More

    ರಾಜ್ಯಾದ್ಯಂತ ಮೆಗಾ ಇ-ಲೋಕ್ ಅದಾಲತ್; ಲಕ್ಷಕ್ಕೂ ಅಧಿಕ ಪ್ರಕರಣಗಳ ಇತ್ಯರ್ಥ

    ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ವತಿಯಿಂದ ಶನಿವಾರ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿದ್ದ ಮೆಗಾ ಇ-ಲೋಕ್ ಅದಾಲತ್‌ನಲ್ಲಿ 1 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
     
    ನ್ಯಾಯಾಲಯಗಳಲ್ಲಿ ಬಾಕಿ ಇದ್ದ 1,07,337 ಪ್ರಕರಣಗಳು, 6,015 ವ್ಯಾಜ್ಯಪೂರ್ವ ಪ್ರಕರಣಗಳು ಹಾಗೂ ಹೈಕೋರ್ಟ್‌ನಲ್ಲಿ ಬಾಕಿ ಇದ್ದ 925 ಪ್ರಕರಣಗಳು ಸೇರಿ ಒಟ್ಟು 1,14,277 ಸಿವಿಲ್ ಹಾಗೂ ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಇ-ಲೋಕ್ ಅದಾಲತ್‌ನಲ್ಲಿ ಕಕ್ಷಿದಾರರಿಗೆ 353 ಕೋಟಿಗೂ ಅಧಿಕ ಮೊತ್ತದ ಅಂತಿಮ ಪರಿಹಾರ ಕೊಡಸಲಾಗಿದೆ ಎಂದು ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ತಿಳಿಸಿದ್ದಾರೆ.
     
    ಇ-ಲೋಕ್ ಅದಾಲತ್ ಪರಿಣಾಮಕಾರಿ ವ್ಯವಸ್ಥೆ:
    ಶನಿವಾರ ಬೆಳಗ್ಗೆ ಮೆಗಾ ಇ-ಲೋಕ್ ಅದಾಲತ್‌ನ ಇ-ಉದ್ಘಾಟನೆ ನೆರವೇರಿಸಿ ಮಾತನಾಡಿದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿ ಎನ್.ವಿ. ರಮಣ, ಕೋವಿಡ್-19 ಹಿನ್ನೆಲೆಯಲ್ಲಿ ಸೀಮಿತ ಅವಧಿಯ ಕೋರ್ಟ್ ಕಲಾಪ ನಡೆಸಲಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ನ್ಯಾಯದಾನ ಪ್ರಕ್ರಿಯೆಯನ್ನು ನಿರಂತರವಾಗಿಸಲು ಇ-ಲೋಕ್ ಅದಾಲತ್ ಪರಿಣಾಮಕಾರಿ ವ್ಯವಸ್ಥೆಯಾಗಿದೆ ಎಂದು ಅಭಿಪ್ರಾಯಪಟ್ಟರು.
     
    ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವರ್ಚುಯಲ್ ಕಲಾಪಗಳನ್ನು ನಡೆಸಲಾಗುತ್ತಿದೆ. ಇದು ಪರಿಣಾಮಕಾರಿ ಮತ್ತು ಯಶಸ್ಸು ಕಂಡ ಹಿನ್ನೆಲೆಯಲ್ಲಿ ಯಾರೊಬ್ಬರೂ ನ್ಯಾಯದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಲೋಕ್ ಅದಾಲತ್‌ಗೂ ವಿಡಿಯೋ ಕಾನ್ಫರೆನ್ಸ್ ವಿಧಾನ ಅಳವಡಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದರು.
     
    ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್, ಎ.ಎಸ್. ಬೋಪಣ್ಣ, ಕೆಎಸ್‌ಎಲ್‌ಎಸ್‌ಎ ಕಾರ್ಯನಿರ್ವಾಹ ಅಧ್ಯಕ್ಷ ನ್ಯಾಯಮೂರ್ತಿ ಅರವಿಂದ ಕುಮಾರ್, ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಬಿ. ವೀರಪ್ಪ, ಎಸ್. ಸುಜಾತಾ, ಜಿ. ನರೇಂದರ್, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ. ನರಗುಂದ, ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಜೆ.ಎಂ. ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
     
    ಇತರ ರಾಜ್ಯಗಳಿಗೆ ಮಾದರಿಯಾಗಲಿ:
    ಲೋಕ್ ಅದಾಲತ್‌ಗಳು ಕೋರ್ಟ್‌ಗಳ ಮೇಲಿನ ಒತ್ತಡ ತಗ್ಗಿಸುತ್ತವೆ. ಕೆಎಸ್‌ಎಲ್‌ಎಸ್‌ಎ ಪ್ರಯತ್ನ ಇತರ ರಾಜ್ಯಗಳಿಗೆ ಮಾದರಿಯಾಗಲಿ. ಕಳೆದ 3 ವರ್ಷಗಳಲ್ಲಿ ಪ್ರಾಧಿಕಾರ 7.5 ಲಕ್ಷ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿರುವುದು ಗಮನಾರ್ಹ ವಿಷಯ. ಇದಲ್ಲದೇ ಲಾಕ್‌ಡೌನ್ ಅವಧಿಯಲ್ಲಿ ಪ್ರಾಧಿಕಾರದ ನಿರಂತರ ಪ್ರಯತ್ನಗಳ ಫಲವಾಗಿ 11 ಸಾವಿರಕ್ಕೂ ಅಧಿಕ ವಿಚಾರಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನು ಮತ್ತು 400ಕ್ಕೂ ಹೆಚ್ಚು ಸಜಾ ಬಂದಿಗಳಿಗೆ ತಾತ್ಕಾಲಿಕ ಪರೋಲ್ ನೀಡಲಾಗಿದೆ ಎಂದು ನ್ಯಾಯಮೂರ್ತಿ ರಮಣ ಮೆಚ್ಚುಗೆ ವ್ಯಕ್ತಪಡಿಸಿದರು.
     
     
      ReplyForward

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts