More

    ಕಲಗಾರು ಚೆಕ್ ಡ್ಯಾಂ ಯೋಜನೆಗೆ ಗ್ರಹಣ

    ರಾಜೇಂದ್ರ ಶಿಂಗನಮನೆ ಶಿರಸಿ

    ತಾಲೂಕಿನ ಕಲಗಾರು ಗ್ರಾಮದಲ್ಲಿ ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶದಿಂದ ಮಂಜೂರಾದ 1.5 ಕೋಟಿ ರೂಪಾಯಿ ವೆಚ್ಚದ ಚೆಕ್ ಡ್ಯಾಂ ಯೋಜನೆಯೊಂದು ಮೂರು ವರ್ಷ ಕಳೆದರೂ ಅನುಷ್ಠಾನಗೊಂಡಿಲ್ಲ. ಇದರಿಂದ ನೂರಾರು ಎಕರೆ ಕೃಷಿ ಭೂಮಿ ಬಂಜರಾಗುತ್ತಿದೆ.

    ತಾಲೂಕಿನ ಕಲಗಾರು ಗ್ರಾಮದ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ವಿುಸಿ ಬಲದಂಡೆ ಕಾಲುವೆ ಮೂಲಕ 115 ಎಕರೆಗೆ ನೀರೊದಗಿಸುವ ಯೋಜನೆ 2018-19ರಲ್ಲಿ ಅನುಷ್ಠಾನಗೊಂಡು ಕಾಮಗಾರಿಗೆ 1.5 ಕೋಟಿ ರೂ. ಮಂಜೂರಾಗಿತ್ತು. ಆದರೆ, ಈವರೆಗೂ ಕೆಲಸ ಆರಂಭವಾಗಿಲ್ಲ.

    ಇಲಾಖೆಯಿಂದ ವಿಳಂಬ: ಸಣ್ಣ ನೀರಾವರಿ ಇಲಾಖೆಯಿಂದ ಈ ಕಾಮಗಾರಿಗೆ ಮಂಜೂರಾತಿ ದೊರಕಿದೆ. ವರ್ಷದ ಎಲ್ಲ ಕಾಲದಲ್ಲೂ ಹರಿಯಬಲ್ಲ ಹಳ್ಳಕ್ಕೆ 22.80 ಮೀ. ಉದ್ದದ ತಡೆಗೋಡೆ ನಿರ್ವಿುಸಿ, ಕಬ್ಬಿಣದ ಗೇಟ್ ಅಳವಡಿಸುವ ಯೋಜನೆ ಇದಾಗಿದೆ. ಬೇಸಿಗೆಯಲ್ಲೂ ಹಳ್ಳದಲ್ಲಿ 2 ಮೀ.ನಷ್ಟು ಎತ್ತರದವರೆಗೆ ನೀರು ಸಂಗ್ರಹಗೊಂಡು ಚೆಕ್ ಡ್ಯಾಂ ಬಲಭಾಗದಿಂದ 3 ಕಿ.ಮೀ. ಉದ್ದದ ಸ್ವಾಭಾವಿಕ ಕಾಲುವೆ ಮೂಲಕ ಹರಿಸಲು ಅನುಕೂಲವಾಗುವಂತೆ ನೀಲಿನಕ್ಷೆ ಸಿದ್ಧವಾಗಿತ್ತು. ಸಮೀಪದ ಅಡಕೆ ತೋಟಕ್ಕೆ ಹಾನಿಯಾಗದಂತೆ ಈ ಕಾಲುವೆಗೆ ಆರಂಭದ 800 ಮೀ.ನಷ್ಟು ಕಾಂಕ್ರೀಟ್ ಅಳವಡಿಸುವ ಅಂಶವನ್ನೂ ಸೇರಿಸಿಕೊಳ್ಳಲಾಗಿತ್ತು. ಬ್ರಿಟಿಷ್ ಕಾಲದಿಂದಲೇ ಹಳ್ಳಕ್ಕೆ ಇದ್ದ ಒಡ್ಡನ್ನು ಹದಿನೈದು ವರ್ಷಗಳ ಹಿಂದೆ ಮರು ಸ್ಥಾಪಿಸಲಾಗಿತ್ತು. ಆದರೆ, ಅದು ಸಂಪೂರ್ಣ ಹಾಳಾದ್ದರಿಂದ ಹೊಸ ಕಾಮಗಾರಿ ನಡೆಸುವುದು ಅನಿವಾರ್ಯವಾಗಿದ್ದು, ಇದೇ ಸ್ಥಳದಲ್ಲಿ ಕಾಮಗಾರಿ ನಡೆಯಬೇಕಿತ್ತು. ಆದರೆ, ಇಲಾಖೆಯ ವಿಳಂಬ ನೀತಿಯಿಂದ ಕಾಮಗಾರಿಗೆ ತಡೆ ಬಿದ್ದಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

    ಅನುಮತಿ ಸಿಕ್ಕಿಲ್ಲ: ಕಾಮಗಾರಿಗೆ ಮಂಜೂರಾತಿ ಸಿಕ್ಕ ಬಳಿಕ ಅಂದಾಜು ಪಟ್ಟಿ ಸಿದ್ಧಪಡಿಸಿ ಯೋಜನೆಗೆ ಬೇಕಿರುವ ಅನುದಾನದ ಬಗ್ಗೆ ವಿಜಯಪುರ ವಿಭಾಗದ ಮುಖ್ಯ ಇಂಜಿನಿಯರ್​ಗೆ ಇಲ್ಲಿನ ಸಣ್ಣ ನೀರಾವರಿ ಇಲಾಖೆ ವತಿಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಅಲ್ಲಿಂದ ಅನುಮತಿ ಸಿಕ್ಕ ಬಳಿಕ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ. ಇವೆಲ್ಲ ಪ್ರಕ್ರಿಯೆ 2020ರ ಮಾರ್ಚ್​ನಲ್ಲಿ ಪೂರ್ಣಗೊಂಡಿದೆ. ಆದರೆ, ಕರೊನಾ ಕಾರಣಕ್ಕೆ ಆರ್ಥಿಕ ಇಲಾಖೆ ಇನ್ನೂ ಅನುಮತಿ ನೀಡಿಲ್ಲ. ಕಾಮಗಾರಿ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಳಿಸಲಾಗಿದೆ. ಯೋಜನೆ ಅಂದಾಜು ಮೊತ್ತದ ಶೇ. 18ರಷ್ಟು ಕಡಿಮೆ ಬಿಡ್ ಮಾಡಿದ್ದ ಕುಮಟಾದ ಗುತ್ತಿಗೆದಾರರೊಬ್ಬರಿಗೆ ಕೆಲಸ ನೀಡಲು ನಿರ್ಧರಿಸಲಾಗಿತ್ತು. ಅವರು ಇನ್ನೂ ವ್ಯತ್ಯಾಸದ ಮೊತ್ತವನ್ನು ನಿಯಮಾನುಸಾರ ಪಾವತಿಸಿಲ್ಲ ಎಂಬುದು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

    ಮಳೆಗಾಲದ ನಾಲ್ಕು ತಿಂಗಳು ಹೊರತುಪಡಿಸಿದರೆ ಭತ್ತದ ಗದ್ದೆಗೆ ನೀರು ಸಿಗುತ್ತಿರಲಿಲ್ಲ. ಅವಿರತ ಪ್ರಯತ್ನದ ಫಲವಾಗಿ ಚೆಕ್ ಡ್ಯಾಂ ನಿರ್ವಣದ ಯೋಜನೆ ಮಂಜೂರಾಯಿತು. ಆದರೆ, ಎರಡು ವರ್ಷವಾದರೂ ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಆರಂಭಿಸಿಲ್ಲ.ನೂರಾರು ರೈತರಿಗೆ ಅನುಕೂಲವಾಗಬೇಕಿದ್ದ ಕೆಲಸ ಆರಂಭಿಸದೆ ವಿಳಂಬ ನೀತಿ ಅನುಸರಿಸಲಾಗಿದೆ. ಹೀಗಾಗಿ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.

    | ರವಿ ಹೆಗಡೆ ಹಳದೋಟ

    ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ

    ಆರ್ಥಿಕ ಇಲಾಖೆ ಅನುಮತಿ ನೀಡಿದರೆ ಕಾಮಗಾರಿ ಆರಂಭಕ್ಕೆ ಬೇಕಾದ ಪ್ರಕ್ರಿಯೆ ಬೇಗನೆ ಪೂರ್ಣಗೊಳಿಸಲಾಗುವುದು

    | ವಿಕಾಸ ನಾಯ್ಕ,

    ಕಿರಿಯ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts