More

    ಪೂರ್ವಸೂಚನೆ ನೀಡದೆ ಉದ್ಯೋಗಿಗಳನ್ನು ವಜಾಗೊಳಿಸಿದ ಇ-ಕಾಮರ್ಸ್​ ಕಂಪನಿ, ಕೆಲಸ ಕಳೆದುಕೊಂಡವರ ಕಣ್ಣೀರು

    ಬೆಂಗಳೂರು: ಕೋವಿಡ್​ 19 ಲಾಕ್​ಡೌನ್​ ಹಿನ್ನೆಲೆಯಲ್ಲಿ ವ್ಯಾಪಾರ-ವಹಿವಾಟು ಇಲ್ಲದೆ ನಷ್ಟವಾಗುತ್ತಿದೆ. ಆದ್ದರಿಂದ, ಕಂಪನಿಯನ್ನು ಮರುವಿನ್ಯಾಸಗೊಳಿಸುವ ನೆಪವೊಡ್ಡಿ ಬೆಂಗಳೂರು ಮೂಲದ ಇ-ಕಾಮರ್ಸ್​ ಕಂಪನಿಯೊಂದು ಹಲವು ಉದ್ಯೋಗಿಗಳನ್ನು ಏಕಾಏಕಿ ಸೇವೆಯಿಂದ ವಜಾಗೊಳಿಸಿದೆ.

    ಪೂರ್ವಸೂಚನೆ ನೀಡದೆ ತಮ್ಮನ್ನು ಕೆಲಸದಿಂದ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಉಡಾನ್​ ಎಂಬ ಇ-ಕಾಮರ್ಸ್​ ಕಂಪನಿಯ ಉದ್ಯೋಗಿಗಳು ಮುಂದೇನು ಮಾಡಬೇಕೆಂಬುದು ಗೊತ್ತಾಗದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

    ಕೋವಿಡ್​ 19 ಲಾಕ್​ಡೌನ್​ನಿಂದಾಗಿ ಇಡೀ ದೇಶದಲ್ಲಿ ವ್ಯಾಪಾರ ವಹಿವಾಟು ಸ್ತಬ್ಧವಾಗಿದೆ. ಆದರೂ ಯಾವುದೇ ಸಂಸ್ಥೆ ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯ ಹೊರತಾಗಿಯೂ ಉಡಾನ್​ ಕಂಪನಿ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಎಂ. ಚಿರಂಜನ್​ ಎಂಬ ಮಾಜಿ ಉದ್ಯೋಗಿ, ನಾನು ಕಳೆದ ವರ್ಷ ಮೇ 15ರಂದು ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದೆ. ಆದರೆ ಶುಕ್ರವಾರ ಬೆಳಗ್ಗೆ ಕಂಪನಿಯ ಎಚ್​ಆರ್​ ಮೇಲ್​ ಮಾಡಿ, ವಾಣಿಜ್ಯಾತ್ಮಕ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ನಿಮ್ಮನ್ನು ಉದ್ಯೋಗದಿಂದ ವಜಾಗೊಳಿಸಿರುವುದಾಗಿ ತಿಳಿಸಿದ್ದಾರೆ. ಕೆಲಸದಿಂದ ವಜಾಗೊಳಿಸುವ ಮುನ್ನ ಮೂರು ತಿಂಗಳು ನೋಟಿಸ್​ ಅನ್ನು ನೀಡಲಾಗಿಲ್ಲ. ಹೀಗಾಗಿ, ಮುಂದೇನು ಮಾಡುವುದು ಎಂಬುದೇ ತಿಳಿಯದಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

    ಉದ್ಯೋಗ ಕಳೆದುಕೊಂಡ ಬಗ್ಗೆ ದುಃಖ ವ್ಯಕ್ತಪಡಿಸಿದ ಮಹಿಳಾ ಉದ್ಯೋಗಿಯೊಬ್ಬರು, ಕಂಪನಿಯಿಂದ ನಮ್ಮ ಮನೆ ತುಂಬಾ ದೂರವಾಗಿದೆ. ಹಾಗಾಗಿ, ಕಂಪನಿಗೆ ಸಮೀಪದಲ್ಲೇ ಮನೆ ಮಾಡಿಕೊಳ್ಳುವಂತೆ ಹೇಳಲಾಗಿತ್ತು. ಅದರಂತೆ ನಾನು ಇಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ಇದೀಗ ನನ್ನನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಈಗ ಬಾಡಿಗೆ ಮನೆಯಲ್ಲೂ ಇರಲಾಗದೆ, ಮನೆಗೂ ಹೋಗಲಾದ ಪರಿಸ್ಥಿತಿಯಲ್ಲಿ ತೊಳಲಾಡುತ್ತಿದ್ದೇನೆ. ಏಕಾಏಕಿ ಕೆಲಸದಿಂದ ವಜಾಗೊಳಿಸಿರುವ ಪರಿಣಾಮ ಬಾಡಿಗೆ ಕಟ್ಟಲು ಇರಲಿ ಊಟ ಮಾಡಲೂ ಹಣವಿಲ್ಲದಾಗಿದೆ ಎಂದು ಹೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿಯ ಅಧಿಕಾರಿಗಳು, ವಜಾಗೊಳಿಸಿರುವ ಉದ್ಯೋಗಿಗಳಿಗೆ ಒಂದು ತಿಂಗಳು ವೇತನವನ್ನು ಪರಿಹಾರವಾಗಿ ನೀಡಲಾಗುತ್ತಿದೆ. ಮುಂದೆ ಅವಶ್ಯಕತೆ ಬಂದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವಾಗ ಇವರೆಲ್ಲರಿಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಲಾಕ್​ಡೌನ್​ ಕರ್ತವ್ಯದ ಒತ್ತಡ, ಆದರೂ ನಿಲ್ಲಲಿಲ್ಲ ಪ್ರಾರ್ಥನೆ; ರಸ್ತೆಯಲ್ಲೇ ನಮಾಜ್​ ಮಾಡಿದ ಪೊಲೀಸ್​ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts