More

    ಅಚ್ಚಲು ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ?

    • ಅರ್ಕಾವತಿ ನದಿ ದಡದಲ್ಲಿ ಕಸದ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ನಿರ್ಲಕ್ಷ್ಯ
    • 10 ದಿನಗಳಿಂದ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಪೌರಾಯುಕ್ತರು


    ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ


    ಹೋಬಳಿಯ ಅಚ್ಚಲು ಗ್ರಾಮದ ಅರ್ಕಾವತಿ ನದಿ ದಡದಲ್ಲಿ ನಗರಸಭೆ ಸುರಿಯುತ್ತಿರುವ ಕಸದಿಂದ ಗ್ರಾಮದ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಮುಂದಾಗುತ್ತಿಲ್ಲ. ಆದ್ದರಿಂದ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

    ಅಚ್ಚಲು ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ?
    ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚಲು ಗ್ರಾಮಸ್ಥರಿಂದ 2024ರ ಲೋಕಸಭಾ ಚುನಾವಣಾ ಬಹಿಷ್ಕಾರ ಎಂಬ ಮಾಹಿತಿ ಹರಿದಾಡುತ್ತಿದೆ. ಗ್ರಾಮದಲ್ಲಿ ಕಸದ ಸಮಸ್ಯೆಯಿಂದ ಉಂಟಾಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಆರು ತಿಂಗಳಿಂದಲೂ ನಗರಸಭೆ, ತಾಲೂಕು, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕಾರ ಮಾಡಲಾಗಿದೆ ಎನ್ನಲಾಗಿದೆ. 


    ನಮಗೂ ಅಧಿಕಾರಿಗಳನ್ನು ಕೇಳಿ ಕೇಳಿ ಸಾಕಾಗಿದೆ. ಕಸ ಸುರಿಯುತ್ತಿರುವ ಕಾರಣ ಗ್ರಾಮದಲ್ಲಿ ಕೆಟ್ಟ ವಾಸನೆ ಆವರಿಸಿದೆ. ಜತೆಗೆ ಕಸದ ಬೆಂಕಿಯಿಂದ ದಟ್ಟ ಹೊಗೆ ಆವರಿಸಿ ಜನರಿಗೆ ಉಸಿರಾಟ, ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತಿರುವ ಜತೆಗೆ ಅರ್ಕಾವತಿ ನದಿ ನೀರು ಕಲುಷಿತದಿಂದ ಜಾನುವಾರುಗಳಿಗೂ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ. 


    ‘ಗ್ರಾಮದ ಜನರ ಆರೋಗ್ಯ ನಮ್ಮ ಹಕ್ಕು, ಜೀವವಿದ್ದರೆ ಮತದಾನ ಆರೋಗ್ಯವಿದ್ದರೆ ರಾಜಕೀಯ’ ಎಂಬ ಬರಹದಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡಬಾರದೆಂದು ಗ್ರಾಮಸ್ಥರು ನಿರ್ಧರಿಸಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

    ನಗರಸಭೆ ಸ್ಪಷ್ಟನೆ

    ನಗರಸಭೆ ಅಧಿಕಾರಿಗಳು ಹೇಳುವುದೇ ಬೇರೆ, ಕಳೆದ 10 ದಿನಗಳಿಂದ ಅಚ್ಚಲು ಗ್ರಾಮದ ಬಳಿಯ ಅರ್ಕಾವತಿ ನದಿ ತೀರದಲ್ಲಿ ಕಸ ಸುರಿಯುತ್ತಿಲ್ಲ. ಹಿಂದೆ ಹಾಕಿದ್ದ ಕಸದ ಮೇಲೆ ಮಣ್ಣು ಸುರಿದು ಆ ಜಾಗವನ್ನು ಮಟ್ಟ ಮಾಡಿಸಿ ಬೆಂಕಿ ಹಚ್ಚದಂತೆ ಸ್ವಚ್ಛ ಮಾಡಲಾಗಿದೆ. ಮುಂದೆ ಅಲ್ಲಿ ಕಸ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಸಂಬಂಧಿದ ಜಾಗದ ೆಟೋವನ್ನು ವಿಜಯವಾಣಿ ಜತೆ ಹಂಚಿಕೊಂಡರು.

    ತಲ್ಲಣ

    ಅಚ್ಚಲು ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ?

    ಅಚ್ಚಲು ಗ್ರಾಮಸ್ಥರ ಮತದಾನ ಬಹಿಷ್ಕಾರದ ಮಾಹಿತಿ ಜನಪ್ರತಿನಿಧಿಗಳಲ್ಲಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಲ್ಲಿ ತಲ್ಲಣ ಮೂಡಿಸಿದೆ. ಗ್ರಾಮಸ್ಥರ ಮನವೊಲಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಿದ್ದಾರೆ. ಗ್ರಾಮಸ್ಥರು ಪಟ್ಟು ಬಿಡದೆ ನಮ್ಮ ಸಮಸ್ಯೆ ಬಗೆಹರಿಯಬೇಕು, ಸ್ಥಳದಲ್ಲಿ ಕಸ ಹಾಕದೆ ಅರ್ಕಾವತಿ ನದಿಯ ಸ್ವಚ್ಛತೆ ನಡೆಸಿ ಮುಂದೆ ಸಮಸ್ಯೆ ಎದುರಾಗದಿದ್ದರೆ ಮಾತ್ರ ಬಹಿಷ್ಕಾರ ಕೈ ಬಿಡುತ್ತೇವೆ ಎಂಬ ಮಾತುಗಳು ಗ್ರಾಮಸ್ಥರಿಂದ ಕೇಳಿಬರುತ್ತಿವೆ ಎನ್ನಲಾಗಿದೆ.

    ಕಸ ಹಾಕುವುದನ್ನು ನಿಲ್ಲಿಸಿ 10 ದಿನಗಳಾಗಿವೆ. ಈಗಾಗಲೆ ಕಸ ಸುರಿದ ಜಾಗ ಮಟ್ಟ ಮಾಡಿಸಿ ಮಣ್ಣು ಸುರಿದು ನೀರು ಹಾಕಲಾಗುತ್ತಿದೆ. ಅಲ್ಲಿ ಮುಂದೆಯೂ ಕಸ ಹಾಕಲಾಗುವುದಿಲ್ಲ. ಯಾವುದೇ ಸಮಸ್ಯೆ ಇಲ್ಲ. ನಾನೇ ಖುದ್ದಾಗಿ ಸೋಮವಾರ ಸ್ಥಳ ಪರಿಶೀಲನೆ ನಡೆಸಿದ್ದೇನೆ. ವಾಸನೆ ಬರದಂತೆ ಕಸದ ಮೇಲೆ ಮಣ್ಣು ಸುರಿದು ಅಗತ್ಯ ಕ್ರಮ ಕೈಗೊಂಡು ಜಾಗ ಸ್ವಚ್ಛಗೊಳಿಸಲಾಗಿದೆ.
    ನಾಗೇಶ್, ಪೌರಾಯುಕ್ತ, ನಗರಸಭೆ, ರಾಮನಗರ.

    ಗ್ರಾಮದ ಜನರ ಆರೋಗ್ಯ ಬಹಳ ಮುಖ್ಯ ಗ್ರಾಪಂ ಗ್ರಾಮಸ್ಥರ ಮನವಿ ಮೇರೆಗೆ ಕಸ ಸುರಿಯದಂತೆ ನಗರಸಭೆಗೆ ತಿಳಿಸಿತ್ತು. ಅದರಂತೆ ಕಸ ಸುರಿಯುತ್ತಿಲ್ಲ, ಬೆಂಕಿ, ಹೊಗೆ ಬರದಂತೆ ನೀರು ಹಾಕಿಸಿ ಕಸದ ಜಾಗದ ಸ್ವಚ್ಛತೆ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. ಗ್ರಾಮಸ್ಥರ ಮತದಾನ ಬಹಿಷ್ಕಾರದ ನಿರ್ಧಾರವನ್ನು ಹಿಂತೆಗೆಯಲು ಅವರೊಟ್ಟಿಗೆ ಮಾತನಾಡಿ ಮನವೊಲಿಸಲಾಗುತ್ತದೆ. ಅಂತಹ ನಿರ್ಧಾರ ಗ್ರಾಮಸ್ಥರು ತೆಗೆದುಕೊಳ್ಳುವುದಿಲ್ಲ ಎಂಬ ದೃಢ ವಿಶ್ವಾಸ ನಮಗಿದೆ.
    ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷ, ಹುಣಸನಹಳ್ಳಿ.


    ವಿಜಯವಾಣಿ ವರದಿ
    ಅಚ್ಚಲು ಗ್ರಾಮದ ಕಸ ಸಮಸ್ಯೆ ಬಗ್ಗೆ ಈ ಹಿಂದೆ ವಿಜಯವಾಣಿಯಲ್ಲಿ ಫೆಬ್ರವರಿ 10ರ ಸಂಚಿಕೆಯಲ್ಲಿ ಅರ್ಕಾವತಿ ತಟ ಸೇರುತ್ತಿದೆ ರಾಮನಗರದ ಕಸ ಎಂಬ ಬರಹದಡಿ ಅಲ್ಲಿನ ಸಮಸ್ಯೆ ಬಗ್ಗೆ ವಿಶೇಷ ವರದಿ ಮೂಲಕ ಗಮನ ಸೆಳೆಯಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts