More

    ಅತಿಥಿ ಶಿಕ್ಷಕರ ಸಂಕಷ್ಟಕ್ಕೆ ನೆರವಾಗಿ ; ಶಿರಾದಲ್ಲಿ ಡಿಎಸ್‌ಎಸ್ ಕಾರ್ಯಕರ್ತರ ಪ್ರತಿಭಟನೆ

    ಶಿರಾ: ಗುತ್ತಿಗೆ ಆಧಾರದಲ್ಲಿ ಶಾಲಾ-ಕಾಲೇಜುಗಳಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರು ಕರೊನಾ ಸಂಕಷ್ಟದಲ್ಲಿ ಆದಾಯವಿಲ್ಲದೇ ಬೀದಿಗೆ ಬೀಳುವ ಸ್ಥಿತಿ ತಲುಪಿದ್ದು, ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.

    ಅತಿಥಿ ಶಿಕ್ಷಕ ಭೂತರಾಜು ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ತಮ್ಮದೇ ಪಾಲು ಹೊಂದಿರುವ ಅತಿಥಿ ಶಿಕ್ಷಕರು, ಕಾಯಂ ಆಗದೇ, ಕೆಲಸವೂ ಇಲ್ಲದೇ ತ್ರಿಶಂಕು ಸ್ಥಿತಿ ತಲುಪಿದ್ದಾರೆ ಎಂದರು. ಹಲವು ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ದುಡಿದರೂ ಸರ್ಕಾರ ನಮ್ಮನ್ನು ಗುರುತಿಸಿಲ್ಲ. ಸರ್ಕಾರಕ್ಕೆ ಕನಿಷ್ಠ ಖಾಸಗಿ ಸಂಸ್ಥೆಗಳಿಗಿರುವ ಬದ್ಧತೆಯೂ ಇಲ್ಲ. ಕರೊನಾ ಸಂಕಷ್ಟದ ನಡುವೆ ಬೇರೆ ಯಾವುದೇ ಆದಾಯದ ಮೂಲಗಳಿಲ್ಲದ ಅತಿಥಿ ಶಿಕ್ಷಕರ ಪಾಡು ತೀರಾ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಸರ್ಕಾರ ನಮ್ಮನ್ನು ಕಡೆಗಣಿಸುವ ಮೂಲಕ ಶೋಷಿಸುತ್ತಿದೆ. ಸರ್ಕಾರ ಕೂಡಲೇ ಖಾಯಂ ನೌಕರರಂತೆ ಪರಿಗಣಿಸಿ, ಸಮಾನ ಸೇವೆಗೆ ಸಮಾನ ವೇತನ ನೀಡಲಿ ಹಾಗೂ ವಿಶೇಷ ಪ್ಯಾಕೇಜ್ ಹೊರಡಿಸಿ ತಕ್ಷಣ ಎಲ್ಲ ಅತಿಥಿ ಶಿಕ್ಷಕರ ಖಾತೆಗೆ ಕನಿಷ್ಠ 30ಸಾವಿರ ರೂಪಾಯಿ ಜಮಾ ಮಾಡಬೇಕೆಂದು ಆಗ್ರಹಿಸಿದರು.

    ಸಮಿತಿ ತಾಲೂಕು ಅಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಅತಿಥಿ ಶಿಕ್ಷಕರು ಸರ್ಕಾರದಿಂದಲೇ ಶೋಷಣೆಗೆ ಒಳಗಾಗಿದ್ದು, ಎಲ್ಲ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸಹಾಯಧನ ನೀಡಬೇಕು. ಅವರಿಗೆ ಸೇವಾ ಭದ್ರತೆ ಒದಗಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು ಸೇರಿ ವಿವಿಧ ಬೇಡಿಕೆ ಈಡೆರಿಸುವಂತೆ ಒತ್ತಾಯಿಸಿದರು. ತಹಸೀಲ್ದಾರ್ ನಾಹಿದಾ ಜಂಜಂಗೆ ಮನವಿ ಪತ್ರ ಸಲ್ಲಿಸಲಾಯಿತು. ಕಾರ್ಯಾಧ್ಯಕ್ಷ ತಿಪ್ಪೆಸ್ವಾಮಿ ಇದ್ದರು.

    ಅತಿಥಿ ಶಿಕ್ಷಕರಾಗಿ ಸಂಸಾರಕ್ಕೆ ನೆರವಾಗುತ್ತೇವೆ ಎನ್ನುವ ಭರವಸೆ ಇತ್ತು. ಆದರೆ ಸರ್ಕಾರ ನಮ್ಮನ್ನು ಕಡೆಗಣಿಸಿದ ಪರಿಣಾಮ ಲಾಕ್‌ಡೌನ್ ವೇಳೆ ಯಾವುದೇ ಆದಾಯದ ಮೂಲವಿಲ್ಲದೇ ತೊಂದರೆಯಾಗಿದೆ. ಸರ್ಕಾರ ನೆರವಿಗೆ ಬರಬೇಕಿದೆ.
    ಆಶಾ ಅತಿಥಿ ಶಿಕ್ಷಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts