More

    ಹಳ್ಳಿಗಳಿಗೆ ಕಳಪೆ ಕರೊನಾ ಔಷಧ ಪೂರೈಕೆ: ಮಂಚನಾಯ್ಕನಹಳ್ಳಿ ಗ್ರಾಪಂ ಸಭೆಯಲ್ಲಿ ಸದಸ್ಯರ ಅಸಮಾಧಾನ ನಿರ್ಣಯವಿಲ್ಲದೆ ಪಂಚಾಯಿತಿ ಸಭೆ ಅಪೂರ್ಣ

    ಬಿಡದಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ವಸತಿ ಯೋಜನೆ ಕಲ್ಪಿಸುವುದು, ವರ್ಗ-1ರಲ್ಲಿರುವ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸುವುದು ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚಿಸಲು ಕರೆದಿದ್ದ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಯಾವುದೇ ನಿರ್ಣಯ
    ಕೈಗೊಳ್ಳದೆ ಅಪೂರ್ಣ ವಾಯಿತು.

    ಗ್ರಾಪಂ ವ್ಯಾಪ್ತಿಯ ಹೊಸದೊಡ್ಡಿ ಗ್ರಾಮದ ಸಮುದಾಯ ಭವನದಲ್ಲಿ ಸೋಮವಾರ ಅಧ್ಯಕ್ಷ ಸತೀಶ್‌ಕುಮಾರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಆರಂಭದಲ್ಲಿ ಕರೊನಾ ನಿಯಂತ್ರಣಕ್ಕೆ ಹಳ್ಳಿಗಳಲ್ಲಿ ಬಳಸಿರುವ ಔಷಧ ಕಳಪೆಯಾಗಿದೆ, ಗುಣಮಟ್ಟದ ಬೀದಿ ದೀಪಗಳನ್ನು ಅಳವಡಿಸಿರುವ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಅಧ್ಯಕ್ಷರನ್ನು ತರಾಟೆ ತೆಗೆದುಕೊಂಡರು. ಬಿಲ್ ಕಲೆಕ್ಟರ್ ಮಂಜು ಅವರನ್ನು ಅಧ್ಯಕ್ಷರು ಏಕಾಏಕಿ ಅಮಾನತು ಮಾಡಿರುವುದಕ್ಕೆ ಸೂಕ್ತ ಕಾರಣ ತಿಳಿಸಿ ಎಂದು ಒತ್ತಾಯಿಸಿದರು. ಸಭೆಯ ಗಮನಕ್ಕೂ ತಾರದೆ ಈ ರೀತಿಯ ನಿರ್ಧಾರದಿಂದ ಪಂಚಾಯಿತಿಯಲ್ಲಿ ಸಿಬ್ಬಂದಿಗಳು ಕೆಲಸ ನಿರ್ವಹಿಸಲು ಖನ್ನರಾಗುತ್ತಾರೆ ಎಂಬ ವಿಷಯದ ಬಗ್ಗೆ ಸದಸ್ಯರು ಗಂಭೀರ ಚರ್ಚೆ ನಡೆಸಿದರು.

    ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕವಾಗಿದ್ದ ಸಮಯದಲ್ಲಿ 14 ಮತ್ತು 15ನೇ ಹಣಕಾಸು ಯೋಜನೆ ಕ್ರಿಯಾಯೋಜನೆ ರೂಪಿಸಿ, ಕೆಲಸ ನಿರ್ವಹಿಸದೆ ಅಧಿಕಾರಿಗಳು ಬಿಲ್ ಪಾವತಿಸುವ ಕ್ರಮ ಸರಿಯಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ತುರ್ತು ಸಭೆಯಲ್ಲಿ ಪಂಚಾಯಿತಿಯ ಎಲ್ಲ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಣೆ ಮಾಡುವ ಸಂಬಂಧ ನಡೆದಿದ್ದ ಚರ್ಚೆ ಇಂದಿನ ಸಾಮಾನ್ಯ ಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿತು. ಆದರೆ ಯಾವುದೇ ನಿರ್ಣಯ ಕೈಗೊಳ್ಳಲಾಗಲಿಲ್ಲ.

    ಹೊಸದೊಡ್ಡಿ ಸದಸ್ಯ ಪುಷ್ಪರಾಜ್ ಮಾತನಾಡಿ, ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ ಮಂಚನಾಯ್ಕನಹಳ್ಳಿ ಗ್ರಾಪಂನಲ್ಲಿ ಪಿಎಚ್‌ಸಿ ಇಲ್ಲ. ಕೂಡಲೆ ಈ ಬಗ್ಗೆ ಸಭೆ ನಿರ್ಣಯ ಮಾಡಿ, 34 ಸದಸ್ಯರಿರುವ ಪಂಚಾಯಿತಿ ಸೀಮಿತ ಸ್ಥಳದಲ್ಲಿದೆ. ಕೆಲಸ ನಿರ್ವಹಿಸಲು ಆಗುತ್ತಿಲ್ಲ. ಸರ್ಕಾರಿ ಜಾಗ ಗುರ್ತಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.

    ಪಿಡಿಒ ಶಿವಕುಮಾರ್ ಸರ್ಕಾರದ ಸುತ್ತೋಲೆಗಳನ್ನು ಸಭೆಗೆ ಓದಿ ಹೇಳಿದರು. ಉಪಾಧ್ಯಕ್ಷೆ ರಮ್ಯಾ ಪುಟ್ಟಸ್ವಾಮಿ, ಸದಸ್ಯರಾದ ನಂದಪ್ರಭಾ, ನಾಗೇಶ್ ಮತ್ತಿತರ ಸದಸ್ಯರು, ಪಂಚಾಯತಿ ಕಾರ್ಯದರ್ಶಿ ಲಕ್ಷ್ಮೀಬಾಯಿ ಭಾಗವಹಿಸಿದ್ದರು.

     

    ಅಳಲು ತೋಡಿಕೊಂಡ ಸದಸ್ಯ : ಮಂಚನಾಯ್ಕನಹಳ್ಳಿ ಪಂಚಾಯಿತಿಯಲ್ಲಿ ಜೆಡಿಎಸ್ – ಕಾಂಗ್ರೆಸ್ ಸದಸ್ಯರ ಬಣಗಳಾಗಿ ಕಾರ್ಯರೂಪಕ್ಕೆ ತರಲು ಚರ್ಚೆ ನಡೆಸಿದ ಎಲ್ಲ ವಿಷಯಗಳು ಸಹ ಅಪೂರ್ಣವಾಗಿಯೇ ಉಳಿದಿವೆ. ಸೋಮವಾರ ನಡೆದ ಸಾಮಾನ್ಯ ಸಭೆಯೂ ಸಹ ಆ ಪಟ್ಟಿಗೆ ಸೇರ್ಪಡೆಯಾಯಿತು. ವಿಷಯಗಳ ಅನುಷ್ಠಾನಕ್ಕಿಂತ ಇಲ್ಲಿ ಪಕ್ಷಗಳ ಬಲದ ಪ್ರತಿಷ್ಠೆಯೇ ಹೆಚ್ಚಾದಂತೆ ಕಾಣುತ್ತದೆ. ಇದರಿಂದ ಮೂಲಸೌಕರ್ಯಗಳನ್ನು ಕಲ್ಪಿಸಬೇಕಾದ ಸದಸ್ಯರು ತಮ್ಮ ಜವಾಬ್ದಾರಿಯನ್ನು ಮರೆತು ಸಭೆಗಳನ್ನು ಚರ್ಚೆಗಷ್ಟೇ ಸೀಮಿತಗೊಳಿಸುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಪಂಚಾಯಿತಿ ಸದಸ್ಯರೊಬ್ಬರು ಅಳಲು ತೋಡಿಕೊಂಡರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts