More

    ಚುನಾವಣೆ ಬಳಿಕ ಬದಲಾವಣೆ ಖಚಿತ

    ಬೆಳಗಾವಿ: ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ 24 ಗಂಟೆಯೊಳಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಹೇಳಿದರು.

    ಬೆಳಗಾವಿಯ ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ವೈಫಲ್ಯ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಲು ಅವರ ಹೈಕಮಾಂಡ್ ಬಯಸುತ್ತಿದ್ದಾರೆ. ಅದು ಉಪ ಚುನಾವಣೆ ಲಿತಾಂಶದ ಬಳಿಕ ಕಾರ್ಯರೂಪಕ್ಕೆ ಬರಲಿದೆ. ರಾಜ್ಯದ ಜನರೂ ಸರ್ಕಾರ ಬದಲಾವಣೆ ಬಯಸುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ನೈತಿಕತೆ ಇಲ್ಲದ ಸರ್ಕಾರ: ದಿನ ಬಳಕೆ ವಸ್ತು, ತೈಲ, ರಸಗೊಬ್ಬರ ಬೆಲೆ ಏರಿಕೆ, ಕೃಷಿ ಉಪಕರಣಗಳ ಮೇಲೆ ಬೇಕಾಬಿಟ್ಟಿ ತೆರಿಗೆಯಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೋವಿಡ್-19 ಹೆಸರಿನಲ್ಲಿ ಜನರನ್ನು ಸಂಕಷ್ಟಕ್ಕೆ ತಳ್ಳಿರುವುದೇ ಬಿಜೆಪಿ ಸರ್ಕಾರದ ದೊಡ್ಡ ಸಾಧನೆಯಾಗಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ವರ್ಷ ಕಳೆದರೂ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಜನರ ನಂಬಿಕೆ ಕಳೆದುಕೊಂಡಿರುವ ಬಿಜೆಪಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕತೆ ಇಲ್ಲ. ಜನರೇ ಈ ಸರ್ಕಾರವನ್ನು ಬದಲಾಯಿಸುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.

    ಜನರಿಂದಲೇ ತಕ್ಕ ಪಾಠ: ವಾಲ್ಮೀಕಿ ಸಮಾಜಕ್ಕೆ ಎಸ್‌ಟಿ ಮೀಸಲಾತಿ, ಮರಾಠಾ ಹಾಗೂ ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ. ರಾಜ್ಯ ಸರ್ಕಾರ ಮೊದಲು ಈಡೇರಿಸುವ ಭರವಸೆ ನೀಡಿ ಬಳಿಕ ಸಾಧ್ಯವಿಲ್ಲ ಎಂದು ಉಲ್ಟಾ ಹೊಡೆದಿದೆ. ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಸೌಲಭ್ಯ ಕೊಡುತ್ತೇವೆ ಎಂದಿದ್ದವರು ಇದೀಗ ಆಗಲ್ಲ ಎನ್ನುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ನೌಕರರನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ. ಇಂತಹ ನೈತಿಕತೆ ಇಲ್ಲದ ಸರ್ಕಾರಕ್ಕೆ ಈ ಉಪ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕಿದೆ ಎಂದರು.

    ಕೇಂದ್ರದಿಂದ ದುರಾಡಳಿತ: ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಒಂದೇ ಪಕ್ಷ ಮತ್ತು ಒಂದೇ ಅಭ್ಯರ್ಥಿ ಆಯ್ಕೆ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಇಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತವೇ ಸಾಕ್ಷಿ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವ ವ್ಯಕ್ತಿಗಳು ಲೋಕಸಭೆಯಲ್ಲಿ ಇರಬೇಕು. ಕೇಂದ್ರ ಸರ್ಕಾರದ ನಿರುದ್ಯೋಗ, ಬೆಲೆ ಏರಿಕೆಯಂತಹ ಪರಿಸ್ಥಿತಿ ಕಣ್ಮುಂದೆ ಇದ್ದರೂ ‘ಮೋದಿ… ಮೋದಿ…’ ಎನ್ನುವುದರ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ. ಇದಕ್ಕೆಲ್ಲ ಉತ್ತರವಾಗಿ ನಮ್ಮನ್ನು ಸಮರ್ಥವಾಗಿ ಪ್ರತಿನಿಧಿಸುವ ವ್ಯಕ್ತಿಯ ಆಯ್ಕೆ ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವರಾದ ಎಂ.ಬಿ. ಪಾಟೀಲ, ರಾಮಲಿಂಗಾರೆಡ್ಡಿ, ಆರ್.ವಿ. ದೇಶಪಾಂಡೆ, ಎಸ್.ಆರ್. ಪಾಟೀಲ, ಶಾಸಕಿ ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಇತರರು ಇದ್ದರು.

    ಕರೊನಾ ಹೆಸರಿನಲ್ಲಿ ಜನರಲ್ಲಿ ಭಯ ಸೃಷ್ಟಿ

    ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೋವಿಡ್-19 ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿವೆ. ಏ. 30ರ ಬಳಿಕ 13 ಲಕ್ಷ ಕರೊನಾ ಕೇಸ್ ಆಗುತ್ತದೆ ಎಂಬ ವರದಿ ಬಂದಿದೆ. ಆದರೆ, ಸರ್ಕಾರ ಮಾತ್ರ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಒಂದು ದಿನ ನೈಟ್ ಕರ್ಪ್ಯೂ ಜಾರಿ ಎನ್ನುತ್ತಾರೆ, ಇನ್ನೊಂದು ದಿನ ಜಿಮ್, ಸಿನಿಮಾ ಮಂದಿರ ಬಂದ್ ಎನ್ನುತ್ತಾರೆ. ಮತ್ತೊಂದು ದಿನ ಇವೆಲ್ಲ ಆರಂಭ ಎನ್ನುವ ಮೂಲಕ ಜನರೊಂದಿಗೆ ಬಿಜೆಪಿ ಸರ್ಕಾರ ಚೆಲ್ಲಾಟ ಆಡುತ್ತಿದೆ. ಅಲ್ಲದೆ, ಕರೊನಾ ಹೆಸರಿನಲ್ಲಿ ಜನರನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts