More

    8 ಎಕರೆ ಜಮೀನಿನಲ್ಲಿ ಕೊಳೆಯುತ್ತಿದೆ ಕುಂಬಳಕಾಯಿ: ರೈತನಿಗೆ ಆದಾಯದ ಚಿಂತೆ!

    ನಂದೇಶ್ವರ : ಅಥಣಿ ತಾಲೂಕಿನ ನಂದೇಶ್ವರ ಗ್ರಾಮದ ಪೀರಪ್ಪ ಚಂದಪ್ಪ ಬಿಸಲನಾಯಿಕ ಎಂಬ ರೈತ 8 ಎಕರೆ ಜಮೀನಿನಲ್ಲಿ ಭರ್ಜರಿಯಾಗಿ ಕುಂಬಳಕಾಯಿ ಬೆಳೆದಿದ್ದಾರೆ. ಆದರೆ, ಲಾಕ್‌ಡೌನ್ ಮುಂದುವರಿದಿದ್ದರಿಂದ ಯಾರೂ ಸಿಹಿ ಕುಂಬಳಕಾಯಿ ಖರೀದಿಗೆ ಬರುತ್ತಿಲ್ಲ. ಹೀಗಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

    ತಾಲೂಕಿನ ದಕ್ಷಿಣ ಭಾಗದ ಗ್ರಾಮಗಳ ಕೃಷ್ಣಾ ನದಿ ತೀರದ ರೈತರು ಹೆಚ್ಚಾಗಿ ಕಬ್ಬನ್ನೇ ಬೆಳೆಯುತ್ತಾರೆ. ಒಂದೇ ಭೂಮಿಯಲ್ಲಿ ಮೇಲಿಂದ ಮೇಲೆ ಕಬ್ಬು ಬೆಳೆದಿದ್ದರಿಂದ ಭೂಮಿ ಸವುಳು ಜವುಳಾಗಿ ಫಲವತ್ತತೆ ಕುಂಠಿತಗೊಂಡಿದೆ. ಇದರಿಂದ ಉತ್ತಮ ಬೆಳೆ ಬಾರದೇ ಕೆಲವರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

    ಇದನ್ನೂ ಓದಿ: ಕೊಲ್ಲಿ ಹಳ್ಳಕ್ಕೆ ಉರುಳಿದ ಇಟ್ಟಿಗೆ ಲಾರಿ: ನೆಗೆದು ಜೀವ ಉಳಿಸಿಕೊಂಡ್ರು ಐವರು

    ಲಕ್ಷಾಂತರ ರೂ. ವೆಚ್ಚ ಮಾಡಿ ಕುಂಬಳಕಾಯಿ ಬೆಳೆದಿದ್ದೇನೆ. ಆದರೆ, ಯಾರೂ ಖರೀದಿಗೆ ಬರುತ್ತಿಲ್ಲ. ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್‌ನಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸರ್ಕಾರ ಮಾರಾಟ ಮಾಡಲು ಅನುಕೂಲ ಕಲ್ಪಿಸಿ ನೆರವಾಗಬೇಕು.
    | ಪೀರಪ್ಪ ಚಂದಪ್ಪ ಬಿಸಲನಾಯಿಕ ರೈತ ನಂದೇಶ್ವರ

    ಆದರೆ, ರೈತ ಪೀರಪ್ಪ ಬಿಸಲನಾಯಿಕ ಈ ಭಾಗದಲ್ಲಿ ಕಬ್ಬಿಗೆ ಪರ್ಯಾಯ ಬೆಳೆಯಾಗಿ ಉತ್ತಮ ನಿರ್ವಹಣೆ ಮಾಡಿ ಮೂರು ತಿಂಗಳಲ್ಲಿ ಬರುವ ಸಿಹಿ ಕುಂಬಳಕಾಯಿ ಬೆಳೆದಿದ್ದಾರೆ. ಬೆಳೆಯಲು 2 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಬೆಳೆಯೂ ಭರ್ಜರಿಯಾಗಿ ಬಂದಿದೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಲಾಕ್‌ಡೌನ್ ಸಂಕಷ್ಟ ತಂದೊಡ್ಡಿದೆ. ಸಿಹಿ ಕುಂಬಳಕಾಯಿ ಖರೀದಿಗೆ ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ. ಬೇಡಿಕೆ ಕುಸಿದಿದ್ದರಿಂದ ಕುಂಬಳಕಾಯಿ ಹಣ್ಣಾಗಿ ಹೊಲ್ಲದಲ್ಲೇ ಹಾಳಾಗುತ್ತಿದ್ದು, ರೈತನ ಚಿಂತೆ ಹೆಚ್ಚಿಸಿದೆ.

    ಇದನ್ನೂ ಓದಿ: 5 ತಿಂಗಳಲ್ಲಿ 3 ಸಾವಿರ ಸುರಕ್ಷಿತ ಹೆರಿಗೆ!

    ಒಂದು ಟನ್ ಸಿಹಿ ಕುಂಬಳಕಾಯಿಗೆ ಸುಮಾರು 12-15 ಸಾವಿರ ರೂ. ಮಾರ್ಕೆಟ್ ಬೆಲೆ ಇದೆಯಂತೆ. ಇದರ ಪ್ರಕಾರ ರೈತನಿಗೆ ಕನಿಷ್ಠ 6 ರಿಂದ 7 ಲಕ್ಷ ರೂ. ಲಾಭ ಸಿಗುವ ನಿರೀಕ್ಷೆ ಇತ್ತು. ಆದರೆ, ಈಗ ಕಡಿಮೆ ಬೆಲೆಗೂ ಮಾರಾಟ ಮಾಡೋಣವೆಂದರೂ ಕೊಳ್ಳುವವರು ಬರುತ್ತಿಲ್ಲ. ಕುಟುಂಬ ಸದಸ್ಯರೆಲ್ಲರೂ ಶ್ರಮ ವಹಿಸಿ ದುಡಿದು ಬೆಳೆ ಬೆಳೆದಿದ್ದಾರೆ. ಆದರೆ, ದುಡಿಮೆಗೆ ತಕ್ಕ ಪ್ರತಿಫಲ ದೊರೆಯದಿರುವುದರಿಂದ ಅವರಲ್ಲಿ ನಿರಾಸೆ ತಂದಿದೆ. ಲಾಕ್‌ಡೌನ್ ಮುಂದುವರಿದರೆ ಸಿಹಿ ಕುಂಬಳಕಾಯಿ ಸಂಪೂರ್ಣ ಕೊಳೆತು ಹೋಗುತ್ತವೆ. ಆದ್ದರಿಂದ ಸರ್ಕಾರ ನೇರವಾಗಿ ನಮ್ಮ ಬೆಳೆ ಖರೀದಿ ಮಾಡಬೇಕು ಎಂದು ರೈತ ಅಂಗಲಾಚುತ್ತಿದ್ದಾನೆ.

    ನಂದೇಶ್ವರ ಗ್ರಾಮದ ರೈತರು ಬೆಳೆದ ತೋಟಗಾರಿಕಾ ಬೆಳೆಗಳ ಬಗ್ಗೆ ಸಮೀಕ್ಷೆ ಮಾಡಿ ಅಥಣಿ ತೋಟಗಾರಿಕೆ ಇಲಾಖೆಗೆ ಮಾಹಿತಿ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಯವರು ಮಾರಾಟಕ್ಕೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
    | ಮಂಜುನಾಥಗೌಡ ಪಾಟೀಲ ಗ್ರಾಮ ಲೆಕ್ಕಾಧಿಕಾರಿ ನಂದೇಶ್ವರ

    | ಚಿದಾನಂದ ಅ. ಪಾಟೀಲ ನಂದೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts