More

    ಚಂದನವನಕ್ಕೆ ನಶೆ ನಂಟು: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

    ಬೆಂಗಳೂರು: ಬಾಲಿವುಡ್​ನಲ್ಲಿ ಸದ್ದುಮಾಡುತ್ತಿದ್ದ ಡ್ರಗ್ಸ್ ಮಾಫಿಯಾ ಈಗ ಸ್ಯಾಂಡಲ್​ವುಡ್​ಗೂ ಕಾಲಿಟ್ಟಿದೆ. ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (ಎನ್​ಸಿಬಿ)ವು ಬೆಂಗಳೂರು ಮತ್ತು ಮುಂಬೈನಲ್ಲಿ ಬೃಹತ್ ಡ್ರಗ್ಸ್ ಜಾಲವನ್ನು ಭೇದಿಸಿದೆ. ಬೆಂಗಳೂರಿನ ಮೂರು ಕಡೆ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡುವುದರ ಜತೆಗೆ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಸೆರೆಹಿಡಿಯಲಾಗಿದೆ.

    ಕನ್ನಡ ಚಿತ್ರರಂಗದ ಕೆಲ ನಟ-ನಟಿಯರು ಹಾಗೂ ಸಂಗೀತಗಾರರಿಗೆ ಡ್ರಗ್ಸ್ ಪೂರೈಸಲಾಗುತ್ತಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಶ್ರೀಮಂತ ವ್ಯಕ್ತಿಗಳು, ಉದ್ಯಮಿಗಳು ಹಾಗೂ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಕೂಡ ಮಾದಕ ದ್ರವ್ಯ ಸೇವಿಸುತ್ತಿದ್ದಾರೆ ಎಂಬ ವಿಚಾರ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಎನ್​ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಕಲ್ಯಾಣ ನಗರದ ರಾಯಲ್ ಸೂಟ್ಸ್ ಅಪಾರ್ಟ್​ವೆುಂಟ್, ಥಣಿಸಂದ್ರದ ನಿಕೂ ಹೋಮ್್ಸ, ದೊಡ್ಡಗುಬ್ಬಿಯ ಮನೆಗಳ ಮೇಲೆ ಎನ್​ಸಿಬಿ ಅಧಿಕಾರಿಗಳು ಆ.21ರಂದು ದಾಳಿ ನಡೆಸಿದಾಗ ಡ್ರಗ್ಸ್ ಜಾಲ ಪತ್ತೆಯಾಗಿದೆ.

    ಪ್ರಮುಖ ಆರೋಪಿ ಡಿ. ಅನಿಕಾ (35), ಮೊಹಮ್ಮದ್ ಅನೂಪ್ (38) ಮತ್ತು ರಿಜೇಶ್ ರವೀಂದ್ರನ್ (37) ಎಂಬುವವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಪ್ರಮುಖ ಆರೋಪಿ ರೆಹಮಾನ್ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆದಿದೆ.

    ಸುಳಿವು ಸಿಕ್ಕಿದ್ದು ಹೇಗೆ?: ಮುಂಬೈನಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ದಂಪತಿಯನ್ನು ಆ.10ರಂದು ಎನ್​ಸಿಬಿ ಬಂಧಿಸಿತ್ತು. 3010 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆರೋಪಿ ದಂಪತಿ, ಬೆಂಗಳೂರಿನಲ್ಲಿಯೂ ಜಾಲ ಹೊಂದಿರುವುದು ವಿಚಾರಣೆಯಲ್ಲಿ ಗೊತ್ತಾಗಿತ್ತು. ತನಿಖೆ ಮುಂದುವರಿಸಿದಾಗ ಪ್ರಮುಖ ಆರೋಪಿ ಮಹಿಳೆ ಕಲ್ಯಾಣನಗರದ ರಾಯಲ್ ಸೂಟ್ಸ್ ಅಪಾರ್ಟ್​ವೆುಂಟ್​ನಲ್ಲಿ ನೆಲೆಸಿರುವ ಸುಳಿವು ಸಿಕ್ಕಿತ್ತು. ಆ. 21ರಂದು ಮನೆ ಮೇಲೆ ದಾಳಿ ನಡೆಸಿದಾಗ, 145 ಎಂಡಿಎಂಎ ಮಾತ್ರೆಗಳ ಸಮೇತ ಅನಿಕಾ ಸಿಕ್ಕಿ ಬಿದ್ದಳು. ಈಕೆಯನ್ನು ವಿಚಾರಣೆಗೊಳಪಡಿಸಿದಾಗ ಮೊಹಮ್ಮದ್ ಅನೂಪ್, ರಾಜೇಶ್ ರವೀಂದ್ರನ್ ಹಾಗೂ ರೆಹಮಾನ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಳು.

    ಏನಿದು ಎಂಡಿಎಂಎ?

    ಮಿಥೈಲ್​ಎನಿಡಿಯಾಕ್ಸಿ- ಮೆಥಾಂ ಪೆಟಾಮೈನ್ (ಎಂಡಿಎಂಎ) ಎಂಬುದು ಸಾಮಾನ್ಯವಾಗಿ ಎಕ್​ಸ್ಟಸಿ (ಭಾವ ಪರವಶತೆ) ಮಾತ್ರೆ ಎಂದೇ ಪರಿಚಿತವಾಗಿದೆ. ಪಾರ್ಟಿಗಳಲ್ಲಿ ಕಿಕ್ ಕೊಡಲು ಬಳಸಲಾಗುತ್ತದೆ. ಮನೋಭಾವ (ಮೂಡ್) ಬದಲಾ ಯಿಸಿ ಮೈಮರೆಸಲು ನೆರವಾಗುತ್ತದೆ. ಭಾವೋದ್ದೀಪನೆ ಮಾಡಿ ಭ್ರಮೆಯಲ್ಲಿ ತೇಲಾಡುವಂತೆ ಮಾಡುವ ರಾಸಾಯನಿಕಗಳ ರೀತಿಯಲ್ಲೇ ಅದು ಕೆಲಸ ಮಾಡುತ್ತದೆ. ಅಧಿಕಾರಿಗಳ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಒಂದು ಎಕ್​ಸ್ಟಸಿ ಮಾತ್ರೆ ಬೆಲೆ 1,500ರಿಂದ 2,500 ರೂಪಾಯಿ.

    ದಾಳಿ ವೇಳೆ ಸಿಕ್ಕಿದ್ದೇನು?

    ಬೆಂಗಳೂರಿನ 3 ಕಡೆ ದಾಳಿ ವೇಳೆ 2.20 ಲಕ್ಷ ರೂ. ನಗದು, 2 ಕೋಟಿ ರೂ. ಮೌಲ್ಯದ 4317 ಎಂಡಿಎಂಎ ಮಾತ್ರೆ, 180 ಎಲ್​ಎಸ್​ಡಿ ಬ್ಲಾಟ್​ಗಳು ಪತ್ತೆಯಾಗಿವೆ. ಆರೋಪಿ ಅನಿಕಾ ಜು. 31ರಂದು ಜರ್ಮನಿಯಿಂದ ಪಾರ್ಸಲ್ ತರಿಸಿಕೊಂಡಿದ್ದಾಳೆ. 750 ಎಂಡಿಎಂಎ (150 ಗ್ರಾಂ) ಮಾತ್ರೆಗಳು ರೆಹಮಾನ್ ಹೆಸರಿಗೆ ಕೊರಿಯರ್ ಬಂದಿರುವುದಕ್ಕೆ ದಾಖಲೆಗಳು ಸಿಕ್ಕಿವೆ. ಆರೋಪಿಗಳ ಲ್ಯಾಪ್​ಟಾಪ್, ಕಂಪ್ಯೂಟರ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

    ಬೆಂಗಳೂರಿನ 3 ಕಡೆ ದಾಳಿ ನಡೆಸಿ, ಡ್ರಗ್ಸ್ , 2.20 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಮೂವರನ್ನು ಬಂಧಿಸಲಾಗಿದೆ. ಕೆಲ ನಟ-ನಟಿಯರು, ಸಂಗೀತಗಾರರು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸಿರುವ ಮಾಹಿತಿ ಸಿಕ್ಕಿದ್ದು, ತನಿಖೆ ಮುಂದುವರಿದಿದೆ.

    | ಕೆ.ಪಿ.ಎಸ್.ಮಲ್ಹೋತ್ರ ಉಪ ನಿರ್ದೇಶಕ, ಎನ್​ಸಿಬಿ

    5 ಸಾವಿರ ರೂ. ಬೆಲೆ

    ವಿದೇಶದಿಂದ ತರಿಸಿಕೊಂಡ ಮಾದಕ ವಸ್ತುವನ್ನು ಸ್ಯಾಂಡಲ್​ವುಡ್​ನ ಕೆಲ ನಟ-ನಟಿಯರು, ಸಂಗೀತಗಾರರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದರು. ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿ ರೆಹಮಾನ್, ತನ್ನದೇ ಕಾಲೇಜಿನ ವಿದ್ಯಾರ್ಥಿಗಳಿಗೆ, ಪರಿಚಯಸ್ಥ ಗ್ರಾಹಕರಿಗೆ ಹಾಗೂ ದೊಡ್ಡಮಟ್ಟದ ಪಾರ್ಟಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಡ್ರಗ್ಸ್ ಪೂರೈಸುತ್ತಿದ್ದ. 1 ಎಲ್​ಎಸ್​ಡಿ ಬ್ಲಾಟ್ಸ್​ಗೆ 3 ಸಾವಿರ ರೂ. ದಿಂದ 5 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

    ಅಧಿಕಾರಿಗಳ ಕೈವಾಡ?

    ಆಟಿಕೆಗಳಲ್ಲಿ ಎಂಡಿಎಂಎ ಮಾತ್ರೆ, ಅಂಚೆಚೀಟಿ ಮಾದರಿ, ಕಲಾತ್ಮಕ ಚಿತ್ರಗಳಿರುವ ಕಾಗದದಲ್ಲಿ ಎಲ್​ಎಸ್​ಡಿ ಬ್ಲಾಟ್ಸ್​ಗಳ ಪಾರ್ಸಲ್ ಬಂದಿವೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್್ಸ ಅಧಿಕಾರಿಗಳು ತಪಾಸಣೆ ನಡೆಸಿದ ಬಳಿಕವೇ ಪಾರ್ಸಲ್ ಒಳಗೆ ಬಿಡುತ್ತಾರೆ. ಇದಾದ ನಂತರ ಅಂಚೆ ಇಲಾಖೆಯಲ್ಲಿಯೂ ತಪಾಸಣೆ ನಡೆಸಲಾಗುತ್ತದೆ. ಆದರೂ ಡ್ರಗ್ಸ್ ಪಾರ್ಸಲ್ ಬಂದಿರುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಕಸ್ಟಮ್್ಸ ಅಧಿಕಾರಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ಬಿಟ್​ಕಾಯಿನ್ ಮೂಲಕ ಖರೀದಿ

    ಪೊಲೀಸರಿಗೆ ಸುಳಿವು ಸಿಗಬಾರದೆಂಬ ಕಾರಣಕ್ಕೆ ಡಾರ್ಕ್​ವೆಬ್​ನಲ್ಲಿ ಬಿಟ್​ಕಾಯಿನ್ ಮೂಲಕ ಮಾದಕ ವಸ್ತು ಖರೀದಿಸುತ್ತಿದ್ದರು. ಜರ್ಮನಿ, ಬೆಲ್ಜಿಯಂ ಮತ್ತು ಡೆನ್ಮಾರ್ಕ್​ನಿಂದ ನಿರಂತರವಾಗಿ ಡ್ರಗ್ಸ್ ತರಿಸಿಕೊಳ್ಳಲಾಗಿದೆ. ಕೊರಿಯರ್ ಮತ್ತು ಅಂಚೆ ಮೂಲಕ ಪೂರೈಕೆ ಮಾಡಲಾಗುತ್ತಿತ್ತು. ಲಾಕ್​ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿದ್ದಾಗ, ಡ್ರಗ್ಸ್​ಗೆ ಬೇಡಿಕೆ ಹೆಚ್ಚಾಗಿತ್ತು. ಈ ವೇಳೆ ಕೋಟ್ಯಂತರ ರೂ. ವ್ಯವಹಾರ ನಡೆದಿದೆ. ರಿಜೇಶ್ ಮತ್ತು ಅನೂಪ್ ಮೊಬೈಲ್ ಪರಿಶೀಲನೆ ವೇಳೆ ಒಂದು ತಿಂಗಳಿಗೆ 2 ಸಾವಿರ ಗ್ರಾಹಕರನ್ನು ಸಂರ್ಪಸಿರುವ ಮಾಹಿತಿ ಎನ್​ಸಿಬಿಗೆ ಲಭ್ಯವಾಗಿದೆ. ಅನಿಕಾ ಹೇಳಿಕೆ ಆಧರಿಸಿಮಾಹಿತಿ ಸಂಗ್ರಹಿಸಲಾಗುತ್ತಿದೆ. ಹಣ ಜಮಾ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಬ್ಯಾಂಕ್ ವಿವರ ಪರಿಶೀಲಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts