More

    ಕುಸುಮಗಳ ಪರಿಮಳಕ್ಕೆ ಪರವಶ

    ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

    ಭಾವವೆಂಬ ಹೂವು ಅರಳಿ… ಗಾನವೆಂಬ ಗಂಧ ಚೆಲ್ಲಿ… ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ… ಜಗವ ಕುಣಿಸಿ ತಣಿಸಲಿ…!

    ‘ಉಪಾಸನೆ’ ಚಲನಚಿತ್ರದ ಚಿ.ಉದಯಶಂಕರ್ ರಚನೆಯ ಈ ಹಾಡು ದಸರಾ ಫಲಪುಷ್ಪ ಪ್ರದರ್ಶನಕ್ಕೆ ಬಂದ ಹೂವಿನ ಪ್ರೇಮಿಗಳ ತನುಮನ ತಟ್ಟಿದಂತೆ ಭಾಸವಾಯಿತು. ಕುಸುಮಗಳ ಪರಿಮಳದಲ್ಲಿ ತೇಲಿ ಪರವಶವಾದ ಜನರಲ್ಲಿ ಅಡಗಿದ ಭಾವಗಳು ಹೂವಿನಂತೆ ಅರಳಿದವು.

    ನಗರದ ಹೃದಯ ಭಾಗದಲ್ಲಿರುವ ನಿಶಾದ್ ಬಾಗ್‌ನಲ್ಲಿ(ಕುಪ್ಪಣ್ಣ ಉದ್ಯಾನ) ಭಾನುವಾರ ಉದ್ಘಾಟನೆಗೊಂಡ ಫಲಪುಷ್ಪ ಪ್ರದರ್ಶನದಲ್ಲಿ ಮೇಳೈಸಿದ್ದ ಹೂವಿನ ಸುವಾಸನೆಗೆ ಮನಸೋತು ಸಹಸ್ರಾರು ಜನರು ಇಲ್ಲಿಗೆ ಲಗ್ಗೆ ಇಟ್ಟರು. ಇಲ್ಲಿರುವ ರಾಶಿ ರಾಶಿ ಸುಮದ ಅಂದವನ್ನು ಕಣ್ತುಂಬಿಕೊಂಡರು. ವರ್ಣರಂಜಿತ ಇವುಗಳ ಚೆಲುವು ಕಂಡೊಡನೆ ಅವರ ಮುಖದಲ್ಲಿ ಮಂದಹಾಸ ಹೊರಚಿಮ್ಮಿತು. ಈ ಭಾವಬುತ್ತಿಯನ್ನು ಫೋಟೋದಲ್ಲಿ ಸೆರೆಹಿಡಿದಿಟ್ಟುಕೊಂಡು ಸಂಭ್ರಮಿಸಿದರು.

    ಚಂದ್ರಯಾನದ ಮೇಲೆ ಮಂಜಿನ ಮಳೆ:


    ಇಲ್ಲಿರುವ ಗಾಜಿನ ಮನೆಯಲ್ಲಿ ಹೂವಿನಲ್ಲಿ ಅರಳಿರುವ ‘ಚಂದ್ರಯಾನ-3’ ವೀಕ್ಷಕರ ಕಣ್ಮನ ಸೆಳೆಯಿತು. ಇದುವೇ ಈ ಸಲದ ವಿಶೇಷ. ಕೆಂಪು, ಬಿಳಿ ಗುಲಾಬಿ, ಸೇವಂತಿ ಸೇರಿದಂತೆ ಬರೋಬ್ಬರಿ 2 ಲಕ್ಷ ಹೂವುಗಳನ್ನು ಬಳಸಿ ಅಂದಾಜು 24 ಅಡಿ ಎತ್ತರದ ಲಾಂಚಿಂಗ್ ರಾಕೆಟ್, ಲ್ಯಾಂಡರ್, ರೋವರ್ ಯಂತ್ರದ ತದ್ರೂಪಿ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಯಶಸ್ವಿಗೊಂಡ ಚಂದ್ರಯಾನ ಯೋಜನೆ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಛಾಪು ಮೂಡಿಸಿದ ದೇಶದ ವಿಜ್ಞಾನಿ, ಇಸ್ರೋ ಸಾಧನೆಯನ್ನು ಈ ರೀತಿ ಪರಿಚಯಿಸುವ ಮೂಲಕ ಅಭಿನಂದಿಸಲಾಗಿದೆ.
    ಆದರೆ, ಚಂದ್ರಯಾನದ ಮೇಲೆ ಮಂಜು ಕವಿದಿದೆ. ಆಶ್ಚರ್ಯ ಪಡಬೇಡಿ. ಇದು ಕೃತಕವಾಗಿ ನೀರು ಸಿಂಪಡಣೆ ಮೂಲಕ ಹೂವುಗಳು ತಾಜಾತನ, ತಂಪಿನ ಆಹ್ಲಾದಕರ ವಾತಾವರಣ ಸೃಷ್ಟಿಸುವಂತಹ ವ್ಯವಸ್ಥೆಯಾಗಿದೆ. ಇದರೊಂದಿಗೆ ಗಾಜಿನ ಮನೆ ಒಳಗಿನ ತಾಪಮಾನವನ್ನು ತಗ್ಗಿಸಲಾಗಿದೆ. ಚಂದ್ರಯಾನ, ಮಂಜಿನ ಮಳೆಯೊಂದಿಗೆ ಜನರು ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.

    ಸೌತೆಕಾಯಿ ಗುಡಿಸಲು:


    ಪುಷ್ಟಗಳೊಂದಿಗೆ ಸೌತೆಕಾಯಿ ಗುಡಿಸಲು ಮನೆ ಸಹ ವಿಶೇಷ. ಸೋರೆಕಾಯಿ, ಕುಂಬಳಕಾಯಿ, ಮಂಗಳೂರು ಸೌತೆಕಾಯಿ ಸೇರಿದಂತೆ ಈ ತಳಿಯ 3 ಟನ್ ತೂಕದಷ್ಟು ವಿವಿಧ ಕಾಯಿಗಳನ್ನು ಉಪಯೋಗಿಸಿಕೊಂಡು ನಿರ್ಮಿಸಿರುವ ಮನೆ ಆಕರ್ಷಣೀಯವಾಗಿದೆ.

    ‘ಗ್ಯಾರಂಟಿ’ ಘಮಲು:


    ಹೂವಿನ ದಂಡೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರತಿಕೃತಿಗಳು ಜನಾಕರ್ಷಣೆಯಾಗಿವೆ. ಕೆಎಸ್‌ಆರ್‌ಟಿಸಿಯ ಬಸ್, ಪಕ್ಕದಲ್ಲಿ ಮಹಿಳೆಯ ಮಾದರಿಯಲ್ಲಿ ‘ಶಕ್ತಿ’, ವಿದ್ಯುತ್ ಬಲ್ಬ್, ವಿದ್ಯುತ್ ಕಂಬದ ಪ್ರತಿಕೃತಿಯಲ್ಲಿ ‘ಗೃಹಜ್ಯೋತಿ’ ಮತ್ತು ಅಮಾನ್ಯಗೊಂಡಿರುವ 2000 ರೂ. ನೋಟ ಮಾದರಿಯಲ್ಲಿ ‘ಗೃಹಲಕ್ಷ್ಮಿ’ ಯೋಜನೆ ಅರಳಿದೆ.

    ಹೂವಿನ ಖಾಸಗಿ ದರ್ಬಾರ್:


    ಹಾಗೆಯೇ ಮುಂದೆ ಸಾಗಿದರೆ ವಿವಿಧ ಹೂವುಗಳಿಂದ ರೂಪುಗೊಂಡಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹ ದರ್ಶನವಾಗುತ್ತದೆ. 20 ಅಡಿ ಎತ್ತರದ ಈ ವಿಗ್ರಹ, ಗೋಪುರ ಮಾದರಿ ಮನದಲ್ಲಿ ಭಕ್ತಿಭಾವ ಮೂಡಿಸುತ್ತದೆ.
    ಅರಮನೆಯಲ್ಲಿ ದಸರಾ ಸಂದರ್ಭದಲ್ಲಿ ನಡೆಯುವ ರಾಜವಂಶಸ್ಥರ ಖಾಸಗಿ ದರ್ಬಾರ್ ಮಾದರಿ ರಮಣೀಯವಾಗಿದೆ. ಸಿಂಹಾಸನ, ರಾಜ, ಸೈನಿಕರು, ಸಿಂಹ ಮಾದರಿಗಳು ಗತವೈಭವವನ್ನು ನೆನಪಿಸುತ್ತದೆ.

    ಇಲ್ಲಿಯೂ ಕ್ರಿಕೆಟ್ ಕಾವು:


    ಈಗ ಎಲ್ಲೆಡೆ ವಿಶ್ವಕಪ್ ಕ್ರಿಕೆಟ್‌ನ ಜ್ವರ ಏರುತ್ತಿದೆ. ಅದು ಪುಷ್ಪ ಪ್ರದರ್ಶನದಲ್ಲೂ ಕಾಣಲು ಸಿಗುತ್ತದೆ. ಕ್ರಿಕೆಟ್ ಬ್ಯಾಟ್, ಬಾಲು, ವಿಕೆಟ್, ಭಾರತ ದೇಶದ ನಕಾಶೆ ಇಲ್ಲಿ ಗರಿಬಿಟ್ಟಿದೆ. ಇದರೊಂದಿಗೆ ಬೃಹತ್ ಗಾತ್ರದ ಫುಟ್‌ಬಾಲ್, ಹಾಕಿ ಬ್ಯಾಟ್, ಬಾಲ್, ಬ್ಯಾಡ್ಮಿಂಟನ್ ಆಟದ ರಾಕೆಟ್, ಕಾಕ್ ಮಾದರಿಗಳು ಕ್ರೀಡಾಪ್ರಿಯರ ಆಕರ್ಷಿಸುತ್ತಿದೆ.

    ಅ, ಆ, ಇ, ಈ… ಶಾಲೆ ಕಟ್ಟಡ:


    ಕರ್ನಾಟಕ ರಾಜ್ಯ ರಚನೆಯ ಸುವರ್ಣ ಮಹೋತ್ಸವ ಅಂಗವಾಗಿ ರಾಜ್ಯದ ಶ್ರೀಮಂತ ಪರಂಪರೆ, ಸ್ಮಾರಕಗಳ ಮಾದರಿಗಳನ್ನು ವಿವಿಧ ಜಾತಿಯ ಹೂವುಗಳಲ್ಲಿ ನಿರ್ಮಿಸಲಾಗಿದೆ. ಅ, ಆ, ಇ, ಈ ಅಕ್ಷರದೊಂದಿಗೆ ಸರ್ಕಾರಿ ಶಾಲೆ, ಶಿವಲಿಂಗ, ಮಂಟಪದ ಒಳಗೆ ಗಣೇಶ ವಿಗ್ರಹ, ಜೀಪು ಮಾದರಿ ಮನಸೆಳೆಯಿತು. ಇಲ್ಲಿಗೂ ಬಂದಿರುವ ಸಂವಿಧಾನ ಪೀಠಿಕೆ ಪ್ರಜೆಗಳಲ್ಲಿ ಅರಿವು ಜ್ಯೋತಿ ಮೂಡಿಸಿತು.

    6 ಲಕ್ಷ ಹೂವುಗಳ ಬಳಕೆ:

    ಕುಸುಮಗಳ ಪರಿಮಳಕ್ಕೆ ಪರವಶ


    ವಿವಿಧ ಮಾದರಿಗಳನ್ನು ರೂಪಿಸಲು 6 ಲಕ್ಷ ಹೂವುಗಳನ್ನು ಬಳಕೆ ಮಾಡಲಾಗಿದೆ. ಇದರಲ್ಲಿ 2 ಲಕ್ಷ ಹೂವುಗಳು ಚಂದ್ರಯಾನ ಯೋಜನೆ ಪ್ರತಿಕೃತಿ ತಯಾರಿಸಲು ವಿನಿಯೋಗಿಸಲಾಗಿದೆ. ವಿವಿಧ ಬಗೆಯ ಹೂವು ಕಣ್ಣು ಕುಕ್ಕುತ್ತವೆ. ಇಲ್ಲಿ 60 ಸಾವಿರ ಕುಸುಮ ಗಿಡಗಳನ್ನು ಬೆಳೆಸಲಾಗಿದೆ. ಇಡೀ ಕುಪ್ಪಣ್ಣ ಉದ್ಯಾನವನ್ನೇ ಹೂವುಗಳಿಂದ ಅಲಂಕರಿಸಲಾಗಿದೆ. ಮುಖ್ಯವಾಗಿ ಮಾರಿಗೋಲ್ಡ್, ಫ್ರೆಂಚ್ ಮಾರಿಗೋಲ್ಡ್, ಜಿನಿಯಾ, ಡಾಲಿಯಾ ಸೇರಿದಂತೆ ಹಲವು ಪ್ರಭೇದದ ಹೂವಿನ ಗಿಡಗಳಿವೆ. ಪೂನಾದಿಂದ ವಿಶೇಷ ಅಲಂಕಾರಿಕ ಗಿಡಗಳನ್ನೂ ತರಲಾಗುತ್ತಿದೆ. ಸಾವಯವ ಕೃಷಿ ಮಳಿಗೆಗಳು, ಕೃಷಿ ಸಂಬಂಧಿಸಿದ ಮಳಿಗೆಗಳು, ರೈತರಿಗೆ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯ ನಿರ್ದೇಶಕಿ ಸುವೇದಾ ‘ವಿಜಯವಾಣಿ’ಗೆ ತಿಳಿಸಿದರು


    3 ಕಡೆ ಗೇಟ್:


    ಈ ಸಲ ಮೂರು ಕಡೆ ಪ್ರವೇಶ ಅವಕಾಶ ಕಲ್ಪಿಸಿ ಜನದಟ್ಟಣೆ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ನಗರ ಪೊಲೀಸ್ ಕಚೇರಿ ಪಕ್ಕದಲ್ಲಿರುವ ಗೇಟ್ ಆವರಣದಲ್ಲಿ ಮಾತ್ರ ವಾಹನಗಳನ್ನು ನಿಲುಗಡೆ ಮಾಡಬಹುದು. ಉಳಿದ ಎರಡು ಕಡೆ ಈ ಅವಕಾಶವಿಲ್ಲ. ವಯಸ್ಕರಿಗೆ 40 ರೂ., ಮಕ್ಕಳಿಗೆ 20 ರೂ. ಪ್ರವೇಶ ದರ ನಿಗದಿಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts