ಇ-ಸ್ವತ್ತು ನೋಂದಣಿ ಬಾಕಿ

blank

ನರಸಿಂಹ ನಾಯಕ್, ಬೈಂದೂರು
ಆಡಳಿತದಲ್ಲಿ ಸುಧಾರಣೆ, ಹೈಟೆಕ್ ಬದಲಾವಣೆ, ಜನರಿಗೆ ಉತ್ತಮ ಸೇವೆ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ ಹೊಸ ಹೊಸ ತಂತ್ರಾಂಶಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸುತ್ತಿದೆ. ಆದರೆ ಈ ತಂತ್ರಾಂಶಗಳ ಗೊಂದಲದ ಪರಿಣಾಮ ನೋಂದಣಿ ಇಲಾಖೆಯಲ್ಲಿ ಒಟ್ಟು 14,000 ಸ್ಥಿರಾಸ್ತಿ ನೋಂದಣಿ ಕಡತಗಳು ಕಾವೇರಿ ತಂತ್ರಾಂಶದಿಂದ ಇ-ಸ್ವತ್ತು ನೋಂದಣಿಯಾಗದೆ ಬಾಕಿ ಉಳಿದಿವೆ.

ಅಗತ್ಯ ಕೆಲಸಕ್ಕೆ ಭೂ ವಿಕ್ರಯ ಮಾಡಿದ ಗ್ರಾಮೀಣ ಭಾಗದ ಜನರು ಗೊಂದಲದಿಂದ ನೋಂದಣಿ ಶುಲ್ಕ ನೀಡಿ ನೋಂದಣಿಯಾಗಿದ್ದರೂ, ಸರಿಪಡಿಸದ ಇಲಾಖೆಯ ಕಾರ್ಯವೈಖರಿಯಿಂದ ರೋಸಿಹೋಗಿದ್ದಾರೆ. ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆ ಒಂದೆಡೆಯಾದರೆ, ಇನ್ನೊಂದೆಡೆ ಜನಪ್ರತಿನಿಧಿಗಳು ಜಾಣ ಮೌನ ವಹಿಸುತ್ತಿದ್ದಾರೆ.
ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯವ್ಯಾಪಿಯಾಗಿ ಈ ಸಮಸ್ಯೆ ಕಳೆದ ಆರು ತಿಂಗಳಿಂದ ಇದೆ. ತಂತ್ರಾಂಶ ಗೊಂದಲದ ಕಾರಣ ಕಡತಗಳು ಬಾಕಿ ಉಳಿದಿವೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಶೀಘ್ರ ಸರಿಪಡಿಸಲಾಗುವುದು ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.

ಗುರುತಿನ ಚೀಟಿ ಪಡೆಯಲು ಸಮಸ್ಯೆ: ಗುರುತಿನ ಚೀಟಿ ಪಡೆಯಲು 18 ವರ್ಷ ಮೇಲ್ಪಟ್ಟಿರಬೇಕು ಎನ್ನುವುದು ಕಾಡುವ ಇನ್ನೊಂದು ಸಮಸ್ಯೆ. ಒಂದು ವೇಳೆ ಸ್ಥಿರಾಸ್ತಿಯಲ್ಲಿ ಹಕ್ಕು ಪಡೆಯುವವರು ಅಪ್ರಾಪ್ತನಾಗಿದ್ದರೆ 18 ವರ್ಷ ತುಂಬುವವರೆಗೆ ಕಾಯಬೇಕು ಎನ್ನುವ ಗೊಂದಲ ಇದೆ. ಇದು ಸಂವಿಧಾನ ನೀಡಿದ ಆಸ್ತಿ ಹಕ್ಕಿನ ಉಲ್ಲಂಘನೆಗೆ ದಾರಿ ಮಾಡಿಕೊಟ್ಟಂತಿದೆ. ಬೈಂದೂರಿನಲ್ಲಿ ಇಂತಹ 150ಕ್ಕೂ ಅಧಿಕ ಪ್ರಕರಣಗಳಿವೆ. ಹೀಗಾಗಿ ಜಿಲ್ಲಾಡಳಿತ ಸಮರ್ಪಕ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ.

ಏನಿದು ಸಮಸ್ಯೆ?
ಭೂ ಪರಿವರ್ತನೆಯಾದ ಸ್ಥಿರಾಸ್ತಿಗಳನ್ನು ನೋಂದಣಿ ಇಲಾಖೆಯಲ್ಲಿ ಪಂಚತಂತ್ರ ಮತ್ತು ಕಾವೇರಿ ತಂತ್ರಾಂಶದ ಸಂಯೋಜನೆಯಲ್ಲಿ ನೋಂದಣಿ ಮಾಡಲಾಗುತ್ತದೆ. ಬಳಿಕ ಆನ್‌ಲೈನ್ ತಂತ್ರಾಂಶದ ಮೂಲಕ ಗ್ರಾಪಂಗೆ ರವಾನೆಯಾಗುತ್ತದೆ. ಆದರೆ ಆರೇಳು ತಿಂಗಳಿಂದ ಕೃಷಿಯೇತರ ಸ್ಥಿರಾಸ್ತಿಗಳ ನೋಂದಣಿಯಾದ ದಸ್ತಾವೇಜುಗಳ ಮಾಹಿತಿ ಗ್ರಾಪಂಗೆ ವರ್ಗಾವಣೆಯಾಗಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಲ ಪಡೆಯಲು, ಕಟ್ಟಡ ನಿರ್ಮಿಸಲು ಅಥವಾ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಅವಕಾಶ ಇಲ್ಲದಂತಾಗಿದೆ. ಈ ಕುರಿತು ಇಲಾಖೆಯನ್ನು ವಿಚಾರಿಸಿದರೆ ತಂತ್ರಾಂಶ ದೋಷ ಎಂಬ ಉತ್ತರ ಸಿಗುತ್ತಿದೆ. ಗುರುತಿನ ಚೀಟಿ ಪಡೆದು ನೋಂದಣಿ ಮಾಡಿದರೆ, ರವಾನೆ ಮಾಡುವ ಪ್ರಯತ್ನವೂ ಸಫಲವಾಗಿಲ್ಲ. ಇಂತಹ ಸಾವಿರಾರು ಕಡತಗಳು ನೋಂದಣಿ ಸಮಸ್ಯೆ ಕಾರಣಕ್ಕೆ ಬಾಕಿ ಉಳಿದಿವೆ.

ದ.ಕ.ಜಿಲ್ಲೆಯಲ್ಲೂ ಇದೆ ಸಮಸ್ಯೆ
ಮಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ತಂತ್ರಾಂಶ ಅಪ್‌ಡೇಟ್ ಮಾಡಿರುವುದರಿಂದ ಇ-ಸ್ವತ್ತು ನೋಂದಣಿಯಲ್ಲಿ ಸಮಸ್ಯೆಯಾಗುತ್ತಿದೆ. ಪಂಚಾಯಿತಿಯಲ್ಲಿ ನೀಡಲಾಗುವ 9/11 ಖಾತೆಗೆ ಸಂಬಂಧಿಸಿ ನೋಂದಣಾಧಿಕಾರಿ ಕಚೇರಿಯಲ್ಲಿ ತಂತ್ರಾಂಶದಲ್ಲಿ ಕಾಣಿಸುವುದಿಲ್ಲ. ಇದರಿಂದ ಕೆಲಸ ನಿಧಾನವಾದರೂ, ಸದ್ಯ ಕಡತಗಳು ವಿಲೇಗೆ ಬಾಕಿ ಇಲ್ಲ. ರಾಜ್ಯ ಮಟ್ಟದಲ್ಲಿ ತಂತ್ರಾಶ ಸಮರ್ಪಕವಾದರೆ, ಕೆಲಸ ಇನ್ನಷ್ಟು ವೇಗ ಪಡೆಯಲಿದೆ ಎಂದು ನೋಂದಣಾಧಿಕಾರಿ ಶ್ರೀನಿಧಿ ಮತ್ತು ಮಂಗಳೂರು ಉಪ ನೋಂದಣಾಧಿಕಾರಿ ಬಶೀರ್ ಅಹಮ್ಮದ್ ತಿಳಿಸಿದ್ದಾರೆ. ಈ ಸಂಬಂಧ ಪಂಚಾಯತ್‌ರಾಜ್ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ಸಿಕ್ಕಿದೆ ಎಂಬುದು ಜಿಪಂ ಅಧಿಕಾರಿಗಳಿಂದ ದೊರೆಯುವ ಮಾಹಿತಿ.

ತಂತ್ರಾಂಶದ ಗೊಂದಲ, ತಾಂತ್ರಿಕ ಸಮಸ್ಯೆ ಪರಿಣಾಮ ಇ-ಸ್ವತ್ತು ನೋಂದಣಿ ಸಾಕಷ್ಟು ಸಂಖ್ಯೆಯಲ್ಲಿ ಬಾಕಿ ಉಳಿದಿವೆ. ಇದು ರಾಜ್ಯ ಮಟ್ಟದ ಸಮಸ್ಯೆ. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಮತ್ತು ಇ-ಸ್ವತ್ತು ನೋಂದಣಿಗೆ ಎದುರಾಗಿರುವ ತಾಂತ್ರಿಕ ಸಮಸ್ಯೆಯನ್ನು ಸರ್ಕಾರಕ್ಕೆ ತಿಳಿಸಿದ್ದೇವೆ.
-ಡಾ.ನವೀನ್ ಭಟ್, ಸಿಇಒ, ಜಿಪಂ, ಉಡುಪಿ

Share This Article

ನಿಮ್ಮ ಕನಸಿನಲ್ಲಿ ಗಿಳಿ, ಗೂಬೆ, ನವಿಲು ಕಾಣಿಸಿಕೊಂಡಿದ್ಯಾ? ಈ ಪಕ್ಷಿಗಳಿಂದ ಬರಲಿದ್ಯಾ ಅದೃಷ್ಟ.. dreams

dreams: ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕನಸುಗಳು ಬಹಳ ಮುಖ್ಯ. ಕನಸಿನಲ್ಲಿ ಗಿಳಿ, ಗೂಬೆ, ನವಿಲು ಮುಂತಾದ…

ಪ್ರತಿದಿನ ಊಟಕ್ಕೆ ಗರಿಗರಿ ಹಪ್ಪಳ ಬೇಕಾ? ಹಾಗಿದ್ರೆ ಆರೋಗ್ಯ ಬಗ್ಗೆ ಇರಲಿ ಎಚ್ಚರ..papad

papad: ಹಪ್ಪಳಗಳನ್ನು ಊಟದಲ್ಲಿ ರುಚಿ ಇರಲಿ ಎಂಬ ಕಾರಣಕ್ಕೆ ಬಳಸುತ್ತಾರೆ. ಹಾಗಾಗಿ ಊಟಕ್ಕೆ ರುಚಿ ಇದೆ…

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…