More

    ಪಠ್ಯಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪೂರ್ಣ ವಿವರ ಅಳವಡಿಸುವಲ್ಲಿ ವಿಫಲ; ಸಚಿವ ನಾಗೇಶ್ ಕಳವಳ

    ಶಿವಮೊಗ್ಗ: ದೇಶದ ಸ್ವಾತಂತ್ರ್ಯ ಹೋರಾಟಗಾರರ ಪೂರ್ಣ ವಿವರಗಳನ್ನು ಶಾಲಾ-ಕಾಲೇಜುಗಳ ಪಠ್ಯಗಳಲ್ಲಿ ಅಳವಡಿಸುವಲ್ಲಿ ನಾವು ವಿಫಲರಾಗಿದ್ದು ಕೆಲವೇ ಕೆಲವು ಹೋರಾಟಗಾರರನ್ನು ಪರಿಚಯಿಸಲಾಗಿದೆ. ಹಾಗಾಗಿ ಕೆಲವರಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ ಎಂಬ ತಪ್ಪು ಕಲ್ಪನೆ ಯುವ ಪೀಳಿಗೆಯಲ್ಲಿ ಬೇರೂರಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕಳವಳ ವ್ಯಕ್ತಪಡಿಸಿದರು.
    ಡಿವಿಎಸ್‌ನ ಅಮೃತ ಮಹೋತ್ಸವದ ಸಮಾರೋಪದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, ಬ್ರಿಟಿಷರು ಗುಲಾಮಗಿರಿ ಶಿಕ್ಷಣವನ್ನು ತಂದಿದ್ದರು. ಬ್ರಿಟಿಷರ ಆಡಳಿತದಿಂದ ದೇಶ ಮುಕ್ತವಾದ ಬಳಿಕ ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬೆರಳೆಣಿಕೆಯಷ್ಟು ಮಹಾನೀಯರ ಇತಿಹಾಸವನ್ನು ಪಠ್ಯಗಳಲ್ಲಿ ಸೇರಿಸಲಾಗಿದೆ. ಹಾಗಾಗಿ ಇನ್ನೂ ಹಲವರು ಪರಿಚಯವೇ ಯುವ ಸಮೂಹಕ್ಕೆ ಆಗುತ್ತಿಲ್ಲ ಎಂಬುದು ವಿಷಾದನೀಯ ಸಂಗತಿ ಎಂದರು.
    ಇಂದಿಗೂ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ತಿಳಿಯದೇ ಇರುವುದು ವಿದ್ಯಾರ್ಥಿಗಳ ತಪ್ಪಲ್ಲ. ಪ್ರಸ್ತುತ ವ್ಯವಸ್ಥೆಯ ತಪ್ಪಾಗಿದೆ. ಯಾರೆಲ್ಲ ದೇಶಕ್ಕಾಗಿ ಹೋರಾಡಿ ಮಡಿದಿದ್ದಾರೋ ಅವರಲ್ಲೆರ ಪರಿಚಯವನ್ನು ಪಠ್ಯಗಳ ಮೂಲಕ ಕಟ್ಟಿಕೊಡುವ ಕೆಲಸ ಆಗಬೇಕಿತ್ತು. ಆದರೆ ಇಂದಿಗೂ ಅದು ಸಾಧ್ಯವಾಗದ ಕಾರಣ ನಿಜವಾದ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಆಗಿಲ್ಲ ಎಂದು ಹೇಳಿದರು.
    ದೇಶೀಯಾ ಶಿಕ್ಷಣವನ್ನು ಕೊಡಬೇಕೆಂಬ ಉದ್ದೇಶದಿಂದ ಡಿವಿಎಸ್ 1943ರಲ್ಲೇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದು ಇಂದಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. 2000ನೇ ಸಾಲಿನ ಬಳಿಕ ಶಿಕ್ಷಣ ಎಂಬುದು ವ್ಯಾಪಾರಿಕರಣವಾಗುತ್ತಿತ್ತು. ಡಿವಿಎಸ್‌ನಂತಹ ಅನೇಕ ಸಂಸ್ಥೆಗಳು ಮಕ್ಕಳಿಗೆ ದೇಶೀಯಾ ಶಿಕ್ಷಣ ನೀಡಲು ಕೈಜೋಡಿಸಿದ ಪರಿಣಾಮ ಶಿಕ್ಷಣದ ಮೌಲ್ಯಗಳು ಇಂದಿಗೂ ಉಳಿದುಕೊಂಡಿವೆ ಎಂದರು.
    ಬಿಜೆಪಿ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಮೇಲೆ ಸರ್ವ ಶಿಕ್ಷಣ ಯೋಜನೆಯನ್ನು ಘೋಷಣೆ ಮಾಡಿತ್ತು. ಪ್ರತಿ ಮಗುವಿನಲ್ಲೂ ರಾಷ್ಟ್ರೀಯ ಭಾವನೆ ಮೂಡಿಸುವ ಉದ್ದೇಶದಿಂದ ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಜಾರಿಗೊಳಿಸಲಾಗುತ್ತಿದೆ. ಸುದೀರ್ಘ ಚರ್ಚೆ, ಎರಡು ವರ್ಷ ಸಾರ್ವಜನಿಕ ಅಭಿಪ್ರಾಯಕ್ಕೆ ಬಿಟ್ಟು ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
    ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್, ಖಜಾಂಚಿ ಬಿ.ಗೋಪಿನಾಥ್, ನಿರ್ದೇಶಕರಾದ ಎಂ.ರಾಜು, ಡಾ. ಎಚ್.ಮಂಜುನಾಥ, ಜಿ.ಮಧುಸೂದನ್, ಎನ್.ಆರ್.ನಿತಿನ್, ಎಚ್.ಸಿ.ಉಮೇಶ್, ಡಾ. ಎಂ.ವೆಂಕಟೇಶ್, ಪ್ರಮುಖರಾದ ಪದ್ಮೇಗೌಡ, ಎ.ರಾಜಶೇಖರ್, ಲಕ್ಷ್ಮೀದೇವಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts