More

    ನೀರಿನಲ್ಲಿ ಸುಲಭವಾಗಿ ಕರಗುವ ಜೀವರಕ್ಷಕ ವಿಟಮಿನ್ ಸಿ ಪೋಷಕಾಂಶ

    ನೀರಿನಲ್ಲಿ ಸುಲಭವಾಗಿ ಕರಗುವ ಜೀವರಕ್ಷಕ ವಿಟಮಿನ್ ಸಿ ಪೋಷಕಾಂಶ

    ವಿಟಮಿನ್ ಸಿ ದೇಹಕ್ಕೆ ಅತ್ಯಗತ್ಯ ಪೋಷಕಾಂಶಗಳಲ್ಲಿ ಒಂದು. ಅನೇಕ ಜೀವರಾಸಾಯನಿಕ ಹಾಗೂ ಶಾರೀರಿಕ ಕಾರ್ಯಗಳಿಗೆ ವಿಟಮಿನ್ ಸಿ ಬೇಕೇ ಬೇಕು. ವಿಟಮಿನ್ ‘ಸಿ’ಯನ್ನು ಅಸ್ಕೋರ್ಬಿಕ್ ಆಮ್ಲ ಎಂಬುದಾಗಿಯೂ ಕರೆಯಲಾಗುತ್ತದೆ. ವಿಟಮಿನ್​ಗಳನ್ನು ನೀರಿನಲ್ಲಿ ಕರಗುವ ಹಾಗೂ ಕೊಬ್ಬಿನಲ್ಲಿ ಕರಗುವ ವಿಟಮಿನ್​ಗಳು ಎಂದು ವಿಭಜಿಸಲಾಗುತ್ತದೆ. ವಿಟಮಿನ್ ಸಿ ಎಂಬುದು ನೀರಿನಲ್ಲಿ ಕರಗುವ ಪೋಷಕಾಂಶ. ವಿಟಮಿನ್ ಸಿ ಪೂರೈಕೆಯು ಅಗತ್ಯಕ್ಕಿಂತ ಹೆಚ್ಚಾದಲ್ಲಿ ದೇಹವು ಅದನ್ನು ಮೂತ್ರದ ಮೂಲಕ ಹೊರಹಾಕುತ್ತದೆ.

    ಸಂಯೋಜಕ ಕೋಶಗಳ ನಿರ್ವಹಣೆ ಮತ್ತು ಬೆಳವಣಿಗೆಯ ಮುಖ್ಯ ಆಸರೆ ವಿಟಮಿನ್ ಸಿ ಪೋಷಕಾಂಶ. ಆದ್ದರಿಂದ ಇದು ಚರ್ಮದಲ್ಲಿ ಹೊಸ ಕೋಶಗಳ ರಚನೆಗೆ ಅಗತ್ಯವಾದುದು. ಅಷ್ಟೇ ಅಲ್ಲದೆ ಮೂಳೆಗಳ ರಚನೆಗೆ, ಗಾಯಗಳನ್ನು ಗುಣಪಡಿಸಲು, ದಂತ ಹಾಗೂ ಒಸಡಿನ ಆರೋಗ್ಯಕ್ಕೆ ವಿಟಮಿನ್ ಸಿ ಅಗತ್ಯ. ವಿಟಮಿನ್ ಸಿ ಒಳ್ಳೆಯ ಪೋಷಕಾಂಶ; ಜೊತೆಯಲ್ಲಿ ಉತ್ತಮ ಆಂಟಿ ಆಕ್ಸಿಡೆಂಟ್. ಇದರ ಈ ಎರಡು ವಿಶೇಷ ಗುಣಗಳಿಂದ ಇದು ಇತರ ಎಲ್ಲ ವಿಟಮಿನ್​ಗಳಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಫ್ರೀ ರ್ಯಾಡಿಕಲ್​ಗಳಿಂದ ದೇಹವನ್ನು ರಕ್ಷಿಸಲು ವಿಟಮಿನ್ ಸಿ ಪೋಷಕಾಂಶವು ಬಳಕೆಯಾಗುತ್ತದೆ. ಈ ಪೋಷಕಾಂಶವನ್ನು ಅನೇಕ ರೋಗಗಳ ನಿವಾರಣೆಯಲ್ಲಿ ಚಿಕಿತ್ಸಾ ಏಜೆಂಟ್ ಆಗಿ ಉಪಯೋಗಿಸಲಾಗುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ತನ್ಮೂಲಕ ಅಲರ್ಜಿಗಳಿಂದ ನಮ್ಮನ್ನು ರಕ್ಷಿಸುತ್ತದೆ. ವಿಷವಸ್ತುಗಳನ್ನು ದೇಹದಿಂದ ಹೊರಹಾಕಲು, ಸೋಂಕುಗಳಿಂದ ನಮ್ಮನ್ನು ರಕ್ಷಿಸುವಲ್ಲಿಯೂ ವಿಟಮಿನ್ ಸಿ ಅನುಕೂಲಕಾರಿ. ಕ್ಯಾನ್ಸರ್, ಅಥೆರೊಸೆಲೆರೋಸಿಸ್, ಮಧುಮೇಹ, ನರಸಂಬಂಧಿ ಸಮಸ್ಯೆಗಳಲ್ಲಿ ವಿಟಮಿನ್ ಸಿ ಹೆಚ್ಚು ಉಪಯೋಗಕಾರಿ. ಥೈರೋಸಿನ್, ಫೋಲಿಕ್ ಆಮ್ಲ, ಟ್ರಿಪ್ಟೋಫಾನ್, ಗ್ಲೈಸಿನ್, ಪ್ರೋಲಿನ್, ಲೈಸಿನ್, ಕಾರ್ನಿಟಿನ್ ಮತ್ತು ಕೆಟಕೆಲಮೈನ್ ಎಲ್ಲವೂ ದೇಹಕ್ಕೆ ಒದಗಿ ಬರುವಲ್ಲಿ ವಿಟಮಿನ್ ಸಿ ಪೋಷಕಾಂಶ ಅಗತ್ಯ. ದೇಹದಲ್ಲಿನ ಕೊಲೆಸ್ಟರಾಲ್ ವಿಸರ್ಜನಾ ಪದಾರ್ಥವಾಗಿ (ಬೈಲ್ ಆಮ್ಲ – ಪಿತ್ತರಸ) ಬದಲಾಯಿಸಲು ವಿಟಮಿನ್ ಸಿ ಕಾರಣವಾಗುತ್ತದೆ. ತನ್ಮೂಲಕ ರಕ್ತದಲ್ಲಿ ಕೊಲೆಸ್ಟರಾಲ್ ಅಂಶವು ಕಡಿಮೆಯಾಗುತ್ತದೆ. ಅಲ್ಲದೆ ಕಬ್ಬಿಣಾಂಶವನ್ನು ಹೀರಿಕೊಳ್ಳಲು ವಿಟಮಿನ್ ಸಿ ಸಹಾಯ ಮಾಡುತ್ತದೆ.

    ವಿಟಮಿನ್ ಸಿ ಕೊರತೆಯು ರಕ್ತಹೀನತೆ, ರ್ಸR, ಒಸಡುಗಳಲ್ಲಿ ರಕ್ತಸೋರಿಕೆ, ಗಾಯಗಳು ವೇಗವಾಗಿ ಗುಣವಾಗದೆ ಇರುವುದು, ನರಸಂಬಂಧಿ ಸಮಸ್ಯೆಗಳು, ಪದೇಪದೆ ಸೋಂಕುಗಳಿಗೆ ದೇಹ ತೆರೆದುಕೊಳ್ಳಲು ಎಡೆ ಮಾಡಿಕೊಡುತ್ತದೆ. ಆದ್ದರಿಂದ ವಿಟಮಿನ್ ಸಿ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಸರಿಯಾದ ಪ್ರಮಾಣದಲ್ಲಿ ವಿವೇಚನಾಪೂರ್ಣ ಆಹಾರಸೇವನೆಯಿಂದ ವಿಟಮಿನ್ ಸಿ ಕೊರತೆಯಾಗದಂತೆ ನೋಡಿಕೊಳ್ಳಬಹುದು. ವಿಟಮಿನ್ ಸಿ ಹೆಚ್ಚಿರುವ ಆಹಾರಸೇವನೆ ಎಲ್ಲ ರೀತಿಯ ವೈರಸ್ ವಿರುದ್ಧ ದೇಹವು ಹೋರಾಡುವ ವಾತಾವರಣವನ್ನು ಕಲ್ಪಿಸಬಲ್ಲದು. ಹುಳಿ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಪೋಷಕಾಂಶ ಹೊಂದಿವೆ. ಹಸಿರು ಸೊಪ್ಪುಗಳು, ಟೊಮ್ಯಾಟೊ, ನೆಲ್ಲಿಕಾಯಿ, ಹಸಿ ಮೆಣಸಿನಕಾಯಿ, ಸ್ಟ್ರಾಬೆರ್ರಿ, ಬ್ರೊಕೋಲಿ, ಕಿವಿ ಹಣ್ಣು, ಮಾವಿನಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಸಿ ವಿಟಮಿನ್ ಹೊಂದಿರುತ್ತವೆ. ಸೀಬೆ (ಪೇರಲೆ) ವಿಟಮಿನ್ ಸಿ ಪೋಷಕಾಂಶದ ಉತ್ತಮ, ಸುಲಭ ಮೂಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts