More

    ಆರ್ಥಿಕ ಸಂಕಷ್ಟದಲ್ಲಿ ಜಲಮಂಡಳಿ

    ಬೆಳಗಾವಿ: ಲಾಕ್‌ಡೌನ್ ಪರಿಣಾಮದಿಂದಾಗಿ ಬೆಳಗಾವಿ ಜಲಮಂಡಳಿಗೆ ನೀರಿನ ಶುಲ್ಕ ಸಂಗ್ರಹದಲ್ಲಿ ಹಿನ್ನೆಡೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಕೇವಲ 1.14 ಲಕ್ಷ ರೂ. ಸಂಗ್ರಹವಾಗಿದ್ದು, ಜಲಮಂಡಳಿಗೆ ಸದ್ಯ ಆರ್ಥಿಕ ಸಂಕಷ್ಟ ಎದುರಾಗಿದೆ.

    ಪ್ರತಿ ತಿಂಗಳು 1.53 ಕೋಟಿ ರೂಪಾಯಿ ನೀರಿನ ಶುಲ್ಕ ಸಂಗ್ರಹವಾಗುತ್ತಿತ್ತು. ಆದರೆ, ಕೋವಿಡ್-19 ಬಂದ ಬಳಿಕ ಬಹುತೇಕ ಕರ್ನಾಟಕ ಒನ್ ಕೇಂದ್ರಗಳು ನಿಯಮಿತವಾಗಿ ತೆರೆಯದೇ ಇರುವ ಕಾರಣದಿಂದ ನೀರಿನ ಶುಲ್ಕ ಸಂಗ್ರಹಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

    ಉತ್ತರದಿಂದ ಸೊನ್ನೆ: ನಗರದಲ್ಲಿ ಉತ್ತರ ಉಪವಿಭಾಗ ಹಾಗೂ ದಕ್ಷಿಣ ಉಪವಿಭಾಗವನ್ನೊಳಗೊಂಡಂತೆ 10 ವಾರ್ಡ್‌ಗಳಲ್ಲಿ 11,048 ಕಡೆಗಳಲ್ಲಿ 24ಗಿ7 ನಿರಂತರ ನೀರು ಸರಬರಾಜು ಸಂಪರ್ಕಗಳಿವೆ. ಈ ಗ್ರಾಹಕರಿಂದ ಪ್ರತಿ ತಿಂಗಳು 43 ಲಕ್ಷ ರೂ. ಶುಲ್ಕ ಸಂಗ್ರಹವಾಗುತ್ತಿತ್ತು. ಆದರೆ, ಏಪ್ರಿಲ್‌ನಲ್ಲಿ ಶುಲ್ಕ ಸಂಗ್ರಹವಾಗಿಲ್ಲ. ದಕ್ಷಿಣ ಉಪವಿಭಾಗ ವ್ಯಾಪ್ತಿಯ ಮಧ್ಯಂತರ ನೀರು ಸರಬರಾಜು ವಲಯದ 24 ವಾರ್ಡ್‌ಗಳಲ್ಲಿ 23,938 ನೀರಿನ ಸಂಪರ್ಕಗಳಿವೆ. ಈ ಗ್ರಾಹಕರಿಂದ ಪ್ರತಿ ತಿಂಗಳು ಅಂದಾಜು 40 ಲಕ್ಷ ರೂ. ಶುಲ್ಕ ಬರುತ್ತಿತ್ತು. ಲಾಕ್‌ಡೌನ್ ಹೊಡೆತದಿಂದಾಗಿ ಏಪ್ರಿಲ್‌ನಲ್ಲಿ ಕೇವಲ 22 ಸಾವಿರ ರೂ. ಕರ ಮಾತ್ರ ಸಂಗ್ರಹವಾಗಿದೆ.

    ಉತ್ತರ ಉಪವಿಭಾಗ ವ್ಯಾಪ್ತಿಯ ಮಧ್ಯಂತರ ನೀರು ಸರಬರಾಜು ವಲಯದ 24 ವಾರ್ಡ್‌ಗಳಲ್ಲಿ 35 ಸಾವಿರ ನಳದ ಸಂಪರ್ಕಗಳಿವೆ. ಈ ಗ್ರಾಹಕರಿಂದ ಪ್ರತಿ ತಿಂಗಳು 60 ರಿಂದ 70 ಲಕ್ಷ ರೂ. ಶುಲ್ಕ ಸಂಗ್ರಹವಾಗುತ್ತಿತ್ತು. ಏಪ್ರಿಲ್‌ನಲ್ಲಿ ಕೇವಲ 92 ಸಾವಿರ ರೂ. ಶುಲ್ಕ ವಸೂಲಿ ಆಗಿದೆ. ಜಲಮಂಡಳಿಗೆ 1,51,86,000 ರೂ. ಕೊರತೆಯಾಗಿದೆ.

    ಬಾಕಿಗೂ ಇತಿಹಾಸ: ನಾನಾ ಕಾರಣಗಳಿಂದಾಗಿ ಜಲಮಂಡಳಿಗೆ ಭರಿಸಬೇಕಾಗಿದ್ದ ನೀರಿನ ಶುಲ್ಕ ಬಾಕಿ ಇದೆ. 2006ರಿಂದ ಇಲ್ಲಿಯವರೆಗೆ ಉತ್ತರ ಉಪವಿಭಾಗ, ದಕ್ಷಿಣ ಉಪವಿಭಾಗದ ಮಧ್ಯಂತರ ನೀರು ಸರಬರಾಜು ಹಾಗೂ 24ಗಿ7 ನಿರಂತರ ನೀರು ಸರಬರಾಜು ವಲಯದಿಂದ ಸುಮಾರು 21.01 ಕೋಟಿ ರೂ. ಶುಲ್ಕ ಬಾಕಿ ಇದೆ. 2006ಕ್ಕಿಂತ ಮೊದಲು ನೀರು ಸರಬರಾಜು ನಿರ್ವಹಣೆಯನ್ನು ಮಹಾನಗರ ಪಾಲಿಕೆ ವಹಿಸಿಕೊಂಡಿತ್ತು. ಆ ಅವಧಿಯಲ್ಲಿನ ಕೋಟ್ಯಂತರ ರೂ. ಶುಲ್ಕ ಬಾಕಿ ಇದೆ.

    ಸಂಗ್ರಹವಾಗಿಲ್ಲ ನಿರೀಕ್ಷಿತ ಟ್ಯಾಕ್ಸ್

    ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರದ ಮೂಲಕ ಪ್ರತಿ ತಿಂಗಳು ಜಲಮಂಡಳಿಗೆ ನೀರಿನ ಶುಲ್ಕ ಸಂದಾಯವಾಗುತ್ತಿತ್ತು. ಲಾಕ್‌ಡೌನ್‌ನಿಂದಾಗಿ ಈ ಕೇಂದ್ರ ದಿಂದ ನಿರೀಕ್ಷಿತ ಮಟ್ಟದಲ್ಲಿ ಶುಲ್ಕ ಸಂಗ್ರಹವಾಗಿಲ್ಲ. ಜತೆಗೆ ಬ್ಯಾಂಕ್ ಮೂಲಕ ನೀರಿನ ಕರ ಕಟ್ಟುವವರ ಸಂಖ್ಯೆಯೂ ಏಪ್ರಿಲ್ ತಿಂಗಳಲ್ಲಿ ಕಡಿಮೆಯಾಗಿದ್ದರಿಂದ ಶುಲ್ಕ ಸಂಗ್ರಹ ಹಿನ್ನಡೆಗೆ ಕಾರಣವಾಗಿದೆ. ಜಲಮಂಡಳಿ 24ಗಿ7 ನಿರಂತರ ನೀರು ಸರಬರಾಜು ವಲಯದ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಶುಲ್ಕ ಭರಿಸಲು ಅವಕಾಶ ಕಲ್ಪಿಸಿದ್ದರೂ ಪರಿಣಾಮಕಾರಿಯಾಗಿರಲಿಲ್ಲ. ಹೀಗಾಗಿ ಏಪ್ರಿಲ್‌ನಲ್ಲಿ ಈ ವಲಯದಿಂದ ಒಂದು ಪೈಸೆಯೂ ಶುಲ್ಕ ಆಕರಣೆ ಆಗಿಲ್ಲ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಶುಲ್ಕ ಕಟ್ಟುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಆನ್‌ಲೈನ್ ಮೂಲಕ ನಿರೀಕ್ಷಿತ ಮಟ್ಟದಲ್ಲಿ ಶುಲ್ಕ ಆಕರಣೆ ಆಗಿಲ್ಲ. ಹೀಗಾಗಿ ಏಪ್ರಿಲ್‌ನಲ್ಲಿ ಶುಲ್ಕ ಪಾವತಿ ಕಡಿಮೆ ಆಗಿದೆ. ನೀರಿನ ಶುಲ್ಕ ಕಟ್ಟಿಸಿಕೊಳ್ಳುವುದಕ್ಕೆ ಈಗಾಗಲೇ ನೋಟಿಫಿಕೇಷನ್ ಹೊರಡಿಸಿದ್ದೇವೆ.
    | ವಿ.ಎಲ್. ಚಂದ್ರಪ್ಪ ಕಾರ್ಯಪಾಲಕ ಅಭಿಯಂತ, ಜಲಮಂಡಳಿ, ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts