More

    ವ್ಯಸನಮುಕ್ತರಾಗಲಿ; ಪೊಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು

    ಮದ್ಯಪಾನದ ಹಾವಳಿ ಎಷ್ಟೆಲ್ಲ ಅವಾಂತರಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಸಾಮಾಜಿಕ ಜೀವನದಲ್ಲಿ ನೋಡುತ್ತಲೇ ಇದ್ದೇವೆ. ವ್ಯಕ್ತಿಯ ಸ್ವಾಸ್ಥ್ಯ, ಕುಟುಂಬದ ನೆಮ್ಮದಿ, ಆರ್ಥಿಕತೆಯನ್ನು ಹಾಳು ಮಾಡಿ, ಇದು ತಂದೊಡ್ಡುವುದು ಸರಣಿ ಸಮಸ್ಯೆಗಳನ್ನೇ. ಕುಡಿತದ ಚಟಕ್ಕೆ ದಾಸರಾಗಿ, ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬಗಳು ಅದೆಷ್ಟೋ. ಈ ಸಮಸ್ಯೆಯಿಂದ ಕಂಗೆಟ್ಟು ಬಿಹಾರದಲ್ಲಿ ಬೀದಿಗಿಳಿದು ಹೋರಾಟ ಮಾಡಿದ ಮಹಿಳೆಯರು, ಆ ರಾಜ್ಯದಲ್ಲಿ ಮದ್ಯಪಾನ ನಿಷೇಧವಾಗುವಂತೆ ಮಾಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ, ವೈಯಕ್ತಿಕವಾಗಿ ಮತ್ತು ವೃತ್ತಿ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾದ ಪೊಲೀಸರೇ ಮದ್ಯವ್ಯಸನಿಗಳಾಗುತ್ತಿರುವುದು ದುರದೃಷ್ಟಕರ. ಈ ಸಮಸ್ಯೆ ಹೊಸದೇನಲ್ಲ. ಕರ್ತವ್ಯದ ಸಮಯದಲ್ಲೇ ಪೊಲೀಸರು ಪಾನಮತ್ತರಾಗುವುದು, ಬೀದಿರಂಪ ಮಾಡುವುದು, ಜನಸಾಮಾನ್ಯರಿಗೆ ಕಿರುಕುಳ ನೀಡುವುದು ಸೇರಿ ಹತ್ತಾರು ದುರದೃಷ್ಟಕರ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಯಾರೂ ದುಶ್ಚಟಗಳಿಗೆ ದಾಸರಾಗಬಾರದು. ಆಗಲೇ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸಲು ಸಾಧ್ಯ. ಆದರೆ, ಮಹತ್ತರ ಹೊಣೆಗಾರಿಕೆ ಹೊಂದಿರುವ ಪೊಲೀಸರೇ ವ್ಯಸನಗಳಿಗೆ ಶರಣಾದರೆ ಸಮಾಜದ ಗತಿ ಏನು? ಹಾಗಂತ ಸರ್ಕಾರ ಅಥವಾ ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತುಕೊಂಡಿದೆ ಅಂತಲ್ಲ. ಮದ್ಯವಸನಿಗಳಿಗೆ ಆಗಾಗ ಎಚ್ಚರಿಕೆ ನೀಡುತ್ತ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆಯೂ ಮಾತನಾಡಿದೆ. ಆದರೂ, ಸಮಸ್ಯೆ ಪರಿಹಾರವಾಗುತ್ತಿಲ್ಲ.

    ಈ ನಿಟ್ಟಿನಲ್ಲಿ ಸರ್ಕಾರ ಮತ್ತೊಂದು ಹೆಜ್ಜೆ ಇರಿಸಿದೆ. ರಾಜ್ಯ ಮೀಸಲು ಪೊಲೀಸ್, ಭಾರತೀಯ ಮೀಸಲು ಪಡೆ ಹಾಗೂ ತರಬೇತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಪೈಕಿ ಮದ್ಯಸೇವನೆಯ ಚಟ ಹೊಂದಿದವರನ್ನು ವ್ಯಸನಮುಕ್ತ ಕೇಂದ್ರಕ್ಕೆ ಕಡ್ಡಾಯವಾಗಿ ದಾಖಲು ಮಾಡುವಂತೆ ಸೂಚಿಸಿದೆ. ಪೊಲೀಸರು ಮದ್ಯ ವ್ಯಸನಕ್ಕೊಳಗಾಗಿ ಪದೇಪದೆ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವ ಪ್ರಕರಣಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ವ್ಯಸನಮುಕ್ತ ಕೇಂದ್ರಕ್ಕೆ ದಾಖಲಾಗದ ಅಥವಾ ಹಲವು ಎಚ್ಚರಿಕೆ ಬಳಿಕವೂ ಚಟವನ್ನು ತ್ಯಜಿಸದ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸ್ವಯಂನಿವೃತ್ತಿ ತೆಗೆದುಕೊಳ್ಳುವಂತೆ ತಾಕೀತು ಮಾಡಲಾಗಿದೆ. ಸಿವಿಲ್ ಪೊಲೀಸರಿಗೂ ಇದು ಅನ್ವಯ ಆಗಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ದೈಹಿಕವಾಗಿ ಸದೃಢವಾಗಿರುವುದು ಸಹಜ ಅಪೇಕ್ಷೆ ಮಾತ್ರವಲ್ಲ ಅನಿವಾರ್ಯ ಕೂಡ ಹೌದು. ಹಾಗಾಗಿ, ಏಪ್ರಿಲ್ 30ರೊಳಗೆ ತೂಕ ಇಳಿಸಿಕೊಳ್ಳದವರ ಮುಂಬಡ್ತಿ ತಡೆಹಿಡಿಯುವುದಾಗಿ ಇತ್ತೀಚಿಗಷ್ಟೇ ಇಲಾಖೆ ಪ್ರಕಟಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿ ಗೌರವವಿದೆ. ಅಲ್ಲದೆ, ಸಾಮಾಜಿಕ ಪಿಡುಗು, ಸವಾಲುಗಳೊಂದಿಗೆ ಹೋರಾಡುವ ಪೊಲೀಸರು ವೈಯಕ್ತಿಕವಾಗಿಯೂ ಕೆಲ ನೈತಿಕ ಮೌಲ್ಯಗಳನ್ನು ಅನುಸರಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಕಾರ್ಯದಕ್ಷತೆಯ ಮೇಲೆ ವ್ಯತಿರಿಕ್ತ ಪರಿಣಾಮ ಆಗುವುದಷ್ಟೇ ಅಲ್ಲದೆ, ಕೆಲ ಸಿಬ್ಬಂದಿಯ ವ್ಯಸನದಿಂದ ಇಲಾಖೆಗೆ ಕೆಟ್ಟ ಹೆಸರು. ಹಾಗಾಗಿ, ವ್ಯಸನಮುಕ್ತ ಕೇಂದ್ರಕ್ಕೆ ಕಡ್ಡಾಯವಾಗಿ ದಾಖಲು ಮಾಡಲು ಸೂಚಿಸಿರುವುದು ಒಳ್ಳೆಯ ನಡೆ. ಇದನ್ನು ಸದುಪಯೋಗ ಪಡಿಸಿಕೊಂಡು, ವ್ಯಸನಮುಕ್ತರಾಗಬೇಕು. ದೈಹಿಕ-ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಿಕೊಂಡು, ಸಮಾಜದ ಆರೋಗ್ಯವನ್ನು ಕಾಪಾಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts