More

    ಶಿವಗಿರಿಯಲ್ಲಿ ಧೂಳಿನ ಗೋಳು

    ಧಾರವಾಡ: ನಗರದ ಶಿವಗಿರಿಯ ನಿವಾಸಿಗಳು ಧೂಳಿನ ಸಮಸ್ಯೆಯಿಂದ ನರಳುತ್ತಿದ್ದಾರೆ. ಇದ್ದ ಡಾಂಬರ್ ರಸ್ತೆಗಳು ಯುಜಿಡಿ, ಇತರ ಕಾಮಗಾರಿಗಳಿಂದಾಗಿ ಮಣ್ಣಿನ ರಸ್ತೆಗಳಾಗಿ ಮಾರ್ಪಟ್ಟಿವೆ. ಧೂಳಿನ ಗೋಳಿನಿಂದ ಬೇಸತ್ತ ನಾಗರಿಕರು ಕರ ನಿರಾಕರಣೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

    ಶಿವಗಿರಿ ಬಡಾವಣೆ ಹು- ಧಾ ಪಾಲಿಕೆಯ ವಾರ್ಡ್ ನಂ. 17ರ ವ್ಯಾಪ್ತಿಗೊಳಪಡುತ್ತದೆ. 2 ವರ್ಷಗಳಿಂದ ಅಲ್ಲಲ್ಲಿ ಯುಜಿಡಿ ಕಾಮಗಾರಿಗಾಗಿ ಇದ್ದ ಡಾಂಬರ್ ರಸ್ತೆಗಳನ್ನು ಹದಗೆಡಿಸಲಾಗಿದೆ. ಬಡಾವಣೆಯಲ್ಲಿ ಪ್ರತಿದಿನ 18 ಸಾರಿಗೆ ಬಸ್​ಗಳು, ಖಾಸಗಿ ವಾಹನಗಳು ಸಂಚರಿಸುತ್ತವೆ. ಈ ವೇಳೆ ಮನೆ ತುಂಬ ಧೂಳು ಸಂಗ್ರಹವಾಗುತ್ತಿದೆ. ಈ ಬಗ್ಗೆ ಪಾಲಿಕೆ ಮಾಜಿ ಸದಸ್ಯ ಶಿವು ಹಿರೇಮಠ ಗಮನಕ್ಕೂ ತರಲಾಗಿದೆ. ಪಾಲಿಕೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ.

    ಯುಜಿಡಿ ಕಾಮಗಾರಿಯಿಂದಾಗಿ ರಸ್ತೆ ಹದಗೆಟ್ಟಿದ್ದು, ಗ್ಯಾಸ್ ಪೈಪ್​ಲೈನ್ ಹಾಗೂ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಬಾಕಿ ಇದೆ. ನಂತರ ಡಾಂಬರೀಕರಣ ಮಾಡಲಾಗುವುದು ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈ ಕುರಿತು ಜ. 5ರಂದು ಪಾಲಿಕೆ ಆಯುಕ್ತರಿಗೆ ಬಡಾವಣೆ ನಿವಾಸಿಗಳು ಲಿಖಿತ ದೂರು ನೀಡಿದ್ದಾರೆ. ಆದ್ಯತೆ ಮೇರೆಗೆ ಕಾಮಗಾರಿ ಕೈಗೊಂಡು ಧೂಳು ಮುಕ್ತ ಬಡಾವಣೆ ಮಾಡದಿದ್ದರೆ ಏ. 1ರಿಂದ ಕರ ನಿರಾಕರಣೆ ಮಾಡಲಾಗುವುದು ಸರೋಜಾ ಬಿ. ಹರಿಹರ, ಆರ್.ಎಸ್. ಹೊಂಬಳ, ಬಿ.ಜಿ. ಹಾರೋಬಿಡಿ, ಎನ್.ಬಿ. ಶಾಪುರ, ಎಸ್.ಬಿ. ಕಲ್ಯಾಣಶೆಟ್ಟಿ, ಎಸ್.ವಿ. ಹಿರೇಗೌಡರ, ಆರ್.ಎ. ಬೂದಿಹಾಳ, ಎಂ.ಜಿ. ಪ್ಯಾಟಿಮಠ, ಶರದ್ ದೇಸಾಯಿ, ಅಶೋಕ ಗಾಣಿಗೇರ, ಇತರರು ಮನವಿಯಲ್ಲಿ ಎಚ್ಚರಿಸಿದ್ದಾರೆ.

    ಕಾಮಗಾರಿ ಮುಗಿದ ನಂತರ ರಸ್ತೆಗೆ ಮಣ್ಣು ಹಾಕಿ ಗುಂಡಿ ಮುಚ್ಚಿರುವುದರಿಂದ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿವೆ. ಇದರಿಂದ ಬಡಾವಣೆಯ ನಿವಾಸಿಗಳು ಧೂಳಿನ ಸಮಸ್ಯೆ ಎದುರಿಸುವಂತಾಗಿದೆ. ಮನೆಯಿಂದ ಹೊರಬರಲಾರದಂತೆ ಮನೆಗಳ ಬಾಗಿಲು ಮುಚ್ಚಿಕೊಂಡೇ ಇರಬೇಕಾಗಿದೆ.

    – ಬಸವರಾಜ ಹರಿಹರ, ಶಿವಗಿರಿ ನಿವಾಸಿ

    ಶಿವಗಿರಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಎನ್​ಡಿಆರ್​ಎಫ್ ಅನುದಾನದಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲಾಗಿದೆ. ಶಿವಗಿರಿಯಲ್ಲಿ ಯುಜಿಡಿ ಕಾಮಗಾರಿಯಿಂದ ರಸ್ತೆ ಹಾಳಾಗಿರುವ ದೂರುಗಳಿವೆ. ಪಾಲಿಕೆಯಿಂದ ರಸ್ತೆ ರೀ ಸರ್ಫೆಸಿಂಗ್ ಕಾಮಗಾರಿಯ ಟೆಂಡರ್ ಆಗಬೇಕಿದೆ. ಇನ್ನೊಂದು ತಿಂಗಳಲ್ಲಿ ಪ್ರಕ್ರಿಯೆ ಮುಗಿಯಲಿದ್ದು, ಕಾಮಗಾರಿ ಕೈಗೊಳ್ಳಲಾಗುವುದು.

    – ಎಂ.ಬಿ. ಸಬರದ, ಪಾಲಿಕೆ ವಲಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts