More

    ಪ್ರತಿಧ್ವನಿಸಿದ ನೀರು, ವಿದ್ಯುತ್ ಸಮಸ್ಯೆ

    ಹನೂರು: ಗ್ರಾಮಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೂರಿದೆ. ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಆರೋಗ್ಯ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ಕೆರೆ ಕಟ್ಟೆಗಳು ಬರಿದಾಗಿವೆ. ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇತ್ತ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್ ಸೇವೆ ಅಷ್ಟಕ್ಕಷ್ಟೇ !
    ಇದು ಹನೂರಿನ ಡಾ.ಬಿ.ಅರ್ ಅಂಬೇಡ್ಕರ್ ಸಮುದಾಯದ ಭವನದಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ಧ ಕುಂದು ಕೊರತೆ ಸಭೆಯಲ್ಲಿ ಪ್ರತಿಧ್ವನಿಸಿದ ಪ್ರಮುಖ ಸಮಸ್ಯೆಗಳು.
    ಈ ವೇಳೆ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಇದೀಗ ಬೇಸಿಗೆ ಶುರುವಾಗಿರುವುದರಿಂದ ಕೆರೆ ಕಟ್ಟೆಗಳು ಬರಿದಾಗಿದ್ದು, ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಮೇವಿನ ಸಮಸ್ಯೆ ತಲೆದೂರಿರುವುದು ಒಂದಡೆಯಾದರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವುದರ ಜತೆಗೆ ಗೋಶಾಲೆಯನ್ನು ತೆರೆದು ಜಾನುವಾರುಗಳಿಗೆ ಮೇವು ಪೂರೈಸಬೇಕು ಎಂದು ಒತ್ತಾಯಿಸಿದರು.

    ಇನ್ನು ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಜೀವಿಸಲು ತೊಂದರೆ ಪಡುವಂತಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ತಾಲೂಕು ರಚನೆಯಾಗಿ 6 ವರ್ಷ ಕಳೆದಿದೆ. ಆದರೆ ಸಂಬಂಧಪಟ್ಟ ಇಲಾಖೆಯ ಕಚೇರಿಗಳಿಲ್ಲ. ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮ ಆರೋಗ್ಯ ಸೇವೆ ಸಿಗುತ್ತಿಲ್ಲ. ಆದ್ದರಿಂದ ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸಬೇಕು. ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಗ್ರಾಮಗಳಿವೆ. ಆದ್ದರಿಂದ ಹೆಚ್ಚು ಕೆಎಸ್ಸಾರ್ಟಿಸಿ ಬಸ್ ಸೌಕರ್ಯ ಒದಗಿಸಬೇಕು. ಕೆರೆ, ಕಟ್ಟೆಗಳಿಗೆ ನದಿ ಮೂಲದಿಂದ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.

    ರಾಮಾಪುರದ ಗಿರೀಶ್ ಮಾತನಾಡಿ, ರಾಮಾಪುರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಾಗಿ ಹೆಚ್ಚು ಬಾಣಂತಿಯರು ಆಗಮಿಸುತ್ತಿದ್ದಾರೆ. ಆದರೆ ಮಹಿಳೆ ವೈದ್ಯರಿಲ್ಲ. ಇದರಿಂದ ಉತ್ತಮ ಆರೋಗ್ಯ ಸೇವೆ ಸಿಗುತ್ತಿಲ್ಲ. ಇದರಿಂದ ಮಹಿಳೆಯರು ತುಂಬಾ ತೊಂದರೆ ಪಡುವಂತಾಗಿದೆ. ಈ ಬಗ್ಗೆ ಕಳೆದ 3 ವರ್ಷದಿಂದಲೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರೆ, ಹೂಗ್ಯಂ ಗ್ರಾಮದ ವೆಂಕಟಾಚಲ ಮಾತನಾಡಿ, ಹೂಗ್ಯಂ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈವರೆಗೂ ಈಡೇರಿಲ್ಲ. ಜತೆಗೆ ಕೂಡಲೂರು ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯ, ಸಿಬ್ಬಂದಿ ಇರದ ಕಾರಣ ತುರ್ತು ಚಿಕಿತ್ಸೆಗೆ ತುಂಬಾ ತೊಂದರೆ ಪಡುವಂತಾಗಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ರೈಲ್ವೆ ಕಂಬಿ ಅಳವಡಿಸಿ
    ಪಿ.ಜಿ.ಪಾಳ್ಯ ಗ್ರಾಮದ ಮಹದೇವ ಎಂಬುವರು ಮಾತನಾಡಿ, ಪಿ.ಜಿ ಪಾಳ್ಯ ಗ್ರಾಪಂ ವ್ಯಾಪ್ತಿಯಲ್ಲಿನ ಚಿಕ್ಕರಂಗದೊಡ್ಡಿ ಕ್ರಾಸ್ ನಿಂದ ಹುತ್ತೂರು ಗ್ರಾಮದವರೆಗಿನ ಗ್ರಾಮಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಹನೂರಿನ ಶಾಲಾ, ಕಾಲೇಜಿಗೆ ತೆರಳುತ್ತಿದ್ದಾರೆ. ಆದರೆ ಬಸ್ ಸೌಕರ್ಯವಿಲ್ಲ. ಇತ್ತ ಅರಣ್ಯ ಪ್ರದೇಶದ ಅಂಚಿನಲ್ಲಿ ರೈಲ್ವೆ ಕಂಬಿ, ಆನೆ ಕಂದಕ ನಿರ್ಮಿಸದ ಪರಿಣಾಮ ಕಾಡು ಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಆದ್ದರಿಂದ ರೈಲ್ವೆ ಕಂಬಿಯನ್ನು ಅಳವಡಿಸಬೇಕು. ಈ ಭಾಗದಲ್ಲಿ ಪಶು ಆಸ್ಪತ್ರೆಯನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

    ಪ್ರತಿಭಟನೆ ಎಚ್ಚರಿಕೆ: ಕಾಂಚಳ್ಳಿ ಗ್ರಾಮದ ಬಸವರಾಜು ಮಾತನಾಡಿ, ಮಾ.25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಅಭ್ಯಾಸ ನಡೆಸಬೇಕಿದೆ. ಆದರೆ ರಾತ್ರಿ ವೇಳೆ ಈ ಭಾಗದಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಓದಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಪರೀಕ್ಷೆ ಮುಗಿಯುವ ತನಕ ರಾತ್ರಿ ವೇಳೆ ನಿರಂತರವಾಗಿ ವಿದ್ಯುತ್ ನೀಡಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿಯ ಮುಂದೆ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರೈತರ ನಡುವೆಯೇ ವಾಗ್ವಾದ: ಇದೇ ವೇಳೆ ಸಭೆಗೆ ನಮ್ಮ ಸಂಘಕ್ಕೆ ಯಾಕೆ ಆಹ್ವಾನ ನೀಡಿಲ್ಲ?. ನಮ್ಮ ಸಂಘದಲ್ಲಿರುವುದು ರೈತರಲ್ಲವೇ. ಇದಕ್ಕೆ ಮೊದಲು ಉತ್ತರ ನೀಡಬೇಕು. ಇಲ್ಲದಿದ್ದರೆ ಸಭೆಯನ್ನು ಬಹಿಷ್ಕರಿಸಲಾಗುವುದು ಎಂದು ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಅವರು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರು.

    ಈ ವೇಳೆ ಮತ್ತೊಂದು ಸಂಘದ ಪದಾಧಿಕಾರಿಯೊಬ್ಬರೂ ನಿಮ್ಮ ಸಂಘದ ಸದಸ್ಯರು ಸಭೆಯಲ್ಲಿದ್ದಾರೆ. ಅಂತಹದರಲ್ಲಿ ಈ ರೀತಿ ಹೇಳುತ್ತಿರುವುದು ಸರಿಯಲ್ಲ ಎಂದರು. ಇದರಿಂದ 2 ಸಂಘದ ರೈತರ ನಡುವೆ ವಾಗ್ವಾದ ನಡೆಯಿತು. ಈ ನಡುವೆ ಪೊಲೀಸರು ಮಧ್ಯೆ ಪ್ರವೇಶಿಸಿ ಸಮಾಧಾನ ಪಡಿಸಿದರು. ಇದೇ ವೇಳೆ ಆಯಾ ಗ್ರಾಮ ವ್ಯಾಪ್ತಿಯ ರೈತರು ಅಧಿಕಾರಿಗಳ ಮುಂದೆ ಸಮಸ್ಯೆಗಳನ್ನು ಹೇಳಿಕೊಂಡರು. ಬಳಿಕ ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

    ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದರಮ್ಮ, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಂಜಮಣಿ, ಆರೋಗ್ಯಾಧಿಕರಿ ಡಾ. ಪ್ರಕಾಶ್, ಸೆಸ್ಕ್ ಎಇಇ ಶಂಕರ್, ಕಾವೇರಿ ನೀರಾವರಿ ನಿಗಮದ ಎಇಇ ರಾಮಕೃಷ್ಣ, ಆಹಾರ ನಿರೀಕ್ಷಕ ಬಸವರಾಜು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts