More

    ಹೊರ ರಾಜ್ಯದ ಪ್ರವಾಸಿ ವಾಹನಗಳಿಗಿಲ್ಲ ದಸರಾ ತೆರಿಗೆ ವಿನಾಯಿತಿ; ಏನಂತಾರೆ ಪ್ರವಾಸೋದ್ಯಮ, ಸಾರಿಗೆ ಸಚಿವರು?

    ಬೆಂಗಳೂರು: ಪ್ರತಿ ವರ್ಷ ಮೈಸೂರು ದಸರಾ ಸಂದರ್ಭದಲ್ಲಿ ನೆರೆ ರಾಜ್ಯದ ಪ್ರವಾಸಿಗರನ್ನು ಆಕರ್ಷಿಸಲು ಖಾಸಗಿ ಪ್ರವಾಸಿ ವಾಹನಗಳಿಗೆ ನೀಡುತ್ತಿದ್ದ ತೆರಿಗೆ ವಿನಾಯಿತಿಯನ್ನು ಈ ಸಾಲಿನಲ್ಲಿ ಮುಂದುವರಿಸುವುದು ಅನುಮಾನವಾಗಿದೆ.
    ಕೇರಳ, ತಮಿಳುನಾಡಿನಿಂದ ಮೈಸೂರು ದಸರಾ ವೀಕ್ಷಣೆಗೆಂದು ಬರುವವರಿಗಾಗಿ 15 ದಿನಗಳ ಮಟ್ಟಿಗೆ ಮೈಸೂರಿಗೆ ಮಾತ್ರ ಪ್ರಯಾಣಿಸಲು ಖಾಸಗಿ ಬಾಡಿಗೆ ಬಸ್, ಟೆಂಪೋ ಟ್ರಾವಲರ್, ಟ್ಯಾಕ್ಸಿಗಳಿಗೆ ತೆರಿಗೆ ವಿನಾಯಿತಿ ನೀಡುವ ಸಂಪ್ರದಾಯವಿತ್ತು.
    ಶೈಕ್ಷಣಿಕ ಮಧ್ಯಂತ ರಜೆ ಅವಧಿಯಲ್ಲಿ ಕೌಟುಂಬಿಕ ಪ್ರವಾಸ ಹೆಚ್ಚಿರುವ ಸಂದರ್ಭದಲ್ಲಿ ಖಾಸಗಿ ವಾಹನಗಳಿಗೆ ವಿನಾಯಿತಿ ನೀಡುವುದರಿಂದ ಮೈಸೂರಿಗೆಂದು ಬರುವ ಅನ್ಯ ರಾಜ್ಯದ ಪ್ರವಾಸಿಗರು ಕೊಡಗು ಸೇರಿ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತಾರೆ. ಇದರಿಂದ ಸಹಜವಾಗಿ ಈ ಭಾಗದ ಹೋಟೆಲ್, ಲಾಡ್ಜ್, ಬಟ್ಟೆ ಮಾರುಕಟ್ಟೆ, ಗುಡಿಕೈಗಾರಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ವಾದವಿದೆ.
    ಕಳೆದ ಹತ್ತಾರು ವರ್ಷದಿಂದ ಈ ರೀತಿ ಅವಕಾಶ ಬಳಸಿಕೊಳ್ಳಲು ಕಾಯುವ ಕೇರಳ ಹಾಗೂ ತಮಿಳುನಾಡಿನ ಪ್ರವಾಸಿಗರೂ ಇದ್ದಾರೆ. ಈ ಬಾರಿಯೂ ಕರ್ನಾಟಕದ ತೀರ್ಮಾನ ನಿರೀಕ್ಷೆ ಮಾಡುತ್ತಿರುತ್ತಾರೆ ಎಂದು ಪ್ರವಾಸಿ ವಾಹನ ಮಾಲಿಕರ ಸಂಘದ ರಾಧಾಕೃಷ್ಣ ಹೊಳ್ಳ ಅಭಿಪ್ರಾಯಪಡುತ್ತಾರೆ.
    ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಈ ತೆರಿಗೆ ರಿಯಾಯಿತಿ ಪಡೆದುಕೊಂಡು ಪ್ರತಿ ನಿತ್ಯ 300ರಿಂದ 400 ಖಾಸಗಿ ಬಸ್‌ಗಳು ಮೈಸೂರು ಭಾಗಕ್ಕೆ ಪ್ರವಾಸಿಗರನ್ನು ಕರೆತರುತ್ತವೆ. ಟಿಟಿ, ಟ್ಯಾಕ್ಸಿ, ಇನ್ನೋವದಂತಹ ಒಂದು ಸಾವಿರಕ್ಕಿಂತ ಹೆಚ್ಚು ವಾಹನ ರಾಜ್ಯಕ್ಕೆ ಪ್ರತಿ ದಿನ ಬಂದು ಹೋಗುತ್ತವೆ. ತೆರಿವೆ ವಿನಾಯಿತಿಯಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಖೋತ ಎನಿಸಬಹುದು, ಆದರೆ ಪ್ರವಾಸಿಗರ ಭೇಟಿಯಿಂದ ಎರಡು ಮೂರು ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ. ಈ ಅಂಶವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ.

    ಎಷ್ಟು ತೆರಿಗೆ?

    ಸರ್ಕಾರ ತೀರ್ಮಾನ ತೆಗೆದುಕೊಂಡರೆ ಟ್ಯಾಕ್ಸಿಗಾದರೆ ದಿನಕ್ಕೆ 300 ರೂ., ಟೆಂಪೋ 2000 ರೂ., ಬಸ್‌ಗಾದರೆ 6 ಸಾವಿರ ರೂ.ನಿಂದ 8 ಸಾವಿರ ರೂ. ವರೆಗೂ ತೆರಿಗೆ ವಿನಾಯಿತಿ ಸಿಗಲಿದೆ. ಸರ್ಕಾರಕ್ಕೆ ಕೆಲವು ಲಕ್ಷದ ಲೆಕ್ಕದಲ್ಲಿ ನಷ್ಟವಾಗಬಹುದಾದರೂ, ಮೈಸೂರು ದಸರಾ, ವಸ್ತು ಪ್ರದರ್ಶನ, ಚಾಮರಾಜನಗರ, ಕೊಡಗು ಭಾಗದ ಪ್ರವಾಸೋದ್ಯಮ ಕ್ಷೇತ್ರ ನಂಬಿಕೊಂಡವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರಾಧಾಕೃಷ್ಣ ಹೊಳ್ಳ ವಿವರಿಸುತ್ತಾರೆ.

    ಮೂರು ಇಲಾಖೆ ತೀರ್ಮಾನ

    ಪ್ರವಾಸೋದ್ಯಮ, ಸಾರಿಗೆ ಹಾಗೂ ಹಣಕಾಸು ಇಲಾಖೆ ಜಂಟಿಯಾಗಿ ಈ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ನವರಾತ್ರಿ ಆರಂಭಕ್ಕೆ ಇನ್ನೆರೆಡು ದಿನ ಕೂಡ ಬಾಕಿ ಇಲ್ಲ. ಈ ಹಂತದಲ್ಲಿ ಶೈಕ್ಷಣಿಕ ರಜೆ ಅವಧಿ ಆರಂಭವಾಗಿದ್ದು, ತೆರಿಗೆ ವಿನಾಯಿತಿ ೋಷಿಸಬೇಕಾಗಿತ್ತು. ಸಾರಿಗೆ ಇಲಾಖೆ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದರೆ, ಅಂತಹ ಯಾವುದೇ ಪ್ರಸ್ತಾವನೆ ಇಲ್ಲವೆಂದು ಪ್ರತಿಕ್ರಿಯೆ ನೀಡಿದ್ದಾರೆ.

    ಶಬರಿಮಲೆಗೆ ನಕಾರ

    ಸಂಕ್ರಾಂತಿ ವೇಳೆಗೆ ಕೇರಳದ ಶಬರಿಮಲೆಗೆ ಕರ್ನಾಟಕದಿಂದ ದೊಡ್ಡ ಪ್ರಮಾಣದಲ್ಲಿ ಖಾಸಗಿ ಬಾಡಿಗೆ ವಾಹನಗಳು ಸಂಚರಿಸುತ್ತವೆ. ಹೀಗಾಗಿ ಈ ಅವಧಿಯಲ್ಲಿ ಒಂದು ತಿಂಗಳ ಮಟ್ಟಿಗಾದರೂ ತೆರಿಗೆ ವಿನಾಯಿತಿ ನೀಡಬೇಕೆಂದು ಕರ್ನಾಟಕದ ಪ್ರವಾಸಿ ವಾಹನಗಳ ಮಾಲಿಕರ ನಿಯೋಗ ಕೆಲವು ವರ್ಷಗಳ ಹಿಂದೆ ಕೇರಳ ಸರ್ಕಾರವನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ, ಅಲ್ಲಿನ ಅಧಿಕಾರಿಗಳು ಈ ಬೇಡಿಕೆ ಸ್ಪಷ್ಟವಾಗಿ ತರಿಸ್ಕರಿಸಿದ್ದರು. ಶಬರಿ ಮಲೆಗೆ ಬರುವ ಪ್ರವಾಸಿ ವಾಹನಗಳ ತೆರಿಗೆಯಿಂದಲೇ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಆದಾಯ ಬರುತ್ತದೆ. ಈ ಅವಕಾಶವನ್ನು ಕಳೆದುಕೊಳ್ಳಲು ಸಾಧ್ಯವೇ ಇಲ್ಲ ಎಂದು ನಿಯೋಗಕ್ಕೆ ನಿರಾಸೆ ಮೂಡಿಸಿದ್ದರು.

    ದಕ್ಷಿಣ ಭಾರತದ ಪ್ರವಾಸಿಗರು ನಮ್ಮ ನಾಡಹಬ್ಬ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲು ನೋಂದಾಯಿತ ಟೂರಿಸ್ಟ್ ವಾಹನಗಳಿಗೆ ತೆರಿಗೆ ರಜೆ ವಿಧಿಸಿ ಪ್ರಚಾರ ಮಾಡುವ ಅಗತ್ಯವಿದೆ. ಇಷ್ಟರೊಳಗಾಗಿ ಈ ಕೆಲಸ ಆಗಬೇಕಾಗಿತ್ತು. ಈಗಲಾದರೂ ಮಾಡಲಿ.
    – ಕೆ. ರಾಧಾಕೃಷ್ಣ ಹೊಳ್ಳ, ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ ಮಾಲಿಕರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts