರಚನೆಯಾದರೆ ಸಿ.ಎಸ್.ಪುಟ್ಟರಾಜು ಸಚಿವರಾಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
    ಜಿಲ್ಲೆಯ ಮಟ್ಟಿಗೆ ನೋಡುವುದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ನಡುವೆ ನೇರ ಹಣಾಹಣಿ ನಡೆಯುವ ನಾಗಮಂಗಲ, ಮದ್ದೂರು, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಎರಡು ಪಕ್ಷದ ಕಾರ್ಯಕರ್ತರು ಬೆಟ್ಟಿಂಗ್ ಕಟ್ಟುತ್ತಿದ್ದಾರೆನ್ನಲಾಗುತ್ತಿದೆ. ಕೆಲವೆಡೆ ಸೋಡಿ ಕೊಡುವಷ್ಟು ಮಟ್ಟಿಗೆ ಪೈಪೋಟಿ ನಡೆಯುತ್ತಿದೆ. ಇದರೊಟ್ಟಿಗೆ ಕುರಿಗಳನ್ನು ಕಟ್ಟಿರುವ ಉದಾಹರಣೆಗಳೂ ಇವೆ ಎಂದು ತಿಳಿದುಬಂದಿದೆ. ಶ್ರೀರಂಗಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆಯಿದ್ದರೂ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಮೇಶ ಬಂಡಿಸಿದ್ದೇಗೌಡ ಗೆಲುವಿನ ಬಗ್ಗೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಇನ್ನು ತೀವ್ರ ಜಿದ್ದಾಜಿದ್ದಿಯಿಂದ ನಡೆದಿರುವ ಮೇಲುಕೋಟೆ ಕ್ಷೇತ್ರದಲ್ಲಿ ಬೆಟ್ಟಿಂಗ್‌ಗಿಂತಲೂ ಪ್ರತಿಷ್ಠೆಯನ್ನೇ ಪಣಕ್ಕಿಡಲಾಗಿದೆ. ಅನುಕಂಪದ ಹಿನ್ನೆಲೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆಲುವು ಸಾಧಿಸುತ್ತಾರೆನ್ನುವ ವಿಶ್ವಾಸ ರೈತ ಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ. ಆದರೆ ಇದಕ್ಕೆ ತಿರುಗೇಟು ನೀಡುವಂತೆ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅದಾಗಲೇ ಗೆದ್ದಿದ್ದು, ಲೀಡ್ ನೋಡಿಕೊಳ್ಳಬೇಕಿದೆ ಎಂದು ಕಾರ್ಯಕರ್ತರ ವಾದ.
    ಏಳು ಕ್ಷೇತ್ರದಲ್ಲಿಯೂ ಪೈಪೋಟಿ: ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಕೆಲವೆಡೆ ಇಬ್ಬರು ಅಭ್ಯರ್ಥಿಗಳ ನಡುವೆ ಮುಖಾಮುಖಿ ಪೈಪೋಟಿ ಏರ್ಪಟ್ಟಿದ್ದರೆ, ಉಳಿದೆಡೆ ತ್ರಿಕೋನ ಮತ್ತು ಚತುಷ್ಕೋನ ಸ್ಪರ್ಧೆಯಿದೆ. ಆದ್ದರಿಂದ ಅಭ್ಯರ್ಥಿಗಳ ಸೋಲು-ಗೆಲುವಿನ ಬಗ್ಗೆ ಬೆಟ್ಟಿಂಗ್ ಭರಾಟೆ ನಡೆಯುತ್ತಿದೆ. ಹೆಚ್ಚಿನ ಕಡೆಗಳಲ್ಲಿ ನಗದು ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ. ಕೆಲವರು ಬೆಟ್ಟಿಂಗ್‌ಗಾಗಿ ಎದುರಾಳಿಗಳಿಗೆ ‘ಪಂಥಾಹ್ವಾನ’ ನೀಡುತ್ತಿದ್ದಾರೆ.
    ಕಮಲಕ್ಕೂ ಡಿಮಾಂಡ್: ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆಯುವ ಬಗ್ಗೆಯೂ ಬೆಟ್ಟಿಂಗ್ ಕಟ್ಟಲಾಗುತ್ತಿದೆ ಎನ್ನುವ ಮಾತಿದೆ. ಪ್ರಸ್ತುತ ಚುನಾವಣೆಯಲ್ಲಿ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿತ್ತು. ಈ ಐದು ಕ್ಷೇತ್ರಗಳ ಪೈಕಿ ಯಾವುದಾದರೂ 2 ನಾವು ಖಾತೆ ತೆರೆದೇ ತೆರೆಯುತ್ತೇವೆಂದು ಕಾರ್ಯಕರ್ತರು ವಿಶ್ವಾಸದಲ್ಲಿದ್ದಾರೆ.
    ಇದರೊಟ್ಟಿಗೆ ಪಕ್ಷೇತರರಾಗಿ ಸ್ಪರ್ಧಿಸಿರುವ ಪ್ರಬಲ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆ ಜತೆಗೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಪ್ರಮುಖವಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕೆ.ಎಸ್.ವಿಜಯಾನಂದ, ಮಧುಚಂದನ್, ಶ್ರೀರಂಗಪಟ್ಟಣದಲ್ಲಿ ತಗ್ಗಹಳ್ಳಿ ವೆಂಕಟೇಶ್ ಪ್ರಬಲ ಅಭ್ಯರ್ಥಿಗಳು ಎನ್ನಿಸಿಕೊಂಡಿದ್ದಾರೆ. ಇವರು ಲಿತಾಂಶವನ್ನು ಬುಡಮೇಲು ಮಾಡುವ ಶಕ್ತಿ ಹೊಂದಿದ್ದಾರೆ. ಆದ್ದರಿಂದ ಇವರು ಪಡೆಯುವ ಮತಗಳೆಷ್ಟು ಎನ್ನುವ ಚರ್ಚೆ ಜೋರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts