More

    ರವಿ, ಬಿಎಲ್‌ಡಿ ಸ್ಪರ್ಧೆಗೆ ಗ್ರೀನ್‌ಸಿಗ್ನಲ್: ಮಂಡ್ಯ, ಕೆ.ಆರ್.ಪೇಟೆಗೆ ಅಭ್ಯರ್ಥಿ ಅಂತಿಮ

    ಮಂಡ್ಯ: ಜಿಲ್ಲೆಯ ಪೈಕಿ ತೀವ್ರ ಕುತೂಹಲ ಕೆರಳಿಸಿದ ಮಂಡ್ಯ ಹಾಗೂ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ. ನಿರೀಕ್ಷೆಯಂತೆ ರವಿಕುಮಾರ್ ಗಣಿಗ ಮತ್ತು ಬಿ.ಎಲ್.ದೇವರಾಜು ಅವರ ಸ್ಪರ್ಧೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ತೋರಿಸಿದೆ. ಈ ನಡುವೆ ಮಂಡ್ಯ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದ ಕೀಲಾರ ರಾಧಾಕೃಷ್ಣ ಬಂಡಾಯವೇಳುವ ಪರಿಸ್ಥಿತಿ ಗೋಚರಿಸುತ್ತಿವೆ.
    ಮಂಡ್ಯ ಕ್ಷೇತ್ರದಿಂದ ಬಿ ಫಾರ್ಮ್ ಬಯಸಿ ಬರೋಬರಿ 16 ಜನರು ಹಾಗೂ ಕೆ.ಆರ್.ಪೇಟೆಯಲ್ಲಿ ಆರು ಜನರು ಅರ್ಜಿ ಸಲ್ಲಿಸಿದ್ದರು. ಪೈಪೋಟಿ ಹಿನ್ನೆಲೆಯಲ್ಲಿ ಹುರಿಯಾಳು ಹೆಸರು ಅಂತಿಮಗೊಳಿಸುವುದು ನಾಯಕರಿಗೆ ಸವಾಲಿನ ಕೆಲಸವಾಗಿತ್ತು. ಈ ಕಾರಣದಿಂದಲೇ ಮೊದಲ ಪಟ್ಟಿಯಿಂದ ಕ್ಷೇತ್ರಗಳನ್ನು ದೂರವಿಡಲಾಗಿತ್ತು. ಇದೀಗ ಎಲ್ಲವನ್ನು ಅಳೆದು ತೂಗಿ ಎರಡನೇ ಪಟ್ಟಿಯಲ್ಲಿ ಇಬ್ಬರ ಹೆಸರನ್ನು ಕೊನೆಗೊಳಿಸಲಾಗಿದೆ. ಅತ್ತ ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಪಕ್ಷಕ್ಕೆ ಬೆಂಬಲ ನೀಡುವುದನ್ನು ಅಧಿಕೃತಗೊಳಿಸಲಾಗಿದೆ.
    ರವಿಕುಮಾರ್‌ಗೆ ಮಣೆ, ಹಿರಿಯರಿಗೆ ಸಮಾಧಾನ: ಮಂಡ್ಯ ಕ್ಷೇತ್ರದಿಂದ ರವಿಕುಮಾರ್ ಗಣಿಗ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಇದು ನಿರೀಕ್ಷತವೂ ಕೂಡ ಆಗಿತ್ತು ಎನ್ನುವುದು ಬಹಿರಂಗ ಸತ್ಯ. ಇದಕ್ಕೆ ಹಲವು ಕಾರಣವೂ ಇದೆ. 2018ರಲ್ಲಿ ಸ್ಪರ್ಧೆ ಮಾಡಿದ್ದ ರವಿಕುಮಾರ್ ಅವರು 21 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. ಆದಾಗ್ಯೂ ಕ್ಷೇತ್ರದಲ್ಲಿಯೇ ಇದ್ದು ಪಕ್ಷ ಸಂಘಟನೆ ಮಾಡುತ್ತಿದ್ದರು. ಜತೆಗೆ ಸ್ಥಳೀಯ ಮುಖಂಡರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. ಇನ್ನು ಈ ಬಾರಿ ಸ್ಪರ್ಧೆಗೆ ಅರ್ಜಿ ಕರೆದಾಗ 16 ಜನ ಅವಕಾಶ ಕೇಳಿದ್ದರು.
    ಈ ಪೈಕಿ ಇತ್ತೀಚೆಗಷ್ಟೇ ಜೆಡಿಎಸ್‌ನಿಂದ ಹೊರಬಂದು ಕೈ ಪಾಳಯ ಸೇರಿದ್ದ ಕೀಲಾರ ರಾಧಾಕೃಷ್ಣ, ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಡಾ.ಕೃಷ್ಣ ಪೈಪೋಟಿ ನೀಡಿದ್ದರು. ಅತ್ತ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಚ್.ಬಿ.ರಾಮು ನೇತೃತ್ವದ ಹಿರಿಯರ ತಂಡ ವಲಸಿಗರಿಗೆ ಅವಕಾಶ ಕೊಡದೇ ಪಕ್ಷದಲ್ಲಿ ದುಡಿದವರನ್ನು ಪರಿಗಣಿಸುವಂತೆ ಹೈಕಮಾಂಡ್‌ವರೆಗೂ ಮನವಿ ಸಲ್ಲಿಸಿದ್ದರು. ಆದರೆ ರವಿಕುಮಾರ್ ಗಣಿಗ ಅವರಿಗೆ ಅವಕಾಶ ನೀಡುವ ವಿಚಾರದಲ್ಲಿ ಹೆಚ್ಚಿನ ವಿರೋಧವಿರಲಿಲ್ಲ. ಮಾತ್ರವಲ್ಲದೆ ವಲಸಿಗರೆಂದೇ ಬ್ರಾೃಂಡ್ ಆಗಿದ್ದ ಕೆಕೆಆರ್, ಡಾ.ಕೃಷ್ಣಗೆ ಅವಕಾಶ ಕೊಟ್ಟರೆ ಬಂಡಾಯ ಸ್ಫೋಟಗೊಳ್ಳುವ ಹಾಗೂ ಚುನಾವಣೆಯಲ್ಲಿ ದೊಡ್ಡ ನಷ್ಟವಾಗುವ ಲಕ್ಷಣಗಳು ಗೋಚರಿಸಲು ಪ್ರಾರಂಭಿಸಿದವು. ಇಷ್ಟೇ ಅಲ್ಲದೆ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದರೆ ವಲಸಿಗರಿಂದ ಲಾಭ ಪಡೆದಿದ್ದಾರೆನ್ನುವ ಗಂಭೀರ ಆರೋಪ ಪಕ್ಷದ ಮೇಲೆ ಬರುವುದರ ಜತೆಗೆ ಚುನಾವಣೆಯಲ್ಲಿ ಅನಾನುಕೂಲಕರ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಎದುರಾಗಿತ್ತು.
    ಇನ್ನು ನಾಯಕರು ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಿದಾಗ ರವಿಕುಮಾರ್ ಅವರಿಗೆ ಅವಕಾಶ ಕೊಡುವ ಸಂಬಂಧ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಪ್ರಮುಖವಾಗಿ ಕಳೆದ ಚುನಾವಣೆಯ ಸೋಲಿನ ಅನುಕಂಪವಿದೆ. ಜತೆಗೆ ಜೆಡಿಎಸ್‌ನ ಬಂಡಾಯ ಫ್ಲಸ್ ಆಗುವ ಸಾಧ್ಯತೆ ಇರುವುದರಿಂದ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎನ್ನುವುದನ್ನು ತಿಳಿಸಿದ್ದರು. ಈ ಎಲ್ಲ ಅಂಶ ಪರಿಗಣಿಸಿ ರವಿಕುಮಾರ್‌ಗೆ ಮತ್ತೆ ಮಣೆ ಹಾಕಲಾಗಿದೆ. ಇದರಿಂದಾಗಿ ಪಕ್ಷದ ಹಿರಿಯ ಮುಖಂಡರಿಗೂ ಕೊಂಚ ಸಮಾಧಾನ ತಂದಿದೆ.
    ಅತ್ತ ಬಿ ಫಾರ್ಮ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕೀಲಾರ ರಾಧಾಕೃಷ್ಣ ಬೆಂಬಲಿಗರು ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಕಚೇರಿಯಲ್ಲಿ ಕುರ್ಚಿಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದಾರೆ. ಈ ನಡೆ ಪಕ್ಷದ ಹಿರಿಯ ಮುಖಂಡರಿಗೆ ಬೇಸರ ತರಿಸಿದೆ. ಇನ್ನು ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಗಲಿದೆ ಎನ್ನುವ ಖಚಿತತೆಯೊಂದಿಗೆ ಕೈ ಪಾಳಯ ಸೇರಿದ ಕೆಕೆಆರ್‌ಗೆ ದಾರಿ ತಪ್ಪಿದಂತಾಗಿದೆ. ಈ ಹಿನ್ನೆಲೆಯಲ್ಲಿ ಬಂಡಾಯವಾಗಿ ಸ್ಪರ್ಧೆ ಮಾಡಿದರೂ ಅಚ್ಚರಿಯಿಲ್ಲ. ಅಂತೆಯೇ ಡಾ.ಕೃಷ್ಣಗೆ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಕೊಟ್ಟು ಸ್ಪರ್ಧೆ ವಿಚಾರದಿಂದ ದೂರ ಉಳಿಸುವ ಕೆಲಸ ಮೊದಲೇ ನಡೆದಿತ್ತು. ಆದಾಗ್ಯೂ ಉತ್ಸುಕತೆ ತೋರಿಸಿದರೂ ಪ್ರಯೋಜನವಾಗಲಿಲ್ಲ.
    ಬಿಎಲ್‌ಡಿಗೆ ‘ಕೈ’ ಅವಕಾಶ: ಬಿ ಾರ್ಮ್ ವಿಚಾರದಿಂದಾಗಿ ವರಿಷ್ಠರ ನಿರ್ಧಾರದಿಂದ ಬೇಸತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಹಿರಿಯ ನಾಯಕ ಬಿ.ಎಲ್.ದೇವರಾಜು ಅವರಿಗೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡಲಾಗಿದೆ.
    ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಬಿಎಲ್‌ಡಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಅವರಿಗೆ ಅವಕಾಶ ನೀಡುತ್ತಾರೆನ್ನುವ ಮಾತು ಕೇಳಿಬಂದಿತ್ತು. ಇದೆಲ್ಲವನ್ನೂ ತಲೆಕೆಳಗೆ ಮಾಡಿದ ದಳಪತಿಗಳು ಮನ್‌ಮುಲ್ ನಿರ್ದೇಶಕರೂ ಆಗಿರುವ ಜಿಪಂ ಮಾಜಿ ಸದಸ್ಯ ಎಚ್.ಟಿ.ಮಂಜುಗೆ ಮಣೆ ಹಾಕಿದ್ದರು. ಬಿ ಾರ್ಮ್ ಕೊಟ್ಟಿರುವ ವಿಚಾರಕ್ಕೆ ಬಿಎಲ್‌ಡಿ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದರು. ಮಾತ್ರವಲ್ಲದೆ ಸಾವಿರಾರೂ ಬೆಂಬಲಿಗರು, ಹಿತೈಷಿಗಳೊಂದಿಗೆ ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದರು. ಈ ಮೂಲಕ ವರಿಷ್ಠರು ತಮ್ಮ ನಿರ್ಧಾರದ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎನ್ನುವ ಸಲಹೆ ವ್ಯಕ್ತವಾಗಿತ್ತು. ಆದರೆ ಇದಕ್ಕೆ ದಳಪತಿಗಳಿಂದ ಸ್ಪಂದನೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದರು. ಜತೆಗೆ ಕಳೆದ ಚುನಾವಣೆಯಲ್ಲಿ ಸೋಲಿನ ಅನುಕಂಪ ಹಾಗೂ ಜೆಡಿಎಸ್‌ನಲ್ಲಿ ನಡೆಸಿಕೊಂಡ ರೀತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ವರದಾನವಾಗಲಿದೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ.
    ಮದ್ದೂರು ಮತ್ತೆ ಸಸ್ಪೆನ್ಸ್: ಜಿಲ್ಲೆಯ ಆರು ಕ್ಷೇತ್ರದ ಅಭ್ಯರ್ಥಿ ವಿಚಾರವನ್ನು ಇತ್ಯರ್ಥಗೊಳಿಸಿರುವ ಹೈಕಮಾಂಡ್ ಮದ್ದೂರು ಕ್ಷೇತ್ರವನ್ನು ಮತ್ತೆ ಸಸ್ಪೆನ್ಸ್‌ಗೆ ದೂಡಿದೆ. ಇದು ಕ್ಷೇತ್ರದ ಮುಖಂಡರು, ಕಾರ್ಯಕರ್ತರನ್ನು ಇನ್ನಷ್ಟು ಗೊಂದಲಕ್ಕೀಡು ಮಾಡಿದೆ. ಪಕ್ಷದ ಮೂಲಗಳ ಪ್ರಕಾರ ಕದಲೂರು ಉದಯ್ ಹೆಸರು ಅಂತಿಮಗೊಂಡಿದೆ. ಆದರೂ ಕಾಂಗ್ರೆಸ್‌ನಿಂದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಕುಟುಂಬಕ್ಕೆ ಅನ್ಯಾಯವಾಗಿದೆ ಎನ್ನುವ ಸಂದೇಶ ಹೋಗಬಾರದೆನ್ನುವ ಕಾರಣಕ್ಕೆ ಅಭ್ಯರ್ಥಿ ಘೋಷಣೆ ಮುಂದೂಡಲಾಗುತ್ತಿದೆ. ಶೀಘ್ರವೇ ಎಲ್ಲವನ್ನೂ ಇತ್ಯರ್ಥಪಡಿಸಿ ಹೆಸರು ಘೋಷಣೆ ಮಾಡುವುದರ ಜತೆಗೆ ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸುವ ಕಸರತ್ತು ನಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts