More

    ಕೋವಿಡ್ ಸೇರಿ ಸೋಂಕು ರೋಗಗಳನ್ನು ದೂರವಿಡಲು ಈ ಆಹಾರಗಳನ್ನು ಸೇವಿಸಿ

    | ಪಂಕಜ ಕೆ.ಎಂ. ಬೆಂಗಳೂರು

    ಪೌಷ್ಟಿಕ ಆಹಾರ ಸೇವನೆ ದೇಹದ ಆರೋಗ್ಯ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸದ್ಯ ಎದುರಾಗಿರುವ ಕೋವಿಡ್-19 ಸಂದರ್ಭದಲ್ಲಿ ಪೌಷ್ಟಿಕ ಆಹಾರದತ್ತ ಗಮನಹರಿಸಬೇಕಾದ ತುರ್ತು ಅಗತ್ಯವಿದೆ. ರಾಜ್ಯಾದ್ಯಂತ ಸೆ.1ರಿಂದ 7ರವರೆಗೆ ‘ರಾಷ್ಟ್ರೀಯ ಪೌಷ್ಟಿಕ ಸಪ್ತಾಹ’ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಉಪಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ಕುರಿತು ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಹದಿಹರೆಯದ ಹೆಣ್ಣು ಮಕ್ಕಳಿಗೆ ಸಮಗ್ರ ಮಾಹಿತಿ ಒದಗಿಸಲಾಗುತ್ತಿದೆ.

    ತಾಯಿ ಹಾಲಿನ ಮಹತ್ವ, 6 ತಿಂಗಳ ನಂತರ ತಾಯಿ ಹಾಲಿನ ಜತೆಗೆ ಪೂರಕ ಆಹಾರ ನೀಡಿಕೆ, 2 ವರ್ಷದವರೆಗೆ ಮಕ್ಕಳಿಗೆ ತಾಯಿ ಹಾಲು ಉಣಿಸುವುದು, ಅಪೌಷ್ಟಿಕತೆ ತಡೆಗಟ್ಟುವುದು. ಸ್ಥಳೀಯ ಆಹಾರ ಪದಾರ್ಥಗಳ ಉಪಯುಕ್ತತೆ, ಮೊಳಕೆ ಕಾಳು ಸೇವನೆ, ಕಾಲಕಾಲಕ್ಕೆ ದೊರೆಯುವ ಹಣ್ಣು-ತರಕಾರಿ-ಸೇವನೆ ಮಹತ್ವವನ್ನು ಸಪ್ತಾಹದ ಮೂಲಕ ತಿಳಿಸಿಕೊಡಲಾಗುತ್ತದೆ.

    ಪೌಷ್ಟಿಕ ಆಹಾರ ಯಾಕೆ ಬೇಕು?

    ಮಕ್ಕಳ ಮಾನಸಿಕ ಬೆಳವಣಿಗೆಯೊಂದಿಗೆ ದೈಹಿಕಶಕ್ತಿ ನೀಡುತ್ತದೆ. ಇದರಿಂದ ಕಲಿಕೆಗೆ ಸಹಾಯವಾಗುತ್ತದೆ. ಕಷ್ಟದ ಕೆಲಸ ನಿರ್ವಹಿಸಲು ದೇಹಕ್ಕೆ ಶಕ್ತಿ ಹಾಗೂ ಚೈತನ್ಯ ತುಂಬುತ್ತದೆ. ಕಾಯಿಲೆಗಳಿಂದ ದೂರವಿಡುತ್ತದೆ. ಅದೇ ರೀತಿ ಆರೋಗ್ಯವಂತ ಮಗು ಜನಿಸಲು ಗರ್ಭಿಣಿಯರೂ ಪೌಷ್ಟಿಕ ಆಹಾರ ಸೇವಿಸಬೇಕು. ಆರೋಗ್ಯಕರ ಜೀವನಕ್ಕಾಗಿ ಎಲ್ಲ ವಯೋಮಾನದವರೂ ಪೌಷ್ಟಿಕ ಆಹಾರ ಸೇವಿಸಬೇಕು.

    ಯಾವುದು ಎಷ್ಟಿರಬೇಕು?

    ಸೇವಿಸುವ ಆಹಾರದಲ್ಲಿ ಶೇ.10-15 ಪ್ರೋಟಿನ್, ಶೇ.55-60 ಕಾಬೋಹೈಡ್ರೇಟ್, ಶೇ.30 ಫ್ಯಾಟ್ ಒಳಗೊಂಡಿರುಬೇಕು. ಈ ಎಲ್ಲವೂ ಸೇರಿ ಒಂದು ವರ್ಷದ ಮಗುವಿಗೆ 1000 ಕ್ಯಾಲರಿ, 2 ವರ್ಷದ ಮಗುವಿಗೆ 1100 ಕ್ಯಾಲರಿ ಹೀಗೆ ವರ್ಷ ಹೆಚ್ಚಿದಂತೆ ಪೌಷ್ಟಿಕ ಆಹಾರ ಸೇವನೆಯಲ್ಲಿ ನೂರು ನೂರು ಕ್ಯಾಲರಿ ಹೆಚ್ಚಿಸುತ್ತಾ ಹೋಗಬೇಕು. ಜತೆಗೆ ಹೊರಗಿನ ಆಹಾರ ಪದಾರ್ಥಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ವೈದ್ಯರು ತಿಳಿಸುತ್ತಾರೆ.

    ಸಿರಿಧಾನ್ಯಗಳ ಮಹತ್ವ

    ಸಿರಿಧಾನ್ಯಗಳಲ್ಲಿ ಶೇ.17 ನಾರಿನ ಅಂಶ ಇರುತ್ತದೆ. ಆದರೆ ನಾರಿನ ಅಂಶ ಇಲ್ಲದ ಆಹಾರ ಸೇವನೆ ಆಧುನಿಕ ಆಹಾರ ಪದ್ಧತಿಯ ಬಹುದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಪೌಷ್ಟಿಕ ಆಹಾರದೊಂದಿಗೆ ದೇಹಕ್ಕೆ ಅತ್ಯಗತ್ಯವಾದ ನಾರಿನ ಅಂಶವನ್ನು ನೀಡುವ ಸಿರಿಧಾನ್ಯಗಳನ್ನು ಸಹ ಉಪಯೋಗಿಸಬೇಕು. ಇವುಗಳ ಸಮತೋಲನ ಸೇವನೆಯಿಂದ ಕೋವಿಡ್ ಸಂದರ್ಭದಲ್ಲಿ ಸರ್ವ ರೋಗಗಳನ್ನೂ ಎದುರಿಸಲು ಸಾಧ್ಯ. ಸಿರಿಧಾನ್ಯಗಳು ದೇಹಕ್ಕೆ ಪೂರಕ ಆಹಾರ ಒದಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಜನರನ್ನು ಅತಿಯಾಗಿ ಕಾಡುತ್ತಿರುವ ಗ್ಯಾಸ್ಟ್ರಿಕ್ (ಆಮ್ಲಿಯತೆ) ಸಮಸ್ಯೆಯನ್ನು ಪರಿಹರಿಸುತ್ತದೆ. ಸಿರಿಧಾನ್ಯಗಳನ್ನು ಪಾಲಿಶ್ ಮಾಡುವುದರಿಂದ ಅದರಲ್ಲಿನ ಪೋಷಕಾಂಶ ಕಡಿಮೆಯಾಗುತ್ತದೆ. ಹೀಗಾಗಿ ಈ ಬಗ್ಗೆ ಎಚ್ಚರವಹಿಸಬೇಕು ಎನ್ನುತ್ತಾರೆ ಆಹಾರ ತಜ್ಞ ಡಾ.ಕೆ.ಸಿ.ರಘು.

    ಸಮತೋಲಿತ ಆಹಾರ ಸೇವಿಸಿ

    ಮಕ್ಕಳ ತೂಕ ಹಾಗೂ ವಯಸ್ಸನ್ನು ಆಧರಿಸಿ ಸಮತೋಲಿತ ಪೌಷ್ಟಿಕ ಆಹಾರ ನೀಡಬೇಕು. ಪೌಷ್ಟಿಕ ಆಹಾರದಲ್ಲಿ ಧಾನ್ಯಗಳು, ಬೇಳೆ ಕಾಳುಗಳು, ಹಣ್ಣು, ತರಕಾರಿ, ಸೊಪು್ಪ, ಹಾಲು, ಮೊಸರು, ಮೊಟ್ಟೆ, ಮಾಂಸಾಹಾರ ಸೇರಿ ಪ್ರೋಟಿನ್, ವಿಟಮಿನ್, ಲವಣ, ಕಾಬೋಹೈಡ್ರೇಟ್, ಫ್ಯಾಟ್ ಸೇರಿ ಪೋಷಕಾಂಶಗಳಿರುವ ಆಹಾರ ಪದಾರ್ಥಗಳನ್ನು ಸಮಪ್ರಮಾಣದಲ್ಲಿ ನೀಡಬೇಕು ಎನ್ನುತ್ತಾರೆ ವಾಣಿವಿಲಾಸ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಮಲ್ಲೇಶ್.

    ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

    ಕೋವಿಡ್ ಸೇರಿ ಸೋಂಕು ರೋಗಗಳನ್ನು ದೂರವಿಡಲು ವಿಟಮಿನ್ ಸಿ, ಡಿ ಹಾಗೂ ಜಿಂಕ್ ಅಂಶವುಳ್ಳ ಆಹಾರ ಪದಾರ್ಥಗಳನ್ನು (ಏಕದಳ, ದ್ವಿದಳ ಧಾನ್ಯಗಳು, ಮೊಳಕೆ ಕಾಳುಗಳು, ಸೊಪು್ಪ, ಹಣ್ಣು, ತರಕಾರಿ, ಹಾಲಿನ ಉತ್ಪನ್ನಗಳು, ಮೀನು, ಮೊಟ್ಟೆ, ಮಾಂಸ) ಹೆಚ್ಚು ಸೇವಿಸಬೇಕು. ಆಹಾರ ಪದಾರ್ಥಗಳನ್ನು ಚೆನ್ನಾಗಿ ತೊಳೆದು ಬಳಸಬೇಕು. ಬಿಸಿನೀರು ಕುಡಿಯಬೇಕು, ಬಿಸಿ ಆಹಾರ ಸೇವಿಸಬೇಕು ಎನ್ನುತ್ತಾರೆ ಆಯುರ್ವೆದ ವೈದ್ಯೆ ಡಾ.ವಸುಂಧರಾ ಭೂಪತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts