More

    ಅಪಾಯ ಕಡೆಗಣಿಸಬೇಡಿ; ಖರೀದಿ ನೆಪದಲ್ಲಿ ನಿಯಮ ಉಲ್ಲಂಘನೆ ಸಲ್ಲ..

    ಕರೊನಾ ಎರಡನೇ ಅಲೆಯ ವಿರುದ್ಧ ಹೋರಾಡಲು ಇಡೀ ದೇಶ ಶ್ರಮಿಸುತ್ತಿದೆ. ಬಿಗಿ ನಿಯಮಗಳು, ಹಲವು ಕಟ್ಟುನಿಟ್ಟಿನ ಕ್ರಮಗಳ ಪರಿಣಾಮ ಎರಡನೇ ಅಲೆ ಕೊಂಚ ಇಳಿಮುಖ ಕಾಣುತ್ತಿದೆ. ದೈನಂದಿನ ಪ್ರಕರಣಗಳ ಸಂಖ್ಯೆ 4 ಲಕ್ಷ ಮೀರಿದಾಗ ಆತಂಕ ಹೆಚ್ಚಿತ್ತು. ಕಳೆದ ಎರಡು ದಿನಗಳಿಂದ ಇದು ಸ್ವಲ್ಪ ತಗ್ಗಿ 3 ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿವೆ. ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ಕ್ರಮೇಣ ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ಭಾರತದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ಕರ್ನಾಟಕದಲ್ಲಿವೆ (5.50 ಲಕ್ಷಕ್ಕೂ ಅಧಿಕ). ಕರೊನಾ ಹಳ್ಳಿಗಳಿಗೂ ವ್ಯಾಪಿಸಿದ್ದು, ಸಮಸ್ಯೆಯ ತೀವ್ರತೆ ಹೆಚ್ಚಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಇನ್ನಷ್ಟು ಹೆಚ್ಚಬಹುದೆಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಜನತಾ ಕರ್ಫ್ಯೂ ಅಷ್ಟೊಂದು ಪರಿಣಾಮ ಬೀರದ ಕಾರಣ, ರಾಜ್ಯ ಸರ್ಕಾರ ಕೊನೆಯ ಅಸ್ತ್ರವಾಗಿ ಲಾಕ್​ಡೌನ್ ಘೋಷಿಸಿದೆ. ಈ 14 ದಿನಗಳ ಅವಧಿಯಲ್ಲಿ ಸೋಂಕು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬರದಿದ್ದಲ್ಲಿ, ಲಾಕ್​ಡೌನ್ ಅವಧಿ ಮತ್ತಷ್ಟು ವಿಸ್ತರಣೆಯಾದರೆ ಪರಿಸ್ಥಿತಿ ಜಟಿಲವಾಗುತ್ತದೆ.

    ಈ ನಡುವೆ ಲಾಕ್​ಡೌನ್ ಹೊತ್ತಲ್ಲಿ ದಿನಸಿ, ತರಕಾರಿ, ಔಷಧ, ಹಾಲು ಸೇರಿದಂತೆ ಜೀವನಾವಶ್ಯಕ ಸಾಮಗ್ರಿಗಳಿಗೆ ಜನರು ಪರದಾಡಬಾರದು ಎಂಬ ಉದ್ದೇಶದಿಂದ ಸರ್ಕಾರ ಬೆಳಗಿನ 6 ಗಂಟೆಯಿಂದ 10 ಗಂಟೆಯವರೆಗೆ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಬೆಂಗಳೂರು ನಗರ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲಾಕೇಂದ್ರಗಳಲ್ಲಿ ಜನರು ಸುರಕ್ಷಾ ನಿಯಮಗಳನ್ನು ಕಡೆಗಣಿಸಿ, ಖರೀದಿಗೆ ಮುಗಿಬೀಳುತ್ತಿದ್ದಾರೆ. ಅಂಗಡಿಗಳ ಮುಂದೆ, ಮಾರುಕಟ್ಟೆಗಳಲ್ಲಿ ಜನಸಂದಣಿಯೇ ಈ ಅವಧಿಯಲ್ಲಿ ಕಂಡುಬರುತ್ತಿದೆ. ಎಷ್ಟೋ ಜನರು ಮಾಸ್ಕ್ ಸರಿಯಾಗಿ ಧರಿಸದೆ, ಗುಂಪಿನಲ್ಲಿ ಸೇರುತ್ತಾರೆ. ಸರತಿ ಸಾಲಿನಲ್ಲಿ ನಿಂತವರು ವೈಯಕ್ತಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ಲಾಕ್​ಡೌನ್ ಇರುವುದರಿಂದ ಎಲ್ಲಿ ಜೀವನಾವಶ್ಯಕ ವಸ್ತುಗಳ ಕೊರತೆ ಆಗಿಬಿಡುತ್ತದೆಯೋ ಎಂಬ ಧಾವಂತ, ಆತಂಕದಲ್ಲಿ ಜನರು ಈ ಪರಿ ಮುಗಿಬೀಳುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆಯೇ ಸರಿ.

    ಎರಡನೇ ಅಲೆಯ ಅಬ್ಬರ ರಾಜ್ಯದಲ್ಲಿ ತೀವ್ರವಾಗಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಹಾಸಿಗೆಗಳು ಮತ್ತು ವೈದ್ಯಕೀಯ ಆಮ್ಲಜನಕದ ಕೊರತೆ ತೀವ್ರಪ್ರಮಾಣದಲ್ಲಿದ್ದು, ಜನರು ಚಿಕಿತ್ಸೆಗೆ ಪರದಾಡುವಂತಾಗಿದೆ. ಎಷ್ಟೇ ಸೌಲಭ್ಯ ಹೆಚ್ಚಿಸಿದರೂ, ಏರುತ್ತಿರುವ ಸೋಂಕಿತರ ಸಂಖ್ಯೆ ಎದುರು ಅದು ಸಾಕಾಗುತ್ತಿಲ್ಲ ಎಂಬುದು ವಾಸ್ತವ. ಹೀಗಿರುವಾಗ ಲಾಕ್​ಡೌನ್ ಮತ್ತು ಸುರಕ್ಷಾ ನಿಯಮಗಳನ್ನು ಜನರು ಗಂಭೀರವಾಗಿ ಪರಿಗಣಿಸಬೇಕಿದೆ. ಒಂದಿಷ್ಟು ಮೈಮರೆವು ಅಥವಾ ಬೇಜವಾಬ್ದಾರಿ ತೋರಿದರೆ ಸ್ಥಿತಿ ಇನ್ನಷ್ಟು ಹದಗೆಡಬಹುದು. ಜೀವನಾವಶ್ಯಕ ಸಾಮಗ್ರಿಗಳ ಕೊರತೆ ಆಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹೀಗಾಗಿ ಜನರು ಯಾವುದೋ ವದಂತಿ ಅಥವಾ ಸುಳ್ಳುಮಾಹಿತಿಗೆ ಬಲಿಯಾಗಿ, ಆತಂಕಕ್ಕೆ ಒಳಗಾಗಬಾರದು. ಖರೀದಿಯ ವೇಳೆ ಸಂಯಮ ಕಾಯ್ದುಕೊಳ್ಳಬೇಕು. ಅಧಿಕ ಪ್ರಮಾಣದ ದಾಸ್ತಾನು ಬೇಡ. ಅತಿ ಅವಶ್ಯ ಖರೀದಿಗಾಗಿ ಮಾತ್ರ ಮನೆಯಿಂದ ಹೊರಬರಬಹುದು. ಈ ಹೊತ್ತಲ್ಲಿ ನಾಗರಿಕರು ತೋರುವ ಜವಾಬ್ದಾರಿಯುತ ವರ್ತನೆಯೇ ಕರೊನಾ ವಿರುದ್ಧ ಸಮರದಲ್ಲಿ ದೊಡ್ಡ ಅಸ್ತ್ರವಾಗಬಲ್ಲದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts