More

    ಯಾರ ಗಮನಕ್ಕೂ ತಾರದೆ ಗುಡ್ಡ ಕಡಿದರೆ ಜೋಕೆ! ದಕ್ಷಿಣ ಕನ್ನಡದಲ್ಲಿ ಅಸ್ತಿತ್ವಕ್ಕೆ ಬಂದಿದೆ ಮಾನದಂಡ

    ಪುತ್ತೂರು: ಕರಾವಳಿಯ ಗ್ರಾಮೀಣ ಭಾಗಗಳಲ್ಲಿ ಮಳೆಗಾಲ ಸಂದರ್ಭ ಗುಡ್ಡ ಕುಸಿತ, ಪ್ರವಾಹದಂತಹ ಅನಾಹುತ ಸಾಧ್ಯತೆ ಹೆಚ್ಚು. ಭೌಗೋಳಿಕ ವ್ಯವಸ್ಥೆಗೆ ಮಾನವನಿರ್ಮಿತ ಹಾನಿಯೇ ಈ ಅನಾಹುತಗಳಿಗೆ ಮೂಲ ಕಾರಣ. ಇದನ್ನು ತಡೆಗಟ್ಟಲು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ ಅರ್ತ್ ವರ್ಕ್‌ಗೆ ಸ್ಥಳೀಯಾಡಳಿತದ ಅನುಮತಿ ಅಗತ್ಯ ಎಂಬ ಮಾನದಂಡವನ್ನು ದ.ಕ ಜಿಲ್ಲಾಡಳಿತ ರೂಪಿಸಿದೆ.

    ಕೃಷಿ ಹಾಗೂ ಕೃಷಿಯೇತರ ಕೆಲಸ, ಕಟ್ಟಡ ನಿರ್ಮಾಣ, ಅಥವಾ ಇತರ ಕಾಮಗಾರಿಗಳ ಸಲುವಾಗಿ 3 ಅಡಿ ಅಥವಾ 1 ಮೀಟರ್‌ಗಿಂತ ಎತ್ತರಕ್ಕೆ ಅರ್ಥ್ ಕಾಮಗಾರಿ, ಗುಡ್ಡ ಕತ್ತರಿಸಲು ಕಂದಾಯ ಇಲಾಖೆಯ ಪರವಾನಗಿ ಕಡ್ಡಾಯ. ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಗ್ರಾಮ ಲೆಕ್ಕಿಗರಿಗೆ ಈ ಸಂಬಂಧ ಸುತ್ತೋಲೆ ಕಳುಹಿಸಿದ್ದಾರೆ.

    ಭೌಗೋಳಿಕ ವ್ಯವಸ್ಥೆಗೆ ಹಾನಿ ಮಾಡಿ ನೈಸರ್ಗಿಕ ನೀರಿನ ರಹದಾರಿಗಳಿಗೆ ತೊಂದರೆಯಾಗುತ್ತಿದೆ. ಜಿಲ್ಲೆಯಲ್ಲಿ ಗುಡ್ಡವನ್ನು ಕಡಿದು ಸಮತಟ್ಟುಗೊಳಿಸುವುದು, ಗುಡ್ಡ ಪ್ರದೇಶದಲ್ಲಿ ಮನೆ ನಿರ್ಮಾಣ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕ ಕಡೆ ಭೂಕುಸಿತ ಉಂಟಾಗಿದೆ. ಗುಡ್ಡ ಕಡಿದರೆ ತೋಡುಗಳಲ್ಲಿ ಮಳೆ ನೀರು ಹರಿವಿನ ದಿಕ್ಕು ಬದಲಾಗುತ್ತದೆ. ನೀರು ಎಲ್ಲೆಲ್ಲೋ ಹರಿದು ಮಣ್ಣು ಸಡಿಲ ಆಗುತ್ತದೆ. ಇದು ಗುಡ್ಡ ಕುಸಿತಕ್ಕೆ ಕಾರಣ.

    ಉಲ್ಲಂಘಿಸಿದರೆ ಕಾನೂನು ಕ್ರಮ: ಭೌಗೋಳಿಕ ವ್ಯವಸ್ಥೆ ಬದಲಾಯಿಸಲು ಭೂಕಂದಾಯ ಕಾಯ್ದೆಯ ಸೆಕ್ಷನ್ 95ರ ಪ್ರಕಾರ ಕಂದಾಯ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಜಮೀನಿನಲ್ಲಿ ಅಭಿವೃದ್ಧಿ ಚಟುವಟಿಕೆ, ಕಟ್ಟಡ ಕಾಮಗಾರಿ ಸಂದರ್ಭ ಒಂದು ಮೀಟರ್‌ಗಿಂತ ಅಧಿಕವಾಗಿ ಜಮೀನನ್ನು ಕಡಿದು ಸಮತಟ್ಟುಗೊಳಿಸಬೇಕಾದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅಭಿಪ್ರಾಯ ಪಡೆಯತಕ್ಕದ್ದು. ಗ್ರಾಮಮಟ್ಟದಲ್ಲಿ ಆಯಾ ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಿಗರು ಹಾಗೂ ನಗರ ಪಟ್ಟಣ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಪ್ರಾಧಿಕಾರಗಳು, ತಹಸೀಲ್ದಾರರು ಪರಿಶೀಲನೆ ನಡೆಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

    ವರದಿ ಸಲ್ಲಿಸದಿದ್ದರೆ ಅಧಿಕಾರಿಗಳೇ ಹೊಣೆ: ಭೂ ಪರಿವರ್ತನೆ ಕೋರಿಕೆಗಳಲ್ಲಿ ಸಹ ಕಂದಾಯ ನಿರೀಕ್ಷಕರು, ತಹಸೀಲ್ದಾರರು, ಸಹಾಯಕ ಆಯುಕ್ತರು ವರದಿ ಸಲ್ಲಿಸುವಾಗ ಹಾಗೂ ಸ್ಥಳೀಯ ಸಂಸ್ಥೆ, ಪ್ರಾಧಿಕಾರಗಳು ತಮ್ಮ ಅಭಿಪ್ರಾಯ ಸಲ್ಲಿಸುವಾಗ ಭೂ ಪರಿವರ್ತನೆ ಕೋರಿದ ಜಮೀನು ರಸ್ತೆ ಬದಿಯಲ್ಲಿ ಇದೆಯೇ? ಎತ್ತರ ಪ್ರದೇಶದಲ್ಲಿ ಬರುತ್ತದೆಯೇ? ಮುಂದೆ ಭೂ ಪರಿವರ್ತನೆಗೆ ಕೋರಿದ ಜಮೀನುಗಳನ್ನು ಸಮತಟ್ಟುಗೊಳಿಸಿದಲ್ಲಿ ಗುಡ್ಡ ಜರಿತ, ಕೃತಕ ನೆರೆ ಮುಂತಾದ ವಿಪತ್ತುಗಳು ಸಂಭವಿಸುವ ಸಾಧ್ಯತೆಗಳಿದೆಯೇ ಎಂಬ ಬಗ್ಗೆ ಪರಿಶೀಲಿಸಿ ನಿಖರ ವರದಿಯನ್ನು ಸಲ್ಲಿಸತಕ್ಕದ್ದು. ಒಂದು ವೇಳೆ ಈ ಬಗ್ಗೆ ವರದಿ ಸಲ್ಲಿಸದೆ, ಮುಂದೆ ಹಾನಿ ಸಂಭವಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲಾಧಿಕಾರಿ ಹೇಳುವುದು ಹೀಗೆ: ಗುಡ್ಡವನ್ನು ಲಂಬಕೋನದಲ್ಲಿ ಕತ್ತರಿಸದೆ, ಇಳಿಜಾರು ಇರುವಂತೆ ಕತ್ತರಿಸಬೇಕು. ಅಲ್ಲಿ ತಡೆಗೋಡೆ ನಿರ್ಮಿಸಬೇಕು. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗ್ರಾಪಂ, ಲೋಕೋಪಯೋಗಿ ಇಲಾಖೆಯವರೂ ರಸ್ತೆ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕತ್ತರಿಸುತ್ತಾರೆ. ಕೆಲವೆಡೆ ಗುಡ್ಡ ಕಡಿದ ಬಳಿಕ ತಡೆಗೋಡೆ ನಿರ್ಮಿಸುತ್ತಿಲ್ಲ. ಅಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಜಾಸ್ತಿ, ಗುಡ್ಡ ಕತ್ತರಿ ಸುವುದನ್ನು ತಡೆಯಲು ಜನರ ಸಹಕಾರವೂ ಅಗತ್ಯ. ಗುಡ್ಡ ಕಡಿಯದೆ ಕಟ್ಟಡ ನಿರ್ಮಿಸಲು ಪೂರಕ ವಿನ್ಯಾಸ ರೂಪಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts