More

    ನಿಗದಿಯಾಗಬೇಕಿದೆ ಚುನಾವಣೆ ದಿನ

    ಹುಬ್ಬಳ್ಳಿ: ಹಾಲಿ ಮೇಯರ್ ಈರೇಶ ಅಂಚಟಗೇರಿ ಹಾಗೂ ಉಪ ಮೇಯರ್ ಉಮಾ ಮುಕುಂದ ಅವರ 1 ವರ್ಷದ ಅವಧಿ ಮೇ 27ಕ್ಕೆ ಪೂರ್ಣಗೊಳ್ಳಲಿದೆ. ಮುಂದಿನ 1 ವರ್ಷದ ಅವಧಿಗೆ ನೂತನ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕವನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ನಿಗದಿಪಡಿಸಬೇಕು. ಚುನಾವಣೆ ನಡೆಸುವಂತೆ ಕೋರಿ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಿದ್ದಾರೆ.


    ವಿಧಾನಸಭೆ ಚುನಾವಣೆ ಕರ್ತವ್ಯ ಹಾಗೂ ಮಾದರಿ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಪಾಲಿಕೆಯ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿಪಡಿಸಲು ವಿಳಂಬವಾಗಿದೆ. ಹಾಗಾಗಿ ಮೇ 27ರೊಳಗೆ ನೂತನ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ನಡೆಯುವುದಿಲ್ಲ. ನೂತನ ಮೇಯರ್-ಉಪ ಮೇಯರ್ ಆಯ್ಕೆಯಾಗುವವರೆಗೆ ಹಾಲಿ ಮೇಯರ್- ಉಪ ಮೇಯರ್ ಆಡಳಿತ ಮುಂದುವರಿಯಲಿದೆ.

    ಮೀಸಲಾತಿ ನಿಗದಿ

    ನೂತನ ಮೇಯರ್-ಉಪ ಮೇಯರ್ ಆಯ್ಕೆಗೆ ಈಗಾಗಲೇ ಮೀಸಲಾತಿ ನಿಗದಿಯಾಗಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿ ನಗರಾಭಿವೃದ್ಧಿ ಕೆಲ ತಿಂಗಳುಗಳ ಹಿಂದೆಯೇ ಪ್ರಕಟಿಸಿದೆ. ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ. ಮೀಸಲಾತಿಯ ಅನ್ವಯ ಬಿಜೆಪಿಯಲ್ಲಿ ಆಕಾಂಕ್ಷಿಗಳು ದೊಡ್ಡ ಸಂಖ್ಯೆಯಲ್ಲಿದ್ದು, ಪ್ರಾದೇಶಿಕ ಆಯುಕ್ತರು ಚುನಾವಣೆಗೆ ದಿನಾಂಕ ನಿಗದಿಪಡಿಸುವುದನ್ನೇ ಕಾಯುತ್ತಿದ್ದಾರೆ. ಆಕಾಂಕ್ಷಿಗಳಿಂದ ಒತ್ತಡ ತಂತ್ರ, ಲಾಬಿ ನಿರೀಕ್ಷಿತ.
    ಹಾಲಿ ಮೇಯರ್ ಧಾರವಾಡದವರಾಗಿದ್ದು, ಉಪ ಮೇಯರ್ ಹುಬ್ಬಳ್ಳಿಯವರಾಗಿದ್ದಾರೆ. ಈ ಬಾರಿ ಮೇಯರ್ ಸ್ಥಾನ ಹುಬ್ಬಳ್ಳಿಗೆ, ಉಪ ಮೇಯರ್ ಸ್ಥಾನ ಧಾರವಾಡಕ್ಕೆ ಹಂಚಿಕೆಯಾಗುವ ನಿರೀಕ್ಷೆ ಇದೆ. 2007ರಿಂದ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದು, ಪ್ರತಿ ಬಾರಿ ಮೇಯರ್-ಉಪ ಮೇಯರ್ ಯಾರಾಗಬೇಕು ಎಂಬುದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್ ನಿರ್ಧಾರ ಮಾಡುತ್ತಿದ್ದರು. ಇದೀಗ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದ ಜೋಶಿ ಅವರ ಪಾತ್ರವೇ ನಿರ್ಣಾಯಕವಾಗಲಿದೆ.
    82 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಯಿಂದ 39, ಕಾಂಗ್ರೆಸ್‌ನಿಂದ 33, ಎಐಎಂಐಎಂ ನಿಂದ 3, ಜೆಡಿಎಸ್ 1 ಹಾಗೂ 6 ಜನ ಪಕ್ಷೇತರರು ಚುನಾಯಿತರಾಗಿದ್ದರು. ಕಳೆದ ಬಾರಿ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ವೇಳೆ ಐವರು ಪಕ್ಷೇತರರು ಹಾಗೂ ಜೆಡಿಎಸ್‌ನ ಒಬ್ಬರು ಬಿಜೆಪಿಗೆ ಮತ ಹಾಕಿದ್ದರು. ಓರ್ವ ಪಕ್ಷೇತರ ಸದಸ್ಯೆ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರು. ಪಾಲಿಕೆಯ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮತಾಧಿಕಾರ ಹೊಂದಿದ್ದಾರೆ. ವಿಧಾನಸಭೆ ಚುನಾವಣೆ ಬಳಿಕ ಸಂಖ್ಯಾಬಲದಲ್ಲಿ ಒಂದಿಷ್ಟು ಹೆಚ್ಚು-ಕಡಿಮೆಯಾದರೂ, ಬಿಜೆಪಿಗೆ ಅಧಿಕಾರ ಕೈ ತಪ್ಪುವ ಸಾಧ್ಯತೆಗಳಿಲ್ಲ.

    ನೀತಿ ಸಂಹಿತೆಯ ಬ್ರೇಕ್

    2022ರ ಮೇ 27ರಂದು ಈರೇಶ ಅಂಚಟಗೇರಿ-ಉಮಾ ಮುಕುಂದ ಮೇಯರ್-ಉಪ ಮೇಯರ್ ಆಗಿ ಆಯ್ಕೆಯಾದರೂ ತಕ್ಷಣ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಂದು ಜೂನ್ 16ರವರೆಗೆ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು. 2023ರ ಮಾರ್ಚ್ 29ರಿಂದ ಮೇ 15ರವರೆಗೆ ವಿಧಾನಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಇವರ ಅಧಿಕಾರಕ್ಕೆ ಬ್ರೇಕ್ ಬಿದ್ದಿತ್ತು. ಮುಂದೆ ಆಯ್ಕೆಯಾಗಲಿರುವ ನೂತನ ಮೇಯರ್-ಉಪ ಮೇಯರ್‌ಗಳಿಗೆ 2024ರ ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಅಡ್ಡಿಯಾಗಲಿದೆ.

    ಧಾರವಾಡದಲ್ಲಿ ಆಯ್ಕೆ?

    ಇಲ್ಲಿಯವರೆಗೆ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯು ಹುಬ್ಬಳ್ಳಿಯಲ್ಲಿರುವ ಪಾಲಿಕೆಯ ಸಭಾಭವನದಲ್ಲಿಯೇ ನಡೆದಿದೆ. ಈ ಬಾರಿ ಧಾರವಾಡದಲ್ಲಿ ನಡೆಯುವ ಸಾಧ್ಯತೆಗಳಿವೆ. ಹುಬ್ಬಳ್ಳಿಯಲ್ಲಿರುವ ಪಾಲಿಕೆಯ ಸಭಾಭವನ ಕಟ್ಟಡ ದುರ್ಬಲಗೊಂಡಿದೆಯೆಂಬ ತಾಂತ್ರಿಕ ವರದಿಯ ಆಧಾರದ ಮೇಲೆ ಕಳೆದ 7-8 ತಿಂಗಳಿಂದ ಪಾಲಿಕೆಯ ಸಾಮಾನ್ಯ ಸಭೆಗಳು ಧಾರವಾಡದಲ್ಲಿಯೇ ನಡೆದಿವೆ. ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯನ್ನು ಎಲ್ಲಿ ನಡೆಸಬೇಕು ಎಂಬುದನ್ನು ಅಂತಿಮವಾಗಿ ಪ್ರಾದೇಶಿಕ ಆಯುಕ್ತರೇ ನಿರ್ಧರಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts