More

    ಆಯೋಗದ ಸಭೆ ಮೇಲೆ ಎಲ್ಲರ ಕಣ್ಣು

    ಹುಬ್ಬಳ್ಳಿ: ಅವಧಿ ಪೂರ್ಣಗೊಂಡಿರುವ ರಾಜ್ಯದಲ್ಲಿನ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧ ಕರ್ನಾಟಕ ರಾಜ್ಯ ಚುನಾವಣೆ ಆಯೋಗ ಜು. 19ರಂದು ಮಧ್ಯಾಹ್ನ 2 ಗಂಟೆಗೆ ಜಿಲ್ಲಾಧಿಕಾರಿಯವರೊಂದಿಗೆ ಸಭೆ (ವಿಡಿಯೋ ಸಂವಾದ) ನಡೆಸಲಿದೆ. ಇದರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಆಯೋಗ ದಿನಾಂಕ ನಿಗದಿಪಡಿಸುವುದೇ ಎಂಬ ಕುತೂಹಲ ಮುನ್ನೆಲೆಗೆ ಬಂದಿದೆ.

    ಹು-ಧಾ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳು, ದೊಡ್ಡಬಳ್ಳಾಪುರ ನಗರ ಸಭೆ ಹಾಗೂ ತರೀಕೆರೆ ಪುರಸಭೆಗೆ ಚುನಾವಣೆ ನಡೆಸಲು ಅವಶ್ಯವಾಗಿರುವ ಪೂರ್ವ ಸಿದ್ಧತೆಗಳ ಬಗ್ಗೆ ಆಯೋಗದ ಆಯುಕ್ತರು, ಆಯಾ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿ ಅಗತ್ಯ ಮಾಹಿತಿ ಪಡೆಯಲಿದ್ದಾರೆ. ಯಾವುದೇ ಸಾರ್ವತ್ರಿಕ ಚುನಾವಣೆ ದಿನಾಂಕ ಘೊಷಣೆ ಮೊದಲು ಆಯೋಗವು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತೆ ಸಭೆ ನಡೆಸುತ್ತದೆ. ಈ ಕಾರಣಕ್ಕೆ ಹು-ಧಾ ಅವಳಿ ನಗರದ ರಾಜಕೀಯ ಪಕ್ಷಗಳು, ಟಿಕೆಟ್ ಆಕಾಂಕ್ಷಿಗಳು ಹಾಗೂ ಸಾರ್ವಜನಿಕರ ಚಿತ್ತ ಇದೀಗ ಆಯೋಗದ ಸಭೆಯ ಮೇಲೆ ಕೇಂದ್ರೀಕೃತಗೊಂಡಿದೆ.

    ಹು-ಧಾ ಮಹಾನಗರ ಪಾಲಿಕೆಯು ಆಯೋಗ ಸೂಚಿಸಿದ ವೇಳಾಪಟ್ಟಿಯಂತೆ ಜು. 9ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದೆ. ಆದರೆ, ವಾರ್ಡ್​ವಾರು ಮೀಸಲಾತಿ ನಿಗದಿ ಹಾಗೂ ಮತದಾರರ ಹಂಚಿಕೆ ಸರಿಯಾಗಿಲ್ಲವೆಂದು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಹಾಗೂ ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ ನ್ಯಾಯಾಲಯದ (ಹೈಕೋರ್ಟ್ ಪೀಠ ಧಾರವಾಡ) ಮೆಟ್ಟಿಲೇರಿದ್ದಾರೆ. ಇದಲ್ಲದೆ ಮೀಸಲಾತಿ ನಿಗದಿಯಲ್ಲಿ ಪರಿಶಿಷ್ಟರಿಗೆ ಅನ್ಯಾಯವಾಗಿದೆಯೆಂದು ಬಸವರಾಜ ತೇರದಾಳ ಎಂಬುವವರು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

    ಈ ಬೆಳವಣಿಗೆಯನ್ನು ಗಮನಿಸಿದರೆ ಆಯೋಗವು ಚುನಾವಣೆ ದಿನಾಂಕ ಘೊಷಿಸಿದ ಬಳಿಕ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ನ್ಯಾಯಾಲಯದಲ್ಲಿ ದಾವೆ ಇರುವುದನ್ನು ಹೊರತು ಪಡಿಸಿ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ ತಕ್ಷಣವೇ ಚುನಾವಣೆ ನಡೆಸಲು ಆಯೋಗ ನಿರ್ಧಾರ ಕೈಗೊಳ್ಳಬಹುದು.

    ಹು-ಧಾ ಮಹಾನಗರ ಪಾಲಿಕೆಗೆ ಕಳೆದ 28 ತಿಂಗಳಿಂದ ಚುನಾವಣೆ ನಡೆದಿಲ್ಲ. ಅಧಿಕಾರಿಗಳ ಆಡಳಿತ ನಡೆದಿದೆ.

    (ಆಯೋಗದ ಸಭೆ ಮೇಲೆ ಎಲ್ಲರ ಕಣ್ಣು–ಸುದ್ದಿಗೆ ಸೇರಿಸಿಕೊಳ್ಳುವುದು)

    ಚುನಾವಣೆಗೆ ಸಿದ್ಧರಾಗಿರಲು ಜಿಲ್ಲಾಡಳಿತಕ್ಕೆ ಸೂಚನೆ

    ಹು-ಧಾ ಮಹಾನಗರ ಪಾಲಿಕೆಗೆ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಕರ್ನಾಟಕ ರಾಜ್ಯ ಚುನಾವಣೆ ಆಯೋಗವು ಧಾರವಾಡ ಜಿಲ್ಲಾಡಳಿತಕ್ಕೆ ಶುಕ್ರವಾರ ಸೂಚಿಸಿದೆ.

    ಈಗಾಗಲೇ ಪ್ರಕಟಿಸಲಾಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿನ ಮತದಾರರ ಅಂಕಿ-ಅಂಶಗಳೊಂದಿಗೆ ಮತದಾನ ಕೇಂದ್ರಗಳ ವಿವರಗಳನ್ನು ಸಲ್ಲಿಸಬೇಕು. ವಾರ್ಡ್​ಗಳ ಮತಗಟ್ಟೆಗಳ ಅನುಸಾರ ಸಿಬ್ಬಂದಿ ನೇಮಕ ಹಾಗೂ ತರಬೇತಿಗೆ ಅಗತ್ಯ ಕ್ರಮ ವಹಿಸುವುದು. ವಿದ್ಯುನ್ಮಾನ ಮತಯಂತ್ರಗಳನ್ನು ಸಂಗ್ರಹಿಸಿ ಸಿದ್ಧಪಡಿಸಿಕೊಳ್ಳಬೇಕು ಎಂದು ಪತ್ರ ಬರೆದಿದೆ.

    ಪ್ರತಿ 5 ವಾರ್ಡಿಗೆ ಒಬ್ಬರಂತೆ ಉಪ ವಿಭಾಗಾಧಿಕಾರಿ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ಹಾಗೂ ಪ್ರತಿ ಚುನಾವಣಾಧಿಕಾರಿಗೆ ತಹಸೀಲ್ದಾರ್ ಅಥವಾ ತತ್ಸಮಾನ ಹುದ್ದೆಯ ಒಬ್ಬ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಿ ಪಟ್ಟಿ ತಯಾರಿಸಿ ಆಯೋಗದ ಅನುಮೋದನೆಗೆ ಸಲ್ಲಿಸಬೇಕು. ಅಭ್ಯರ್ಥಿಗಳ ಚುನಾವಣೆ ವೆಚ್ಚಗಳನ್ನು ಪರಿಶೀಲಿಸಲು ರಾಜ್ಯ ಲೆಕ್ಕಪತ್ರ ಇಲಾಖೆಯ ಲೆಕ್ಕಾಧಿಕಾರಿಗಳ ತಂಡವನ್ನು ರಚಿಸಬೇಕು.

    ಈ ಮೇಲಿನ ಕ್ರಮಗಳನ್ನು ಕೈಗೊಂಡಿರುವ ಕುರಿತು ಆಯೋಗಕ್ಕೆ ಜು. 19ರೊಳಗೆ ವರದಿ ಸಲ್ಲಿಸುವಂತೆ ಧಾರವಾಡ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts