More

    ಅಪರಾಧಮುಕ್ತ ತಾಲೂಕಿನ ಸಂಕಲ್ಪ: ಡಿವೈಎಸ್‌ಪಿ ಕೆ.ಎನ್.ರಮೇಶ್

    ಚನ್ನಪಟ್ಟಣ :  ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ, ನಗರ ಹಾಗೂ ತಾಲೂಕಿನ ಸ್ವಚ್ಛತೆಯ ಕಡೆಗೂ ಇಲಾಖೆ ಗಮನಹರಿಸಲಿದೆ ಎಂದು ಡಿವೈಎಸ್‌ಪಿ ಕೆ.ಎನ್.ರಮೇಶ್ ತಿಳಿಸಿದರು.
    ಪತ್ರಕರ್ತರ ಜೊತೆ ಸೋಮವಾರ ತಾಲೂಕು ಹಾಗೂ ನಗರದ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಅವರು, ‘ಇಡೀ ತಾಲೂಕನ್ನು ಅಪರಾಧ ಮುಕ್ತ ಮಾಡುವುದು ನನ್ನ ಸಂಕಲ್ಪವಾಗಿದೆ.
    ಇದರೊಂದಿಗೆ ಸ್ವಚ್ಚತೆ, ಪ್ಲಾಸಿಕ್ಟ್ ಸೇರಿ ಇತರ ಸಮಸ್ಯೆಗಳಿಗೆ ಮುಕ್ತಿ ದೊರಕಿಸಿ ತಾಲೂಕನ್ನು ಸುಂದರ ಗೊಳಿಸುವ ಆಶಯ ವಿದೆ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಬೇಕಾಗಿದೆೆ ಎಂದರು.

    ಚನ್ನಪಟ್ಟಣವನ್ನು ಚೆಂದದ ಪಟ್ಟಣವನ್ನಾಗಿಸಲು ಎಲ್ಲರೂ ಪಣತೊಡಬೇಕಿದೆ. ಇದು ತಾಲೂಕು ಕೇಂದ್ರ ಮಾತ್ರವಲ್ಲ, ಐತಿಹಾಸಿಕ ಹಿನ್ನೆಲೆಯ ಜೊತೆಗೆ, ಬೊಂಬೆ ತಯಾರಿಕೆಯಲ್ಲಿ ವಿಶ್ವಪ್ರಸಿದ್ಧಿ ಪಡೆದಿದೆ. ಈ ನಗರದ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

    ಕೋಳಿ ತ್ಯಾಜ್ಯ, ಟ್ರಾಫಿಕ್ ಸಮಸ್ಯೆ, ಸಿ.ಸಿ.ಟಿವಿ ಅಳವಡಿಸುವುದು, ಬೇಕಾಬಿಟ್ಟಿ ದ್ವಿಚಕ್ರವಾಹನಗಳ ನಿಲುಗಡೆ, ಫುಟ್‌ಪಾತ್ ವ್ಯಾಪಾರದಿಂದ ಉಂಟಾಗಿರುವ ಸಮಸ್ಯೆ, ಹೆದ್ದಾರಿಯಲ್ಲಿ ಡಿವೈಡರ್ ಇಲ್ಲದಿರುವುದರಿಂದ ಆಗುತ್ತಿರುವ ಸಂಚಾರ ಸಮಸ್ಯೆ, ಆಟೋಗಳ ನಿಯಮ ಉಲ್ಲಂಘನೆ, ಖಾಸಗಿ ಸೀಜರ್‌ಗಳ ಗೂಂಡಾಗಿರಿ ಸೇರಿ ಹಲವು ಗ್ರಾಮೀಣ ಹಾಗೂ ನಗರದ ಸಮಸ್ಯೆಗಳನ್ನು ತಾಲೂಕು ಪತ್ರಕರ್ತರು, ಎಳೆಎಳೆಯಾಗಿ ಬಿಡಿಸಿಟ್ಟರು.

    ಸಮಸ್ಯೆಗಳ ಪಟ್ಟಿ ಮಾಡಿಕೊಂಡ ಡಿವೈಎಸ್‌ಪಿ ಇವುಗಳ ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದವರ ಜೊತೆ ಚರ್ಚಿಸಿ, ಶೀಘ್ರ ಬಗೆಹರಿಸಲಾಗುವುದು ಎಂದು ತಿಳಿಸಿದರು.

    ಎಲ್ಲರ ಜೊತೆ ಸಭೆ: ಅಪರಾಧ ಮುಕ್ತ ತಾಲೂಕಿನ ಜೊತೆಗೆ, ಕ್ಲೀನ್ ಸಿಟಿಯನ್ನಾಗಿಸುವ ಧ್ಯೇಯಕ್ಕೆ ಎಲ್ಲರೂ ಕೈಜೋಡಿಸಬೇಕು. ಸಂಚಾರ ಉಲ್ಲಂಘನೆ ಸೇರಿ ದಂಡ ಪಾವತಿಸುವ ವಿಧಾನವನ್ನು ಮುಂದಿನ ದಿನಗಳಲ್ಲಿ ಡಿಜಿಲೀಕರಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
    ವೃತ್ತ ನಿರೀಕ್ಷಕರಾದ ಶಿವಕುಮಾರ್, ದಿವಾಕರ್, ಪಿಎಸ್‌ಐಗಳಾದ ಎಚ್.ಎಂ.ಶಿವಕುಮಾರ್, ಸದಾನಂದ್, ರವೀಂದ್ರ, ಮಮತಾ ಹಾಗೂ ತಾಲೂಕಿನ ಪತ್ರಕರ್ತರು ಉಪಸ್ಥಿತರಿದ್ದರು.

    ನಾನೂ ಪತ್ರಕರ್ತನಾಗಿದ್ದೆ :  ನಾನು ಕೂಡ ವೃತ್ತಿಗೆ ಸೇರುವ ಮೊದಲು ಪತ್ರಕರ್ತನಾಗಿದ್ದೆ. ಪತ್ರಕರ್ತರಿಗೆ ಸಮಾಜದ ಪ್ರತಿಯೊಂದು ವಿಚಾರಗಳು ಶೀಘ್ರವಾಗಿ ಗಮನಕ್ಕೆ ಬರುತ್ತವೆ. ಹಾಗಾಗಿ ನಿಮ್ಮ ಸಲಹೆ ಸೂಚನೆ ಅತಿಮುಖ್ಯವಾಗಿದೆ. ನಿಮ್ಮ ಗಮನಕ್ಕೆ ಬರುವ ವಿಚಾರಗಳನ್ನು ನನ್ನ ಜೊತೆ ಚರ್ಚಿಸಬಹುದು. ನಾವೂ ನೀವು ಸೇರಿ ನಗರ ಹಾಗೂ ತಾಲೂಕಿನ ಸಮಸ್ಯೆಗಳ ಬಗ್ಗೆ ಗಮನಹರಿಸೋಣ ಎಂದು ಡಿವೈಎಸ್‌ಪಿ ಕೆ.ಎನ್.ರಮೇಶ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts