More

    ಪುರಾತನ ಕೆರೆಗೆ ಕಾಯಕಲ್ಪ

    -ಮನೋಹರ್ ಬಳಂಜ ಬೆಳ್ತಂಗಡಿ

    ಸುಮಾರು 160 ವರ್ಷಗಳ ಹಿಂದಿನ ಪುರಾತನ ಕೆರೆಯೊಂದಕ್ಕೆ ಲೋಕಾಯುಕ್ತರ ಮೂಲಕ ಕಾಯಕಲ್ಪ ಭಾಗ್ಯ ದೊರಕಿದ್ದು, ಪರಿಸರದ ಸುಮಾರು 25ರಷ್ಟು ಕೃಷಿ ಕುಟುಂಬಕ್ಕೆ ನೀರು ಮತ್ತು ಪ್ರದೇಶದ ಅಂತರ್ಜಲವೃದ್ಧಿಗೆ ಸಹಕಾರಿಯಾಗಲಿದೆ.

    ಬ್ರಿಟಿಷರ ಕಾಲದ ಈ ಕೆರೆ ಮುಂಡಾಜೆ ಗ್ರಾಮದ ದುಂಬೆಟ್ಟಿನಲ್ಲಿದೆ. ಕೆರೆ ಅಭಿವೃದ್ಧಿ ಕಾಣದೆ ಸಂಪೂರ್ಣ ಮುಚ್ಚಿ ಹೋಗಿ ಅದರ ಮೇಲೆ ಅಡಕೆ ಮರ ಬೆಳೆದಿದ್ದು, ಇತರ ಗಿಡ ಮರ, ಪೊದೆ ಆವರಿಸಿತ್ತು. ಕೆಲಸಮಯದ ಹಿಂದೆ ಲೋಕಾಯುಕ್ತರು ಸ್ವಯಂಪ್ರೇರಿತರಾಗಿ ದಾಖಲಿಸಿ ಗುರುತಿಸಿದ ಈ ಕೆರೆ 22 ಸೆಂಟ್ಸ್ ಸರ್ಕಾರಿ ಜಾಗದಲ್ಲಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿತ್ತು. ಬಳಿಕ ಬೆಳ್ತಂಗಡಿ ತಾಲೂಕು ಪಂಚಾಯಿತಿ ಮೂಲಕ ಮುಂಡಾಜೆ ಗ್ರಾಪಂಗೆ ಬಂದ ಸೂಚನೆ ಪ್ರಕಾರ 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಕೆರೆಯನ್ನು ಪುನರುಜ್ಜೀವನಗೊಳಿಸುವ ಕಾಮಗಾರಿ ಆರಂಭವಾಗಿದೆ.

    ಭರದಿಂದ ಸಾಗುತ್ತಿದೆ ಕಾಮಗಾರಿ

    ಇದು ಸರ್ಕಾರಿ ಕೆರೆಯೆಂದು 1864ರಲ್ಲಿ ಆರ್‌ಟಿಸಿಯಲ್ಲಿ ನಮೂದಾಗಿದ್ದು, ನಾನಾ ಕಾರಣಗಳಿಂದ ಕೆರೆಯು ಮಾಯವಾಗಿ ಅಲ್ಲಿ ಕೃಷಿ ಚಟುವಟಿಕೆ ನಡೆಸಲಾಗುತ್ತಿತ್ತು. ಕೆರೆಗಳ ಪುನರುಜ್ಜೀವನ ಮತ್ತು ಅಭಿವೃದ್ಧಿಗೆ ಸಂಬಂಧಪಟ್ಟಂತೆ ಗ್ರಾಪಂ ಮತ್ತು ಇತರ ಇಲಾಖೆಗಳು ಕೈಗೊಂಡಿರುವ ಕ್ರಮದ ಕುರಿತು ಸಮಗ್ರ ವಿವರಗಳನ್ನು ಕೋರಿದ ಹಿನ್ನೆಲೆಯಲ್ಲಿ ಪ್ರಸ್ತುತ ಕಾಮಗಾರಿ ಭರದಿಂದ ಸಾಗುತ್ತಿದೆ. ಕೆರೆ ಮೇಲೆ ಬೆಳೆದಿದ್ದ ಕೃಷಿ ಹಾಗೂ ಗಿಡಮರಗಳನ್ನು ತೆರವುಗೊಳಿಸಿ ಕೆರೆ ಪ್ರದೇಶ ಗುರುತಿಸಿ ಜೆಸಿಬಿ ಬಳಸಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಸುಮಾರು ಮೂರು ಅಡಿ ಅಗೆದಾಗ ಕೆರೆ ಗೋಚರಿಸಿದ್ದು ಉತ್ತಮ ಮಟ್ಟದ ನೀರು ಇದೆ.

    ಇತರ ಕೆರೆಗಳು

    ಲೋಕಾಯುಕ್ತರು ತಾಲೂಕಿನಲ್ಲಿ ಸುಲ್ಕೇರಿ ಗ್ರಾಮದ ನಿರ್ಮಲಬೆಟ್ಟು, ಪಿಲ್ಯ ಗ್ರಾಮದ ಉಲ್ಫೆ, ಕಳಿಯ ಗ್ರಾಮದ ಕಳಿಯ, ಉಜಿರೆ ಗ್ರಾಮದ ಉಜಿರೆ, ಮುಂಡಾಜೆ ಗ್ರಾಮದ ಗ್ರಾಮದ ಈಕೆರೆ ಸಹಿತ ಇನ್ನೊಂದು ಕೆರೆಯನ್ನು ಗುರುತಿಸಿದ್ದು, ಅವುಗಳ ಸ್ಥಿತಿಗತಿ ಅವಲೋಕಿಸಿ ಪುನರುಜ್ಜೀವನಗೊಳಿಸಲು ಸಂಬಂಧಪಟ್ಟ ಪಂಚಾಯಿತಿಗಳಿಗೆ ತಾಲೂಕು ಪಂಚಾಯಿತಿಯಿಂದ ಜ್ಞಾಪನಾ ಪತ್ರ ಕಳುಹಿಸಲಾಗಿದೆ.

    ಸ್ಥಳೀಯರಿಂದ ಉತ್ತಮ ಸ್ಪಂದನೆ

    ದುಂಬೆಟ್ಟಿನಲ್ಲಿ ಕೆರೆ ಇದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಇದು ನಿಜವೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿತ್ತು. ಯಾವುದೇ ಕುರುಹುಗಳೇ ಇಲ್ಲದ ಕಡೆ ಲೋಕಾಯುಕ್ತರು ಸ್ಥಳ ಗುರುತಿಸಿ ಕೆಲಸ ಆರಂಭವಾಗುತ್ತಿದ್ದಂತೆ ಅನುಮಾನಗಳು ದೂರವಾಗಿದ್ದು ಸ್ಥಳೀಯರಿಂದ ಉತ್ತಮ ಸ್ಪಂದನೆ ದೊರಕಿದೆ. ಕೆರೆ ಅಭಿವೃದ್ಧಿಯಿಂದ ಸ್ಥಳೀಯರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಕೆರೆಯಿಂದ ಕಾಲುವೆ ರಚಿಸುವ ಮೂಲಕ ತೋಟಗಳಿಗೆ ನೀರು ಕೊಂಡೊಯ್ಯಬಹುದು. ಅಲ್ಲದೆ ಇಲ್ಲಿನ ನೀರನ್ನು ಕಾಪು ಕಿಂಡಿ ಅಣೆಕಟ್ಟಿನ ಕಟ್ಟದ ನೀರಿಗೆ ಹರಿಸುವ ಮೂಲಕ ಕಟ್ಟದ ನೀರಿನ ಬಲ ಹೆಚ್ಚಿಸಬಹುದು. ಪರಿಸರದ ಅಂತರ್ಜಲ ವೃದ್ಧಿಯಿಂದ ಬಾವಿಗಳ ನೀರಿನ ಮಟ್ಟ ಹೆಚ್ಚಾಗಲಿದೆ. ಪರಿಸರದ ಪ್ರಾಣಿ, ಪಕ್ಷಿಗಳಿಗೂ ನೀರು ದೊರೆಯಲಿದೆ.

    ದುಂಬೆಟ್ಟು ಕೆರೆ ಅಭಿವೃದ್ಧಿ ಬಗ್ಗೆ ಪಂಚಾಯಿತಿಯಿಂದ ಕ್ರಮ ಕೈಗೊಳ್ಳಲಾಗಿದ್ದು, ಅನುದಾನದ ಆಧಾರದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ. ನೀರಿನ ಕುರಿತು ಪಂಚಾಯಿತಿ ಹೆಚ್ಚಿನ ಮುತುವರ್ಜಿ ವಹಿಸಿದ್ದು ನಲ್ಲಿ ನೀರನ್ನು ಹಿತಮಿತವಾಗಿ ಬಳಸಿ ಇತರ ವಿಚಾರಗಳಿಗೆ ಉಪಯೋಗಿಸದಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ.
    -ಗಣೇಶ ಬಂಗೇರ, ಅಧ್ಯಕ್ಷ, ಗ್ರಾಪಂ ಮುಂಡಾಜೆ

    ನಮ್ಮ ತೋಟಗಳ ಸಮೀಪ ಇರುವ ಈ ಕೆರೆ ಅಭಿವೃದ್ಧಿಯಿಂದ ನಮ್ಮೆಲ್ಲರ ಕೃಷಿ ತೋಟಗಳಿಗೆ ಉಪಯೋಗವಾಗಲಿದೆ. ಸರ್ಕಾರದ ಈ ಯೋಜನೆಗೆ ನಾವು ಹೆಚ್ಚಿನ ಸಹಕಾರ ನೀಡುವ ಅಗತ್ಯವಿದ್ದು, ಕೆರೆ ಬಳಿ ವಾಹನ ಯಂತ್ರೋಪಕರಣಗಳನ್ನು ಕೊಂಡೊಯ್ಯಲು ಸ್ವಂತ ಸ್ಥಳದ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.
    -ಸುಜಿತ್ ಎಂ.ಭಿಡೆ, ಕೃಷಿಕ, ದುಂಬೆಟ್ಟು, ಮುಂಡಾಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts