More

    500 ಮಕ್ಕಳಿರುವ ಶಾಲೆಗಳನ್ನು ಕೆಪಿಎಸ್ ಎಂದು ಪರಿಗಣಿಸುವಂತೆ ಶಿಕ್ಷಣ ಇಲಾಖೆ ಸೂಚನೆ

    ಬೆಂಗಳೂರು ಒಂದೇ ಆವರಣದಲ್ಲಿ ಅಥವಾ 500 ಮೀ. ಅಂತರದಲ್ಲಿ 500 ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳೆಂದು ಪರಿಗಣಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕವು ನಿರ್ದೇಶನ ನೀಡಿದೆ.

    ರಾಜ್ಯದಲ್ಲಿ ಪ್ರಸ್ತುತ 285 ಕೆಪಿಎಸ್ ಶಾಲೆಗಳು ಕಾರ್ಯನಿರ್ವಹಿಸತ್ತಿವೆ. ಒಂದೇ ಸೂರಿನಡಿ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವದವರೆಗೂ ಶಿಕ್ಷಣ ನೀಡುವ ಸಲುವಾಗಿ ಹಂತ ಹಂತವಾಗಿ ಒಂದು ಸಾವಿರ ಕೆಪಿಎಸ್ ಸ್ಥಾಪಿಸುವ ಗುರಿ ಹೊಂದಲಾಗಿದೆ.

    ಈ ಸಂಬಂಧ ಹಲವು ಜನಪ್ರತಿನಿಧಿಗಳು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಎಸ್‌ಡಿಎಂಸಿ ವತಿಯಿಂದ ಕೆಪಿಎಸ್ ಸ್ಥಾಪನೆಗೆ ಪ್ರಸ್ತಾವನೆಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ 2024-25ನೇ ಸಾಲಿನಿಂದ ರಾಜ್ಯದಲ್ಲಿ ಹೊಸದಾಗಿ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂತಹ ಎಷ್ಟು ಶಾಲೆಗಳಿವೆ ಎಂಬುದನ್ನು ಗುರುತಿಸಿ ನ.30ರೊಳಗೆ ಮಾಹಿತಿ ನೀಡುವಂತೆ ಸಮಗ್ರ ಶಿಕ್ಷಣ ನಿರ್ದೇಶಕರು ಸೂಚನೆ ನೀಡಿದ್ದಾರೆ.

    ಪರಿಗಣಿಸಬೇಕಿರುವ ಮಾನದಂಡಗಳು:

    ಒಂದೇ ಆವರಣದಲ್ಲಿ ಅಥವಾ ಹೊಂದಿಕೊಂಡಂತೆ ಇರುವ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲೆ/ಪದವಿ ಪೂರ್ವ ಕಾಲೇಜುಗಳಲ್ಲಿ ಕನಿಷ್ಠ 500 ಮಕ್ಕಳು ದಾಖಲಾಗಿರಬೇಕು. ಒಂದು ವೇಳೆ ಒಂದೇ ಆವರಣದಲ್ಲಿ ಇರದಿದ್ದರೆ, 500 ಮೀ. ಅಂತರದಲ್ಲಿ ಹೊಂದಿಕೊಂಡಂತೆ ಇರಬೇಕು ಎಂದು ತಿಳಿಸಿದೆ.

    ಕೆಪಿಎಸ್ ಉದ್ದೇಶ ಮತ್ತು ಆರಂಭ:

    ‘ಪ್ರತಿ ಮಗುವೂ ಶಾಲೆಯಲ್ಲಿರಬೇಕು ಮತ್ತು ಚೆನ್ನಾಗಿ ಕಲಿಯಬೇಕು’ ಎಂಬ ನೀತಿ ಅನ್ವಯ ಅಸ್ಥಿತ್ವದಲ್ಲಿರುವ ಶಾಲೆಗಳ ಆಡಳಿತಾತ್ಮಕ, ಶೈಕ್ಷಣಿಕ ಮತ್ತು ಕ್ರಿಯಾತ್ಮಕ ಸಂಯೋಜನೆಯೊಂದಿಗೆ ಪೂರ್ವ ಪ್ರಾಥಮಿಕ ತರಗತಿಯಿಂದ ಪದವಿ ಪೂರ್ವ ತರಗತಿ ವರೆಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ 2018-19ನೇ ಸಾಲಿನಲ್ಲಿ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಯಿತು.

    ಈ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಬೋಧನೆ ಮಾಡಲಾಗುತ್ತಿದೆ. ಈ ಶಾಲೆಗಳನ್ನು ಗುಣಮಟ್ಟದ ಶಿಕ್ಷಣ ನೀಡುವ, ವಿದ್ಯಾರ್ಥಿ ಕೇಂದ್ರಿತ, ಸಮುದಾಯ ಮುಖಿ ಮತ್ತು ಸಮುದಾಯ ಬೆಂಬಲಿತ ಶಾಲೆಗಳನ್ನಾಗಿಸುವ ನಿಟ್ಟಿನಲ್ಲಿ ‘ಉತ್ಕೃಷ್ಟತಾ ಕೇಂದ್ರ’ಗಳನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts