More

    ಎಲ್ಲರಿಗೂ ಸಿಎಸ್ಪಿಯೇ ಟಾರ್ಗೆಟ್: ಮೇಲುಕೋಟೆ ಕ್ಷೇತ್ರದಲ್ಲಿ ಗರಿಗೆದರಿದ ರಾಜಕೀಯ

    ಮಂಡ್ಯ: ಅಂದುಕೊಂಡಂತೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಸೋಲಿಸಲು ವಿಪಕ್ಷಗಳು ಒಗ್ಗೂಡುತ್ತಿದ್ದು, ಎದುರಾಳಿಗೆಲ್ಲ ಸಿಎಸ್ಪಿಗೆ ಟಾರ್ಗೆಟ್ ಆಗಿರುವುದು ಸ್ಪಷ್ಟ. ಆದರೆ ಅವರನ್ನು ಕಟ್ಟಿಹಾಕುವುದು ಸುಲಭದ ವಿಷಯವಲ್ಲ ಎನ್ನುವುದನ್ನು ಕಳೆದ ಚುನಾವಣೆಯ ಅಂಕಿಅಂಶ ಹೇಳುತ್ತಿದೆ.
    ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ. ಜೆಡಿಎಸ್‌ನಿಂದ ಹಾಲಿ ಶಾಸಕ ಸಿ.ಎಸ್.ಪುಟ್ಟರಾಜು, ರೈತ ಸಂಘದ ಅಭ್ಯರ್ಥಿಯಾಗಿ ದರ್ಶನ್ ಪುಟ್ಟಣ್ಣಯ್ಯ ಕಣಕ್ಕಿಳಿಯುವುದು ಖಚಿತವಾಗಿದೆ. ಇದು ನಿರೀಕ್ಷಿತವೂ ಕೂಡ ಆಗಿತ್ತು. ಅದರಂತೆಯೇ ಕ್ಷೇತ್ರದಲ್ಲಿ ಚಟುವಟಿಕೆ ನಡೆಯುತ್ತಿದೆ. ಈ ನಡುವೆ ಬಿಜೆಪಿ ಬಿ ಾರ್ಮ್ ಆಕಾಂಕ್ಷಿತ ಡಾ.ಇಂದ್ರೇಶ್ ಸ್ಪರ್ಧೆಯ ಬಗ್ಗೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.
    ಸಿಎಸ್ಪಿಗೆ ಅಭಿವೃದ್ಧಿ ಕೆಲಸದ ಸಾಥ್: ಒಮ್ಮೆ ಸಂಸದ, ಮೂರು ಶಾಸಕರಾಗಿ ಹಾಗೂ ಕ್ಷೇತ್ರದ ಮೊದಲ ಸಚಿವ ಎನ್ನುವ ಹೆಗ್ಗಳಿಕೆಯನ್ನು ಹೊಂದಿರುವ ಸಿಎಸ್ಪಿ, ಅಭಿವೃದ್ಧಿ ಕೆಲಸಕ್ಕೆ ಆದ್ಯತೆ ನೀಡಿದ್ದಾರೆ. ನೀರಾವರಿ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕ್ಷೇತ್ರಕ್ಕೆ ತಂದಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಬೆಂಬಲ ಕೊಟ್ಟರೂ ರೈತ ಸಂಘದ ಅಭ್ಯರ್ಥಿಯಾಗಿ ದರ್ಶನ್ ಗೆಲುವು ಕಾಣಲಾಗಲಿಲ್ಲ. ಇದು ಪುಟ್ಟರಾಜು ಅವರ ವರ್ಚಸ್ಸನ್ನು ತೋರಿಸುತ್ತದೆ. ರಾಜಕೀಯ ಕಾರಣಕ್ಕೆ ಕೆಲ ಮುಖಂಡರು ಅವರಿಂದ ದೂರಾಗಿದ್ದರೂ, ಬಲಿಷ್ಠ ಕಾರ್ಯಕರ್ತರ ಪಡೆ ಅವರ ಬೆನ್ನಿಗಿದೆ. ಇದು ಸಿಎಸ್ಪಿಗೆ ್ಲಸ್ ಆಗಿದೆ.
    ಇನ್ನು ತಂದೆ ಕೆ.ಎಸ್.ಪುಟ್ಟಣ್ಣಯ್ಯ ಸೋಲಿನ ಅನುಕಂಪದ ನಡುವೆಯೂ ದರ್ಶನ್ ಗೆಲುವು ಸಿಗಲಿಲ್ಲ. ಅಂದಿನ ಚುನಾವಣಾ ವಾತಾವರಣ ದರ್ಶನ್‌ಗೆ ಪೂರಕವಾಗಿರುವಂತೆ ಕಂಡಿದ್ದರೂ ಲಿತಾಂಶ ಎಲ್ಲವನ್ನೂ ತಲೆಕೆಳಗೆ ಮಾಡಿತ್ತು. 22224 ಮತಗಳ ಅಂತರದಿಂದ ಸೋಲು ಕಾಣುವಂತಾಗಿದ್ದರೂ ದರ್ಶನ್ ಬಗ್ಗೆ ಕ್ಷೇತ್ರದ ಜನರಿಗೆ ಪ್ರೀತಿ ಇದೆ ಎನ್ನುವುದನ್ನು ತೋರಿಸಿತ್ತು. ಆದರೆ ಚುನಾವಣೆ ಬಳಿಕ ಅಮೆರಿಕಾಕ್ಕೆ ಹೋಗಿದ್ದು ಅವರೆಲ್ಲರ ಬೇಸರಕ್ಕೆ ಕಾರಣವಾಗಿತ್ತು. ಆಗೊಮ್ಮೆ ಈಗೊಮ್ಮೆ ಕ್ಷೇತ್ರಕ್ಕೆ ಬರುತ್ತಿದ್ದ ಅವರು, ಚುನಾವಣೆ ಹೊಸ್ತಿಲಲ್ಲಿ ಅಲ್ಲಿನ ಕಂಪನಿ ಮಾರಾಟ ಮಾಡಿ ವಾಪಸ್ ಬಂದಿದ್ದಾರೆ. ಮಾತ್ರವಲ್ಲದೆ ಮೇಲುಕೋಟೆ ಕ್ಷೇತ್ರದಲ್ಲಿ ಪ್ರತಿ ಗ್ರಾಮಕ್ಕೂ ಪಾದಯಾತ್ರೆ ಮಾಡಿದ್ದಾರೆ. ಜನರಿಂದ ಸ್ಪಂದನೆ ಸಿಕ್ಕಿದೆಯಾದರೂ ಮತಗಳಾಗಿ ಪರಿವರ್ತನೆಯಾಗಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ. ಜತೆಗೆ ಇನ್ನು ಮುಂದೆ ಕ್ಷೇತ್ರ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟನೆ ನೀಡಿರುವುದರ ಹೊರತಾಗಿಯೂ ಚುನಾವಣೆಯಲ್ಲಿ ವ್ಯತಿರಿಕ್ತ ಲಿತಾಂಶ ಬಂದರೆ ಮುಂದಿನ ನಡೆ ಏನಿರಬಹುದೆನ್ನುವ ಸಣ್ಣ ಅನುಮಾನವೂ ಜನರಿಗಿದೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪರ ಪ್ರಚಾರ ಮಾಡಲು ಚಿತ್ರನಟ, ಪ್ರಗತಿಪರ ಸಂಘಟನೆಗಳ ಸಾಥ್ ಪಡೆಯಲು ದರ್ಶನ್ ಸಿದ್ಧತೆ ಮಾಡಿಕೊಂಡಿದ್ದಾರೆ.
    ಕ್ಷೇತ್ರದಲ್ಲಿ ದುರ್ಬಲವಾಗಿರುವ ಕಾಂಗ್ರೆಸ್ ಈ ಬಾರಿಯೂ ರೈತ ಸಂಘಕ್ಕೆ ಬೆಂಬಲ ನೀಡುವ ಸಾಧ್ಯತೆ ನಿಚ್ಚಳವಾಗಿದೆ. ಶತ್ರುವಿನ ಶತ್ರು ಮಿತ್ರ ಎನ್ನುವ ಗಾದೆಯಂತೆ ರೈತ ಸಂಘದ ಮೂಲಕ ಜೆಡಿಎಸ್ ಮಣಿಸಲು ಮುಂದಾಗಿದೆ. ಆಕಾಂಕ್ಷಿತರಿದ್ದರೂ ರೈತ ಸಂಘಕ್ಕೆ ಬೆಂಬಲ ನೀಡುವ ವಿಚಾರದ ಬಗ್ಗೆ ಈಗಾಗಲೇ ಬಿ ಾರ್ಮ್ ಆಕಾಂಕ್ಷಿತರೂ ಆಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಪಕ್ಷದ ನಾಯಕರ ಧೋರಣೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಳಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಅವರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಾಗಿತ್ತಾದರೂ, ಒಂದು ವೇಳೆ ರೈತ ಸಂಘಕ್ಕೆ ಬೆಂಬಲ ಕೊಟ್ಟರೆ ರವೀಂದ್ರ ಹೇಳಿದ ಮಾತ್ರ ಖರೆ ಎನ್ನುವಂತಾಗುತ್ತದೆ. ಜತೆಗೆ ಜಿಲ್ಲೆಯಲ್ಲಿ ಎರಡು ಎಂಎಲ್‌ಸಿ ಚುನಾವಣೆಯನ್ನು ಗೆದ್ದರೂ ಒಂದು ಕ್ಷೇತ್ರಕ್ಕೆ ಅಭ್ಯರ್ಥಿ ಹಾಕದಿದ್ದರೆ ಯುದ್ದಕ್ಕೆ ಮುನ್ನವೇ ಶಸತ್ಯಾಗ ಮಾಡಿದಂತಾಗುವುದರಲ್ಲಿ ಅನುಮಾನವಿಲ್ಲ.
    ಸಂಸದೆ ಹಠಕ್ಕೆ ಬಿಜೆಪಿ ಬಲಿ?: ಶತಾಯಗತಾಯ ಸಿಎಸ್ಪಿ ಅವರನ್ನು ಸೋಲಿಸಬೇಕೆಂಬ ಹಠವನ್ನು ಸಂಸದೆ ಸುಮಲತಾ ಮಾಡಿರುವುದು ಹೊಸ ವಿಷಯವೇನಲ್ಲ. ಆದರೆ ಪುಟ್ಟರಾಜು ಸೋಲಿಸಬೇಕೆನ್ನುವ ಸಂಸದೆಯ ಸೇಡಿನ ರಾಜಕಾರಣಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಬಿ ಾರ್ಮ್ ಆಕಾಂಕ್ಷಿತ ಡಾ.ಇಂದ್ರೇಶ್ ರಾಜಕೀಯ ಜೀವನ ಬಲಿಯಾಗಲಿದೆಯೇ ಎನ್ನುವ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಬಿಜೆಪಿಗೆ ಬೆಂಬಲ ೋಷಿಸಿರುವ ಸಂಸದೆ, ರೈತ ಸಂಘಕ್ಕೆ ಬೆಂಬಲ ನೀಡಲು ಬಿಜೆಪಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಅಥವಾ ಇಂದ್ರೇಶ್‌ಗೆ ಅವಕಾಶ ಸಿಗದಂತೆ ತಂತ್ರಗಾರಿಕೆ ಮಾಡುತ್ತಿದ್ದಾರೆನ್ನುವ ಹೊಸ ವಿಷಯ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
    ಇದಕ್ಕೆ ಸ್ಪಷ್ಟನೆ ನೀಡಿರುವ ಇಂದ್ರೇಶ್, ಸ್ಪರ್ಧೆ ಮಾಡುವುದಿಲ್ಲವೆಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ವರಿಷ್ಠರು ಅಂತಹ ನಿರ್ಧಾರ ಮಾಡುವುದಿಲ್ಲ. ಜತೆಗೆ ಸಂಸದೆ ಬಿಜೆಪಿ ಅಭ್ಯರ್ಥಿ ಪರವಾಗಿಯೇ ಪ್ರಚಾರ ಮಾಡಲಿದ್ದಾರೆಂದು ಹೇಳಿದ್ದಾರೆ. ಆದರೂ ಇತ್ತೀಚಿನ ಬೆಳವಣಿಗೆ ಇಂದ್ರೇಶ್ ಅವರಲ್ಲಿ ತಳಮಳ ಹುಟ್ಟಿಸಿದ್ದು, ಹೈಕಮಾಂಡ್ ಸಂಸದೆಗೆ ಕೊಡುವಷ್ಟು ಮಾನ್ಯತೆಯನ್ನು ಇಂದ್ರೇಶ್‌ಗೆ ಕೊಡುವುದಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಅತ್ತ ರೈತ ಸಂಘದ ಕಾರ್ಯಕರ್ತರು ಕೂಡ ಸಂಸದೆ ತಮ್ಮ ಅಭ್ಯರ್ಥಿ ಪರ ಮತಯಾಚಿಸಲಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ನೀಡಿದ ಸಹಕಾರದ ಋಣ ತೀರಿಸಲಿದ್ದಾರೆನ್ನುವ ಭರವಸೆ ಇಟ್ಟುಕೊಂಡಿದ್ದಾರೆ. ಇತ್ತ ಸಂಸದೆ ಕೂಡ ಯಾರಿಗೆ ಬೆಂಬಲ ನೀಡುತ್ತೇನೆ ಎನ್ನುವುದರ ಬಗ್ಗೆ ಸ್ಪಷ್ಟತೆ ನೀಡಿಲ್ಲ.
    ಸದ್ಯಕ್ಕೆ ಬೆಂಬಲದ ವಿಷಯ ಕುತೂಹಲ ಘಟ್ಟದಲ್ಲಿದೆ. ಮುಂದಿನ ದಿನದಲ್ಲಿ ಏನೆಲ್ಲ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ. ಒಂದು ವೇಳೆ ಕ್ಷೇತ್ರದಲ್ಲಿ ಹರಿದಾಡುತ್ತಿರುವ ಮಾತಿನಂತೆ ಇಂದ್ರೇಶ್‌ಗೆ ಅವಕಾಶ ತಪ್ಪಿದರೆ ಅವರ ಬೆಂಬಲಿಗರ ಆಕ್ರೋಶಕ್ಕೆ ಪಕ್ಷ ತುತ್ತಾಗುವುದರಲ್ಲಿ ಅನುಮಾನವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts