More

    ಹೆದ್ದಾರಿ ಬದಿ ತ್ಯಾಜ್ಯ ರಾಶಿ

    ಭರತ್ ಶೆಟ್ಟಿಗಾರ್ ಮಂಗಳೂರು
    ಸ್ವಚ್ಛತೆ ಕುರಿತಂತೆ ಯಾರು ಏನೇ ಹೇಳಿದರೂ, ಹೆದ್ದಾರಿ, ರಸ್ತೆ ಬದಿ ತ್ಯಾಜ್ಯ ತಂದು ಸುರಿಯುವುದು ಇನ್ನೂ ಕಡಿಮೆಯಾಗಿಲ್ಲ. ಪರಿಸರ ಸ್ವಚ್ಛತೆ ಹೇಳಿಕೆಗಳಿಗೆ ಮಾತ್ರ ಸೀಮಿತವಾಗುತ್ತಿದ್ದು, ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯದಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ.

    ಮಂಗಳೂರು ನಗರ ವ್ಯಾಪ್ತಿ ಬಿಟ್ಟು ಹೊರಕ್ಕೆ ಬರುತ್ತಿದ್ದಂತೆ ಬಹುತೇಕ ರಸ್ತೆ ಬದಿ ತ್ಯಾಜ್ಯ ರಾಶಿ ಕಾಣಿಸುತ್ತವೆ. ಕೆಲವೆಡೆ ಆಯಾ ಪಂಚಾಯಿತಿ, ಸ್ಥಳೀಯಾಡಳಿತ ತ್ಯಾಜ್ಯ ಸುರಿಯಬಾರದು ಎಂದು ಬೋರ್ಡ್ ಅಳವಡಿಸಿದ್ದರೂ, ಅದರ ಬುಡದಲ್ಲೇ ಕಸ ತಂದು ಸುರಿಯುತ್ತಾರೆ. ಬಹುತೇಕ ಗ್ರಾಪಂ, ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಕ್ಕೆ ವ್ಯವಸ್ಥೆಯಿದ್ದರೂ, ರಸ್ತೆ ಬದಿ ತ್ಯಾಜ್ಯ ಸುರಿಯುವುದು ನಿಂತಿಲ್ಲ.

    ರಾಷ್ಟ್ರೀಯ, ರಾಜ್ಯ ಹೆದ್ದಾರಿಯಲ್ಲಂತೂ ಪ್ರತಿ ಹಂತದಲ್ಲೂ ತ್ಯಾಜ್ಯ ರಾಶಿ ಕಾಣಲು ಸಿಗುತ್ತದೆ. ಮುಖ್ಯವಾಗಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ರಸ್ತೆ ಬದಿ ಬಿಸಾಕಿ ಹೋಗುತ್ತಾರೆ. ಸ್ಥಳೀಯ ಪಂಚಾಯಿತಿ ವತಿಯಿಂದ ಅದನ್ನು ತೆಗೆಸುವ ಪ್ರಯತ್ನ ಮಾಡಿದರೂ, ವಾರದೊಳಗೆ ಮತ್ತೆ ತ್ಯಾಜ್ಯ ಬಂದು ರಾಶಿ ಬೀಳುತ್ತದೆ. ನಾಯಿ, ಕಾಗೆಗಳು ಅವುಗಳನ್ನು ಎಳೆದಾಡಿ ರಸ್ತೆಗೆ ತಂದು ಹಾಕುತ್ತವೆ.

    ಸಹಿಸಲಸಾಧ್ಯ ವಾಸನೆ: ಕೊಳೆತ ಆಹಾರ ಪದಾರ್ಥಗಳು, ಮಕ್ಕಳಿಗೆ ಹಾಕುವ ಪ್ಯಾಂಪರ್ಸ್, ಮೊಟ್ಟೆಯ ಹೊರಕವಚ, ಕೋಳಿ ಮಾಂಸದ ಉಳಿಕೆ ಎಲ್ಲವನ್ನೂ ಪ್ಲಾಸ್ಟಿಕ್ ಕವರ್‌ನಲ್ಲಿ ತಂದು ರಸ್ತೆ ಬದಿ ಬಿಸಾಕುತ್ತಾರೆ. ಒಂದೆಡರು ದಿನಗಳ ಬಳಿಕ ಅವುಗಳಿಂದ ವಾಸನೆ ಬರಲು ಶುರು. ವಾಹನಗಳಲ್ಲಿ ಸಾಗುವವರು ಈ ವಾಸನೆ ಸಹಿಸಿಕೊಂಡೇ ಸಾಗಬೇಕು. ಮಳೆಗಾಲದಲ್ಲಂತೂ ನೀರು ನಿಲ್ಲುವುದರಿಂದ ವಾಸನೆ ಹೆಚ್ಚು. ಕೆಲವು ಕಡೆ ತ್ಯಾಜ್ಯ ರಾಶಿ ಕಂಡು ಸ್ಥಳೀಯರು ಬೆಂಕಿ ಹಾಕುತ್ತಾರೆ. ಪ್ಲಾಸ್ಟಿಕ್ ಬೆಂಕಿಯಲ್ಲಿ ಉರಿಯುವುದರಿಂದ ದಟ್ಟ ಹೊಗೆ ಆವರಿಸುತ್ತದೆ. ಇದರಿಂದ ಮತ್ತಷ್ಟು ಮಾಲಿನ್ಯ.

    ಮಕ್ಕಳಿಗೂ ಕಲಿಸುತ್ತಾರೆ!: ರಸ್ತೆಗೆ ಕಸ ಎಸೆಯುವ ಹೇಯ ಕೃತ್ಯ ಮಾಡುವುದರಲ್ಲಿ ಹೆಚ್ಚಿನವರು ವಿದ್ಯಾವಂತರೇ ಆಗಿದ್ದಾರೆ. ಬಹುತೇಕರು ಕಾರು, ಬೈಕ್, ಸ್ಕೂಟರ್‌ಗಳಲ್ಲಿ ಹೋಗುವಾಗ ರಸ್ತೆ ಬದಿ ಎಸೆದು ಹೋಗುತ್ತಾರೆ. ಕೆಲವೊಬ್ಬರು ತಮ್ಮ ಜತೆ ಮಕ್ಕಳನ್ನೂ ಕರೆದುಕೊಂಡು ಬಂದು, ಅವರೆದುರೇ ತ್ಯಾಜ್ಯ ಬಿಸಾಕುತ್ತಾರೆ. ಇದರಿಂದ ಮಕ್ಕಳೂ ಅದನ್ನೇ ಕಲಿಯುವಂತಾಗಿದೆ. ಕಸ ಹಾಕಿರುವ ಬಗ್ಗೆ ಯಾರಾದರೂ ಪ್ರಶ್ನಿಸಿದರೆ, ಅವರನ್ನೇ ತರಾಟೆಗೆ ತೆಗೆದುಕೊಂಡ ಉದಾಹರಣೆಯೂ ಇದೆ.

    ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಜಾಗೃತರಾಗದೆ ಏನು ಮಾಡಿದರೂ ವ್ಯರ್ಥ. ಮನೆ ಮನೆಯಿಂದ ಸಂಗ್ರಹಿಸುವ ಕೆಲಸವೂ ನಡೆಯುತ್ತಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವುದು ಕಂಡು ಬಂದರೆ ದಂಡ ವಿಧಿಸಲಾಗುತ್ತಿದೆ.
    ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts