More

    ಚೌಕಟ್ಟು ಮೀರದಿರಲಿ; ಸೂಕ್ತ ನಿಯಂತ್ರಣ ವ್ಯವಸ್ಥೆ ಅಗತ್ಯ…

    ಇಂದಿನ ಮಾಹಿತಿ-ತಂತ್ರಜ್ಞಾನದ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಸರಿಯಾಗಿ ಬಳಸಿಕೊಂಡರೆ ಅವು ಸುಧಾರಣೆಯ ಪ್ರಬಲ ಅಸ್ತ್ರಗಳೇ ಸರಿ. ಆದರೆ, ಅದನ್ನೇ ತಪು್ಪಉದ್ದೇಶಗಳಿಗಾಗಿ, ಸಮಾಜದ ಹಿತಕ್ಕೆ ಮಾರಕವಾಗಿ ಬಳಸಿದರೆ ದೊಡ್ಡ ಶಾಪ. ರೈತರ ಆಂದೋಲನದ ಹೆಸರಲ್ಲಿ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ಘಟನೆಯ ಕೆಲ ದಿನಗಳಲ್ಲೇ ಇದ್ದಕ್ಕಿದ್ದಹಾಗೆ ‘ರೈತ ಹೋರಾಟ’ ಜಾಗತಿಕ ಸುದ್ದಿಯಾಯಿತು. ಟ್ವಿಟರ್​ನಲ್ಲಿ ಟ್ರೆಂಡ್ ಆಯಿತು. ಭಾರತವಿರೋಧಿ ಭಾವನೆಗಳನ್ನು ಪ್ರಚೋದಿಸಲು ಕೆಲವು ದುಷ್ಟಶಕ್ತಿಗಳು ಇದನ್ನು ದಾಳವಾಗಿ ಉಪಯೋಗಿಸಿಕೊಂಡಿದ್ದು ಸ್ಪಷ್ಟವಾಗಿತ್ತು. ಹಾಗಾಗಿಯೇ, ಖಲಿಸ್ತಾನಿ ನಂಟು ಹೊಂದಿರುವ 1,178 ಟ್ವಿಟರ್ ಖಾತೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಟ್ವಿಟರ್ ಕಂಪನಿಗೆ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ಅರೆಮನಸ್ಸಿನ ಕ್ರಮ ಕೈಗೊಂಡಿರುವ ಆ ಕಂಪನಿ 500 ಖಾತೆಗಳನ್ನು ರದ್ದುಗೊಳಿಸಿದೆ ಮತ್ತು ಕೆಲ ಖಾತೆಗಳನ್ನು ಬ್ಲಾಕ್ ಮಾಡಲು ನಿರಾಕರಿಸಿದೆ. ಅಷ್ಟೇ ಅಲ್ಲ, ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಉಪದೇಶವನ್ನು ನೀಡಿದೆ.

    ಭಾರತದ ಆಂತರಿಕ ವಿಷಯಗಳಲ್ಲಿ ಅಂತಾರಾಷ್ಟ್ರೀಯ ಶಕ್ತಿಗಳು ಮೂಗು ತೂರಿಸಬಾರದು ಎಂದು ಇತ್ತೀಚೆಗಷ್ಟೇ ವಿದೇಶಾಂಗ ಇಲಾಖೆ ಸ್ಪಷ್ಟವಾಗಿ ಹೇಳಿದೆ. ಟ್ವಿಟರ್ ಕಂಪನಿ ಈ ಬಗ್ಗೆ ಜಾಣಕಿವುಡು ಪ್ರದರ್ಶಿಸುತ್ತಿದೆ. ಇಲ್ಲಿಯ ಕೆಲ ಘಟನೆಗಳನ್ನು ಇರಿಸಿಕೊಂಡು, ದೇಶದ ಘನತೆಗೆ, ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥ ಬೆಳವಣಿಗೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಖಲಿಸ್ತಾನಿ ನಂಟು ಹೊಂದಿರುವ ಕೆಲವರು ಟ್ವಿಟರ್ ಮೂಲಕ ಸುಳ್ಳುಗಳನ್ನು, ಭಾರತವಿರೋಧಿ ಭಾವನೆಗಳನ್ನು ಹರಡುತ್ತಿದ್ದು, ಅಂಥವರ ವಿರುದ್ಧ ಸೂಕ್ತ ಕ್ರಮ ಅಗತ್ಯ. ಆದ್ದರಿಂದ, ಪ್ರಚೋದನಾಕಾರಿ ಹೇಳಿಕೆ, ಟ್ವೀಟ್​ಗಳ ಮೂಲಕ ಶಾಂತಿ ಕದಡಲು ಯತ್ನಿಸುತ್ತಿರುವ ಖಾತೆಗಳನ್ನು ಗುರುತಿಸಿ ಕೇಂದ್ರ ಮಾಹಿತಿ ನೀಡಿತ್ತು. ವಾಕ್ ಸ್ವಾತಂತ್ರ್ಯವನ್ನು ಭಾರತ ಸದಾ ಗೌರವಿಸಿಕೊಂಡು ಬಂದಿದೆ ಮತ್ತು ಅದನ್ನು ಪ್ರಜಾಪ್ರಭುತ್ವದ ಪ್ರಮುಖ ಮೌಲ್ಯವಾಗಿ ಪರಿಗಣಿಸಿದೆ. ಆರೋಗ್ಯಯುತ ಸಂವಹನ, ಶಾಂತರೀತಿಯಲ್ಲಿ ಅಭಿಪ್ರಾಯ ಮಂಡಿಸುವ ಸ್ವಾತಂತ್ರ್ಯವಿದೆ ನಿಜ. ಆದರೆ, ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಅದು ಚೌಕಟ್ಟನ್ನು ಮೀರಬಾರದು. ಜನರ ಭಾವನೆಗಳನ್ನು ಘಾಸಿಗೊಳಿಸಬಾರದು. ಇದು ಟ್ವಿಟರ್ ಸೇರಿ ಎಲ್ಲ ಸಾಮಾಜಿಕ ಮಾಧ್ಯಮಗಳಿಗೂ ಅನ್ವಯಿಸುತ್ತದೆ.

    ಇತ್ತೀಚಿನ ದಿನಗಳಲ್ಲಂತೂ ಸಾಮಾಜಿಕ ಮಾಧ್ಯಮಗಳ ಮುಖೇನ ಪ್ರಚೋದನಾಕಾರಿ ಸಂದೇಶ ಹರಡುವ, ಅಪಪ್ರಚಾರ ಮಾಡುವ, ಸುಳ್ಳುಗಳನ್ನು ಬಿತ್ತುವ ಅಹಿತಕರ ಬೆಳವಣಿಗೆಗಳು ನಿಯಂತ್ರಣವಿಲ್ಲದೆ ನಡೆಯುತ್ತಿವೆ. ಇದನ್ನು ತಡೆಯಲು ಸೂಕ್ತ ನಿಯಂತ್ರಣ ವ್ಯವಸ್ಥೆ ಅಗತ್ಯವಾಗಿದೆ. ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಸ್ವಯಂಸಂಹಿತೆ ಅಳವಡಿಸಿಕೊಳ್ಳಬೇಕು ಎಂಬುದು ನಿಜವೇ. ಹಾಗಂತ, ಕಂಪನಿಗಳು ತಮ್ಮ ಹೊಣೆಗಾರಿಕೆ, ಜವಾಬ್ದಾರಿ ಮರೆಯುವಂತಿಲ್ಲ. ಪಟ್ಟಭದ್ರ ಶಕ್ತಿಗಳ ಸ್ಟೇಟಸ್, ಖಾತೆಗಳನ್ನು ನಿಯಂತ್ರಿಸುವ, ರದ್ದು ಮಾಡುವ ವ್ಯವಸ್ಥೆಯನ್ನು ಇನ್ನಷ್ಟು ಬಲ ಪಡಿಸಬೇಕು. ಟ್ವಿಟರ್ ಕಂಪನಿ ಭಾರತದ ಕಾನೂನಿಗಿಂತ ದೊಡ್ಡದೇನಲ್ಲ. ಯಾವುದೇ ಸಬೂಬು ಹೇಳದೆ ಖಲಿಸ್ತಾನಿ ನಂಟು ಹೊಂದಿರುವ ಇನ್ನಷ್ಟು ಖಾತೆಗಳನ್ನು ರದ್ದುಗೊಳಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts