More

    ಕಗ್ಗದ ಬೆಳಕು: ಅಂತರಂಗದ ಗೂಢ ಒಳಸುಳಿಗಳು

    ಕಗ್ಗದ ಬೆಳಕು: ಅಂತರಂಗದ ಗೂಢ ಒಳಸುಳಿಗಳುಅಂತರಂಗವನೆಲ್ಲ ಬಿಚ್ಚಿ ತೋರಿಪನಾರು? |

    ಅಂತರಗಭೀರಗಳ ತಾನೆ ಕಂಡವನಾರ್? ||

    ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ |

    ಸ್ವಂತಕೇ ದುರ್ದರ್ಶ – ಮಂಕುತಿಮ್ಮ ||

    ‘ಆಂತರ್ಯವನ್ನೆಲ್ಲ ಬಿಚ್ಚಿ ತೋರಿಸುವವರು ಯಾರು? ಒಳಗಿನ ರಹಸ್ಯ ಕಂಡವರು ಯಾರು? ಮಡಿಕೆಮಡಿಕೆಯಲ್ಲೂ ಗ್ರಂಥಿ, ಗಂಟು ಇವೆ. ಸ್ವಂತಕ್ಕೆ ಅವನ್ನು ನೋಡಲು ಸಾಧ್ಯವಿಲ್ಲ’ ಎನ್ನುತ್ತದೆ ಈ ಕಗ್ಗ.

    ‘ನಾನು ಏನೆಂಬುದು ಚೆನ್ನಾಗಿ ತಿಳಿದಿದೆ, ಮನಸ್ಸು ಮಾಡಿದರೆ ಏನೂ ಮಾಡಬಲ್ಲೆ’ ಎಂಬಂಥ ಮಾತುಗಳು ನಮ್ಮ ನಡುವೆ ಓಡಾಡುತ್ತಿರುತ್ತವೆ. ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಸಂದರ್ಭದಲ್ಲಿ ಹಮ್ಮಿನಿಂದ ನುಡಿಯುವ ಛಲ ಹೊತ್ತ ಮಾತುಗಳಿವು. ಆದರೆ ನಿಜಕ್ಕೂ ತನ್ನನ್ನು ತಾನು ಅರಿತವನು ತನ್ನ ಬಗ್ಗೆ ತಾನೇ ಏನನ್ನೂ ನುಡಿಯಲಾರ. ಯಾಕೆಂದರೆ ಅಂತರೀಕ್ಷಣೆ ಸುಲಭಸಾಧ್ಯವಲ್ಲ. ಸಾಧ್ಯವಾದ ಮೇಲೆ ‘ನಾನು’ ಎಂಬ ಅಹಂಭಾವ ಉಳಿಯುವುದಿಲ್ಲ.

    ಪಾರದರ್ಶಕತೆ, ಅರ್ಥಮಾಡಿಕೊಳ್ಳುವುದು, ಇಂಗಿತವನ್ನರಿತು ನಡೆಯುವುದು ಮುಂತಾದ ವರ್ತನೆಗಳು ಆತ್ಮೀಯರ ನಡುವೆ ಇರುತ್ತದೆ ಎಂದು ನಂಬಲಾಗಿದೆ. ತಾಯಿ-ಮಗು ಎಂಬ ಕರುಳ ಸಂಬಂಧದಿಂದ ತೊಡಗಿ, ಗಂಡ-ಹೆಂಡತಿ ಎಂಬ ಭಾವಬಂಧುತ್ವದವರೆಗೂ ಪರಸ್ಪರ ಅರಿತಿದ್ದೇವೆ, ಅರಿತಿರಬೇಕು ಎಂಬ ಮಾತಿದೆ. ಈ ಬಗೆಯ ಕಲ್ಪನೆಯೇ ಬಾಂಧವ್ಯಗಳನ್ನು ಗಟ್ಟಿಗೊಳಿಸುತ್ತದೆ ಎನ್ನುವುದೇನೋ ಸತ್ಯ. ‘ತನ್ನವರು’, ‘ತನಗಾಗಿ ಇರುವವರು’ ಎನ್ನುವ ವಿಶ್ವಾಸ ಜೀವನೋತ್ಸಾಹ ಮೂಡಿಸುತ್ತದೆ. ಆದರೆ ನಿಜವಾಗಿ ತನ್ನ ಅಂತರಂಗವನ್ನೆಲ್ಲ ಇನ್ನೊಬ್ಬರ ಎದುರು ಹರವಿ ತೋರುವವರು ಯಾರಿದ್ದಾರೆ? ಇಬ್ಬರು ವ್ಯಕ್ತಿಗಳ ನಡುವೆ ಪ್ರತ್ಯೇಕತೆ ಎನ್ನುವ ಒಂದು ಗೋಡೆ ಇದ್ದೇ ಇರುತ್ತದೆ. ಪರಸ್ಪರ ಅರ್ಥವಾಗಿದ್ದೇವೆ ಎನ್ನುವುದು ಭ್ರಮೆ. ಪ್ರೀತಿ-ಮಮತೆಗಳಿಗೂ ಗೋಚರಿಸದಂತೆ ಎಲ್ಲರೂ ತಮ್ಮೊಳಗೆ ವೈಯಕ್ತಿಕ ಪ್ರಪಂಚ ನಿರ್ವಿುಸಿಕೊಂಡಿರುತ್ತಾರೆ. ಜೀವಕ್ಕೆ ಜೀವವಾಗಿರುವವರಿಗೂ ಅದರ ಸುಳಿವು ಲಭ್ಯವಾಗದು. ಎಲ್ಲರ ಆಂತರ್ಯವೂ ಕಡಲಿನಂತೆ ಕ್ಷಣಕ್ಷಣವೂ ಭಾವದಲೆಗಳನ್ನು ಹೊಮ್ಮಿಸುತ್ತಿರುತ್ತದೆ. ಪ್ರಕ್ಷುಬ್ಧ ಸಾಗರದಲೆಗಳ ನಡುವೆ ಹೊಯ್ದಾಡುವ ದೋಣಿಯಂತೆ ಮನಸ್ಸು ವಿವಿಧ ಭಾವಗಳಿಗೆ ಸಿಕ್ಕು ಚಡಪಡಿಸುತ್ತಿರುತ್ತದೆ. ಅಲ್ಲಿ ಅವೆಷ್ಟೋ ಸಮಸ್ಯೆಗಳ ಗಂಟುಗಳು, ಸಂಕಟಗಳು, ಬೇಸರದ ಸುಳಿಗಳಿವೆ. ಅದು ಕಣ್ಣೀರಿಗೂ ನಿಲುಕದ ಭಾವದಲ್ಲಿ ಜೀವವನ್ನು ಒಳಗೊಳಗೇ ದಹಿಸುತ್ತಿರುತ್ತದೆ. ಆತ್ಮೀಯರೊಡನೆ ಬೇಸರ, ಚಿಂತೆಗಳನ್ನು ಹಂಚಿ ಸಾಂತ್ವನ, ಪರಿಹಾರ ಪಡೆಯಬಹುದು. ಆದರೆ ಯಾರೊಡನೆಯೂ ಹೇಳಿಕೊಳ್ಳಲಾಗದ, ಭಾವನೆಗಳ ಮಹಾಪೂರವೂ ಮನುಷ್ಯನ ಹೃದಯದಲ್ಲಿರುತ್ತದೆ. ಪಡೆಯಬಾರದ, ಆದರೆ ಪಡೆಯಲೇಬೇಕೆಂದು ತೀವ್ರವಾಗಿ ಕಾಡುವ ಅಭೀಪ್ಸೆಗಳು, ಮೂಡಿ ಮರೆಯಾಗುವ ವಿಚಿತ್ರ ಕಾಮನೆಗಳು, ಮತ್ತೆಮತ್ತೆ ಕಾಡುವ ಬಯಕೆಗಳು ಮನಸ್ಸನ್ನು ಹಿಂಸಿಸುತ್ತಿರುತ್ತದೆ. ಇಂಥ ರಹಸ್ಯ ಭಾವನೆಗಳನ್ನು ಯಾರೊಡನೆಯೂ ಹೇಳಿಕೊಳ್ಳಲಾಗದೆ ಒಳಗೊಳಗೇ ಕರುಬುವುದು, ಕೊರಗುವುದು ಎಲ್ಲರ ಅನುಭವ. ಕಡಲಿನಲ್ಲಿ ಯಾವ ಆಳದಲ್ಲಿ ಏನು ಅಡಗಿದೆ ಎಂದು ತಿಳಿಯುವುದು ಸಾಧ್ಯವಿಲ್ಲ. ಅಂತೆಯೇ ಮನದ ಭಿತ್ತಿಯಲ್ಲಿ ಪಡಿಮೂಡುವ ಭಾವಚಿತ್ತಾರಗಳನ್ನು ಇನ್ನೊಬ್ಬರು ಕಾಣುವುದಕ್ಕೆ ಸಾಧ್ಯವಿಲ್ಲ.

    ಸ್ವತಃ ವ್ಯಕ್ತಿಯೂ ತನ್ನ ಆಂತರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾರ. ವಿಷಮ ಸಂದರ್ಭಗಳಲ್ಲಿ, ಆಕರ್ಷಕವಾದುದರ ಎದುರಿನಲ್ಲಿ ವ್ಯಕ್ತಿಯ ಮನಸ್ಸು ಮರ್ಕಟದಂತೆ ಹಾರಾಡುತ್ತದೆ. ಚಂಚಲ ಮನವನ್ನು ನಿಯಂತ್ರಿಸಲಾಗದೆ ವ್ಯಕ್ತಿ ಚಡಪಡಿಸುತ್ತಾನೆ. ಕೆಲವೊಮ್ಮೆ ವ್ಯಗ್ರನಾಗುತ್ತಾನೆ, ಹುಚ್ಚನಂತೆ ನಡೆದುಕೊಳ್ಳುತ್ತಾನೆ. ಈ ತೊಡಕಿನಿಂದ ಪಾರಾಗಲು ಮನಸ್ಸಿನ ಓಟವನ್ನು ನಿರಂತರವಾಗಿ ಅವಲೋಕಿಸಬೇಕು. ಯುಕ್ತಾಯುಕ್ತತೆಯ ಪ್ರಜ್ಞೆಯಲ್ಲಿ ಬಾಳಬೇಕು. ಆಗ ತನ್ನ ತಾನರಿಯುತ್ತ ಸಂಯಮ ಸಾಧಿಸಿ ಶಾಂತಚಿತ್ತರಾಗಿ ಬಾಳಬಹುದು.

    (ಲೇಖಕರು ಉಪನ್ಯಾಸಕರು, ಕವಯಿತ್ರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts