More

    ಸೂಕ್ತ ಅನುಷ್ಠಾನ ಅಗತ್ಯ; ಗ್ರಾಮೀಣ ಭಾಗದವರಿಗೆ ಸಮರ್ಪಕ ಸೌಲಭ್ಯ ಸಿಗಲಿ

    ಆರೋಗ್ಯಕ್ಕಿಂತ ದೊಡ್ಡ ಸಂಪತ್ತಿಲ್ಲ. ಹಾಗಾಗಿಯೇ, ಸರ್ಕಾರಗಳು ಕಾಲಕಾಲಕ್ಕೆ ಈ ಕ್ಷೇತ್ರಕ್ಕೆ ಸಂಬಂಧಿಸಿ ಹೊಸ ಹೊಸ ಯೋಜನೆಗಳನ್ನು ತಂದಿವೆ. ಅವುಗಳ ಮೂಲಕ ವೈದ್ಯಕೀಯ ಮೂಲಸೌಲಭ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸಿವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿನ ಸ್ಥಿತಿ ಈಗಲೂ ಶೋಚನೀಯವಾಗಿದೆ. ಹೆಸರಿಗೆ ಮಾತ್ರ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅವ್ಯವಸ್ಥೆಯ ಕೂಪಗಳಾಗಿರುವುದು ಕರಾಳ ವಾಸ್ತವ. ಬಹುತೇಕ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಟ್ಟಡಗಳಿಲ್ಲ, ವೈದ್ಯರಿಲ್ಲ, ಔಷಧ ಅಥವಾ ಚಿಕಿತ್ಸಾ ಉಪಕರಣಗಳೂ ಇಲ್ಲ. ಇದಲ್ಲದೆ ವೈದ್ಯರು ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಲು ಹಿಂದೇಟು ಹಾಕುವ ಸಮಸ್ಯೆ ಇಂದು-ನಿನ್ನೆಯದೇನಲ್ಲ.

    ಹೀಗಿರುವಾಗ ಹಳ್ಳಿಗರು ಯಾವ ಭರವಸೆಯಿಂದ ಇಂಥ ಆರೋಗ್ಯ ಕೇಂದ್ರಗಳನ್ನು ನೆಚ್ಚಿಕೊಳ್ಳುತ್ತಾರೆ? ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ತಾಲೂಕು ಕೇಂದ್ರಕ್ಕೆ ಬಂದರೆ ಅಲ್ಲೂ ಅದೇ ಗೋಳು. ಅಲ್ಲಿಂದ ಮತ್ತೆ ಜಿಲ್ಲಾಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದು ಮರಳುವಷ್ಟರಲ್ಲಿ ಸಾಕಷ್ಟು ಹಣ, ಶ್ರಮ ವ್ಯಯವಾಗಿರುತ್ತದೆ. ಆಕಸ್ಮಾತ್ ತುರ್ತು ಪರಿಸ್ಥಿತಿಗಳಿದ್ದರೆ ಸ್ಥಿತಿ ಇನ್ನೂ ಘೋರ.

    ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕೆ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತಳೆಯಲಾಗಿದೆ. 247 ಸೇವೆ ಒದಗಿಸಲು ಅಗತ್ಯವಾದ ವೈದ್ಯಕೀಯ ಸಿಬ್ಬಂದಿ, ಸೇರಿ ಮೂಲಸೌಕರ್ಯ ಕಲ್ಪಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 15 ಜಿಲ್ಲಾ ಆಸ್ಪತ್ರೆಗಳು, 146 ತಾಲೂಕು ಆಸ್ಪತ್ರೆಗಳು, 207 ಸಮುದಾಯ ಆರೋಗ್ಯ ಕೇಂದ್ರಗಳು, 2,359 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 8,871 ಉಪಕೇಂದ್ರಗಳಿವೆ. ಕರ್ನಾಟಕಕ್ಕೆ ಹೋಲಿಸಿದರೆ ತಮಿಳುನಾಡು, ಕೇರಳದಲ್ಲಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿದೆ. ನಮ್ಮ ರಾಜ್ಯದಲ್ಲೂ ಗುಣಮಟ್ಟದ ಸೇವೆಯನ್ನು ಒದಗಿಸಲು ಅವಕಾಶ ಮತ್ತು ಸಂಪನ್ಮೂಲಗಳಿವೆ. ಆದ್ದರಿಂದ, ‘ದೇಶಕ್ಕೆ ಮಾದರಿಯಾಗುವ ಆರೋಗ್ಯ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ರೂಪಿಸಲಾಗುವುದು’ ಎಂಬ ಆಶ್ವಾಸನೆಯನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನೀಡಿದ್ದಾರೆ.

    ಮಾದರಿ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ತಲಾ  6ರಿಂದ 8 ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಆಂಬುಲೆನ್ಸ್ ಒದಗಿಸಲು ತೀರ್ಮಾನಿಸಲಾಗಿದೆ. ಕರೊನಾದ ಪರಿಸ್ಥಿತಿಯಂತೂ ಆರೋಗ್ಯ ವ್ಯವಸ್ಥೆ ಗಟ್ಟಿಗೊಳಿಸುವ ಅನಿವಾರ್ಯತೆಯನ್ನು ತಂದೊಡ್ಡಿದೆ. ಆದರೆ, ಇದು ಬರೀ ನಗರಪ್ರದೇಶಕ್ಕೆ ಸೀಮಿತವಾಗಿರಬಾರದು. ಹಳ್ಳಿಗಳಿಗೂ ಈ ವ್ಯವಸ್ಥೆ ವಿಸ್ತರಣೆಯಾದಾಗ ಮಾತ್ರ ನಿಜಾರ್ಥದಲ್ಲಿ ಆರೋಗ್ಯ ವ್ಯವಸ್ಥೆ ಸದೃಢಗೊಳ್ಳಲು ಸಾಧ್ಯ. ಎಂಬಿಬಿಎಸ್ ವ್ಯಾಸಂಗ ಮುಗಿಸಿದವರಿಗೆ 1 ವರ್ಷ ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ಕ್ರಮದಿಂದ ಯುವವೈದ್ಯರು ಹಳ್ಳಿಗಳತ್ತ ಮುಖಮಾಡುವ ನಿರೀಕ್ಷೆ ಇದೆ. ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸುವ ಯೋಜನೆ ಜನಸ್ನೇಹಿಯಾಗಿದ್ದು, ಇದು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ. ಗ್ರಾಮಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಸೂಕ್ತವಾಗಿ ದೊರೆತಲ್ಲಿ ಅದರಿಂದ ಜನರಿಗೆ ಅನುಕೂಲವಾಗುವ ಜತೆಗೆ, ವ್ಯರ್ಥ ಓಡಾಟ ತಪ್ಪಲಿದೆ. ಹಾಗಾಗಿ, ಈ ಯೋಜನೆಯ ಸೂಕ್ತ ಅನುಷ್ಠಾನ ಅಗತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts