More

    ರಾಷ್ಟ್ರಪತಿ ಚುನಾವಣೆ: ಪ್ರಧಾನಿ ಮೋದಿ ಸಮ್ಮುಖದಲ್ಲಿ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮರ್ಮು ಅವರಿಂದ ನಾಮಪತ್ರ ಸಲ್ಲಿಕೆ

    ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ದ್ರೌಪದಿ ಮರ್ಮು ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಒಡಿಶಾ ಮೂಲದ ಬುಡಕಟ್ಟು ಜನಾಂಗದವರಾಗಿದ್ದು, ಜಾರ್ಖಂಡ್​ ಮಾಜಿ ರಾಜ್ಯಪಾಲೆಯೂ ಆಗಿರುವ ದ್ರೌಪದಿ ಮರ್ಮು ಅವರು 2022ನೇ ಸಾಲಿನ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

    ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟದ ಉನ್ನತ ಸಚಿವರು, ಎನ್​ಡಿಎ ಮೈತ್ರಿಕೂಟದ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ದೆಹಲಿ ಸಂಸತ್ತು ಭವನದಲ್ಲಿ ದ್ರೌಪದಿ ಮರ್ಮು ಅವರು ರಾಷ್ಟ್ರಪತಿ ಹುದ್ದೆಗೆ ತಮ್ಮ ಉಮ್ಮೇದುವಾರಿಕೆ ಸಲ್ಲಿಸಿದರು.

    ಉಮೇದುವಾರಿಕೆಗೆ ಬಿಜೆಪಿ ನಾಲ್ಕು ಪ್ರತಿಯ ನಾಮಪತ್ರಗಳನ್ನು ಸಿದ್ಧಪಡಿಸಿತು. ಪ್ರಧಾನಿಯವರು ಮಾತ್ರವಲ್ಲದೆ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ನಾಮಪತ್ರಕ್ಕೆ ಸಹಿ ಹಾಕಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಗುಜರಾತ್‌ ಸಿಎಂ ಭೂಪೇಂದರ್ ಪಟೇಲ್ ಸೇರಿದಂತೆ ಎಲ್ಲಾ ಬಿಜೆಪಿ ನೇತೃತ್ವದ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಸಹಿ ಹಾಕಿದ್ದಾರೆ.

    ಜೂನ್​ 21 ರಂದು ಬಿಜೆಪಿ, ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮರ್ಮು ಅವರ ಹೆಸರನ್ನು ಘೋಷಿಸಿತ್ತು. 64 ವರ್ಷದ ಮರ್ಮು ಅವರು ಬಿಜೆಪಿ-ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ 2000 ವರ್ಷದಿಂದ 2004ರವರೆಗೆ ಸಚಿವರಾಗಿ ಹಾಗೂ 2015 ರಿಂದ 2021ರವರೆಗೆ ಜಾರ್ಖಂಡ್​ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದಾರೆ.

    ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು,  21ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಆಯ್ಕೆಯಾಗುವ ಹೊಸ ರಾಷ್ಟ್ರಪತಿ ಅವರು ಜುಲೈ 25ಕ್ಕೆ ಅಧಿಕಾರ ಸ್ವೀಕರಿಸಲಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts