More

    ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಪರದಾಟ!

    ಕಾರಟಗಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಪಟ್ಟಣದ ಚಂದನಹಳ್ಳಿ ಕ್ರಾಸ್(ಚನ್ನಳ್ಳಿ) ಬಳಿ ನಿರ್ಮಿಸಿದ ಚೆಕ್‌ಪೋಸ್ಟ್ ಸಿಬ್ಬಂದಿಗೆ ಊಟೋಪಚಾರವಿಲ್ಲದೇ ಪರದಾಡುವಂತಾಗಿದೆ.

    ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಮಾ.15ರಿಂದ ಚೆಕ್‌ಪೋಸ್ಟ್‌ಗೆ 5 ಜನ ಸಿಬ್ಬಂದಿ ಹಾಗೂ ಸ್ಥಿರ ಕಣ್ಗಾವಲು ಮೂರು ತಂಡಗಳನ್ನು(ಸ್ಟಾಟಿಕ್ಸ್ ಸರ್ವೆಲೆನ್ಸ್ ಟೀಂ) ರಚಿಸಿ ಸರತಿಯಲ್ಲಿ ಕರ್ತವ್ಯ ನಿರ್ವಹಿಸಲು ಆದೇಶ ಮಾಡಿದ್ದಾರೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯವರೆಗೆ ಮಲ್ಲಿಕಾರ್ಜುನ(ತಂಡದ ಮುಖ್ಯಸ್ಥ) ಪೊಲೀಸ್ ಪೇದೆಗಳಾದ ಮರಿಯಪ್ಪ ಕಾರಟಗಿ, ಶರವಣಕುಮಾರ ಕನಕಗಿರಿ, ರಾಜು ಕಾರಟಗಿ, ಓರ್ವ ಛಾಯಾಗ್ರಹಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಮಧ್ಯಾಹ್ನ 2ಗಂಟೆಯಿಂದ ರಾತ್ರಿ 10ಗಂಟೆಯವರೆಗೆ ಸೈಯದ್ ನಾಸೀರ್(ತಂಡದ ಮುಖ್ಯಸ್ಥ), ಪೊಲೀಸ್ ಪೇದೆಗಳಾದ ಚಿದಾನಂದ ಕಾರಟಗಿ, ರವಿಚಂದ್ರ ಕನಕಗಿರಿ, ನಾಗರಾಜ ಹಟ್ಟಿ ಕಾರಟಗಿ ಹಾಗೂ ಓರ್ವ ಛಾಯಾಗ್ರಾಹಕ ಹಾಗೂ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೆ ಗಂಗಪ್ಪ(ತಂಡದ ಮುಖ್ಯಸ್ಥ), ಪೊಲೀಸ್ ಪೇದೆಗಳಾದ ರಮೇಶ ಕಾರಟಗಿ, ಶಿವರಾಜ ಕಾರಟಗಿ, ರೇವಣಸಿದ್ದಪ್ಪ ಕಾರಟಗಿ ಹಾಗೂ ಓರ್ವ ಛಾಯಾಗ್ರಾಹಕ ಸೇರಿ ಮೂರು ತಂಡಗಳು ಸರತಿಯಲ್ಲಿ ಕೆಲಸ ಮಾಡಬೇಕು. ಮೂರು ತಂಡಗಳ ಮುಖ್ಯಸ್ಥರು ಸರತಿಯಂತೆ ಚೆಕ್‌ಪೋಸ್ಟ್ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

    ಜಿಲ್ಲಾ ಚುನಾವಣಾಧಿಕಾರಿ ಆದೇಶದಲ್ಲಿರುವ ಪೊಲೀಸ್ ಪೇದೆ ರಾಜು ಒಬ್ಬರೇ ಕರ್ತವ್ಯಕ್ಕೆ ಬರುತ್ತಿದ್ದಾರೆ. ಆದೇಶದಲ್ಲಿಲ್ಲದ ಬಸವರಾಜ ಕೊನಸಾಗರ ಪೇದೆಯೊಬ್ಬರನ್ನು ಚೆಕ್‌ಪೋಸ್ಟ್ ಕೆಲಸಕ್ಕೆ ನಿಯೋಜಿಸಲಾಗಿದೆ. ಓರ್ವ ಪೊಲೀಸ್ ಪೇದೆಯೊಂದಿಗೆ ಒಬ್ಬ ಹೋಂಗಾರ್ಡ್ ಅವರು ಎರಡು ತಂಡಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದು ತಂಡ ಒಂದು ದಿನ 18 ತಾಸು ಕರ್ತವ್ಯ ನಿರ್ವಹಿಹಿಸುತ್ತಿದೆ. ಮತ್ತೊಂದು ತಂಡ 8 ತಾಸು ಕೆಲಸ ಮಾಡುತ್ತಿದೆ. ಈ ನಾಲ್ಕು ಜನ ಸಿಬ್ಬಂದಿ ಎರಡು ತಂಡಗಳು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದೆ. ಅವರ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹಿರಿಯ ಅಧಿಕಾರಿಗಳು ಅರಿತುಕೊಳ್ಳಬೇಕಿದೆ. ತಮ್ಮದೇ ಕೆಳ ಹಂತದ ಸಿಬ್ಬಂದಿಯನ್ನು ಇಷ್ಟೊಂದು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದು ದುರಂತ.

    ಸಮರ್ಪಕವಾಗಿ ನೀರು ಪೂರೈಕೆ ಇಲ್ಲ

    ಮಾ.17ರಿಂದ ಸಿಬ್ಬಂದಿ ಚೆಕ್‌ಪೋಸ್ಟ್ ಕರ್ತವ್ಯಕ್ಕೆ ಸಿಬ್ಬಂದಿ ಹಾಜರಾಗಿದ್ದಾರೆ. 15 ದಿನಗಳು ಕಳೆದರೂ ಸಿಬ್ಬಂದಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿಲ್ಲ. ಅವರು ಸ್ವಂತ ಹಣದಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡುತ್ತಿದ್ದಾರೆ. ತಹಸೀಲ್ದಾರ್ ಎಂ.ಕುಮಾರಸ್ವಾಮಿ ಮತ್ತು ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಕನಿಷ್ಠ ಊಟದ ವ್ಯವಸ್ಥೆ ಕಲ್ಪಿಸಲು ಮುಂದಾಗಿಲ್ಲ. ಅಲ್ಲದೇ ಕುಡಿಯುವ ನೀರು ಖಾಲಿಯಾದರೆ ಕರೆ ಮಾಡಿದರೆ ಮಾತ್ರ ನೀರು ಪೂರೈಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಕುಡಿಯುವ ನೀರಿನ ಸೌಕರ್ಯ ಒದಗಿಸುತ್ತಿಲ್ಲ.

    ಬಿಸಿಲಿನ ಝಳಕ್ಕೆ ಹೈರಾಣ

    ಚೆಕ್‌ಪೋಸ್ಟ್ ಕೊಠಡಿಯನ್ನು ತಗಡಿನಿಂದ ನಿರ್ಮಿಸಿ ಒಳಾಂಗಣದಲ್ಲಿ ಹಸಿರು ತಾಡುಪಾಲು ಹಾಕಲಾಗಿದೆ. ಬೇಸಿಗೆಯ ಬಿರುಬಿಸಿಲಿನ ಝಳಕ್ಕೆ ಸಿಬ್ಬಂದಿ ಹೈರಾಣಾಗಿದ್ದಾರೆ. ಹಗಲಿನಲ್ಲಿ ವಾಹನಗಳನ್ನು ಪರಿಶೀಲಿಸಲು ಬಿಸಿಲಿನಲ್ಲಿಯೇ ನಿಲ್ಲಬೇಕಾಗಿದೆ. ಇಡೀ ರಾತ್ರಿ ನಿದ್ದೆಗೆಟ್ಟು ಕೆಲಸ ಮಾಡಬೇಕಾಗಿದ್ದು, ಇದು ಸಿಬ್ಬಂದಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆಯಿದೆ. ಸಿಬ್ಬಂದಿಗೆ ಊಟೋಪಚಾರ, ಕುಡಿವ ನೀರು, ಸೂಕ್ತ ನೆರಳಿನ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ.

    ಎಂಟು ತಾಸುಗಳಿಗೊಮ್ಮೆ ತಂಡ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿತ್ತು. ಪೊಲೀಸ್ ಮತ್ತು ಹೋಂ ಗಾರ್ಡ್‌ಗಳಿಗೆ ಕೊರತೆ ಆಗಿರುವ ಬಗ್ಗೆ ತಿಳಿದುಕೊಂಡು ಸರಿಪಡಿಸಲಾಗುವುದು. ಮಜ್ಜಿಗೆ, ನೀರು ಸೇರಿ ತಂಪು ಪಾನೀಯಗಳನ್ನು ನೀಡಲು ಹೇಳಲಾಗಿದೆ. ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲಿಸುವೆ.
    -ನಲಿನ್ ಅತುಲ್
    ಡಿಸಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts