More

    ಪಾತಕ ಕೃತ್ಯಗಳಿಗೆ ಡ್ರಗ್ಸ್ ಪ್ರೇರಣೆ

    ಹರೀಶ್ ಮೋಟುಕಾನ ಮಂಗಳೂರು
    ಡ್ರಗ್ಸ್ ಸೇವನೆಗೆ ಅಡ್ಡಿಯಾದ ಸ್ವಂತ ತಂಗಿಯನ್ನೇ ಕೊಲೆಗೈದ ಅಣ್ಣ, ಡ್ರಗ್ಸ್ ಸೇವನೆಗೆ ಪಾಲಕರು ಅಡ್ಡಿಯಾದರೆಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ, ಸಹಪಾಠಿಯನ್ನೇ ಮುಂಬೈಗೆ ಸಾಗಾಟ ಮಾಡಲು ಯತ್ನಿಸಿದ ರಾಜಕಾರಣಿ ಪುತ್ರ, ಡ್ರಗ್ಸ್ ಅಮಲಿನಲ್ಲಿ ಕ್ಷುಲ್ಲಕ ವಿಚಾರಗಳಿಗೆ ಕೊಲೆ..

    ಇವು ಮಂಗಳೂರು ಪರಿಸರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಡ್ರಗ್ಸ್ ವ್ಯಸನಕ್ಕೊಳಗಾಗಿ ನಡೆದಿರುವ ಅಪರಾಧ ಪ್ರಕರಣಗಳು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯ ಗಾಂಜಾ, ಅಫೀಮು, ಚರಸ್, ಎಂಡಿಎಂಎ ಮೊದಲಾದ ಡ್ರಗ್ಸ್ ವ್ಯಸನಕ್ಕೆ ದಾಸರಾಗುತ್ತಿರುವುದು, ಬಳಿಕ ಪಾತಕ ಕೃತ್ಯಗಳಲ್ಲೂ ಭಾಗಿಯಾಗುತ್ತಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

    ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್ ಜಾಗೃತಿ ನಡೆಯುತ್ತಿದ್ದರೂ, ಒಂದು ವರ್ಗದ ಯುವ ಸಮೂಹ ಡ್ರಗ್ಸ್ ಅಮಲಿನಲ್ಲಿ ತೇಲಾಡುತ್ತಿದೆ. ಡ್ರಗ್ಸ್ ವ್ಯಸನ ರೂಢಿಸಿಕೊಂಡವರಿಗೆ ರಕ್ತ ಸಂಬಂಧ, ಮಾನವೀಯತೆ, ಕಾನೂನು ಭಯ, ಪಶ್ಚಾತಾಪ ಭಾವನೆ ಇವ್ಯಾವುದೂ ಅರಿವಿಗೆ ಬರುವುದಿಲ್ಲ. ಮನೆಯಿಂದ ಹಣ, ಚಿನ್ನ ಕದ್ದೊಯ್ದು ಡ್ರಗ್ಸ್ ಖರೀದಿಸಿ, ಸೇವಿಸುವ ಯುವ ಜನರಿಗೆ ಹೆತ್ತವರ ಜೀವನದ ಕಷ್ಟ, ನೋವು, ಜವಾಬ್ದಾರಿ ಅರ್ಥವಾಗುವುದಿಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

    ಡ್ರಗ್ಸ್ ಬಳಕೆ ಯಾರಿಂದ?: ಡ್ರಗ್ಸ್ ವ್ಯಸನಕ್ಕೆ ದಾಸರಾದವರು ಉದ್ದೇಶಪೂರ್ವಕವಾದ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದು ಕಡಿಮೆ. ತಲವಾರು, ಚೂರಿ ಉಪಯೋಗಿಸಿ ಕೊಲೆ ಕೃತ್ಯ ನಡೆಸುವವರು ಡ್ರಗ್ಸ್ ಬಳಕೆ ಮಾಡುತ್ತಾರೆ. ಅವರು ಕೂಡ ಸಿಂಥೆಟಿಕ್ ಡ್ರಗ್ಸ್ ಬಳಸುವುದಿಲ್ಲ. ಗಾಂಜಾ ಅಥವಾ ಮೆಡಿಕಲ್ಸ್‌ಗಳಲ್ಲಿ ಸಿಗುವ ಡ್ರಗ್ಸ್ ಉಪಯೋಗಿಸುತ್ತಾರೆ ಎಂಬುದು ಮಂಗಳೂರು ಡಿಪಿಸಿ ವಿನಯ್ ಗಾಂವ್ಕರ್ ಅಭಿಪ್ರಾಯ. ಹೆರಾಯಿನ್, ಅಫೀಮು ಮೊದಲಾದ ಡ್ರಗ್ಸ್ ಸೇವನೆ ಮಾಡಿದವರಿಗೆ ತಕ್ಷಣಕ್ಕೆ ವೇಗವಾಗಿ ನಡೆಯಲು, ಓಡಲು ಆಗುವುದಿಲ್ಲ. ಹಾಗಾಗಿ ಕೃತ್ಯ ನಡೆಸಿದ ಬಳಿಕ ಸ್ಥಳಕ್ಕೆ ಪೊಲೀಸರು ಬರುವ ಮೊದಲು ಓಡಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಶಕ್ತಿ ಬರುವ ಡ್ರಗ್ಸ್ ಉಪಯೋಗಿಸುತ್ತಾರೆ ಎಂದು ಹೇಳುತ್ತಾರವರು.

    ಮೆದುಳಿನ ಮೇಲೆ ಪರಿಣಾಮ: ಡ್ರಗ್ಸ್ ಸೇವನೆಯಿಂದ ಮೆದುಳಿನ ನರಗಳಲ್ಲಿ ಡೊಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ. ಮಾದಕ ವಸ್ತುಗಳನ್ನು ಬಳಸಿದಾಗಲೆಲ್ಲ ಮೆದುಳಿನ ಸಂದೇಶದ ವ್ಯವಸ್ಥೆಯನ್ನು ಪುನರಾವರ್ತಿಸುತ್ತದೆ. ಡೊಪಮೈನ್ ಬಿಡುಗಡೆಯಾಗಿ ಮೆದುಳಿನಲ್ಲಿ ಸಂತೋಷ ಉಂಟಾಗುತ್ತದೆ. ಮೆದುಳು ಮತ್ತೆ ಮತ್ತೆ ಸಂತೋಷಪಡಲು ಬಯಸಿ ಮಾದಕ ದ್ರವ್ಯವನ್ನು ಹೆಚ್ಚು ಹೆಚ್ಚಾಗಿ ಬಳಸುವಂತೆ ಉತ್ತೇಜಿಸುತ್ತದೆ.
    ದೀರ್ಘಕಾಲದ ಡ್ರಗ್ಸ್ ಸೇವನೆಯು ಮೆದುಳಿನ ಅರಿವಿನ ಕಾರ್ಯಕ್ಷಮತೆಯನ್ನು ಹಾನಿಗೊಳಿಸಬಹುದು. ಅಧ್ಯಯನಗಳು ತಿಳಿಸುವಂತೆ ದೀರ್ಘಕಾಲದ ಡ್ರಗ್ಸ್ ಸೇವನೆಯಿಂದ ಮೆದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ, ನಿಯಂತ್ರಣ ಮುಂತಾದವುಗಳ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆಗೆ ಒಳಗಾಗಬಹುದು.

    ವ್ಯಸನಕ್ಕೊಳಗಾದ ವ್ಯಕ್ತಿಯೊಬ್ಬ ಪ್ರತಿದಿನ ನಿರಂತರವಾಗಿ ಮಾದಕ ವಸ್ತುಗಳನ್ನು ಬಳಸಲು ಹಾತೊರೆಯುತ್ತಾನೆ. ಅದರ ಹೊರತಾಗಿ ಬದುಕಲು ಸಾಧ್ಯವೇ ಇಲ್ಲ ಎನ್ನುವಷ್ಟು ಆ ಚಟಕ್ಕೆ ಅವಲಂಬಿತರಾಗಿರುತ್ತಾನೆ. ಮಾದಕ ವ್ಯಸನ ಗಂಭೀರವಾದ, ಭಾವನಾತ್ಮಕ, ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ಮನೋರೋಗ ಚಿಕಿತ್ಸಕ ಉಡುಪಿಯ ಡಾ.ಪಿ.ವಿ.ಭಂಡಾರಿ.

    ಆರೋಗ್ಯ ಸಮಸ್ಯೆಗಳೇನು?
    ಮಾದಕ ವ್ಯಸನದಲ್ಲಿ ತೊಡಗಿದವರಲ್ಲಿ ನಡುಗುವಿಕೆ, ಹಸಿವು ಮತ್ತು ನಿದ್ರೆಯಲ್ಲಿ ಏರುಪೇರು, ಮೂರ್ಛೆ ಹೋಗುವುದು, ತೂಕದಲ್ಲಿ ಏರಿಳಿತ, ಶ್ವಾಸಕೋಶದ ಸಮಸ್ಯೆ, ಅತಿಯಾದ ಅಥವಾ ಅತಿರೇಕದ ಚಟುವಟಿಕೆಗಳು, ಸಾಮಾಜಿಕವಾಗಿ ಕಡೆಗಣಿಸಲ್ಪಡುವುದು, ಹೆದರಿಕೆ ಮತ್ತು ತಳಮಳ, ಆತಂಕ ಮತ್ತು ಮತಿ ವಿಕಲ್ಪ ಉಂಟಾಗಬಹುದು.

    ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳಲ್ಲಿ ಡ್ರಗ್ಸ್ ಸೇವನೆ ಮಾಡಿದವರ ಪಾತ್ರ ಹೆಚ್ಚುತ್ತಿದೆ. ಹಿಂದೆ ನಮ್ಮ ಬಳಿಗೆ ಚಿಕಿತ್ಸೆಗೆ ಎರಡು ತಿಂಗಳಿಗೆ ಒಂದು ಡ್ರಗ್ಸ್ ಕೇಸ್ ಬರುತ್ತಿದ್ದುದು, ಈಗ 2 ದಿನಗಳಿಗೊಂದು ಬರುತ್ತಿದೆ. ಎಷ್ಟರ ಮಟ್ಟಿಗೆ ಯುವಕರು ಡ್ರಗ್ಸ್ ವ್ಯಸನಕ್ಕೆ ಬಲಿ ಬೀಳುತ್ತಿದ್ದಾರೆ ಎಂಬುದು ಇಲ್ಲಿ ಗೊತ್ತಾಗುತ್ತದೆ. ಲಭ್ಯತೆ ಕಡಿಮೆ ಮಾಡಿದಾಗ ಮಾತ್ರ ಇದರ ನಿಯಂತ್ರಣ ಸಾಧ್ಯ.
    – ಡಾ.ಪಿ.ವಿ.ಭಂಡಾರಿ, ಮನೋರೋಗ ಚಿಕಿತ್ಸಕ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts