More

    ಚುನಾವಣೆ ವಿಳಂಬ, ಅಭಿವೃದ್ಧಿ ಕುಂಠಿತ

    ಬಂಕಾಪುರ: ಸ್ಥಳೀಯ ಪುರಸಭೆ ಆಡಳಿತ ಮಂಡಳಿ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡು ಒಂದೂವರೆ ವರ್ಷ ಕಳೆದರೂ ಇದುವರೆಗೂ ಚುನಾವಣೆ ಘೊಷಣೆಯಾಗಿಲ್ಲ. ಇದರಿಂದ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ.

    ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಬಡ್ತಿ ಹೊಂದಿರುವ ಬಂಕಾಪುರ ಪುರಸಭೆಯು ಭೌಗೋಳಿಕವಾಗಿಯೂ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಆದರೆ, ಪುರಸಭೆ ವಾರ್ಡ್ ವಿಂಗಡಣೆ ಸರಿಯಾಗಿಲ್ಲ ಎಂದು ಮಾಜಿ ಅಧ್ಯಕ್ಷರೊಬ್ಬರು ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಚುನಾವಣೆ ನನೆಗುದಿಗೆ ಬಿದ್ದಿದೆ. ಇದು ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ.

    ‘ಒಂದು ವಾರ್ಡ್ ಮತದಾರರನ್ನು ಇನ್ನೊಂದು ವಾರ್ಡ್ ಮತಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಾರೆ. ಸಮಬಲವಾಗಿ ಮತದಾರರನ್ನು ಹೊಂದಬೇಕಿದ್ದ 23 ವಾರ್ಡ್​ಗಳಲ್ಲಿ ಮತದಾರರ ಸಂಖ್ಯೆ ಹೆಚ್ಚು ಕಡಿಮೆಯಾಗಿದ್ದರಿಂದ ಮತದಾರರಿಗೆ ಅನ್ಯಾಯವಾಗುತ್ತದೆ. ಅವೈಜ್ಞಾನಿಕವಾಗಿ ವಿಂಗಡಣೆಗೊಂಡ ವಾರ್ಡ್ ಸರಿಪಡಿಸಿ ನ್ಯಾಯ ಒದಗಿಸಬೇಕು’ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಎನ್. ಹೊನಕೇರಿ ಅವರು 2019ರ ಫೆ. 5ರಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.

    ವಾರ್ಡ್ ವಿಂಗಡಣೆ ಮಾಡುವಾಗ ಓಣಿ, ಮೊಹಲ್ಲಾ, ಬೀದಿ ಇತ್ಯಾದಿಗಳನ್ನು ಸಾಧ್ಯವಾದಷ್ಟು ಒಂದೇ ವಾರ್ಡ್​ನಲ್ಲಿ ಅಳವಡಿಸಬೇಕು. ಆದರೆ, ಸ್ಥಳೀಯ ಪುರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿ ಸೂಚಿಸಿದ ಮಾನದಂಡಗಳ ಪ್ರಕಾರ ವಾರ್ಡ್​ಗಳ ವಿಂಗಡಣೆ ಮಾಡಲಿಲ್ಲ. ಮನಸ್ಸಿಗೆ ಬಂದಂತೆ ವಿಂಗಡಣೆ ಮಾಡಿದ್ದಾರೆ ಎಂದು ಹೊನಕೇರಿ ಸಾಕ್ಷಿ ಸಮೇತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    ವಾರ್ಡ್ ವಿಂಗಡಣೆಗೆ ನಿಯೋಜನೆಗೊಂಡ ಪುರಸಭೆ ಅಧಿಕಾರಿಗಳೊಂದಿಗೆ ವಿಂಗಡಣೆ ಸಮಿತಿಯೊಂದನ್ನು ರಚಿಸಬೇಕಿತ್ತು. ಇದನ್ನು ನಿರ್ಲಕ್ಷ್ಯ ಮಾಡಿರುವ ಪುರಸಭೆ, ಅರ್ಹತೆ ಮತ್ತು ಜವಾಬ್ದಾರಿ ಇಲ್ಲದ ಸಿಬ್ಬಂದಿಯಿಂದ ವಿಂಗಡಣೆಯನ್ನು ತರಾತುರಿಯಲ್ಲಿ ಪೂರ್ಣಗೊಳಿಸಿ ಕೈತೊಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಧಿಕಾರಿಗಳ ತಪ್ಪಿನಿಂದಾಗಿ ಚುನಾವಣೆ ನಡೆಯದಂತಾಗಿದೆ. ಹೀಗಾಗಿ, ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾತುಗಳೂ ಕೇಳಿಬರುತ್ತಿವೆ.

    ಯೋಜನಾಬದ್ಧ ಕಾಮಗಾರಿ ಇಲ್ಲ: ಪುರಸಭೆಯಲ್ಲಿ ಅನುದಾನ ಕೊರತೆ ಹಾಗೂ ಆಡಳಿತ ಮಂಡಳಿ ಇಲ್ಲದೇ ಇರುವುದರಿಂದ ಜನರ ಬೇಕು ಬೇಡಗಳಿಗೆ ಸಮರ್ಪಕವಾಗಿ ಪರಿಹಾರ ಸಿಗುತ್ತಿಲ್ಲ. ಮುಖ್ಯಾಧಿಕಾರಿ ಏಕಾಂಗಿ ಹೋರಾಟ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಆಮೆಗತಿಯಲ್ಲಿ ಸಾಗುತ್ತಿರುವ ಜಿ+1 ಮನೆಗಳ ನಿರ್ವಣ, ಸ್ವಚ್ಛತೆ, ಕೊಳಚೆ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳು ಯೋಜನಾ ಬದ್ಧವಾಗಿ ನಡೆಯುತ್ತಿಲ್ಲ.

    ಬಂಕಾಪುರ ಪುರಸಭೆ 23 ವಾರ್ಡ್​ಗಳ ವಿಂಗಡಣೆ ಅವೈಜ್ಞಾನಿಕವಾಗಿದೆ. ಇದರಿಂದ ಮತದಾರರಿಗೆ ಅನ್ಯಾಯವಾಗುತ್ತದೆ. ಸರಿಪಡಿಸಿ ಚುನಾವಣೆ ನಡೆಸುವಂತೆ ಹೈಕೊರ್ಟ್ ಮೊರೆ ಹೋಗಿದ್ದೇನೆ. ಇದರಿಂದ ಪಟ್ಟಣದ ಜನರಿಗೆ ನ್ಯಾಯ ಸಿಗುವ ವಿಶ್ವಾಸವಿದೆ.

    | ಎಂ.ಎನ್. ಹೊನಕೇರಿ, ಪುರಸಭೆ ಮಾಜಿ ಅಧ್ಯಕ್ಷ

    ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ. ಪುರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದ್ದರಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ವಾರ್ಡ್​ಗಳ ಮರುವಿಂಗಡಣೆಗೆ ನ್ಯಾಯಾಲಯ ಆದೇಶ ಮಾಡಿ ಶೀಘ್ರ ಚುನಾವಣೆ ಘೊಷಣೆ ಮಾಡಬೇಕು.

    | ಹೊನ್ನಪ್ಪ ಹೂಗಾರ, ಪುರಸಭೆ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts