More

    ಡ್ರೋನ್ ಹಾರಾಟ ಮತ್ತಷ್ಟು ಸುಗಮ: ನಿಯಮಗಳಲ್ಲಿ ಸಡಿಲಿಕೆ

    ವೇಣುವಿನೋದ್ ಕೆ.ಎಸ್. ಮಂಗಳೂರು
    ಡ್ರೋನ್ ಹಾರಾಟಕ್ಕೆ ತೀವ್ರ ನಿರ್ಬಂಧಗಳನ್ನು ಹೇರಿದ್ದರಿಂದ ಸಪ್ಪೆ ಮೋರೆ ಹಾಕಿಕೊಂಡಿದ್ದವರಿಗೆ ಸಮಾಧಾನ ನೀಡುವ ವಿಚಾರವಿದು. ಹಲವು ಕ್ಲಿಷ್ಟಕರ ನಿಯಮಾವಳಿಗಳನ್ನು ತಿಂಗಳ ಹಿಂದಷ್ಟೇ ಸರಳಗೊಳಿಸಿರುವ ಕೇಂದ್ರ ಸರ್ಕಾರ, ಈಗ ಸರಳೀಕೃತ ಹೊಸ ಏರ್‌ಸ್ಪೇಸ್ ನಕ್ಷೆಯನ್ನು ತನ್ನ ಡಿಜಿಟಲ್ ಸ್ಕೈ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

    ವಿಮಾನ ನಿಲ್ದಾಣ ಹಾಗೂ ಕೆಲವೊಂದು ಪ್ರಮುಖ ಸೂಕ್ಷ್ಮ ಕೈಗಾರಿಕಾ ಪ್ರದೇಶಗಳನ್ನು ಮಾತ್ರ ಕೆಂಪು ವಲಯ ಆಗಿ ತೋರಿಸಿದ್ದು, ಉಳಿದ ಜಾಗಗಳು ಹಳದಿ ಹಾಗೂ ಹಸಿರು ವಲಯಗಳಾಗಿವೆ. ಅದರಲ್ಲೂ ಹಳದಿ ವಲಯವನ್ನು ಕನಿಷ್ಠ ಇರಿಸಿದ್ದು, ಬಹುತೇಕ ವಲಯಗಳು ಹಸಿರಾಗಿವೆ.
    ಡ್ರೋನ್ ಎನ್ನುವುದು ಭವಿಷ್ಯದ ಕ್ಷೇತ್ರವಾಗಿದ್ದು, ಅದಕ್ಕೆ ಹೆಚ್ಚು ಕಠಿಣ ನಿಯಮ ಹೇರಬಾರದು ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಪರಿಷ್ಕೃತ ಹಾಗೂ ಸರಳಗೊಳಿಸಿದ ನಿಯಮಾವಳಿಗಳನ್ನು ಬಿಡುಗಡೆ ಮಾಡಿತ್ತು.

     ಏನೆನ್ನುತ್ತದೆ ಕೇಂದ್ರದ ಆದೇಶ?:  ಹೊಸ ಡ್ರೋನ್ ನಿಯಮಾವಳಿಯು ನಂಬಿಕೆ, ಸ್ವಯಂ ಪ್ರಮಾಣಪತ್ರದ ಮೇಲೆ ಆಧಾರಿತವಾಗಿದೆ. ಈ ಹಿಂದೆ ಡ್ರೋನ್ ಹಾರಾಟಕ್ಕೆ ಹಾಕುವ ಅರ್ಜಿ ನಮೂನೆಗಳ ಸಂಖ್ಯೆ 25 ಇದ್ದುದನ್ನು 5ಕ್ಕೆ ಹಾಗೂ ಶುಲ್ಕಗಳನ್ನು 72ರಿಂದ 4ಕ್ಕೆ ಇಳಿಸಲಾಗಿದೆ. ವಾಣಿಜ್ಯೇತರ ಬಳಕೆಗೆ ಮೈಕ್ರೋ ಡ್ರೋನ್‌ಗಳಿಗೆ ಯಾವುದೇ ರಿಮೋಟ್ ಪೈಲಟ್ ಪರವಾನಗಿಯ ಅವಶ್ಯಕತೆ ಇರುವುದಿಲ್ಲ. ಡಿಜಿಟಲ್ ಸ್ಕೈವೆಬ್‌ಸೈಟ್ ಅನ್ನು ಏಕ ಗವಾಕ್ಷಿ ವ್ಯವಸ್ಥೆಯಾಗಿ ಅಭಿವೃದ್ಧಿ ಪಡಿಸಲಾಗಿದೆ. ನೂತನ ಏರ್‌ಸ್ಪೇಸ್ ಮ್ಯಾಪನ್ನು ಡಿಜಿಟಲ್ ಸ್ಕೈ(https://digitalsky.dgca.gov.in/airspace-map/#/appl)ನಲ್ಲಿ ನೋಡಬಹುದು.

     ಏನೇನು ವಲಯಗಳು?:  ಪ್ರಸ್ತುತ ಬಿಡುಗಡೆಗೊಳಿಸಿರುವ ಏರ್‌ಸ್ಪೇಸ್ ಮ್ಯಾಪ್‌ನಲ್ಲಿ ದೇಶಾದ್ಯಂತ ಇರುವ ಕೆಂಪು, ಹಳದಿ, ಹಸಿರು ಜೋನ್‌ಗಳನ್ನು ಇಂಟರಾಕ್ಟಿವ್ ನಕ್ಷೆಯ ರೂಪದಲ್ಲಿ ತೋರಿಸಲಾಗಿದೆ.
    ಕೆಂಪು ವಲಯ: ಡ್ರೋನ್ ಹಾರಾಟ ನಿಷೇಧಿತ ವಲಯವಿದು. ಇಲ್ಲಿ ಡ್ರೋನ್ ಹಾರಾಟ ಮಾಡಲೇಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯ.
    ಹಳದಿ ವಲಯ: ವಿಮಾನ ನಿಲ್ದಾಣದ 8 ಕಿ.ಮೀ. ವ್ಯಾಪ್ತಿ, ವಿಮಾನ ನಿಲ್ದಾಣದ 12 ಕಿ.ಮೀ ಪರಿಧಿಯ ಪ್ರದೇಶದ 200 ಅಡಿಗಳಿಗಿಂತ ಮೇಲ್ಪಟ್ಟ ಪ್ರದೇಶ ಹಾಗೂ ಹಸಿರು ವಲಯದ 400 ಅಡಿಗಿಂತ ಮೇಲ್ಪಟ್ಟ ಪ್ರದೇಶ. ಈ ವಲಯದಲ್ಲಿ ಡ್ರೋನ್ ಹಾರಾಟ ನಡೆಸುವುದಕ್ಕೆ ವಿಮಾನ ನಿಲ್ದಾಣಗಳ ಪ್ರಾಧಿಕಾರ, ಭಾರತೀಯ ವಾಯುಪಡೆ, ಭಾರತೀಯ ನೌಕಾಪಡೆಯಂತಹ ಪ್ರಾಧಿಕಾರಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಹಿಂದೆ ಹಳದಿ ವಲಯವು ವಿಮಾನ ನಿಲ್ದಾಣದ 45 ಕಿ.ಮೀ ಪರಿಧಿಯಲ್ಲಿತ್ತು, ಈಗ 12 ಕಿ.ಮೀ.ಗೆ ಇಳಿಸಲಾಗಿದೆ.
    ಹಸಿರು ವಲಯ: ಕೆಂಪು ಮತ್ತು ಹಳದಿ ಜೋನ್‌ಗಳಿಂದ ಹೊರಗಿರುವ 400 ಅಡಿ ಎತ್ತರದವರೆಗಿನ ಹಾಗೂ ಏರ್‌ಪೋರ್ಟ್‌ನಿಂದ 12 ಕಿ.ಮೀ. ಪರಿಧಿಯಲ್ಲಿ 200 ಅಡಿವರೆಗಿನ ವಲಯ. ಇಲ್ಲಿ 500 ಕೆ.ಜಿ.ವರೆಗಿನ ಡ್ರೋನ್ ಹಾರಿಸುವುದಕ್ಕೆ ಅನುಮತಿ ಕೇಳುವ ಅವಶ್ಯಕತೆ ಇಲ್ಲ.
    ಜಿಯೋ ವಲಯ: ಪ್ರಮುಖ ಕೈಗಾರಿಕೆಗಳು, ಕೈಗಾರಿಕಾ ವಸಾಹತುಗಳು, ಬಂದರು ಇತ್ಯಾದಿ ಸೂಕ್ಷ್ಮ ಪ್ರದೇಶಗಳು.
    ————
    ಕರಾವಳಿಯಲ್ಲಿ ಯಾವೆಲ್ಲ ಜೋನ್?: ರಾಜ್ಯದ ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬಳ್ಳಾರಿ ವಿಮಾನ ನಿಲ್ದಾಣಗಳನ್ನು ರೆಡ್ ಜೋನ್ ಎಂದು ಗುರುತಿಸಲಾಗಿದೆ. ಇದರ ಸುತ್ತಲಿನ 8 ಕಿ.ಮೀ ಮತ್ತು 12 ಕಿ.ಮೀ. ಪ್ರದೇಶಗಳನ್ನು ಹಳದಿ ವಲಯ ಎಂದು ತಿಳಿಸಲಾಗಿದೆ. ಕರಾವಳಿಯಲ್ಲಿ ನವಮಂಗಳೂರು ಬಂದರು, ಎಂಸಿಎಫ್, ಕೆಐಒಸಿಎಲ್, ಎಂಆರ್‌ಪಿಎಲ್, ಪೆರ್ಮುದೆ ಐಎಸ್‌ಪಿಆರ್‌ಎಲ್, ಉಡುಪಿಯ ನಂದಿಕೂರು, ಪಾದೂರುಗಳನ್ನು ಜಿಯೊ ಜೋನ್‌ಗಳಾಗಿ ಗುರುತಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts