More

    ಸಕಾರಾತ್ಮಕ ನೋಟ: ಇಂಧನ ರಂಗದಲ್ಲಿ ಸ್ವಾವಲಂಬನೆ ಸಾಧ್ಯತೆ

    ಭಾರತವು ಸದ್ಯ ತೈಲ ಹಾಗೂ ಕಲ್ಲಿದ್ದಲಿಗೆ ಆಮದನ್ನೇ ಹೆಚ್ಚು ಅವಲಂಬಿಸಿದ್ದು, ಇದು ಶೇ.80-85ರಷ್ಟು ಪ್ರಮಾಣದಲ್ಲಿದೆ. ಇದರಿಂದ ದೇಶದ ಬೊಕ್ಕಸದ ಮೇಲೆ ಆಗುವ ಒತ್ತಡವನ್ನು ಸಹಜವಾಗಿಯೇ ಊಹಿಸಬಹುದು. ಹೀಗಿರುವಾಗ, ಅಮೆರಿಕದ ಪ್ರಮುಖ ಸಂಶೋಧನಾ ಸಂಸ್ಥೆಯೊಂದು ಆಶಾದಾಯಕ ವರದಿ ನೀಡಿರುವುದು ಗಮನಸೆಳೆಯುವಂತಿದೆ. ಭಾರತವು ಶುದ್ಧ ಇಂಧನ ತಂತ್ರಜ್ಞಾನಕ್ಕೆ ಒತ್ತು ನೀಡುವುದರ ಮುಖೇನ 2047ರ ಹೊತ್ತಿಗೆ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲಿದೆ ಎಂದು ಲಾರೆನ್ಸ್ ಬರ್ಕ್ಲೆ ನ್ಯಾಷನಲ್ ಲ್ಯಾಬೊರೇಟರಿ ಪ್ರಕಟಿಸಿರುವ ವರದಿಯಲ್ಲಿ ಹೇಳಲಾಗಿದೆ.

    ‘ಪಾಥ್​ವೇಸ್ ಟು ಆತ್ಮನಿರ್ಭರ್ ಭಾರತ್’ ವಿಷಯದ ಮೇಲೆ ಈ ಅಧ್ಯಯನ ನಡೆದಿದ್ದು, ಶುದ್ಧ ಇಂಧನ ವಲಯದಲ್ಲಿ ಭಾರತ ಕೈಗೊಂಡಿರುವ ಕ್ರಮಗಳ ಮೇಲೆ ಹೆಚ್ಚು ಗಮನಕೇಂದ್ರೀಕರಿಸಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಈಚಿನ ವರ್ಷಗಳಲ್ಲಿ ಕಂಡುಬಂದಿರುವ ಬೆಲೆ ಹಾಗೂ ಸರಬರಾಜು ಚಂಚಲತೆ ಕಾರಣದಿಂದಾಗಿ ಭಾರತದ ಖರೀದಿ ಮೊತ್ತದ ಮೇಲೆ ಪರಿಣಾಮವಾಗಿದ್ದು, ವಿದೇಶಿ ವಿನಿಮಯ ಮೀಸಲಿನ ಮೇಲೆ (ಫೊರೆಕ್ಸ್) ಮೇಲೆ ಒತ್ತಡ ಹೇರಿ ಹಣದುಬ್ಬರಕ್ಕೆ ಒಂದು ಕಾರಣವಾಗಿದೆ ಎಂದು ಈ ವರದಿ ಬೊಟ್ಟುಮಾಡಿದೆ. ಆಮದು ಅವಲಂಬನೆ ತಗ್ಗಿದಷ್ಟು ಫೊರೆಕ್ಸ್ ಉಳಿತಾಯವಾಗಲಿದೆ. ಬೇರೆ ಬೇರೆ ರಂಗಗಳಲ್ಲಿ ಭಾರತ ಸ್ವಾವಲಂಬಿಯಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ‘ಆತ್ಮನಿರ್ಭರ’ ಭಾರತ ಪರಿಕಲ್ಪನೆಯನ್ನು ಜಾರಿಮಾಡಿದ್ದು, ಈ ನಿಟ್ಟಿನಲ್ಲಿ ಒಂದಷ್ಟು ಪ್ರಗತಿಯಾಗಿದೆ. ಸೇನಾ ಸಾಮಗ್ರಿಗಳಲ್ಲಿ ಸಹ ಹೆಚ್ಚಿನ ಪಾಲು ಆಮದು ಅವಲಂಬನೆ ಇದ್ದು, ಈಗೀಗ ದೇಶೀಯವಾಗಿ ತಯಾರಿಕೆ ಕ್ರಮೇಣ ಹೆಚ್ಚುತ್ತಿದ್ದು, ಮುಂಬರುವ ವರ್ಷಗಳಲ್ಲಿ ಆಮದು ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಮೂಡಿದೆ. ಪೆಟ್ರೋಲ್ ಇತ್ಯಾದಿ ತೈಲೋತ್ಪನ್ನಗಳ ವಾರ್ಷಿಕ ಆಮದು ಬಿಲ್ 5 ಲಕ್ಷ ಕೋಟಿ ರೂ.ಗಿಂತ ಹೆಚ್ಚಿಗೆಯಿದೆ.

    ನವೀಕರಿಸಬಹುದಾದ ಇಂಧನಗಳಿಗೆ ಅಧಿಕ ಒತ್ತು ನೀಡುವ ಮೂಲಕ ಇಂಧನ ಅವಲಂಬನೆಯನ್ನು ತಗ್ಗಿಸುವ ಯತ್ನಗಳು ನಡೆಯುತ್ತಿವೆ. ಕೇಂದ್ರ ಸರ್ಕಾರದ ಜತೆ ವಿವಿಧ ರಾಜ್ಯಗಳು ಸಹ ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿವೆ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ, ಸೌರ ಮತ್ತು ಪವನ ವಿದ್ಯುತ್ತಿಗೆ ಆದ್ಯತೆ ನೀಡಿ, ಜಲ, ಪರಮಾಣು ವಿದ್ಯುತ್ ಉತ್ಪಾದನೆ ಸೇರಿ ಮಿಗತೆ ವಿದ್ಯುತ್ ಸಾಧನೆ ಮಾಡಿದೆ. ಕೇಂದ್ರ ಸರ್ಕಾರವು ಉದಾರ ನಿಯಮಗಳ ಮೂಲಕ ಇ-ವಾಹನಗಳಿಗೆ ಉತ್ತೇಜನ ನೀಡುವ ನೀತಿಯನ್ನು ಈಚೆಗೆ ಪ್ರಕಟಿಸಿದೆ. ಇದಲ್ಲದೆ, ಕೆಲ ರಾಜ್ಯ ಸರ್ಕಾರಗಳು ಇ-ವಾಹನ ಖರೀದಿಗೆ ಸಬ್ಸಿಡಿ, ರಿಯಾಯಿತಿ ಕೊಡುವ ಮೂಲಕ ಉತ್ತೇಜನ ನೀಡುತ್ತಿವೆ. ಹಸಿರು ಜಲಜನಕ ಬಳಕೆಗೂ ಉತ್ತೇಜನ ನೀಡಲಾಗುತ್ತಿದೆ. ಜಾಗತಿಕವಾಗಿ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಏರ್ಪಟ್ಟ ಪ್ಯಾರಿಸ್ ಒಡಂಬಡಿಕೆಗೆ ಭಾರತವೂ ಸಹಿದಾರನಾಗಿದ್ದು, ಆ ಬಾಧ್ಯತೆಯೂ ಇದೆ. ಇಂಥ ಕ್ರಮಗಳು ಆರಂಭಶೂರತ್ವವಾಗದೆ ನಿರಂತರವಾಗಿ ಮುಂದುವರಿದರೆ ನಿರೀಕ್ಷಿತ ಪರಿಣಾಮ ಕಾಣಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts