More

    ದ್ವಾರಸಮುದ್ರ ಕೆರೆ ಒಡಲು ಬರಿದು

    ಹಳೇಬೀಡು: ವಾಡಿಕೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ಹೋಬಳಿಯ ಜೀವನಾಡಿ ಎನಿಸಿಕೊಂಡಿರುವ ದ್ವಾರಸಮುದ್ರ ಕೆರೆಯ ಒಡಲು ಬರಿದಾಗುತ್ತಿದ್ದು, ಅಂತರ್ಜಲ ಮಟ್ಟವೂ ಗಣನೀಯವಾಗಿ ಕುಸಿಯುತ್ತಿದೆ.

    ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಲಿದೆ ಎಂಬ ಮಾತು ದಟ್ಟವಾಗಿ ಕೇಳಿ ಬರುತ್ತಿದೆ. ವರ್ಷದ ಆರಂಭದಿಂದ ಯುಗಾದಿ ಹಬ್ಬದವರೆಗೂ ಬಿತ್ತನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಳೆ ಸುರಿದ ಪರಿಣಾಮ ರೈತರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಏಪ್ರಿಲ್ ನಂತರ ಮುಂಗಾರು ಪೂರ್ವ ಬೇಸಿಗೆ ಮಳೆಗಳು ಕೈಕೊಟ್ಟಿದ್ದರಿಂದ ಬಿತ್ತನೆಯಾಗಿದ್ದ ಬೆಳೆಗಳೆಲ್ಲವೂ ನೆಲಕಚ್ಚಿತು. ತಡವಾಗಿ ಆರಂಭವಾದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ಕೃಷಿ ಕಾರ್ಯಕ್ಕೆ ಹಿನ್ನೆಡೆಯಾಗಿದ್ದಲ್ಲದೆ, ಕೆರೆಕಟ್ಟೆಗಳಿಗೆ ಹನಿ ನೀರು ಸಹ ಹರಿದು ಬರಲಿಲ್ಲ.

    800 ಎಕರೆ ವ್ಯಾಪ್ತಿ ಪ್ರದೇಶದಲ್ಲಿರುವ ದ್ವಾರಸಮುದ್ರ ಕೆರೆಯು 2022ರಲ್ಲಿ ತುಂಬಿ ಹರಿದಿದ್ದರಿಂದ ಪಸಕ್ತ ವರ್ಷ ಇಲ್ಲಿಯವರೆಗೂ ರೈತರು ಕೊಳವೆಬಾವಿಯ ಅಂತರ್ಜಲವನ್ನು ಬಳಸಿಕೊಂಡು ತಕ್ಕಮಟ್ಟಿಗಿನ ವ್ಯವಸಾಯ ಮಾಡಿದ್ದಾರೆ. ಹಿಂಗಾರು ಮಳೆಯು ಸಂಪೂರ್ಣ ಕೈಕೊಟ್ಟಿರುವುದರಿಂದ ಭವಿಷ್ಯದ ದಿನಗಳಲ್ಲಿ ತರಕಾರಿ ಹಾಗೂ ಧಾನ್ಯದ ಕೊರತೆ ಎದುರಾಗಿ, ಗ್ರಾಹಕರಿಗೆ ವಿಪರೀತ ಬೆಲೆ ಏರಿಕೆ ಬಿಸಿ ತಟ್ಟುವುದು ನಿಶ್ಚಿತವಾಗಿದೆ. ದ್ವಾರಸಮುದ್ರ ಕೆರೆಗೆ ನೀರು ಹರಿಸುವ ಮೇಲಿನ ಕೆರೆಗಳೂ ಮಳೆ ಇಲ್ಲದೆ ಬರಿದಾಗಿರುವುದರಿಂದ ಮುಂದಿನ ಮಳೆಗಾಲದ ಸಮಯದೊಳಗೆ ಐತಿಹಾಸಿಕ ಕೆರೆಯೂ ಬರಿದಾಗುವ ಲಕ್ಷಣ ಗೋಚರಿಸಿದೆ.

    ಗೌಡಗೆರೆ ಸಮೀಪ ಏತ ನೀರಾವರಿ ಘಟಕ ಸ್ಥಾಪನೆ: ಚಿಕ್ಕಮಗಳೂರು ಜಿಲ್ಲೆಯ ಗಿರಿಪರ್ವತಗಳ ಸಾಲಿನಲ್ಲಿ ಮುಂಗಾರು ಮಳೆ ತಕ್ಕಮಟ್ಟಿಗೆ ಸುರಿದ ಪರಿಣಾಮ ಬೇಲೂರು ತಾಲೂಕಿನ ಯಗಚಿ ಜಲಾಶಯ ಸೆಪ್ಟೆಂಬರ್ ವೇಳೆಗೆ ತುಂಬಿತ್ತು. 3.5 ಟಿ.ಎಂ.ಸಿ. ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಡ್ಯಾಂನಿಂದ ಈಗಾಗಲೇ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ ಸ್ವಲ್ಪ ಮಟ್ಟಿಗಿನ ನೀರನ್ನು ಹರಿಸಲಾಗಿದೆ. ಎಡದಂಡೆ-ಬಲದಂಡೆ ನಾಲೆಗಳಲ್ಲಿ ಕೃಷಿ ಕಾರ್ಯಕ್ಕೆಂದು ಅಲ್ಪ ಪ್ರಮಾಣದ ನೀರು ಹರಿಯುತ್ತಿದೆ.

    ಹಳೇಬೀಡಿನ ಕೆರೆಗೆ ನೀರು ಹರಿಸಲು ತಾಲೂಕಿನ ಗೌಡಗೆರೆ ಗ್ರಾಮದ ಸಮೀಪ ಏತ ನೀರಾವರಿ ಘಟಕ ಸ್ಥಾಪಿಸಲಾಗಿದೆ. ಇಲ್ಲಿ ಸಂಗ್ರಹವಾಗುವ ನೀರನ್ನು ಯಂತ್ರಗಳ ಮೂಲಕ ದ್ವಾರಸಮುದ್ರ ಕೆರೆ ಪಾತ್ರದಲ್ಲಿರುವ ಸಣ್ಣ ಕೆರೆಗಳಿಗೆ ಹರಿಸಲಾಗುತ್ತದೆ. ಅಲ್ಲಿಂದ ನಾಲ್ಕು ಕೆರೆಗಳನ್ನು ದಾಟಿ, ಯಗಚಿ ನದಿಯ ನೀರು ಹಳೇಬೀಡು ಕೆರೆಯನ್ನು ತಲುಪುತ್ತದೆ. ಈಗಾಗಲೇ ಏತ ನೀರಾವರಿ ನಾಲೆಯಲ್ಲಿ ನೀರನ್ನು ಹರಿಸಲಾಗುತ್ತಿದ್ದರೂ, ಪ್ರಸ್ತುತ ಎಲ್ಲ ಕೆರೆಗಳೂ ಬತ್ತಿರುವುದರಿಂದ ಈ ಬಾರಿ ದ್ವಾರಸಮುದ್ರಕ್ಕೆ ಹೆಚ್ಚಿನ ಪ್ರಮಾಣದ ನೀರು ಬರುವುದು ಅನುಮಾನ. ಡಿಸೆಂಬರ್ ಅತ್ಯಂದವರೆಗೆ ನೀರು ಬಿಡುವ ಪ್ರಕ್ರಿಯೆ ಇದ್ದರೂ, ಸಂಗ್ರಹಣೆಯಲ್ಲಿ ತೀವ್ರ ಕುಸಿತವಾಗುವ ಲಕ್ಷಣ ಇರುವುದರಿಂದ ಮುಂದಿನ ದಿನಗಳಲ್ಲಿ ಬರಗಾಲ ಎದುರಾಗುವ ಸೂಚನೆ ದಟ್ಟವಾಗುತ್ತಿದೆ.

    ಬೆಳೆ ನಷ್ಟ ಭೀತಿ; ಮುಂಗಾರು ಮತ್ತು ಹಿಂಗಾರು ಸಂಪೂರ್ಣ ಕೈಕೊಟ್ಟಿದ್ದಲ್ಲದೆ, ಕೆರೆಯಲ್ಲಿ ನೀರಿನ ಸಂಗ್ರಹಣೆಯೂ ತೀವ್ರ ಇಳಿಮುಖವಾದ ಕಾರಣ ಈ ಬಾರಿ ರೈತರು ಸಾಕಷ್ಟು ಬೆಳೆ ನಷ್ಟ ಅನುಭವಿಸಿದ್ದಾರೆ. ರಾಗಿ, ಹುರುಳಿ, ಎಳ್ಳು ಮತ್ತಿತರ ಅಗತ್ಯ ಧಾನ್ಯಗಳ ಇಳುವರಿಯೂ ಕುಸಿತವಾ ಗಿದ್ದು, ಜೋಳ, ಸೂರ್ಯಕಾಂತಿ ಮುಂತಾದ ವಾಣಿಜ್ಯ ಬೆಳೆಗಳು ಸಂಪೂರ್ಣ ನೆಲ ಕಚ್ಚಿದೆ. ಬಹಳಷ್ಟು ಹೊಲಗಳಲ್ಲಿ ಮುಸುಕಿನ ಜೋಳವು ಒಣಗಿ ನಿಂತಿರುವುದು ನೀರಿನ ಅಭಾವ ಮತ್ತು ಬರಗಾಲದ ತೀವ್ರತೆಯನ್ನು ಪ್ರತಿಬಿಂಬಿಸುತ್ತಿದೆ.

    ಬಿತ್ತನೆಯಾಗಿದ್ದ ಪ್ರಮಾಣದಲ್ಲಿ ಶೇ.70ಕ್ಕೂ ಹೆಚ್ಚಿನ ಬೆಳೆಹಾನಿ ಸಂಭವಿಸಿದೆ. ತರಕಾರಿ ಕೃಷಿಗೂ ನೀರಿನ ಅಭಾವ ಕಾಡಿದ್ದು, ನಿರೀಕ್ಷಿತ ಇಳುವರಿ ಪಡೆಯಲು ರೈತರಿಗೆ ಸಾಧ್ಯವಾಗಿಲ್ಲ. ಬರ ಪರಿಹಾರ ಕಾರ್ಯಗಳು ಇನ್ನೂ ಆರಂಭವಾಗದಿರುವುದು ಅನ್ನದಾತರಲ್ಲಿ ಆತಂಕ ಹೆಚ್ಚಿಸಿದೆ. ಮುಂದಿನ ಹಂಗಾಮಿನ ಕೃಷಿಯ ಬಗ್ಗೆ ಚಿಂತಿಸುವಂತೆ ಮಾಡಿದೆ. ಇದರ ನಡುವೆ, ಶುಂಠಿ ಬೆಳೆದಿರುವ ಕೆಲ ರೈತರು ಸದ್ಯದ ಬೆಲೆ ಏರಿಕೆಯ ಬಂಪರ್ ಲಾಭ ಪಡೆಯುತ್ತಿರುವುದು ಸಾಂಪ್ರದಾಯಿಕ ಹಾಗೂ ವಾಣಿಜ್ಯ ಕೃಷಿಯ ನಡುವಿನ ಲಾಭನಷ್ಟಗಳ ಅಸಮಾನತೆಗೆ ಸಾಕ್ಷಿಯಾಗಿದೆ.

    ರಣಘಟ್ಟ ನೀರಾವರಿ ಶೀಘ್ರ ಪೂರ್ಣಗೊಳ್ಳಲಿ: ಪ್ರಗತಿಯಲ್ಲಿರುವ ರಣಘಟ್ಟ ಯೋಜನೆ ಶೀಘ್ರ ಪೂರ್ಣಗೊಂಡರೆ, ನೀರಾವರಿಯಿಂದ ವಂಚಿತವಾಗಿರುವ ಹಳೇಬೀಡು ಹೋಬಳಿಯ ರೈತರು ತುಸು ನೆಮ್ಮದಿ ಕಾಣಲಿದ್ದಾರೆ. ಹೊಯ್ಸಳ ಅರಸರ ಕಾಲದಲ್ಲೇ ತಾಲೂಕಿನ ರಣಘಟ್ಟ ಗ್ರಾಮದ ಬಳಿ ಯಗಚಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿ, ಅಲ್ಲಿ ಸಂಗ್ರಹವಾಗುವ ನೀರನ್ನು ನೇರ ಕಾಲುವೆ ಮೂಲಕ ಗುರುತ್ವ ಬಲದಲ್ಲಿ ಹಳೇಬೀಡು ಕೆರೆಗೆ ಹರಿಸಲಾಗುತ್ತಿತ್ತು. ಪ್ರಸ್ತುತ ಇದೇ ಮಾದರಿಯನ್ನು ಅನುಸರಿಸಿ ಈಗಾಗಲೇ 80 ಲಕ್ಷ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಇದರ ಜತೆಗೆ 125 ಕೋಟಿ ರೂ. ಅನುದಾನದಲ್ಲಿ ಆಧುನಿಕ ನಾಲೆ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದ್ದು, ನಿರೀಕ್ಷಿತ ವೇಗದಲ್ಲಿ ಕೆಲಸ ನಡೆದರೆ ಮೂರ್ನಾಲ್ಕು ತಿಂಗಳಲ್ಲಿ ಯೋಜನೆಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಮೂಲಕ ಹಳೇಬೀಡು ಹೋಬಳಿ ಭಾಗದ ಜನತೆಯ ಬಹುದಿನಗಳ ಕನಸು ನನಸಾಗುವ ಸಾಧ್ಯತೆಯೂ ಕಣ್ಣ ಮುಂದಿದೆ.

    ಡಿಸೆಂಬರ್ ಅಂತ್ಯದವರೆಗೂ ಏತ ನೀರಾವರಿ ನಾಲೆಯಲ್ಲಿ ನೀರನ್ನು ಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಲಾಶಯದಲ್ಲಿ ನೀರಿನ ಸಂಗ್ರಹಣೆ ಪ್ರಮಾಣವನ್ನು ನೋಡಿಕೊಂಡು ಮುಂದುವರಿಸಲು ಚಿಂತನೆ ನಡೆಸಿದ್ದೇವೆ. ರಣಘಟ್ಟ ಯೋಜನೆ ಸಕಾಲದಲ್ಲಿ ಪೂರ್ಣಗೊಳ್ಳಲಿದೆ. ಈ ಬಗ್ಗೆ ರೈತರಿಗೆ ಆತಂಕ ಬೇಡ. ಬರಗಾಲದ ಮುನ್ಸೂಚನೆ ಇರುವುದರಿಂದ ದ್ವಾರಸಮುದ್ರ ಕೆರೆಯಲ್ಲಿ ಮುಂದಿನ ವರ್ಷಕ್ಕೆ ಅರ್ಧದಷ್ಟು ನೀರನ್ನಾದರೂ ಉಳಿಸಲೇಬೇಕಿದೆ. ಅದಕ್ಕಾಗಿ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು
    ಎಚ್.ಕೆ. ಸುರೇಶ್ ಶಾಸಕ, ಬೇಲೂರು ಕ್ಷೇತ್ರ

    ರಣಘಟ್ಟ ನೀರಾವರಿ ಯೋಜನೆ ಕಾಮಗಾರಿ ನಿರೀಕ್ಷೆಯಂತೆ ನಡೆಯುತ್ತಿದೆ. ಸುರಂಗ ಕೊರೆಯುವ ಸಂದರ್ಭದಲ್ಲಿ ಕೆಲ ಸಮಸ್ಯೆಗಳು ಉದ್ಭವಿಸಿ ಆಗುತ್ತಿರುವ ಅಲ್ಪ ಹಿನ್ನಡೆಯಿಂದ ಕೆಲಸದ ವೇಗ ಕುಂಠಿತವಾಗುತ್ತಿದೆ. ಅಷ್ಟು ಹೊರತುಪಡಿಸಿ ಮತ್ತಾವ ಸಮಸ್ಯೆಯೂ ಎದುರಾಗಿಲ್ಲ. ಬರಗಾಲದ ಸೂಚನೆ ಇರುವುದರಿಂದ ನಾಲೆ ನಿರ್ಮಾಣವನ್ನು ಚುರುಕುಗೊಳಿಸಲಾಗಿದೆ
    ಶಿವಕುಮಾರ್ ಸಹಾಯಕ ಇಂಜಿನಿಯರ್, ಯಗಚಿ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts