More

    ವರದೆ, ತುಂಗಭದ್ರೆ ಇದ್ದರೂ ಹಾವೇರಿಯಲ್ಲಿ ಕಾವೇರಿದ ಬರ

    ಕೇಶವಮೂರ್ತಿ ವಿ.ಬಿ. ಹಾವೇರಿ
    ಯಾಲಕ್ಕಿ ನಾಡು ಹಾವೇರಿ ತಾಲೂಕಿನಲ್ಲಿ ವರದಾ, ತುಂಗಭದ್ರಾ ನದಿಗಳು ಹರಿದಿದ್ದರೂ ಕುಡಿಯುವ ನೀರಿಗೆ ಬರ ಆವರಿಸಿರುವುದು ಇಲ್ಲಿನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.


    ನದಿಯಲ್ಲಿ ಸಾಕಷ್ಟು ನೀರು ಇದ್ದಾಗ ಸರಿಯಾಗಿ ಸಂಗ್ರಹಿಸಿಟ್ಟುಕೊಳ್ಳುವ ಯೋಜನೆ ರೂಪಿಸದೇ, ನೀರು ಕಡಿಮೆಯಾದಾಗ ನದಿಯಲ್ಲಿ ನೀರು ಇಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುವುದು ಸಾಮಾನ್ಯ ಎಂಬಂತಾಗಿದೆ. ಆಡಳಿತ ವರ್ಗದ ನಿರ್ಲಕ್ಷೃದಿಂದಾಗಿ ಹಾವೇರಿಯಲ್ಲಿ ಬರ ಕಾವೇರಿದಂತಾಗಿದೆ.

    ವರದಾ ನದಿಯಲ್ಲಿ ಬಹುತೇಕ ನೀರು ಖಾಲಿಯಾಗಿದ್ದು, ತುಂಗಭದ್ರಾ ನದಿಯಲ್ಲಿ ಅಲ್ಪಸ್ವಲ್ಪ ನೀರು ಸಂಗ್ರಹ ಇದೆ. ಇರುವ ನೀರಿನಲ್ಲೇ 10, 15, 20 ದಿನಗಳಿಗೊಮ್ಮೆ ನಗರದಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವೆಡೆ 25 ದಿನಗಳಾದರೂ ಕುಡಿಯುವ ನೀರು ಪೂರೈಸದಿರುವುದು ದುರ್ದೈವವೇ ಸರಿ. ಹಾವೇರಿ ನಗರದ ಪರಿಸ್ಥಿತಿ ಇದಾದರೆ ಹಳ್ಳಿಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

    ಕಂಚಾರಗಟ್ಟಿ ಜಾಕವೆಲ್ ಮೂಲಕ ತುಂಗಭದ್ರಾ ನದಿಯಿಂದ ಸದ್ಯಕ್ಕೆ ನಗರಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ನದಿ ಪಾತ್ರದಲ್ಲಿ ಸಮರ್ಪಕವಾದ ಮಳೆ ಆಗದ ಕಾರಣ ನದಿಯಲ್ಲಿ ಅಲ್ಪ ಪ್ರಮಾಣದ ನೀರು ಮಾತ್ರ ಇದೆ. ಈ ವಾರದಲ್ಲಿ ಮಳೆ ಆಗದಿದ್ದಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ. ಈ ಬಗ್ಗೆ ನಗರಸಭೆ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಸಮಸ್ಯೆ ಆಗದಂತೆ ಮೊದಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.

    ಪೈಪ್‌ಲೈನ್ ಬದಲಿಸಿ

    ಕಂಚಾರಗಟ್ಟಿ ಜಾಕ್‌ವೆಲ್‌ನಿಂದ ನಗರದ ಪಂಪ್‌ಹೌಸ್‌ಗೆ ನೀರು ರವಾನಿಸಿ ಅಲ್ಲಿಂದ ನಗರದ ವಿವಿಧ ಬಡಾವಣೆಗಳಿಗೆ ನೀರು ಪೂರೈಸಲಾಗುತ್ತಿದೆ. 1997ರಲ್ಲಿ ಈ ಪೈಪ್‌ಲೈನ್ ಅಳವಡಿಸಲಾಗಿದ್ದು, ಈ ಪೈಪ್‌ಲೈನ್ ಆಗಾಗ ದುರಸ್ತಿಗೆ ಬರುತ್ತದೆ. ಪದೇಪದೆ ಪೈಪ್ ಒಡೆಯುತ್ತಿರುತ್ತದೆ. ಇದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತದೆ. ದುರಸ್ತಿಗಾಗಿಯೇ ನಗರಸಭೆಯವರು ಕೋಟ್ಯಂತರ ರೂ. ವ್ಯಯಿಸುತ್ತಿರುವುದು ಕಂಡುಬಂದಿದೆ. ಇದರ ಬದಲು ಪೈಪ್‌ಲೈನ್ ಬದಲಾಯಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ತಜ್ಞರ ಅಭಿಪ್ರಾಯ.



    ನೂತನ ಶಾಸಕರ ಹೆಗಲಿಗೆ ಹೊಣೆ


    ಹಾವೇರಿ ವಿಧಾನಸಭಾ ಕ್ಷೇತ್ರದ ಜನತೆಯ ನೀರಿನ ಸಮಸ್ಯೆಗೆ ಶಾಶ್ವತ ಯೋಜನೆ ರೂಪಿಸುವ ಹೊಣೆಗಾರಿಗೆ ನೂತನ ಶಾಸಕ ರುದ್ರಪ್ಪ ಲಮಾಣಿ ಅವರ ಮೇಲಿದೆ. ರುದ್ರಪ್ಪ ಅವರೇನು ಕ್ಷೇತ್ರಕ್ಕೆ ಹೊಸಬರಲ್ಲ. ಈ ಹಿಂದೆ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಈ ಅನುಭವವನ್ನು ಧಾರೆ ಎರೆದು, ತಜ್ಞರ ಅಭಿಪ್ರಾಯ ಪಡೆದು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದರೆ ಜನ ಶಾಸಕರನ್ನು ಎಂದಿಗೂ ಮರೆಯಲಾರರು. ಇದೇ ವಿಶ್ವಾಸವಿಟ್ಟು ಈ ಬಾರಿ ಜನ ಬೆಂಬಲ ನೀಡಿದ್ದು, ಶಾಸಕರೂ ಕೂಡ ಮೊನ್ನೆಯಷ್ಟೇ ವಿಶೇಷ ಸಭೆ ಕರೆದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರಾದರೂ ಸಮಸ್ಯೆ ಬಗೆಹರಿದಿಲ್ಲ.

    ವರದಾ ನದಿಯಲ್ಲಿ ನೀರು ಖಾಲಿಯಾಗಿದೆ, ತುಂಗಭದ್ರಾ ನದಿಯಲ್ಲಿ ಸ್ವಲ್ಪ ಪ್ರಮಾಣದ ನೀರು ಇದೆ. ಹಾಗಾಗಿ, ಅಗತ್ಯಕ್ಕೆ ತಕ್ಕಷ್ಟು ನೀರು ಲಭ್ಯವಾಗುತ್ತಿಲ್ಲ. ಇರುವ ನೀರನ್ನು ಉಳಿಸಿಕೊಳ್ಳಲು ಅಡ್ಡಲಾಗಿ ಮರಳಿನ ಚೀಲಗಳನ್ನು ಇರಿಸಲಾಗಿದೆ. ಮಳೆ ಬಂದರೆ ಸಮಸ್ಯೆ ಬಗೆಹರಿಯುತ್ತದೆ. ಪೈಪ್‌ಲೈನ್ ದುರಸ್ತಿಗೀಡಾದರೆ ಕೂಡಲೇ ದುರಸ್ತಿ ಮಾಡಲು ಸೂಚಿಸಲಾಗಿದೆ. 24*7 ಯೋಜನೆ ಸಮಸ್ಯೆ ಬಗೆಹರಿಸಲು ಕೆಯುಐಡಿಎಫ್‌ಸಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.
    — ರಘುನಂದನ ಮೂರ್ತಿ, ಜಿಲ್ಲಾಧಿಕಾರಿ


    387 ಬೋರ್‌ವೆಲ್, 14 ನಿಷ್ಕ್ರಿಯ

    ನಗರಸಭೆ ವ್ಯಾಪ್ತಿಯಲ್ಲಿ ಬರೋಬ್ಬರಿ 387 ಬೋರ್‌ವೆಲ್‌ಗಳನ್ನು ಕೊರೆಸಲಾಗಿದ್ದು, ಅದರಲ್ಲಿ 14 ನಿಷ್ಕ್ರಿಯಗೊಂಡಿವೆ ಎಂದು ಸ್ವತಃ ಅಧಿಕಾರಿಗಳೇ ಹೇಳಿಕೊಂಡಿದ್ದಾರೆ. ಹೀಗಿದ್ದರೂ 15, 20 ದಿನಕ್ಕೊಮ್ಮೆ ನೀರು ಪೂರೈಸುತ್ತಿರುವುದು ಯಾಕೆ ಎಂಬ ಪ್ರಶ್ನೆ ಎದುರಾಗಿದೆ. ಕನಿಷ್ಠ ಬೋರ್‌ವೆಲ್ ನೀರನ್ನಾದರೂ ಪೂರೈಸಲು ಏನು ತೊಂದರೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಬೇಕು.


    ಹಾವೇರಿ ನಗರದಲ್ಲಿ ನೀರಿನ ಸಮಸ್ಯೆ ಹೇಳತೀರದಾಗಿದೆ. ಬಸವೇಶ್ವರ ನಗರ ಸೇರಿ ಕೆಲವೆಡೆ 25 ದಿನ ಕಳೆದರೂ ನೀರು ಪೂರೈಸುತ್ತಿಲ್ಲ. ಇದರಿಂದ ತೀವ್ರ ಸಮಸ್ಯೆ ಉಂಟಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕು.
    — ಶಿವನಗೌಡ ತಿಪ್ಪನಗೌಡ್ರ, ನಿವೃತ್ತ ಉಪನ್ಯಾಸಕ, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts