More

    ಮುಖ್ಯಮಂತ್ರಿಗಳ ತವರಿನಲ್ಲೇ ಗ್ರಂಥಾಲಯಗಳಿಗೂ ಗ್ರಹಣ!

    ಅವಿನಾಶ್ ಜೈನಹಳ್ಳಿ ಮೈಸೂರು
    ಜಿಲ್ಲೆಯ ನೂತನ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೇಲ್ದರ್ಜೆಗೆ ಏರಿಸಲಾಗಿರುವ 9 ಗ್ರಂಥಾಲಯಗಳ ಅಭಿವೃದ್ಧಿಗೆ ಸರ್ಕಾರ ಯಾವುದೇ ಅನುದಾನ ನೀಡದಿರುವುದು ಸಾಹಿತ್ಯ ಆಸಕ್ತರು ಹಾಗೂ ಪುಸ್ತಕ ಪ್ರೇವಿಗಳಲ್ಲಿ ಬೇಸರ ಮೂಡಿಸಿದೆ.


    ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಹಿನಕಲ್, ಬೆಳವಾಡಿ ಹಾಗೂ ಕೂರ್ಗಳ್ಳಿ ಗ್ರಂಥಾಲಯ, ಬೋಗಾದಿ ಪಟ್ಟಣ ಪಂಚಾಯಿತಿಯ ಬೋಗಾದಿ ಗ್ರಂಥಾಲಯ, ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಶ್ರೀರಾಂಪುರ ಗ್ರಂಥಾಲಯ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ರಮ್ಮನಹಳ್ಳಿ ಹಾಗೂ ಹಂಚ್ಯಾ ಗ್ರಂಥಾಲಯ, ಕಡಕೊಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಡಕೊಳ ಹಾಗೂ ಹೊಸಹುಂಡಿ ಗ್ರಂಥಾಲಯಗಳನ್ನು ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆಗೆ ಸೇರ್ಪಡಿಸಲಾಗಿದೆ.

    ಆ ಮೂಲಕ ಸೇವಾ ಗ್ರಂಥಾಲಯಗಳಾಗಿದ್ದ ಇವುಗಳನ್ನು ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖಾ ಗ್ರಂಥಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇವುಗಳ ಜತೆಗೆ ತಿ.ನರಸೀಪುರದ ಬೈರಾಪುರ ಹಾಗೂ ಆಲಗೂಡಿನ ಸೇವಾ ಕೇಂದ್ರಗಳನ್ನು ಶಾಖಾ ಗ್ರಂಥಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಗ್ರಂಥಾಲಯಗಳ ನಿರ್ವಹಣೆ ಮತ್ತು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ಯಾವುದೇ ಅನುದಾನ ನೀಡದೆ ಕಡೆಗಣಿಸಿದ್ದು, ಪುಸ್ತಕ ಪ್ರೇಮಿಗಳ ಕೆಂಗಣ್ಣಿಗೆ ಕಾರಣವಾಗಿದೆ. ತಮ್ಮ ಸಮೀಪದ ಗ್ರಂಥಾಲಯಗಳು, ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖಾ ಗ್ರಂಥಾಲಯಗಳನ್ನಾಗಿ ಮೇಲ್ದರ್ಜೆಗೆ ಏರಿದ್ದರಿಂದ ನೆಚ್ಚಿನ ಸಾಹಿತಿಗಳ ಪುಸ್ತಕಗಳನ್ನು ಸಮೀಪದ ಗ್ರಂಥಾಲಯಗಳಲ್ಲೇ ಓದುವ ಅವಕಾಶ ಸಿಗುತ್ತದೆ ಎಂಬ ಪುಸ್ತಕ ಪ್ರೇಮಿಗಳ ಬಯಕೆಗೆ ಕೊಂಚ ಹಿನ್ನೆಡೆಯಾಗಿದೆ.

    ಆಯಾ ಸ್ಥಳೀಯ ಸಂಸ್ಥೆಗೆ ಜವಾಬ್ದಾರಿ

    ಸೇವಾ ಕೇಂದ್ರ ಗ್ರಂಥಾಲಯಗಳಲ್ಲಿ ಕಡಿಮೆ ಪುಸ್ತಕಗಳು ಇವೆ. ಜತೆಗೆ, ಕೆಲವೇ ದಿನಪತ್ರಿಕೆಗಳು ಸಿಗಲಿವೆ. ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆಯ ಶಾಖಾ ಗ್ರಂಥಾಲಯವಾಗಿ ಪರಿವರ್ತನೆಯಾದ ಬಳಿಕ ಕನ್ನಡ ಭಾಷೆಯ ಎಲ್ಲ ದಿನಪತ್ರಿಕೆಗಳ ಜತೆಗೆ ಕೆಲ ಇಂಗ್ಲಿಷ್, ಹಿಂದಿ ದಿನಪತ್ರಿಕೆಗಳು, ವಾರಪತ್ರಿಕೆ, ಮಾಸಪತ್ರಿಕೆ, ತ್ರೈಮಾಸಿಕ, ವಿಶೇಷ ಸಂಚಿಕೆ, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕ ಸೇರಿದಂತೆ ಎಲ್ಲ ರೀತಿಯ ಮಾಸಿಕ ಪತ್ರಿಕೆಗಳು ಸೇರಿದಂತೆ ನಗರ ಕೇಂದ್ರ ಗ್ರಂಥಾಲಯದ ಮಾದರಿಯಲ್ಲೇ ಎಲ್ಲ ಪುಸ್ತಕಗಳು ಓದುಗರಿಗೆ ಲಭ್ಯವಾಗಬೇಕಿತ್ತು. ಆದರೆ, ಅನುದಾನದ ಕೊರತೆಯಿಂದಾಗಿ ಎಲ್ಲ ಪುಸ್ತಕ ಮತ್ತು ಎಲ್ಲ ರೀತಿಯ ವಾರಪತ್ರಿಕೆ, ಮಾಸಪತ್ರಿಕೆ, ತ್ರೈಮಾಸಿಕ, ವಿಶೇಷ ಸಂಚಿಕೆ, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಓದುಗರಿಗೆ ನೀಡಲು ಸಾಧ್ಯವಾಗಿಲ್ಲ. ಆದರೆ, ಈ ಸಂಬಂಧ ಜಿಲ್ಲಾಧಿಕಾರಿ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಆಯಾ ಸ್ಥಳೀಯ ಸಂಸ್ಥೆಗಳೇ ಗ್ರಂಥಾಲಯಕ್ಕೆ ಅನುದಾನ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.


    ಹಾಗಾಗಿ, ಮೇಲ್ದರ್ಜೆಗೆ ಏರಿಸಿರುವ ಎಲ್ಲ ಗ್ರಂಥಾಲಯಗಳಲ್ಲಿ ಕನ್ನಡದ ಪ್ರಮುಖ ಸಾಹಿತಿಗಳ ಪ್ರಮುಖ ಪುಸ್ತಗಳು ಓದುಗರಿಗೆ ದೊರೆಯಲಿವೆ. ಆ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಹೊಸ ಕಟ್ಟಡಗಳು ನಿರ್ಮಾಣವಾಗಲಿವೆ. ಜತೆಗೆ, ಮೈಸೂರು ನಗರದ ಶಾಖಾ ಗ್ರಂಥಾಲಯಗಳಲ್ಲಿ ಲಭ್ಯವಾಗುವ ಎಲ್ಲ ಸೌಲಭ್ಯಗಳು ಓದುಗರಿಗೆ ದೊರೆಯಲಿವೆ. ಡಿಜಿಟಲ್ ಸೌಲಭ್ಯವೂ ಲಭ್ಯವಾಗಲಿದೆ. ಇನ್ನು ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಹೂಟಗಳ್ಳಿ ಗ್ರಂಥಾಲಯಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಉಳಿದ ಮೂರು ಗ್ರಂಥಾಲಯಗಳಿಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳ ಹುಡುಕಾಟ ನಡೆಯುತ್ತಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಬಿ.ಮಂಜುನಾಥ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಮತ್ತೆ ನಗರ ಗ್ರಂಥಾಲಯ ವ್ಯಾಪ್ತಿಗೆ

    ಜಿಲ್ಲೆಯಲ್ಲಿ ನಗರದ 33 ಗ್ರಂಥಾಲಯ ಸೇರಿದಂತೆ ಒಟ್ಟು 269 ಗ್ರಂಥಾಲಯಗಳಿದ್ದು, ಈ ಪೈಕಿ ಗ್ರಾಮೀಣ ಭಾಗದ 236 ಸೇವಾ ಗ್ರಂಥಾಲಯಗಳನ್ನು 2019ರಲ್ಲಿ ನಗರ ಕೇಂದ್ರ ಗ್ರಂಥಾಲಯ ಇಲಾಖೆಯಿಂದ ಗ್ರಾಮೀಣ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಹಸ್ತಾಂತರಿಸಲಾಗಿತ್ತು. ಈಗ ಮತ್ತೆ ಗ್ರಾಮೀಣ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ 11 ಗ್ರಂಥಾಲಯಗಳನ್ನು ನಗರ ಕೇಂದ್ರ ಗ್ರಂಥಾಲಯ ವ್ಯಾಪ್ತಿಗೆ ಸೇರಿಸಲಾಗಿದೆ.

    ಸಾಲಿಗ್ರಾಮದಲ್ಲಿ ಸೇವಾ ಕೇಂದ್ರ ಗ್ರಂಥಾಲಯ


    ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲೂ ಜಿಲ್ಲಾ ಕೇಂದ್ರ ಶಾಖಾ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ತಿ.ನರಸೀಪುರ ತಾಲೂಕಿನ ಬನ್ನೂರು ತಾಲೂಕು ಕೇಂದ್ರವಾಗದಿದ್ದರೂ ಅಲ್ಲಿ ನಗರದ ಕೇಂದ್ರ ಶಾಖಾ ಗ್ರಂಥಾಲಯವಿದೆ. ಆದರೆ, ಇತ್ತೀಚೆಗೆ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಸಾಲಿಗ್ರಾಮದಲ್ಲಿ ಇನ್ನೂ ಸೇವಾ ಕೇಂದ್ರ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಅದನ್ನು ಜಿಲ್ಲಾ ಕೇಂದ್ರ ಶಾಖಾ ಗ್ರಂಥಾಲಯವಾಗಿ ಮೇಲ್ದರ್ಜೆಗೆ ಏರಿಸುವ ಕೆಲಸ ಆದಷ್ಟು ಬೇಗ ನಡೆಯಬೇಕಿದೆ.


    ಇನ್ನು ಪಿರಿಯಾಪಟ್ಟಣ ತಾಲೂಕಿನ ಡೋಂಗ್ರಿ ಗೆರಾಸಿಯ, ಹುಣಸೂರಿನ ಸರಸ್ವತಿಪುರ, ಮೈಸೂರಿನ ಏಕಲವ್ಯನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಚಾರ ಗ್ರಂಥಾಲಯಗಳು, ನಂಜನಗೂಡು ಪೌರಕಾರ್ಮಿಕರ ಕಾಲನಿ, ಹುಣಸೂರು ಪೌರಕಾರ್ಮಿಕರ ಕಾಲನಿ, ಮೈಸೂರು ನೆಲ್ಲೂರ್‌ಶೆಡ್‌ನಲ್ಲಿರುವ ಕೊಳಚೆ ಪ್ರದೇಶದ ಗ್ರಂಥಾಲಯಗಳು ಹಾಗೂ ನಂಜನಗೂಡು, ಕೆ.ಆರ್.ನಗರದ ಜೈಲು ಸೇವಾ ಕೇಂದ್ರಗಳು ನಗರ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

    ಜಿಲ್ಲೆಯ ಒಂದು ನಗರಸಭೆ ಹಾಗೂ ನಾಲ್ಕು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯ 9 ಸೇವಾ ಕೇಂದ್ರ ಗ್ರಂಥಾಲಯಗಳನ್ನು ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖಾ ಗ್ರಂಥಾಲಯಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಅವುಗಳ ನಿರ್ವಹಣೆ, ಹೊಸ ಕಟ್ಟಡ ನಿರ್ಮಾಣ, ಪುಸ್ತಕ ಖರೀದಿಗೆ ಅನುದಾನ ಕೊರತೆ ಇದೆ. ಈ ಸಂಬಂಧ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ಜಿಲ್ಲಾಧಿಕಾರಿಗಳು ಇತ್ತೀಚೆಗೆ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿದ್ದು, ಆಯಾ ಸ್ಥಳೀಯ ಸಂಸ್ಥೆಗಳೇ ತಮ್ಮ ವ್ಯಾಪ್ತಿಯ ಗ್ರಂಥಾಲಯಕ್ಕೆ ಅನುದಾನ ನೀಡಬೇಕು ಎಂದು ತಿಳಿಸಿದ್ದಾರೆ.
    ಬಿ.ಮಂಜುನಾಥ್ ಉಪನಿರ್ದೇಶಕ, ಸಾರ್ವಜನಿಕ ಗ್ರಂಥಾಲಯ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts