More

    ಡ್ರಗ್ಸ್ ಜಾಲಕ್ಕೆ ಸಿಲುಕಿಸಿ ಕಿರುಕುಳ ನೀಡಿದಾತ ಅಂದರ್: ಆರೋಪಿಯನ್ನು ಬಿಟ್ಟರೆ ಆತ್ಮಹತ್ಯೆ ಮಾಡಬೇಕಾಗುತ್ತದೆ ಎಂದ ಸಂತ್ರಸ್ತೆ ತಾಯಿ

    ಮಂಗಳೂರು: ಕ್ರೈಸ್ತ ಸಮುದಾಯದ ಯುವತಿಯನ್ನು ಷರೀಫ್ ಸಿದ್ದಿಕ್ ಎಂಬಾತ ಕೆಲವು ವರ್ಷಗಳಿಂದ ಡ್ರಗ್ಸ್ ಜಾಲಕ್ಕೆ ಸಿಲುಕಿಸಿ ಲೈಂಗಿಕವಾಗಿ ಬಳಸಿಕೊಂಡಿರುವ ಪ್ರಕರಣ ಮತ್ತಷ್ಟು ಗಂಭೀರಗೊಂಡಿದೆ.

    ಭಾನುವಾರವಷ್ಟೇ ಸಂತ್ರಸ್ತೆಯ ತಾಯಿ ಬಿಜೈ ನಿವಾಸಿ ಗ್ರೇಸಿ ಪಿಂಟೋ ವಿಶ್ವ ಹಿಂದು ಪರಿಷತ್ ಸ್ಥಳೀಯ ನಾಯಕರಿಗೆ ಪತ್ರ ಬರೆದು ತನ್ನ ಕುಟುಂಬ ಅನುಭವಿಸುತ್ತಿರುವ ಯಾತನೆಯನ್ನು ಬಿಚ್ಚಿಟ್ಟಿದ್ದರು. ಪೊಲೀಸರಿಂದ ನೆರವು ಸಿಕ್ಕಿಲ್ಲ ಎನ್ನುವುದನ್ನೂ ತಿಳಿಸಿದ್ದರು. ಬಳಿಕ ವಿಎಚ್‌ಪಿ ಮುಖಂಡರು ಪೊಲೀಸರ ಗಮನಕ್ಕೆ ಇದನ್ನು ತಂದಿದ್ದು ಭಾನುವಾರ ರಾತ್ರಿ ಆರೋಪಿ ಶರೀಫ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

    ಪದವೀಧರೆಯಾಗಿರುವ ತನ್ನ ಮಗಳಿಗೆ ಡ್ರಗ್ಸ್ ನೀಡಿ ಆಕೆಗೆ ಲೈಂಗಿಕ ದೌರ್ಜನ್ಯ ನೀಡಿರುವುದಲ್ಲದೆ, ತನಗೆ ಕೊಲೆ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿರುವ ಗ್ರೇಸಿ ಸೋಮವಾರ ಸಿಟಿ ಪೊಲೀಸ್ ಆಯುಕ್ತ ಶಶಿಕುಮಾರ್ ಅವರನ್ನು ಭೇಟಿಯಾದರು.

    ಆತನಿಗೆ ಶಿಕ್ಷೆ ನೀಡಬೇಕು, ಸುಮ್ಮನೆ ಬಿಡಬಾರದು. ಬಿಟ್ಟರೆ ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಗ್ರೇಸಿ ಕಣ್ಣೀರು ಹಾಕಿದ್ದಾರೆ. ತಮ್ಮ 27ರ ಹರೆಯದ ಪುತ್ರಿಯನ್ನು ಸುರತ್ಕಲ್‌ನ ಮುಹಮ್ಮದ್ ಷರೀಫ್ ಸಿದ್ದಿಕ್ ಎಂಬಾತ ನಾಲ್ಕು ವರ್ಷಗಳಿಂದ ಪುಸಲಾಯಿಸಿ ಆಕೆಗೆ ಅಮಲು ಬರಿಸುವ ಪದಾರ್ಥಗಳನ್ನು ನೀಡಿ ಲೈಂಗಿಕವಾಗಿ ಉಪಯೋಗಿಸಿಕೊಂಡಿದ್ದಾನೆ. ಈ ಕಾರಣದಿಂದ ಮನನೊಂದ ಗಂಡ ಎರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಕಾಲೇಜಿಗೆ ಹೋಗುತ್ತಿದ್ದಾಗ ಫೇಸ್‌ಬುಕ್ ಮೂಲಕ ಪರಿಚಯವಾದ ಆತ ಮಗಳನ್ನು ತನ್ನ ಬಲೆಗೆ ಬೀಳಿಸಿಕೊಂಡ. ಮದುವೆಯಾಗಿದ್ದಾನೆ ಎಂದು ಹೇಳುತ್ತಿದ್ದರೂ ಸಾಕ್ಷೃ ನೀಡಿಲ್ಲ. ಮಗಳನ್ನು ಪುಸಲಾಯಿಸಿ ಕರೆದೊಯ್ದಿರುವ ಬಗ್ಗೆ ಮೂರು ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಆಕೆ ಈಗಲೂ ಆತನ ಪರ ವಹಿಸಿಯೇ ಮಾತನಾಡುತ್ತಾಳೆ ಎಂದು ಗ್ರೇಸಿ ಪಿಂಟೋ ಹೇಳಿದ್ದಾರೆ. ತಾಯಿಯ ಮಾತುಗಳನ್ನು ಆಲಿಸಿದ ಪೊಲೀಸ್ ಆಯುಕ್ತರು, ಪ್ರಕರಣದ ಬಗ್ಗೆ ಕೂಲಂಕುಷ ತನಿಖೆಯ ಭರವಸೆ ನೀಡಿದರು.

    ಮೂರು ಮದುವೆಯಾಗಿರುವ ಆರೋಪಿ: ಸುರತ್ಕಲ್ ಕೃಷ್ಣಾಪುರ ನಿವಾಸಿ ಆರೋಪಿಗೆ ಈಗಾಗಲೇ ಮೂರು ಮದುವೆಯಾಗಿವೆ. ಮುಂಬೈ, ಗೋವಾದಲ್ಲಿ ಪತ್ನಿಯಿದ್ದು, ಸುರತ್ಕಲ್‌ನಲ್ಲಿ ಪ್ರಸಕ್ತ ಆತ ಇನ್ನೊಂದು ಪತ್ನಿ ಜತೆ ವಾಸವಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಆರೋಪಿ ಮೇಲೆ ಈ ಹಿಂದೆ ಸುರತ್ಕಲ್ ಠಾಣೆಯಲ್ಲಿ ಸಿಂಥೆಟಿಕ್ ಡ್ರಗ್ ಎಂಡಿಎಂಎ ಮಾರಾಟ ಮಾಡುವ ಸಂಬಂಧ ಎರಡು ಪ್ರಕರಣಗಳು ದಾಖಲಾಗಿವೆ. ಇದು ಮೂರನೆಯ ಪ್ರಕರಣ. ದೌರ್ಜನ್ಯದ ಸಂತ್ರಸ್ತೆಯಿಂದ ಮಾಹಿತಿ ಪಡೆಯಬೇಕಾಗಿದೆ. ಆಕೆಗೆ ಸದ್ಯ ಸಮಾಲೋಚನಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಬಳಿಕ ಆಕೆಯ ಹೇಳಿಕೆ ದಾಖಲಿಸಿ ಸಾಕ್ಷಾೃಧ್ಯಾರಗಳನ್ನು ಪಡೆದು ಸಮಗ್ರ ತನಿಖೆ ನಡೆಸಲು ತನಿಖಾಧಿಕಾರಿಗೆ ಸೂಚನೆ ನೀಡಲಾಗಿದೆ. ಯುವತಿಯ ತಾಯಿ ಜತೆ ಆರೋಪಿ ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದರು.

    ರಾತ್ರಿಯೂ ಮನೆಗೆ ಬಂದು ಬೆದರಿಕೆ!: ಆರೋಪಿ ಶರೀಫ್ ರಾತ್ರಿ ಮಿತ್ರರೊಂದಿಗೆ ಕಾರುಗಳಲ್ಲಿ ಬರುತ್ತಿದ್ದ, ಮನೆಗೆ ಬಂದು ಮಗಳನ್ನು ಕರೆದೊಯ್ಯುತ್ತಿದ್ದ ಎಂದು ಗ್ರೇಸಿ ಹೇಳಿದ್ದಾರೆ. ಡ್ರಗ್ಸ್ ಚಟದಿಂದಾಗಿ ಆಕೆ, ಆತ ಬಂದ ಕೂಡಲೇ ತಡೆದರೂ ಹೋಗುತ್ತಿದ್ದಳು, ಶರೀಫ್ ಕೃತ್ಯವನ್ನು ಪ್ರತಿಭಟಿಸಿದಾಗ ಆತ ಮನೆಗೆ ಬಂದು ನನಗೆ ಬೆದರಿಕೆಯೊಡ್ಡಿದ್ದ, ನನ್ನನ್ನು ಏನು ಮಾಡಲೂ ಸಾಧ್ಯವಿಲ್ಲ, ನನಗೆ ಪರಿಚಯದ ಪೊಲೀಸರು ಇದ್ದಾರೆ ಎನ್ನುತ್ತಿದ್ದ. ಡ್ರಗ್ಸ್ ಸೇವನೆ ಪ್ರಾರಂಭದಲ್ಲಿ ನಮಗೆ ಗೊತ್ತಾಗುತ್ತಿರಲಿಲ್ಲ. ಕೈಗೆ ಇಂಜೆಕ್ಷನ್ ಚುಚ್ಚಿದ ಗಾಯ ಇರುವುದನ್ನು ಕಂಡು ಕೇಳಿದಾಗ ಏನೋ ತಾಗಿದ್ದು ಎನ್ನುತ್ತಿದ್ದಳು. ಶರೀಫ್ 53 ವರ್ಷದವ, ಆತನಿಗೆ ಮೂರ‌್ನಾಲ್ಕು ಮದುವೆಯಾದ ಮಾಹಿತಿ ಇದೆ, ಇದನ್ನು ನೋಡಿದರೆ ತನ್ನ ಮಗಳನ್ನು ಆತ ಬ್ರೇನ್‌ವಾಶ್ ಮಾಡಿದಂತೆ ಕಾಣುತ್ತಿದೆ ಎಂದು ಅಳಲು ತೋಡಿಕೊಂಡರು.

    ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದು ಆತನ ಸಮಗ್ರ ವಿಚಾರಣೆ ನಡೆಸಲಾಗುವುದು. ಆತನಿಂದ ಇನ್ಯಾರಾದರೂ ಯುವತಿಯರು ವಂಚನೆಗೆ ಒಳಗಾಗಿದ್ದಾರೆಯೇ? ಆತ ಈಗಲೂ ಡ್ರಗ್ಸ್ ಪೂರೈಕೆ ದಂಧೆ ಮುಂದುವರಿಸಿದ್ದಾನೆಯೇ ಎಂಬ ನೆಲೆಯಲ್ಲಿಯೂ ತನಿಖೆ ನಡೆಸಲಾಗುವುದು.
    ಶಶಿಕುಮಾರ್
    ಪೊಲಿಸ್ ಆಯುಕ್ತ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts